ETV Bharat / international

Russia-Ukraine War: ರಷ್ಯಾದಿಂದ ಭೀಕರ ಕ್ಷಿಪಣಿ ದಾಳಿ; ಉಕ್ರೇನ್​ನ 25 ವಾಸ್ತುಶಿಲ್ಪ ಸ್ಮಾರಕಗಳಿಗೆ ಹಾನಿ

author img

By

Published : Jul 24, 2023, 9:09 AM IST

ರಷ್ಯಾ ಸೇನೆಯು ಒಡೆಸಾದ ಮೇಲೆ ಕ್ಷಿಪಣಿ ದಾಳಿ ನಡೆಸಿ ಇಪ್ಪತ್ತೈದು ವಾಸ್ತುಶಿಲ್ಪ ಸ್ಮಾರಕಗಳನ್ನು ಹಾನಿಗೊಳಿಸಿದೆ ಎಂದು ಉಕ್ರೇನ್ ಅಧಿಕಾರಿಗಳು ಆರೋಪಿಸಿದ್ದಾರೆ.

architectural monuments
ವಾಸ್ತುಶಿಲ್ಪ ಸ್ಮಾರಕಗಳಿಗೆ ಹಾನಿ

ಕೀವ್ (ಉಕ್ರೇನ್): ಉಕ್ರೇನ್​ನ ಕರಾವಳಿ ನಗರವಾದ ಒಡೆಸಾದ ಮೇಲೆ ರಷ್ಯಾ ಭೀಕರ ಕ್ಷಿಪಣಿ ದಾಳಿ ನಡೆಸಿ ಇಪ್ಪತ್ತೈದು ವಾಸ್ತುಶಿಲ್ಪ ಸ್ಮಾರಕಗಳನ್ನು ಹಾನಿಗೊಳಿಸಿದೆ ಎಂದು ಉಕ್ರೇನ್ ಸ್ಥಳೀಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಕಪ್ಪು ಸಮುದ್ರದ ಮೂಲಕ ಉಕ್ರೇನ್‌ಗೆ ಸಂಪರ್ಕ ಕಲ್ಪಿಸುವ ಪ್ರಮುಖ ಬಂದರು ಒಡೆಸಾ ಮೇಲೆ ರಷ್ಯಾ ರಣಭೀಕರ ದಾಳಿಯಲ್ಲಿ ನಿರತವಾಗಿದೆ.

ಐತಿಹಾಸಿಕ ನಗರ ಕೇಂದ್ರವಾದ ಒಡೆಸಾದಲ್ಲಿ ರಷ್ಯಾವು ಉದ್ದೇಶಪೂರ್ವಕವಾಗಿ ಕ್ಷಿಪಣಿ ದಾಳಿ ಮಾಡಿದೆ. ಯುನೈಟೆಡ್ ನೇಷನ್ಸ್ ಎಜುಕೇಶನಲ್, ಸೈಂಟಿಫಿಕ್ ಮತ್ತು ಕಲ್ಚರಲ್ ಆರ್ಗನೈಸೇಶನ್ (ಯುನೆಸ್ಕೋ) ನಿಂದ ರಕ್ಷಿಸಲ್ಪಟ್ಟಿರುವ ಹಾಗೂ ಮಹಾನ್ ವಾಸ್ತುಶಿಲ್ಪಿಗಳು ಕಷ್ಟಪಟ್ಟು ನಿರ್ಮಿಸಿದ ಎಲ್ಲ ಸ್ಮಾರಕಗಳನ್ನು ಅಮಾನವೀಯವಾಗಿ ನಾಶಪಡಿಸುತ್ತಿದ್ದಾರೆ ಎಂದು ಉಕ್ರೇನ್‌ ಮಿಲಿಟರಿ ಆಡಳಿತದ ಮುಖ್ಯಸ್ಥ ಒಲೆಹ್ ಕಿಪರ್ ದೂರಿದ್ದಾರೆ.

