ETV Bharat / international

ಪ್ರಯಾಣಿಕನಿಗೆ ಹೃದಯಾಘಾತ: ಪಾಕಿಸ್ತಾನದ ಕರಾಚಿಯಲ್ಲಿ ಸ್ಪೈಸ್​ಜೆಟ್​ ವಿಮಾನ ತುರ್ತು ಲ್ಯಾಂಡಿಂಗ್​

author img

By PTI

Published : Dec 6, 2023, 6:40 AM IST

SPICEJET EMERGENCY LANDING: ಪ್ರಯಾಣಿಕರೊಬ್ಬರಿಗೆ ವೈದ್ಯಕೀಯ ಚಿಕಿತ್ಸೆ ಅಗತ್ಯವಿದ್ದ ಕಾರಣ ಸ್ಪೈಸ್​ಜೆಟ್​ ವಿಮಾನವನ್ನು ಪಾಕಿಸ್ತಾನದ ಕರಾಚಿಯಲ್ಲಿ ತುರ್ತು ಲ್ಯಾಂಡಿಂಗ್​ ಮಾಡಿದ ಘಟನೆ ಮಂಗಳವಾರ ನಡೆದಿದೆ.

ವಿಮಾನ ತುರ್ತು ಲ್ಯಾಂಡಿಂಗ್​
ವಿಮಾನ ತುರ್ತು ಲ್ಯಾಂಡಿಂಗ್​

ಕರಾಚಿ (ಪಾಕಿಸ್ತಾನ): ಉತ್ತರಪ್ರದೇಶದ ಅಹಮದಾಬಾದ್‌ನಿಂದ ದುಬೈಗೆ ಹೊರಟಿದ್ದ ಸ್ಪೈಸ್​ಜೆಟ್​ ವಿಮಾನ ಪಾಕಿಸ್ತಾನದ ಕರಾಚಿಯಲ್ಲಿ ತುರ್ತು ಭೂಸ್ಪರ್ಶ ಕಂಡಿದೆ. ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರಿಗೆ ಹೃದಯಾಘಾತ ಉಂಟಾಗಿದ್ದು, ತುರ್ತು ವೈದ್ಯಕೀಯ ನೆರವಿಗಾಗಿ ಮಾರ್ಗ ಬದಲಿಸಿ ಕರಾಚಿಯಲ್ಲಿ ಇಳಿಸಲಾಗಿದೆ.

ಡಿಸೆಂಬರ್​ 5 (ಮಂಗಳವಾರ) ರಂದು ರಾತ್ರಿ 9.30 ರ ಸುಮಾರಿನಲ್ಲಿ ಸ್ಪೈಸ್​ಜೆಟ್​ ಎಸ್​ಜಿ-15 ದುಬೈಗೆ ಹಾರುತ್ತಿದ್ದಾಗ ಮಾರ್ಗ ಮಧ್ಯೆ 27 ವರ್ಷದ ಪ್ರಯಾಣಿಕ ಧರ್ವಾಲ್​ ದರ್ಮೇಶ್​ ಎಂಬುವರಿಗೆ ಹೃದಯಾಘಾತವಾಗಿದೆ. ಪ್ರಥಮ ಚಿಕಿತ್ಸೆ ನೀಡಿದ ಬಳಿಕ ವಿಮಾನದಲ್ಲಿ ಯಾರೂ ವೈದ್ಯರು ಇಲ್ಲದ ಕಾರಣ, ತುರ್ತು ವೈದ್ಯಕೀಯ ನೆರವಿಗಾಗಿ ಪಾಕಿಸ್ತಾನದ ಕರಾಚಿಯಲ್ಲಿ ಇಳಿಸಲಾಯಿತು ಎಂದು ನಾಗರಿಕ ವಿಮಾನಯಾನ ಪ್ರಾಧಿಕಾರದ (ಸಿಎಎ) ಅಧಿಕಾರಿಗಳು ತಿಳಿಸಿದರು.

ಸಿಎಎಯ ವೈದ್ಯಕೀಯ ತಂಡವು ಪ್ರಯಾಣಿಕನಿಗೆ ತುರ್ತು ವೈದ್ಯಕೀಯ ಆರೈಕೆ ನೀಡಿದೆ. ಅವರಿಗೆ ಸಕ್ಕರೆ ಮಟ್ಟ ಕುಸಿದು, ಹೃದಯಾಘಾತ ಉಂಟಾಗಿತ್ತು. ಕರಾಚಿಯಲ್ಲಿ ವಿಮಾನ ತುರ್ತು ಭೂಸ್ಪರ್ಶ ಮಾಡಿದ ಬಳಿಕ ವೈದ್ಯರಿಂದ ಚಿಕಿತ್ಸೆ ಕೊಡಿಸಲಾಗಿದೆ. ಸದ್ಯಕ್ಕೆ ಅವರು ಆರೋಗ್ಯವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು. ವೈದ್ಯಕೀಯ ಚಿಕಿತ್ಸೆ ಪಡೆದ ನಂತರ, ವಿಮಾನಕ್ಕೆ ಇಂಧನ ತುಂಬಿಸಲಾಗಿದೆ. ಬಳಿಕ ದುಬೈಗೆ ಹಾರಿದೆ ಎಂದು ನವದೆಹಲಿಯಲ್ಲಿನ ಏರ್‌ಲೈನ್‌ನ ವಕ್ತಾರರು ತಿಳಿಸಿದ್ದಾರೆ.

