ETV Bharat / jagte-raho

ಗನ್​ ಕೊಟ್ಟು ತಾಯಿ, ಒಡಹುಟ್ಟಿದವರ ಕೊಲ್ಲಲು ಪಾಪಿ ತಂದೆಯ ಕುಮ್ಮಕ್ಕು... ಮನನೊಂದು ಮಗಳು ಆತ್ಮಹತ್ಯೆ

author img

By

Published : Apr 21, 2020, 1:56 PM IST

ಚೆನ್ನಾಗಿ ಓದಿ ಮುಂದೆ ಪೊಲೀಸ್​ ಅಧಿಕಾರಿಯಾಗಿಯಾಗಬೇಕೆಂದು ಕನಸು ಕಂಡಿದ್ದ 10ನೇ ತರಗತಿಯ ಬಾಲಕಿ, ತಂದೆ ಹಾಗೂ ಚಿಕ್ಕಪ್ಪಂದಿರ ಕಿರುಕುಳದಿಂದ ಬೇಸತ್ತು ನೇಣಿಗೆ ಶರಣಾಗಿದ್ದಾಳೆ.

16-year-old girl committed suicide
ಆತ್ಮಹತ್ಯೆ

ಆಗ್ರಾ( ಉತ್ತರಪ್ರದೇಶ): 16 ವರ್ಷದ ಬಾಲಕಿಗೆ ನಾಡ ಪಿಸ್ತೂಲ್​ ನೀಡಿ ಆಕೆಯ ತಾಯಿ, ಒಡಹುಟ್ಟಿದವರನ್ನು ಕೊಲ್ಲಲು ತಂದೆ ಮತ್ತು ಚಿಕ್ಕಪ್ಪನೇ ಹೇಳಿದ್ದು, ಮನನೊಂದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಉತ್ತರ ಪ್ರದೇಶದ ಆಗ್ರಾದ ಸದರ್ ಪೊಲೀಸ್ ಠಾಣಾ ವ್ಯಾಪ್ತಿಯ ಶಾಂತಿನಗರದಲ್ಲಿ ಏ.16 ರಂದು ಬಾಲಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಸಾಯುವ ಮುನ್ನ ಆಕೆ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆದ ಬಳಿಕ ಘಟನೆ ಬೆಳಕಿಗೆ ಬಂದಿದೆ.

ನನ್ನ ತಂದೆ ಹಾಗೂ ಇಬ್ಬರು ಚಿಕ್ಕಪ್ಪಂದಿರು ಆಸ್ತಿ ವಿಷಯಕ್ಕೆ ನನ್ನ ಅಮ್ಮ, ಅಣ್ಣ, ತಂಗಿ ಮತ್ತು ನನಗೆ ನಿತ್ಯ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದರು. ನಾನು ಚೆನ್ನಾಗಿ ಓದಿ ಮುಂದೆ ಪೊಲೀಸ್​ ಅಧಿಕಾರಿಯಾಗಿ ಇವರಿಗೆ ನ್ಯಾಯ ಕೊಡಿಸಬೇಕು ಎಂಬುದು ನನ್ನ ಗುರಿಯಾಗಿತ್ತು. ಆದರೆ, ತಂದೆ ಮತ್ತು ಚಿಕ್ಕಪ್ಪ ನನ್ನ ಕೈಗೆ ಪಿಸ್ತೂಲ್​ ನೀಡಿ ಅಮ್ಮ, ಅಣ್ಣ, ತಂಗಿಯನ್ನು ಶೂಟ್​ ಮಾಡಲು ಹೇಳಿದ್ದಾರೆ. ಈ ಸಮಸ್ಯೆ- ಗೊಂದಲಗಳಿಂದ ನನಗೆ ಸಾಕಾಗಿಹೋಗಿದೆ. ನನಗೆ ಬದುಕುವ ಆಸೆಯಿದೆ, ಆದರೆ, ಇವರನ್ನು ಸಾಯಿಸುವ ಬದಲು ನಾನೇ ಸಾಯುವುದು ಲೇಸು ಎಂದು ಪ್ರಾಣ ಕಳೆದುಕೊಳ್ಳುತ್ತಿದ್ದೇನೆ ಎಂದು ಹೇಳಿ, ವಿಡಿಯೋ ರೆಕಾರ್ಡ್​ ಮಾಡಿ 10ನೇ ತರಗತಿಯ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಇದೇ ವಿಡಿಯೋದಲ್ಲಿ ಇನ್ನೊಂದು ಸ್ಫೋಟಕ ಮಾಹಿತಿಯೊಂದನ್ನು ಹೊರ ಹಾಕಿರುವ ಬಾಲಕಿ, ನನ್ನ ತಂದೆಗೆ ಅಮ್ಮನನ್ನು ಮದುವೆಯಾಗುವ ಮೊದಲೇ ಬೇರೊಂದು ಮದುವೆಯಾಗಿತ್ತು. ಮೊದಲನೇ ಪತ್ನಿ, ಅವರ ಹೊಟ್ಟೆಯಲ್ಲಿದ್ದ ಮಗು ಸೇರಿ ನಾಲ್ಕು ಮಕ್ಕಳನ್ನು ಅಪ್ಪನೇ ಕೊಂದಿದ್ದಾರೆ. ಇದರಲ್ಲಿ ಚಿಕ್ಕಪ್ಪನ ಪಾತ್ರವೂ ಇದ್ದು, ಅಪ್ಪನೊಂದಿಗೆ ಇವರೂ ಜೈಲು ಶಿಕ್ಷೆ ಅನುಭವಿಸಿದ್ದರು. ಇವರೆಲ್ಲರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಹೇಳಿದ್ದಾಳೆ.

ಮೃತ ಬಾಲಕಿಯ ತಂದೆಯನ್ನು ಪೊಲೀಸರು ಬಂಧಿಸಿದ್ದು, ಇತರ ಆರೋಪಿಗಳ ಹುಡುಕಾಟದಲ್ಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.