ETV Bharat / international

ಯುದ್ಧಪೀಡಿತ ಗಾಜಾದಿಂದ ಕಾಶ್ಮೀರಿ ಮಹಿಳೆ, ಮಗು ರಕ್ಷಣೆ: ಸುರಕ್ಷಿತವಾಗಿ ಈಜಿಪ್ಟ್​ಗೆ ಕರೆದೊಯ್ದ ಭಾರತೀಯ ಸಂಸ್ಥೆಗಳು

author img

By ETV Bharat Karnataka Team

Published : Nov 14, 2023, 6:35 PM IST

ಗಾಜಾದಲ್ಲಿ ಸಿಕ್ಕಿಬಿದ್ದಿದ್ದ ಕಾಶ್ಮೀರಿ ಮಹಿಳೆಯನ್ನು ಭಾರತೀಯ ಸಂಸ್ಥೆಗಳು ರಕ್ಷಿಸಿ ಈಜಿಪ್ಟ್​ಗೆ ಕರೆದೊಯ್ದಿವೆ.

Etv Bharatಯುದ್ಧಪೀಡಿತ ಗಾಜಾದಿಂದ ಕಾಶ್ಮೀರಿ ಮಹಿಳೆ ರಕ್ಷಣೆ
Etv Bharatಯುದ್ಧಪೀಡಿತ ಗಾಜಾದಿಂದ ಕಾಶ್ಮೀರಿ ಮಹಿಳೆ ರಕ್ಷಣೆ

ಜೆರುಸಲೇಂ: ಯುದ್ಧಪೀಡಿತ ಗಾಜಾಪಟ್ಟಿಯಲ್ಲಿ ಸಿಲುಕಿದ್ದ ಕಾಶ್ಮೀರಿ ಮಹಿಳೆ ಮತ್ತು ಆಕೆಯ ಮಗಳನ್ನು ಭಾರತೀಯ ಸಂಸ್ಥೆಗಳು ರಕ್ಷಣೆ ಮಾಡಿವೆ. ರಕ್ಷಣೆ ಕೋರಿದ್ದ ಮಹಿಳೆಯನ್ನು ಇಸ್ರೇಲ್​ ನೆರವಿನಿಂದ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ಈಜಿಪ್ಟ್​ಗೆ ಕರೆದೊಯ್ಯಲಾಗಿದೆ ಎಂದು ಆಕೆಯ ಪತಿ ಮಾಹಿತಿ ನೀಡಿದ್ದಾರೆ.

ಲುಬ್ನಾ ನಜೀರ್ ಶಾಬೂ ಮತ್ತು ಆಕೆಯ ಮಗಳು ಕರೀಮಾ ಸೋಮವಾರ ಸಂಜೆ ಈಜಿಪ್ಟ್ ಮತ್ತು ಗಾಜಾ ನಡುವಿನ ರಫಾ ಗಡಿ ದಾಟಿ ಬಂದಿದ್ದಾರೆ. ಸದ್ಯ ಅವರು ಈಜಿಪ್ಟ್​ನ ಅಲ್ ಅರಿಶ್ ನಗರದಲ್ಲಿದ್ದಾರೆ. ಮಂಗಳವಾರ ಅವರು ಕೈರೋಗೆ ತೆರಳಲಿದ್ದಾರೆ ಎಂದು ಲುಬ್ನಾ ಅವರ ಪತಿ ತಿಳಿಸಿದ್ದಾರೆ.

ರಫಾ ಗಡಿ ಮಾತ್ರ ಬಳಕೆ: ಗಾಜಾವನ್ನು ತನ್ನ ನಿಯಂತ್ರಣಕ್ಕೆ ಪಡೆದಿರುವ ಇಸ್ರೇಲ್​ ರಫಾ ಗಡಿಯನ್ನು ಮಾತ್ರ ರಕ್ಷಣಾ ಕಾರ್ಯಾಚರಣೆಗಳಿಗೆ ಬಳಸಿಕೊಳ್ಳುತ್ತಿದೆ. ಜೊತೆಗೆ ಮಾನವೀಯ ನೆರವನ್ನೂ ಈ ಗಡಿಯಿಂದಲೇ ಗಾಜಾಕ್ಕೆ ಕಳುಹಿಸಲಾಗುತ್ತದೆ. ಏಕೈಕ ನಿರ್ಗಮನ ಮಾರ್ಗವಾಗಿರುವ ರಫಾ ಕ್ರಾಸಿಂಗ್​ನಿಂದ ಮಾತ್ರ ವಿದೇಶಿ ಪ್ರಜೆಗಳು ಮತ್ತು ಗಾಯಾಳುಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗುತ್ತಿದೆ.

