ಪಾಕಿಸ್ತಾನದ ಪಂಜಾಬ್​ನಲ್ಲಿ ದಿನವೂ ಅತ್ಯಾಚಾರ: ಹತೋಟಿಗೆ 'ಎಮರ್ಜೆನ್ಸಿ' ಘೋಷಣೆ

author img

By

Published : Jun 22, 2022, 2:56 PM IST

Updated : Jun 22, 2022, 3:15 PM IST

ಪಾಕಿಸ್ತಾನದ ಪಂಜಾಬ್​ನಲ್ಲಿ ದಿನವೂ ಅತ್ಯಾಚಾರ

ಪಾಕಿಸ್ತಾನದ ಪಂಜಾಬ್ ರಾಜ್ಯದಲ್ಲಿ ಮಾನವ ಕುಲವೇ ತಲೆತಗ್ಗಿಸುವ ಘಟನೆಗಳು ನಡೆಯುತ್ತಿವೆ. ದಿನವೂ ಮಹಿಳೆ, ಮಕ್ಕಳ ಮೇಲೆ ಅತ್ಯಾಚಾರ ಪ್ರಕರಣಗಳು ನಡೆಯುತ್ತಿದ್ದು, ಸರ್ಕಾರ 'ತುರ್ತು ಪರಿಸ್ಥಿತಿ' ಜಾರಿ ಮಾಡಿದೆ.

ಇಸ್ಲಾಮಾಬಾದ್: ಪಾಕಿಸ್ತಾನದ ಪಂಜಾಬ್​ನಲ್ಲಿ ಇಡೀ ಮನುಕುಲವೇ ನಾಚಿಕೆ ಪಡುವಂತಹ ವಿದ್ಯಮಾನಗಳು ನಡೆಯುತ್ತಿವೆ. ಪ್ರತಿದಿನ 4-5 ಮಹಿಳೆಯರು ಮತ್ತು ಮಕ್ಕಳ ಮೇಲೆ ಅತ್ಯಾಚಾರ ನಡೆಯುತ್ತಿದ್ದು, ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.

1. ಲೈಂಗಿಕ ಕಿರುಕುಳ, ನಿಂದನೆ, ಬಲಾತ್ಕಾರ: ಈ ಬಗ್ಗೆ ಪಂಜಾಬ್​ ರಾಜ್ಯದ ಗೃಹ ಸಚಿವ ಅಡ್ಡ ತರಾರ್​ ಸುದ್ದಿಗೋಷ್ಠಿ ನಡೆಸಿ, "ಪಂಜಾಬ್​ನಲ್ಲಿ ಅತ್ಯಾಚಾರ ಪ್ರಕರಣಗಳು ಕೈ ಮೀರುತ್ತಿವೆ. ಪ್ರತಿದಿನವೂ 5 ರೇಪ್​ ಕೇಸ್​ಗಳು ನಡೆಯುತ್ತಿವೆ. ಹೀಗಾಗಿ ಪರಿಸ್ಥಿತಿಯನ್ನು ಹತೋಟಿಗೆ ತರಲು ತುರ್ತು ಪರಿಸ್ಥಿತಿ ಘೋಷಿಸಲಾಗಿದೆ" ಎಂದು ತಿಳಿಸಿದರು. ಲೈಂಗಿಕ ಕಿರುಕುಳ, ನಿಂದನೆ ಮತ್ತು ಬಲಾತ್ಕಾರದ ಪ್ರಕರಣಗಳನ್ನು ಎದುರಿಸಲು ಸರ್ಕಾರ ವಿಶೇಷ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

2. "ಪೋಷಕರು ತಮ್ಮ ಮಕ್ಕಳನ್ನು ತಾವೇ ರಕ್ಷಿಸಿಕೊಳ್ಳಬೇಕು": ಈ ಕುರಿತು ನಾಗರಿಕರು, ಮಹಿಳಾ ಹಕ್ಕುಗಳ ಸಂಘಟನೆಗಳು, ಶಿಕ್ಷಕರು ಮತ್ತು ವಕೀಲರೊಂದಿಗೆ ಸಮಾಲೋಚನೆ ನಡೆಸಲಾಗುವುದು. ಇದಲ್ಲದೆ, ಪೋಷಕರು ತಮ್ಮ ಮಕ್ಕಳನ್ನು ತಾವೇ ರಕ್ಷಿಸಿಕೊಳ್ಳಬೇಕು. ಈ ಬಗ್ಗೆ ಅವರೇ ಮುನ್ನೆಚ್ಚರಿಕೆ ವಹಿಸಬೇಕು. ಈ ಬಗ್ಗೆ ತಮ್ಮ ಮಕ್ಕಳಲ್ಲಿ ಪೋಷರು ಅರಿವು ಮೂಡಿಸಬೇಕು ಎಂದು ಹೇಳಿದ್ದಾರೆ.

ಹಲವಾರು ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಸರ್ಕಾರವು ಅತ್ಯಾಚಾರ ವಿರೋಧಿ ಅಭಿಯಾನವನ್ನು ಪ್ರಾರಂಭಿಸಿದೆ. ಶಾಲೆಗಳಲ್ಲಿ ಕಿರುಕುಳದ ಬಗ್ಗೆ ವಿದ್ಯಾರ್ಥಿಗಳಿಗೆ ಪಾಠದ ಮೂಲಕ ಎಚ್ಚರಿಕೆ ನೀಡಲಾಗುತ್ತಿದೆ ಎಂದು ತಿಳಿಸಿದರು.

