ಕೀವ್( ಉಕ್ರೇನ್): ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಮುಂದುವರೆದಿದೆ. ರಷ್ಯಾದ ಸೈನ್ಯದ ಆಕ್ರಮಣದಿಂದ ಉಕ್ರೇನ್‌ನ ಸೆವೆರೊಡೊನೆಟ್ಸ್ಕ್ ನಗರವು ಸಂಪೂರ್ಣವಾಗಿ ನಾಶವಾಗಿದೆ. ಉಕ್ರೇನ್‌ನ ಮುಖ್ಯ ನಗರವಾದ ಸೆವೆರೊಡ್ನೆಟ್ಸ್ಕ್‌ಗೆ ಹೋಗುವ ಪ್ರತಿಯೊಂದು ಸೇತುವೆಯನ್ನು ರಷ್ಯಾ ಸೇನೆ ನಾಶಪಡಿಸಿದೆ. ಲುಹಾನ್ಸ್ಕ್ ಗವರ್ನರ್ ಸೆರ್ಹಿ ಹೈದೈ ‘ಸೆವೆರೊಡೊನೆಟ್ಸ್ಕ್‌ನಲ್ಲಿರುವ ಮೂರು ಸೇತುವೆಗಳನ್ನು ರಷ್ಯಾ ಸೈನಿಕರು ನಾಶಪಡಿಸಿದ್ದಾರೆ ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಮಾಧ್ಯಮಗಳಲ್ಲಿ ಮಾಹಿತಿ ಹಂಚಿಕೊಂಡ ಗವರ್ನರ್ ಸೆರ್ಹಿ ಹೈದೈ, ಸೀವಿಯೆರೊಡೊನೆಟ್ಸ್ಕ್ನಿಂದ ನಾಗರಿಕರನ್ನು ಸಾಮೂಹಿಕವಾಗಿ ಸ್ಥಳಾಂತರಿಸುವುದು ಈಗ ಬಹಳ ಕಷ್ಟವಾಗುತ್ತಿದೆ. ರಷ್ಯಾ ಸೈನಿಕರು ಪಟ್ಟುಬಿಡದೇ ಶೆಲ್ ದಾಳಿ ಮತ್ತು ಹೋರಾಟ ಮುಂದುವರಿಸಿದೆ ಎಂದು ಅವರು ಹೇಳಿದರು.
ಗಾಯಗೊಂಡವರನ್ನು ಸ್ಥಳಾಂತರಿಸಲು ಉಕ್ರೇನಿಯನ್ ಮಿಲಿಟರಿ ಮತ್ತು ಸ್ಥಳೀಯ ನಿವಾಸಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ. ರಷ್ಯಾದ ಸೈನಿಕರು ನಗರವನ್ನು ಸಂಪೂರ್ಣವಾಗಿ ನಿರ್ಬಂಧಿಸಿಲ್ಲ. ಸುಮಾರು 12,000 ಜನರು ಸೀವಿರೋಡೋನೆಟ್ಸ್ಕ್‌ನಲ್ಲಿ ಉಳಿದುಕೊಂಡಿದ್ದಾರೆ. ಯುದ್ಧದ ಪೂರ್ವದಲ್ಲಿ ಇಲ್ಲಿ ಲಕ್ಷಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದರು. ಅಜೋಟ್ ರಾಸಾಯನಿಕ ಸ್ಥಾವರದಲ್ಲಿ 500 ಕ್ಕೂ ಹೆಚ್ಚು ನಾಗರಿಕರು ಆಶ್ರಯ ಪಡೆದಿದ್ದಾರೆ. ಒಟ್ಟಾರೆಯಾಗಿ ಕೊನೆಯ ದಿನದಲ್ಲಿ ಲುಹಾನ್ಸ್ಕ್ ಪ್ರದೇಶದಿಂದ 70 ನಾಗರಿಕರನ್ನು ಸ್ಥಳಾಂತರಿಸಲಾಗಿದೆ ಎಂದು ಅಲ್ಲಿನ ರಾಜ್ಯಪಾಲರು ತಿಳಿಸಿದ್ದಾರೆ.
ಓದಿ: ಉಕ್ರೇನ್ ನಿರಾಶ್ರಿತ ಬಾಲಕಿಗೆ ಅಪೆಂಡಿಕ್ಸ್ ನೋವು: ಉಚಿತವಾಗಿ ಆಪರೇಷನ್ ಮಾಡಿ ಪ್ರಾಣ ಉಳಿಸಿದ ವೈದ್ಯರು
ಅಜೋಟ್ ಸ್ಥಾವರದಿಂದ ನಾಗರಿಕರನ್ನು ಸ್ಥಳಾಂತರಿಸಲು ಮಾನವೀಯ ಕಾರಿಡಾರ್ ಅನ್ನು ಬುಧವಾರ ತೆರೆಯಲಾಗುವುದು. ರಷ್ಯಾದ ಮತ್ತು ಪ್ರತ್ಯೇಕತಾವಾದಿ ಪಡೆಗಳ ನಿಯಂತ್ರಣದಲ್ಲಿರುವ ಭೂಪ್ರದೇಶದ ಉತ್ತರಕ್ಕೆ 60 ಕಿಲೋಮೀಟರ್ (35 ಮೈಲುಗಳು) ದೂರದಲ್ಲಿರುವ ಸ್ವಾಟೊವೊ ಪಟ್ಟಣಕ್ಕೆ ನಿರಾಶ್ರಿತರನ್ನು ಕರೆದೊಯ್ಯಲಾಗುವುದು. ಉಕ್ರೇನ್ ತಾನು ನಿಯಂತ್ರಿಸುವ ಪ್ರದೇಶಕ್ಕೆ ಸ್ಥಳಾಂತರಿಸುವ ಕಾರಿಡಾರ್‌ಗೆ ಕರೆ ನೀಡಿದ ನಂತರ ಈ ಯೋಜನೆ ಮಾಡಲಾಗಿದೆ ಎಂದು ರಷ್ಯಾದ ಕರ್ನಲ್ ಜನರಲ್ ಮಿಖಾಯಿಲ್ ಮಿಜಿಂಟ್ಸೆವ್ ಹೇಳಿದ್ದಾರೆ.
80 ಪ್ರತಿಶತದಷ್ಟು ಸೆವೆರೊಡೊನೆಟ್ಸ್ಕ್ ಈಗ ರಷ್ಯಾದ ನಿಯಂತ್ರಣದಲ್ಲಿದೆ. ಈ ಹಿಂದೆ, ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ನಗರದಲ್ಲಿ ಉಕ್ರೇನಿಯನ್ ಪಡೆಗಳು ರಷ್ಯಾದ ಪಡೆಗಳೊಂದಿಗೆ ‘ಅಕ್ಷರಶಃ ಪ್ರತಿಯೊಂದು ಹೆಜ್ಜೆಗೂ’ ಹೋರಾಡುತ್ತಿವೆ ಎಂದು ಹೇಳಿದ್ದರು.