ETV Bharat / international

ತೈಲ ಪೂರೈಕೆ ಬೆನ್ನಲ್ಲೇ ಪಾಕಿಸ್ತಾನದೊಂದಿಗೆ ಬಾಂಧವ್ಯ ವೃದ್ಧಿಗೆ ಮುಂದಾದ ರಷ್ಯಾ

author img

By

Published : Jun 13, 2023, 1:54 PM IST

ಸದ್ಯ ಪಾಕಿಸ್ತಾನವು ರಷ್ಯಾದಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಈ ಮಧ್ಯೆ ಪಾಕಿಸ್ತಾನದೊಂದಿಗೆ ಇನ್ನಷ್ಟು ಉತ್ತಮ ಬಾಂಧವ್ಯ ಹೊಂದಲು ಬಯಸುವುದಾಗಿ ರಷ್ಯಾ ಹೇಳಿದೆ.

Russia seeks expansion in ties with Pakistan
Russia seeks expansion in ties with Pakistan

ಮಾಸ್ಕೋ (ರಷ್ಯಾ) : ಪಾಕಿಸ್ತಾನದೊಂದಿಗೆ ತನ್ನ ಬಾಂಧವ್ಯ ವೃದ್ಧಿಸಲು ರಷ್ಯಾ ಮುಂದಾಗಿದೆ ಎಂದು ವರದಿಗಳು ತಿಳಿಸಿವೆ. ರಷ್ಯಾದ ತೈಲ ಹೊತ್ತ ಹಡಗು ಇದೇ ವಾರಾಂತ್ಯದಲ್ಲಿ ಪಾಕಿಸ್ತಾನದ ಕರಾಚಿ ಬಂದರನ್ನು ತಲುಪಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಮಾಸ್ಕೋ ಮತ್ತು ಇಸ್ಲಾಮಾಬಾದ್ ನಡುವಿನ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 75 ನೇ ವಾರ್ಷಿಕೋತ್ಸವದಂದು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಈ ಬಗ್ಗೆ ಹೇಳಿಕೆ ನೀಡಿದ್ದಾರೆ.

ಈ ಬಗ್ಗೆ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಲಾವ್ರೊವ್, ದಕ್ಷಿಣ ಏಷ್ಯಾ ರಾಷ್ಟ್ರವಾಗಿರುವ ಪಾಕಿಸ್ತಾನದೊಂದಿಗೆ ಸಹಕಾರ ವಿಸ್ತರಿಸುವ ತಮ್ಮ ದೇಶದ ಬಯಕೆ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನ ಮತ್ತು ರಷ್ಯಾ ದೇಶಗಳು ಶೀತಲ ಯುದ್ಧದ ಪ್ರತಿಸ್ಪರ್ಧಿಗಳಾಗಿ ಉಳಿದಿವೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಇವುಗಳ ದ್ವಿಪಕ್ಷೀಯ ಸಂಬಂಧಗಳು ಸಕಾರಾತ್ಮಕ ತಿರುವನ್ನು ಪಡೆದುಕೊಂಡಿವೆ ಮತ್ತು ಎರಡೂ ಕಡೆಯವರು ಹಿಂದಿನದ್ದನ್ನು ಮರೆತು ಹೊಸ ವಾಸ್ತವಗಳಿಗೆ ಹೊಂದಿಕೊಳ್ಳಲು ಸಿದ್ಧರಾಗಿದ್ದಾರೆ. ಎರಡು ದೇಶಗಳು ತಮ್ಮ ವರ್ಷಗಳ ಶಾಂತಿಯುತ ರಾಜತಾಂತ್ರಿಕತೆಯನ್ನು ಸ್ಪಷ್ಟವಾದ ಫಲಿತಾಂಶಗಳಾಗಿ ನೋಡಲು ಪ್ರಯತ್ನ ಮಾಡುತ್ತಿವೆ.

ರಷ್ಯಾದಿಂದ ಪಾಕಿಸ್ತಾನಕ್ಕೆ ತೈಲ ಪೂರೈಸುವ ಬಗ್ಗೆ ಏಪ್ರಿಲ್‌ನಲ್ಲಿ ಉಭಯ ಒಪ್ಪಂದಕ್ಕೆ ಸಹಿ ಹಾಕಿದ್ದವು. ಈಗ ರಷ್ಯಾದಿಂದ ಮೊದಲ ತೈಲದ ಹಡಗು ಪಾಕಿಸ್ತಾನಕ್ಕೆ ತಲುಪಿದ್ದು, ರಷ್ಯಾದಿಂದ ತೈಲ ತರಿಸಿಕೊಳ್ಳುವುದು ತನಗೆ ಎಷ್ಟು ಲಾಭಕರವಾಗಲಿದೆ ಎಂಬುದನ್ನು ಪಾಕಿಸ್ತಾನ ಇನ್ನಷ್ಟೇ ನಿರ್ಧರಿಸಲಿದೆ. ಮೊದಲ ಸಾಗಣೆಯನ್ನು ರಿಯಾಯಿತಿ ದರದಲ್ಲಿ ಆಮದು ಮಾಡಿಕೊಳ್ಳಲಾಗಿದೆ ಎಂದು ವರದಿಯಾಗಿದೆ.