1809ರಲ್ಲಿ ನಿರ್ಮಿಸಲಾದ ಆರ್ಥೊಡಾಕ್ಸ್ ಟ್ರಾನ್ಸ್‌ಫಿಗರೇಶನ್ ಅಥವಾ ಸ್ಪಾಸೊ-ಪ್ರಿಬ್ರಾಜೆನ್ಸ್ಕಿಕ್ಯಾಥೆಡ್ರಲ್ ನಗರದ ಅತಿದೊಡ್ಡ ಚರ್ಚ್ ಆಗಿದ್ದು, ಇದನ್ನು ಧ್ವಂಸ ಮಾಡಲಾಗಿದೆ. ಸೋವಿಯತ್ ಯುಗದಲ್ಲಿ ಈ ಚರ್ಚ್ ಕೆಡವಲಾಗಿತ್ತು. ಆದರೆ ಉಕ್ರೇನ್ ಸ್ವಾತಂತ್ರ್ಯ ಪಡೆದ ನಂತರ ಅದನ್ನು ಪುನಃಸ್ಥಾಪಿಸಲಾಗಿತ್ತು. ಹಾಗೆಯೇ, ದೇಶದ ಸಾಂಸ್ಕೃತಿಕ ಹೆಗ್ಗುರುತಾದ ಹೌಸ್ ಆಫ್ ಸೈಂಟಿಸ್ಟ್ಸ್, ಇದನ್ನು ಪ್ಯಾಲೇಸ್ ಆಫ್ ದಿ ಕೌಂಟ್ಸ್ ಟಾಲ್‌ಸ್ಟಾಯ್ ಮತ್ತು ಜ್ವಾನೆಟ್ಸ್ಕಿ ಬೌಲೆವಾರ್ಡ್ ಎಂದೂ ಕರೆಯುತ್ತಾರೆ. ಈ ಐತಿಹಾಸಿಕ ಕಟ್ಟಡ ಸೇರಿದಂತೆ ಹಲವು ಮಹಲುಗಳಿಗೆ ಹಾನಿಯಾಗಿದೆ ಎಂದು ಒಡೆಸಾ ಮೇಯರ್ ಹೆನ್ನಾಡಿ ಟ್ರುಖಾನೋವ್ ಭಾನುವಾರ ತಿಳಿಸಿದ್ದಾರೆ.

ಇನ್ನೊಂದೆಡೆ, ಯುನೆಸ್ಕೋ ರಾಷ್ಟ್ರಗಳ ಪಟ್ಟಿಯಿಂದ ರಷ್ಯಾವನ್ನು ಹೊರಗಿಡಬೇಕೆಂದು ಉಕ್ರೇನ್‌ನ ಸಂಸ್ಕೃತಿ ಸಚಿವ ಒಲೆಕ್ಸಾಂಡರ್ ಟ್ಕಾಚೆಂಕೊ ಒತ್ತಾಯಿಸಿದ್ದಾರೆ. ಈ ಕುರಿತು ಟ್ವೀಟ್​ ಮಾಡಿರುವ ಅವರು "ರಷ್ಯಾದಿಂದ ಪವಿತ್ರ ಸ್ಥಳಗಳು ಮತ್ತು ಮುಗ್ಧ ಜೀವಗಳ ಕಡೆಗಣನೆಯು ಮತ್ತೊಮ್ಮೆ ಸ್ಪಷ್ಟವಾಗಿದೆ. ಒಡೆಸಾದಲ್ಲಿ ಕ್ಷಿಪಣಿ ದಾಳಿ ನಡೆಸಿ ನಾಗರಿಕರನ್ನು ಹತ್ಯೆ ಮಾಡಲಾಗಿದ್ದು, ವಿಶ್ವ ಪರಂಪರೆಯ ಆಸ್ತಿಗೆ ಅಪಾಯವನ್ನುಂಟು ಮಾಡಲಾಗಿದೆ. ರಷ್ಯಾವನ್ನು ಭಯೋತ್ಪಾದಕ ರಾಷ್ಟ್ರವೆಂದು ಹೆಸರಿಸಲು ಮತ್ತು ಯುನೆಸ್ಕೋದಿಂದ ಹೊರಹಾಕಲು ಇದು ಸೂಕ್ತ ಸಮಯವಲ್ಲವೇ?, ಇದಕ್ಕಿಂತ ಹೆಚ್ಚಿನ ಪುರಾವೆಗಳು ಬೇಕೇ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ : US-Russia Cold War: ಸರ್ಕಾರಿ ಅಧಿಕಾರಿಗಳು ಐಫೋನ್ ಬಳಸುವಂತಿಲ್ಲ- ರಷ್ಯಾ ಸರ್ಕಾರದ ಆದೇಶ

ಉಕ್ರೇನ್‌ನ ಸದರ್ನ್ ಆಪರೇಷನಲ್ ಕಮಾಂಡ್ ನೀಡಿದ ಮಾಹಿತಿ ಪ್ರಕಾರ, ಒಡೆಸಾದಲ್ಲಿ ಭಾನುವಾರ ರಷ್ಯಾ ನಡೆಸಿದ ದಾಳಿಯಲ್ಲಿ ಒಬ್ಬರು ಸಾವನ್ನಪ್ಪಿದ್ದು, ನಾಲ್ವರು ಮಕ್ಕಳು ಸೇರಿದಂತೆ 19 ಜನರು ಗಾಯಗೊಂಡಿದ್ದಾರೆ. ಮೂವರು ಮಕ್ಕಳು ಮತ್ತು 11 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಉಳಿದವರು ಹೊರರೋಗಿ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ" ಎಂದು ವಿವರ ನೀಡಿದೆ.

ಈ ಮಧ್ಯೆ, ಒಡೆಸಾ ಮೇಲಿನ ರಷ್ಯಾದ ದಾಳಿಯನ್ನು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಖಂಡಿಸಿದ್ದಾರೆ. ರಷ್ಯಾದ ದುಷ್ಟತೆಗೆ ಕ್ಷಮೆಯಿಲ್ಲ, ರಷ್ಯಾದ ಪಡೆಗಳ ವಿರುದ್ಧ ಪ್ರತೀಕಾರ ತೀರಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.