3. ಎರಡು ವಾರ ತುರ್ತು ಪರಿಸ್ಥಿತಿ ಜಾರಿ: ಅತ್ಯಾಚಾರ ಪ್ರಕರಣಗಳನ್ನು ನಿಲ್ಲಿಸಲು ಸರ್ಕಾರ ಪಂಜಾಬ್​ 2 ವಾರ ತುರ್ತು ಸ್ಥಿತಿ ಜಾರಿ ಮಾಡಲಿದೆ. ಈ ಮೂಲಕ ಘಟನೆಗಳನ್ನು ತಗ್ಗಿಸಲು ಸಾಧ್ಯ ಎಂದು ಗೃಹ ಸಚಿವರು ಹೇಳಿದ್ದಾರೆ.

4. ಪಾಕಿಸ್ತಾನದಲ್ಲಿ ಲಿಂಗ ತಾರತಮ್ಯಕ್ಕಿಲ್ಲ ಕಡಿವಾಣ: ಪಾಕಿಸ್ತಾನದಲ್ಲಿ ಲಿಂಗ ತಾರತಮ್ಯಕ್ಕೆ ಕಡಿವಾಣವೇ ಇಲ್ಲದಂತಾಗಿದೆ. ದೇಶಾದ್ಯಂತ ಮಹಿಳೆ, ಮಕ್ಕಳ ಮೇಲೆ ದೌರ್ಜನ್ಯದ ಪ್ರಮಾಣ ಹೆಚ್ಚಾಗಿದೆ. ಇದನ್ನು ಶಾಲಾ ತರಗತಿಗಳ ಮೂಲಕವೂ ಅರಿವು ಮೂಡಿಸಲಾಗುತ್ತಿದ್ದರೂ, ಪ್ರಯೋಜನ ಮಾತ್ರ ಶೂನ್ಯ. ಜಾಗತಿಕ ಲಿಂಗ ಅಂತರ ಸೂಚ್ಯಂಕದಲ್ಲಿ ಪಾಕಿಸ್ತಾನ 156 ದೇಶಗಳಲ್ಲಿ 153 ನೇ ಸ್ಥಾನದಲ್ಲಿದೆ. ಇರಾಕ್, ಯೆಮೆನ್ ಮತ್ತು ಅಫ್ಘಾನಿಸ್ತಾನ ನಂತರದ ಸ್ಥಾನದಲ್ಲಿವೆ.

5. 4 ವರ್ಷದಲ್ಲಿ 14,456 ಮಹಿಳೆಯರ ಮೇಲೆ ದೌರ್ಜನ್ಯ: ಇಂಟರ್ನ್ಯಾಷನಲ್ ಫೋರಮ್ ಫಾರ್ ರೈಟ್ಸ್ ಅಂಡ್ ಸೆಕ್ಯುರಿಟಿ (IFFRAS) ನಲ್ಲಿ ಪ್ರಕಟವಾದ ಲೇಖನದಲ್ಲಿ ಕಳೆದ 4 ವರ್ಷಗಳಲ್ಲಿ ಪಾಕಿಸ್ತಾನದಲ್ಲಿ 14,456 ಮಹಿಳೆಯರ ಮೇಲೆ ದೌರ್ಜನ್ಯದ ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದೆ. ಪಂಜಾಬ್​ ರಾಜ್ಯದಲ್ಲಿ ಇದರ ಪ್ರಮಾಣ ಹೆಚ್ಚು ಎಂಬುದು ಕಳವಳಕಾರಿ ಸಂಗತಿ. ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ಕಿರುಕುಳ, ಕೌಟುಂಬಿಕ ದೌರ್ಜನ್ಯ ಮತ್ತು ತಾರತಮ್ಯ ಚಟುವಟಿಕೆಗಳು ಸಹ ದೇಶದಲ್ಲಿ ವ್ಯಾಪಕವಾಗಿವೆ.

2018ರಲ್ಲಿ ಪಾಕಿಸ್ತಾನದಲ್ಲಿ ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ಕಿರುಕುಳ ನೀಡಿದ ಪ್ರಕರಣಗಳು 5,048 ಆಗಿದ್ದರೆ, 2019 ರಲ್ಲಿ 4,751, 2020 ರಲ್ಲಿ 4,276 ಪ್ರಕರಣಗಳು 2021 ರಲ್ಲಿ 2,078 ಪ್ರಕರಣಗಳು ದಾಖಲಾಗಿವೆ ಎಂದು ಮಾನವ ಹಕ್ಕುಗಳ ಸಚಿವಾಲಯದ ಮಾಹಿತಿ ನೀಡಿದೆ.

ಇದನ್ನೂ ಓದಿ: ಹೆಂಡತಿ ಕೊಲೆ ಮಾಡಿ ಪೊಲೀಸ್ ಕಂಟ್ರೋಲ್ ರೂಮ್​ಗೆ ಮಾಹಿತಿ ನೀಡಿದ ಪತಿ!

Last Updated :Jun 22, 2022, 3:15 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.