ETV Bharat / international

Guinness Record: ವಿಶ್ವಸಂಸ್ಥೆ ಆವರಣದಲ್ಲಿ ಮೋದಿ ಮುನ್ನಡೆಸಿದ ಯೋಗಾಭ್ಯಾಸಕ್ಕೆ ಗಿನ್ನಿಸ್ ದಾಖಲೆ ಗರಿ

author img

By

Published : Jun 21, 2023, 8:43 PM IST

ವಿಶ್ವಸಂಸ್ಥೆಯ ಪ್ರಧಾನ ಕಚೇರಿ ಆವರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಮುನ್ನಡೆಸಿದ 9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಗಿನ್ನಿಸ್ ದಾಖಲೆ ಬರೆದಿದೆ.

PM Modi led Yoga session at UN creates Guinness World Record
ಗಿನ್ನೀಸ್ ದಾಖಲೆ ಬರೆದ ಪ್ರಧಾನಿ ಮೋದಿ ನೇತೃತ್ವದ ಯೋಗಾಭ್ಯಾಸ!

ನ್ಯೂಯಾರ್ಕ್‌ (ಅಮೆರಿಕ): ನ್ಯೂಯಾರ್ಕ್​ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿ ಆವರಣದಲ್ಲಿ ಬುಧವಾರ ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ನಡೆದ 9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವು ಗಿನ್ನಿಸ್ ವಿಶ್ವದಾಖಲೆ ಬರೆಯಿತು. ಈ ಯೋಗಾಭ್ಯಾಸದಲ್ಲಿ ಪ್ರಪಂಚದ ಅತಿ ಹೆಚ್ಚು ರಾಷ್ಟ್ರಗಳ ಜನರು ಪಾಲ್ಗೊಂಡಿದ್ದು ವಿಶ್ವ ದಾಖಲೆ ಪುಸ್ತಕದ ಪುಟ ಸೇರಿತು. ಕಾರ್ಯಕ್ರಮದ ವೇದಿಕೆ ಮೇಲೆ ಮೋದಿ ಸಮ್ಮುಖದಲ್ಲಿ ವಿಶ್ವಸಂಸ್ಥೆಯಲ್ಲಿ ಭಾರತದ ರಾಯಭಾರಿ ರುಚಿರಾ ಕಾಂಬೋಜ್ ಅವರು ಗಿನ್ನಿಸ್ ದಾಖಲೆಯ ಪ್ರಮಾಣ ಪತ್ರವನ್ನು ಸ್ವೀಕರಿಸಿದರು.

ಅಮೆರಿಕ ಅಧ್ಯಕ್ಷ ಜೋ ಬೈಡನ್​ ಹಾಗೂ ಪ್ರಥಮ ಮಹಿಳೆ ಜಿಲ್ ಬೈಡನ್​ ಆಹ್ವಾನದ ಮೇರೆಗೆ ಮೋದಿ ತಮ್ಮ ಅಧಿಕೃತ ಅಮೆರಿಕ ಪ್ರವಾಸ ಕೈಗೊಂಡಿದ್ದಾರೆ. ಇಂದು ವಿಶ್ವ ಯೋಗ ದಿನಾಚರಣೆ ಅಂಗವಾಗಿ ವಿಶ್ವಸಂಸ್ಥೆಯ ಪ್ರಧಾನ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಮೋದಿ ಚಾಲನೆ ನೀಡಿದರು. ಪ್ರಪಂಚಾದ್ಯಂತ 'ವಸುಧೈವ ಕುಟುಂಬಕ್ಕಾಗಿ ಯೋಗ' ಎಂಬ ಧ್ಯೇಯದೊಂದಿಗೆ ಈ ಬಾರಿ ಯೋಗ ದಿನವನ್ನು ಆಚರಿಸಲಾಗುತ್ತಿದೆ. ವಿಶ್ವಸಂಸ್ಥೆಯ ಯೋಗಾಭ್ಯಾಸದಲ್ಲಿ ಭಾರತದ ಕರೆಗೆ ಅನೇಕ ರಾಷ್ಟ್ರಗಳ ಪ್ರತಿನಿಧಿಗಳು ಓಗೊಟ್ಟು ಪಾಲ್ಗೊಂಡು ಐತಿಹಾಸ ಸೃಷ್ಟಿಸಿದ್ದಲ್ಲದೇ, ಐತಿಹಾಸಿಕ ಕ್ಷಣಕ್ಕೂ ಸಾಕ್ಷಿಯಾದರು.

ಇದನ್ನೂ ಓದಿ: 'ಯೋಗಕ್ಕೆ ಕಾಪಿರೈಟ್​, ಪೇಟೆಂಟ್‌, ರಾಯಲ್ಟಿ ಇಲ್ಲ': ವಿಶ್ವಸಂಸ್ಥೆಯಲ್ಲಿ ಯೋಗ ದಿನಾಚರಣೆಗೆ ಚಾಲನೆ ನೀಡಿ ಮೋದಿ ಮಾತು