ಕರಾಚಿಯಲ್ಲಿ ಇಳಿದಿದ್ದು ಇದೇ ಮೊದಲಲ್ಲ: ಹಿಂದೆ ದುಬೈಗೆ ಹೊರಟಿದ್ದ ಸ್ಪೈಸ್​ಜೆಟ್​ ಏರ್​ಲೈನ್ಸ್​ ವಿಮಾನದಲ್ಲಿ ತಾಂತ್ರಿಕ ದೋಷ ಉಂಟಾಗಿ ಪಾಕಿಸ್ತಾನದ ಕರಾಚಿಯಲ್ಲಿ ಇಳಿದಿತ್ತು. ಇದಾದ ಕೆಲ ದಿನಗಳ ಬಳಿಕ ಇಂಡಿಗೋ ವಿಮಾನವೂ ಕೂಡ ದೋಷದಿಂದಾದ ಕರಾಚಿಯಲ್ಲಿ ತುರ್ತು ಭೂಸ್ಪರ್ಶ ಕಂಡಿತ್ತು. ಇದು ವಿಮಾನಗಳ ಸುರಕ್ಷಿತ ಹಾರಾಟದ ಮೇಲೆಯೇ ಕರಿಛಾಯೆ ಮೂಡಿಸಿತ್ತು.

ಇಂಡಿಗೋದ 6ಇ 1406 ವಿಮಾನ ಶಾರ್ಜಾದಿಂದ ಹೈದರಾಬಾದ್​ಗೆ ಬರಬೇಕಿತ್ತು. ಈ ವೇಳೆ, ವಿಮಾನದಲ್ಲಿ ತಾಂತ್ರಿಕ ದೋಷ ಉಂಟಾಗಿದ್ದನ್ನು ಪೈಲಟ್​ ಪತ್ತೆ ಮಾಡಿದ್ದರು. ಬಳಿಕ ಅಧಿಕಾರಿಗಳಿಗೆ ಮಾಹಿತಿ ನೀಡಿ ತುರ್ತು ಭೂಸ್ಪರ್ಶಕ್ಕೆ ಕೋರಿದ್ದರು. ಅದರಂತೆ ವಿಮಾನವನ್ನು ತಕ್ಷಣವೇ ಪಾಕಿಸ್ತಾನದ ಕರಾಚಿಯಲ್ಲಿ ಇಳಿಸಲು ಸೂಚಿಸಲಾಗಿತ್ತು. ಅದರಂತೆ ಪೈಲಟ್​ ವಿಮಾನವನ್ನು ವಾಪಸ್​ ಕರಾಚಿಗೆ ತೆಗೆದುಕೊಂಡು ಹೋಗಿ ಲ್ಯಾಂಡಿಂಗ್​ ಮಾಡಿದ್ದರು.

ಮತ್ತೊಂದು ಘಟನೆಯಲ್ಲಿ ದೆಹಲಿಯಿಂದ ಹೊರಟಿದ್ದ ಇಂಡಿಗೋ ವಿಮಾನವು ತಾಂತ್ರಿಕ ದೋಷದಿಂದಾಗಿ ತುರ್ತು ಭೂ ಸ್ಪರ್ಶ ಮಾಡಿದ ಘಟನೆ ವರದಿಯಾಗಿತ್ತು. ಒಡಿಶಾದ ಬಿಜು ಪಟ್ನಾಯಕ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್​ ಆಫ್​ ಆದ 40 ನಿಮಿಷಗಳ ನಂತರ ದೋಷ ಕಂಡು ಬಂದು ವಿಮಾನವನ್ನು ವಾಪಸ್ ಅದೇ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್​ ಮಾಡಲಾಗಿತ್ತು.

ಇದನ್ನೂ ಓದಿ: ತಮಿಳುನಾಡಿನಲ್ಲಿ ಮೈಚೌಂಗ್ ಚಂಡಮಾರುತ: ಚೆನ್ನೈನಲ್ಲಿ ಲ್ಯಾಂಡ್ ಆಗಬೇಕಿದ್ದ ವಿಮಾನ ಬೆಂಗಳೂರಿಗೆ ಡೈವರ್ಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.