"ರಷ್ಯಾ ಮತ್ತು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಬಗ್ಗೆ ಪಾಕಿಸ್ತಾನಿ ಜನರು ಹೊಂದಿರುವ ಹೆಚ್ಚಿನ ಆಸಕ್ತಿ ಮತ್ತು ಗೌರವದ ಬಗ್ಗೆ ನಮಗೆ ತಿಳಿದಿದೆ. ನಾವು ಅದನ್ನು ತುಂಬಾ ಪ್ರಶಂಸಿಸುತ್ತೇವೆ" ಎಂದು ಲಾವ್ರೊವ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕಳೆದ ಮುಕ್ಕಾಲು ಶತಮಾನದಲ್ಲಿ ದ್ವಿಪಕ್ಷೀಯ ಸಂಬಂಧಗಳಲ್ಲಿ ವಿಭಿನ್ನ ಹಂತಗಳಿವೆ ಎಂದು ಅವರು ಹೇಳಿದರು. ಆದಾಗ್ಯೂ, ರಷ್ಯಾ ಯಾವಾಗಲೂ ಪಾಕಿಸ್ತಾನದೊಂದಿಗೆ ಸಹಕಾರವನ್ನು ವಿಸ್ತರಿಸಲು ಆಸಕ್ತಿ ಹೊಂದಿದೆ ಮತ್ತು ಯಾವುದೇ ಸಂದರ್ಭದಲ್ಲೂ ತನ್ನ ಬದ್ಧತೆಯನ್ನು ತ್ಯಜಿಸುವುದಿಲ್ಲ ಎಂದು ಅವರು ಹೇಳಿದರು.

"1980 ರ ದಶಕದಲ್ಲಿ ಕರಾಚಿಯಲ್ಲಿ (ಈಗ ಪಾಕಿಸ್ತಾನ್ ಸ್ಟೀಲ್ ಮಿಲ್ಸ್) ಅತಿದೊಡ್ಡ ಉಕ್ಕಿನ ಗಿರಣಿ ನಿರ್ಮಾಣದಲ್ಲಿ ಸೋವಿಯತ್ ತಜ್ಞರು ಭಾಗವಹಿಸಿದ್ದರು. ಆ ಸಮಯದಲ್ಲಿ ಅಫ್ಘಾನಿಸ್ತಾನದಲ್ಲಿ ಘರ್ಷಣೆ ನಡೆಯುತ್ತಿದ್ದರೂ ರಷ್ಯಾ ಪಾಕಿಸ್ತಾನಕ್ಕೆ ಸಹಾಯ ಮಾಡಿತ್ತು. ಪಾಕಿಸ್ತಾನದಲ್ಲಿಯೇ ಅತಿ ದೊಡ್ಡದಾದ ಗುಡ್ಡು ಉಷ್ಣ ವಿದ್ಯುತ್ ಸ್ಥಾವರವನ್ನು ಕೂಡ ಅದೇ ಸಮಯದಲ್ಲಿ ಸ್ಥಾಪಿಸಲಾಗಿತ್ತು" ಎಂದು ಲಾವ್ರೊವ್ ತಿಳಿಸಿದರು.

ರಷ್ಯಾದಿಂದ ತೈಲ ಆಮದು ಮಾಡಿಕೊಂಡ ಬಗ್ಗೆ ಮಾತನಾಡಿದ ಪಾಕ್ ಪ್ರಧಾನಿ ಶಹಬಾಜ್ ಷರೀಫ್ ಇದು ನಮ್ಮ ಭರವಸೆಗಳ ಈಡೇರಿಕೆ ಎಂದು ಹೇಳಿದ್ದಾರೆ. ಮಾಹಿತಿ ಸಚಿವೆ ಮರಿಯುಮ್ ಔರಂಗಜೇಬ್ ಈ ಬಗ್ಗೆ ಟ್ವೀಟ್ ಮಾಡಿದ್ದು, ಇದೇ ಜನರ ನಿಜವಾದ ಸೇವೆ ಎಂದಿದ್ದಾರೆ. ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಫೆಬ್ರವರಿ 2022ರಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಮಾಸ್ಕೋ ದಲ್ಲಿ ಭೇಟಿ ಮಾಡಿದ್ದರು. ಆಗಿನಿಂದಲೂ ತೈಲ ಪೂರೈಕೆಯ ಬಗ್ಗೆ ಎರಡೂ ದೇಶಗಳ ಮಧ್ಯೆ ಮಾತುಕತೆಗಳು ಮುಂದುವರೆದಿದ್ದವು.

ಇದನ್ನೂ ಓದಿ : Cyber Security: ​ಫೋನ್​ಗಳಲ್ಲಿ ರಹಸ್ಯವಾಗಿ ವೈರಸ್ ಇನ್​ಸ್ಟಾಲ್ ಮಾಡುವ 60 ಸಾವಿರ ಆ್ಯಪ್ ಪತ್ತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.