ಮಾಧ್ಯಮವೊಂದಕ್ಕೆ ಮಾಹಿತಿ ನೀಡಿರುವ ಕಾಶ್ಮೀರಿ ಮಹಿಳೆ ಲುಬ್ನಾ ಅವರು, 'ಗಾಜಾ ತೊರೆಯಲು ಭಾರತೀಯ ರಕ್ಷಣಾ ಸಂಸ್ಥೆಗಳಿಗೆ ಅಕ್ಟೋಬರ್ 10 ರಂದು ನೆರವು ಕೋರಿದ್ದೆ. ಅವರು ನನ್ನನ್ನೀಗ ರಕ್ಷಿಸಿ ಈಜಿಪ್ಟ್​ಗೆ ಸುರಕ್ಷಿತವಾಗಿ ಕರೆತಂದಿದ್ದಾರೆ. ಇದಕ್ಕೆ ಧನ್ಯವಾದ ಸಲ್ಲಿಸುವೆ' ಎಂದು ಹೇಳಿದ್ದಾರೆ.

ಗಾಜಾದಲ್ಲಿ ಭಯಾನಕ ಸ್ಥಿತಿ: ಗಾಜಾದಲ್ಲಿ ಕ್ರೂರ ಯುದ್ಧವಿದೆ. ಎಲ್ಲವನ್ನೂ ಕೆಲವೇ ಸೆಕೆಂಡುಗಳಲ್ಲಿ ನಾಶಪಡಿಸಲಾಗುತ್ತಿದೆ. ಬಾಂಬ್​ಗಳು ನಿರಂತರ ಸ್ಫೋಟಗೊಳ್ಳುತ್ತಿವೆ. ಸ್ಫೋಟದ ಶಬ್ದಗಳು ಭೀತಿಯನ್ನು ಹುಟ್ಟಿಸುತ್ತವೆ. ಇಡೀ ಮನೆಯನ್ನೇ ನಡುಗಿಸುತ್ತದೆ. ಇದು ಭಯಾನಕವಾಗಿದೆ ಎಂದು ಲುಬ್ನಾ ತನ್ನ ಮಗಳೊಂದಿಗೆ ಗಾಜಾದ ದಕ್ಷಿಣ ಭಾಗಕ್ಕೆ ತೆರಳುವ ಮೊದಲು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ಅಕ್ಟೋಬರ್ 9ರ ಮಧ್ಯರಾತ್ರಿ ತಾವಿದ್ದ ಪ್ರದೇಶಕ್ಕೆ ನೀರು, ವಿದ್ಯುತ್​ ಪೂರೈಕೆ ಸ್ಥಗಿತಗೊಳಿಸಲಾಯಿತು. ಹೀಗಾಗಿ ದಕ್ಷಿಣ ಗಾಜಾಕ್ಕೆ ತೆರಳಬೇಕಾಯಿತು ಎಂದರು.

ಇಂತಹ ದಾಳಿಯನ್ನು ಈ ಹಿಂದೆ ನೋಡಿರಲಿಲ್ಲ. ನಮಗೆ ಇಲ್ಲಿ ಸುರಕ್ಷಿತ ಸ್ಥಳವೇ ಇಲ್ಲವಾಗಿದೆ. ಗಾಜಾ ಪಟ್ಟಿ ತುಂಬಾ ಚಿಕ್ಕದಾಗಿದೆ. ಎಲ್ಲ ಕಡೆಯಿಂದ ಇಸ್ರೇಲ್​ ಸೇನೆ ಮುಗಿಬಿದ್ದಿದ್ದು, ಹೊರಹೋಗಲು ಸಾಧ್ಯವಾಗುತ್ತಿಲ್ಲ. ಇಲ್ಲಿ ಯಾವುದೇ ನಿರ್ಗಮನ ದಾರಿಗಳಿಲ್ಲ ಎಂದು ಅವರು ಹೇಳಿದ್ದರು.

ಅಕ್ಟೋಬರ್​ 7 ರಂದು ಹಮಾಸ್​ ಉಗ್ರರು ನಡೆಸಿದ ಭೀಕರ ದಾಳಿಯ ಬಳಿಕ ಇಸ್ರೇಲ್​ ಪಡೆಗಳು ಪ್ರತಿದಾಳಿಯನ್ನು ನಿರಂತರವಾಗಿ ಮಾಡುತ್ತಿವೆ. ಒತ್ತೆಯಾಗಿಟ್ಟುಕೊಂಡ 240 ಜನರನ್ನು ಬಿಡುವವರೆಗೆ ಕನಿಷ್ಠ ಕದನ ವಿರಾಮ ಕೂಡ ನೀಡುವುದಿಲ್ಲ ಎಂದು ಖಡಕ್​ ಆಗಿ ಹೇಳಿದೆ.

ಇದನ್ನೂ ಓದಿ: ಶಿಫಾ ಸುತ್ತ ಇಸ್ರೇಲ್​ ಭೀಕರ ಬಾಂಬ್​ ದಾಳಿ: ಆಸ್ಪತ್ರೆಯೊಳಗೆ ಸಿಕ್ಕಿಬಿದ್ದ 20 ಸಾವಿರ ಜನರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.