ETV Bharat / international

ವಾಯುವ್ಯ ಪಾಕಿಸ್ತಾನದಲ್ಲಿ ಉಗ್ರರ ಉಪಟಳ; ಬೀದಿಗಿಳಿದು ಬುಡಕಟ್ಟು ಜನರ ಪ್ರತಿಭಟನೆ

author img

By

Published : Jan 8, 2023, 12:20 PM IST

ಪಾಕಿಸ್ತಾನದ ವಾಯುವ್ಯ ಭಾಗದಲ್ಲಿ ಬುಡಕಟ್ಟು ಜನಾಂಗದವರು ಹೆಚ್ಚಿದ್ದು, ಭಯೋತ್ಪಾದನೆಯ ವಿರುದ್ಧ ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ.

Terrorists
ಭಯೋತ್ಪಾದಕರು

ಪೇಶಾವರ: ಪಾಕಿಸ್ತಾನದ ವಾಯುವ್ಯದಲ್ಲಿರುವ ಸಾವಿರಾರು ಬುಡಕಟ್ಟು ಜನರು ಅಫ್ಘಾನಿಸ್ತಾನದ ದೇಶದ ಗಡಿಯಲ್ಲಿರುವ ಬುಡಕಟ್ಟು ಜಿಲ್ಲೆಗಳಲ್ಲಿ ಹೆಚ್ಚುತ್ತಿರುವ ಭಯೋತ್ಪಾದನೆ ಮತ್ತು ಅಪಹರಣ ಪ್ರಕರಣಗಳ ವಿರುದ್ಧ ಬೀದಿಗಿಳಿದಿದ್ದು, ತಕ್ಷಣವೇ ಈ ಪ್ರದೇಶದಲ್ಲಿ ಶಾಂತಿ ಪುನಃಸ್ಥಾಪಿಸಲು ಒತ್ತಾಯಿಸಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ತಾವು ವಾಸವಿರುವ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಅಶಾಂತಿ, ಭಯೋತ್ಪಾದನೆ ಮತ್ತು ಅಪಹರಣಗಳ ವಿರುದ್ಧ ದಕ್ಷಿಣ ವಜೀರಿಸ್ತಾನ್ ಬುಡಕಟ್ಟು ಜಿಲ್ಲೆಯ ಪ್ರಧಾನ ಕಚೇರಿಯಾದ ವಾನಾದಲ್ಲಿ ಶುಕ್ರವಾರ 5,000ಕ್ಕೂ ಹೆಚ್ಚು ಬುಡಕಟ್ಟು ಜನರು ರ್‍ಯಾಲಿ ನಡೆಸಿದರು. ದೇಶದಲ್ಲಿ ಭಯೋತ್ಪಾದಕ ದಾಳಿಗಳು ಹೆಚ್ಚುತ್ತಿವೆ. ಅದರಲ್ಲೂ ಮುಖ್ಯವಾಗಿ ಖೈಬರ್ ಪಖ್ತುಂಖ್ವಾ ಮತ್ತು ಬಲೂಚಿಸ್ತಾನ್ ಪ್ರಾಂತ್ಯಗಳಲ್ಲಿ ಅಫ್ಘಾನಿಸ್ತಾನ ಮೂಲದ ನಿಷೇಧಿತ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ (ಟಿಟಿಪಿ) ಗುಂಪು ಸಕ್ರಿಯವಾಗಿದ್ದು, ಭಯೋತ್ಪಾದಕ ದಾಳಿ ನಡೆಸುತ್ತಿವೆ ಎಂದು ತಿಳಿಸಿದ್ದಾರೆ.

ಬುಡಕಟ್ಟು ಪ್ರದೇಶಗಳಲ್ಲಿನ ನಾಗರಿಕರ ಜೀವ ಮತ್ತು ಆಸ್ತಿ ರಕ್ಷಣೆ ಸರ್ಕಾರದ ಜವಾಬ್ದಾರಿ. ಈ ಪ್ರದೇಶದಲ್ಲಿ ಶಾಂತಿಯನ್ನು ಕಾಪಾಡಲು ಮತ್ತು ಒತ್ತೆಯಾಳುಗಳನ್ನು ಅಪಹರಣಕಾರರ ಬಂಧನದಿಂದ ಬಿಡುಗಡೆ ಮಾಡಲು ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳಬೇಕು. ಅಲ್ಲದೇ ತಕ್ಷಣವೇ ಬುಡಕಟ್ಟು ಜಿಲ್ಲೆಗಳಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಮರುಸ್ಥಾಪಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ವಾನಾ ಬಜಾರ್‌ನಲ್ಲಿ ಎಲ್ಲಾ ಅಂಗಡಿಗಳು ಮತ್ತು ಮಾರುಕಟ್ಟೆಗಳನ್ನು ಬಂದ್‌ ಮಾಡಿರುವ ಜನರು ಉಗ್ರರ ಉಪಟಳವನ್ನು ವಿರೋಧಿಸಿದ್ದಾರೆ.

ಪುಷ್ಟೂನ್ ರಾಷ್ಟ್ರೀಯವಾದಿ ಪುಷ್ಟೂನ್ ತಹಫೂಜ್ ಮೂವ್‌ಮೆಂಟ್​ನ (ಪಿಟಿಎಂ) ಮುಖಂಡ ಮಂಜೂರ್ ಪುಸ್ತೀನ್ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, ಈಗ ಎದ್ದಿರುವ ಅಶಾಂತಿಯು ವಾಣಿಜ್ಯ ವ್ಯಾಪಾರಕ್ಕೆ ಮಾತ್ರವಲ್ಲದೇ ಹೂಡಿಕೆದಾರರ ಮೇಲೂ ಪರಿಣಾಮ ಬೀರಿದೆ. ಈಗ ಚಾಲ್ತಿಯಲ್ಲಿರುವ ಕಾನೂನು ಮತ್ತು ಸುವ್ಯವಸ್ಥೆ ಸರಿಹೋಗದೇ ವ್ಯಾಪಾರಸ್ಥರು ವ್ಯವಹಾರಗಳನ್ನು ನಡೆಸಲು ತಯಾರಿಲ್ಲ. ಹಾಗೆಯೇ ಸಾರ್ವಜನಿಕ ಸುವ್ಯವಸ್ಥೆ ಸುಧಾರಿಸದಿದ್ದರೆ ಬುಡಕಟ್ಟು ಜನಾಂಗದವರು ಭಯೋತ್ಪಾದಕರಂತೆ ಶಸ್ತ್ರಾಸ್ತ್ರಗಳನ್ನು ಹಿಡಿಯುವ ಸಂದರ್ಭ ಬರಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಜಮ್ಮು ಕಾಶ್ಮೀರ: ಇಬ್ಬರು ಉಗ್ರರ ಹೊಡೆದುರುಳಿಸಿದ ಭಾರತೀಯ ಸೇನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.