135 ದೇಶಗಳ ಪ್ರತಿನಿಧಿಗಳು ಭಾಗಿ: ವಿಶ್ವಸಂಸ್ಥೆಯಲ್ಲಿ ಮೋದಿ ನೇತೃತ್ವದ ಯೋಗಾಭ್ಯಾಸ ಗಿನ್ನಿಸ್ ದಾಖಲೆ ನಿರ್ಮಿಸಿದೆ ಎಂದು ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್‌ ಅಧಿಕೃತ ತೀರ್ಪುಗಾರ ಮೈಕೆಲ್ ಎಂಪ್ರಿಕ್ ಪ್ರಕಟಿಸಿದರು. ಈ ಯೋಗಾಭ್ಯಾಸವು ಹೆಚ್ಚಿನ ರಾಷ್ಟ್ರಗಳ ಪ್ರತಿನಿಧಿಗಳು ಪಾಲ್ಗೊಳ್ಳುವ ಮೂಲಕ ಗಿನ್ನಿಸ್ ವಿಶ್ವದಾಖಲೆ ಸೃಷ್ಟಿಸುವ ಉದ್ದೇಶ ಹೊಂದಿತ್ತು. 140 ದೇಶಗಳ ಜನರು ಪಾಲ್ಗೊಳ್ಳುವ ನಿರೀಕ್ಷೆ ಇತ್ತು. ಅಂತಿಮವಾಗಿ, 135 ರಾಷ್ಟ್ರಗಳು ಪ್ರತಿನಿಧಿಗಳು ಉಪಸ್ಥಿತರಿದ್ದರು. ಇದು ಹೊಸ ಗಿನ್ನಿಸ್​ ವಿಶ್ವ ದಾಖಲೆ ಬರೆದಿದೆ ಎಂದು ಅವರು ಹೇಳಿದರು.

ಪ್ರಧಾನಿ ಮೋದಿ ಬಿಳಿ ಟಿ ಶರ್ಟ್ ಮತ್ತು ಪ್ಯಾಂಟ್ ಧರಿಸಿ ಯೋಗ ಆಚರಣೆಯನ್ನು ಮುನ್ನಡೆಸಿದರು. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 77ನೇ ಅಧಿವೇಶನದ ಅಧ್ಯಕ್ಷ ಕ್ಸಾಬಾ ಕೊರೋಸಿ, ಉಪ ಪ್ರಧಾನ ಕಾರ್ಯದರ್ಶಿ ಅಮಿನಾ ಮೊಹಮ್ಮದ್ ಮತ್ತು ನ್ಯೂಯಾರ್ಕ್ ಸಿಟಿ ಮೇಯರ್ ಎರಿಕ್ ಆ್ಯಡಮ್ಸ್, ಹಾಲಿವುಡ್ ನಟ ರಿಚರ್ಡ್ ಗೆರೆ, ಪ್ರಸಿದ್ಧ ಅಮೆರಿಕ ಗಾಯಕಿ ಮೇರಿ ಮಿಲ್ಬೆನ್​, ಭಾರತ ಮೂಲದ ಪ್ರಸಿದ್ಧ ಕಥೆಗಾರ ಜಯ್ ಶೆಟ್ಟಿ, ಬಾಣಸಿಗ ವಿಕಾಸ್ ಖನ್ನಾ ಯೋಗಾಭ್ಯಾಸದಲ್ಲಿ ಪಾಲ್ಗೊಂಡಿದ್ದರು.

ಅಲ್ಲದೇ, ಮೂರು ಬಾರಿ ಗ್ರ್ಯಾಮಿ ಪ್ರಶಸ್ತಿ ವಿಜೇತ ಸಂಗೀತ ಸಂಯೋಜಕ ರಿಕಿ ಕೇಜ್, ಬ್ರಿಟಿಷ್ ಸಂಗೀತಗಾರ್ತಿ ಜಾಹ್ನವಿ ಹ್ಯಾರಿಸನ್, ಸಿಎನ್​ಬಿಸಿ ಜಾಗತಿಕ ಮಾರುಕಟ್ಟೆಯ ವರದಿಗಾರ್ತಿ ಸೀಮಾ ಮೋದಿ, ಸಿಎನ್​ಎನ್​ ಪ್ರೈಮ್ ಟೈಮ್ ಸುದ್ದಿ ನಿರೂಪಕ ಝೈನ್ ಆಶರ್, ಅಮೆರಿಕನ್ ಗಾಯಕರಾದ ಫಲ್ಗುಣಿ ಶಾ ಮತ್ತು ಮಿಲ್ಬೆನ್, ವಿ.ಎಂ. ವೇರ್‌ನ ಸಿಇಒ ಮೈಕ್ ಹೇಯ್ಸ್, ಲೀಡ್‌ರೈಟ್ ಎಂಟರ್‌ಪ್ರೈಸ್‌ನ ಸಲಹೆಗಾರ ಬ್ರಿಟ್ ಕೆಲ್ಲಿ ಸ್ಲಾಬಿನ್ಸ್ಕಿ, ಯೋಗ ತರಬೇತುದಾರ ಕೊಲೀನ್ ಸೈದ್ಮನ್ ಯೀ, ಕ್ಯಾಲಿಫೋರ್ನಿಯಾದ ವಿಶ್ವವಿದ್ಯಾಲಯದ ವಿದ್ವಾಂಸ ಕ್ರಿಸ್ಟೋಫರ್ ಟಾಂಪ್ಕಿನ್ಸ್ ಹಲವು ಪ್ರಮುಖರು ಇದ್ದರು.

ಇದನ್ನೂ ಓದಿ: Yoga Day: ನ್ಯೂಯಾರ್ಕ್‌ನ ವಿಶ್ವಸಂಸ್ಥೆ ಆವರಣದಲ್ಲಿ ಯೋಗ ದಿನಾಚರಣೆ: ಗಾಂಧಿ ಪ್ರತಿಮೆಗೆ ಪ್ರಧಾನಿ ಮೋದಿ ಪುಷ್ಪ ನಮನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.