ETV Bharat / international

ರಷ್ಯಾ ಉಕ್ರೇನ್​ ಯುದ್ಧ: 400 ಯೋಧರ ಸಾವು ನಿರಾಕರಿಸಿದ ಮಾಸ್ಕೋ

author img

By

Published : Jan 4, 2023, 3:40 PM IST

ಹೊಸ ವರ್ಷದ ಮುನ್ನಾ ದಿನ ನಡೆದ ಪ್ರತಿದಾಳಿಯಲ್ಲಿ ರಷ್ಯಾದ 400 ಯೋಧರನ್ನು ಕೊಂದು ಹಾಕಿದ್ದೇವೆ ಎಂದು ಉಕ್ರೇನ್​ ಸೇನಾ ಪಡೆ ಹೇಳಿಕೊಂಡಿದೆ. ಆದರೆ ಈ ಹೇಳಿಕೆಯನ್ನು ರಷ್ಯಾ ಸೇನೆ ತಳ್ಳಿ ಹಾಕಿದೆ.

Moscow refutes Ukraine's claims of 400 Russian soldiers killed
ರಷ್ಯಾ ಉಕ್ರೇನ್​ ಯುದ್ಧ: 400 ಯೋಧರ ಸಾವು ನಿರಾಕರಿಸಿದ ಮಾಸ್ಕೋ

ಮಾಸ್ಕೋ (ರಷ್ಯಾ): ಹೊಸ ವರ್ಷದ ಮುನ್ನಾದಿನದಂದು ಡೊನೆಟ್ಸ್ಕ್‌ನಲ್ಲಿ ರಷ್ಯಾ ಸೇನಾ ನೆಲೆ ಮೇಲೆ ಉಕ್ರೇನಿಯನ್ ಸೇನೆ ಮಾಡಿದೆ. ಈ ದಾಳಿಯಲ್ಲಿ ರಷ್ಯಾದ 400 ಯೋಧರನ್ನು ತಾನು ಹತ್ಯೆ ಮಾಡಿರುವುದಾಗಿ ಉಕ್ರೇನ್​ ಹೇಳಿಕೊಂಡಿದೆ. ಆದರೆ ಉಕ್ರೇನ್​​​​ ಈ ಹೇಳಿಕೆಯನ್ನು ತಳ್ಳಿ ಹಾಕಿರುವ ರಷ್ಯಾ ರಕ್ಷಣಾ ಸಚಿವಾಲಯ ದಾಳಿಯಲ್ಲಿ ಹುತಾತ್ಮರಾದ ಸೈನಿಕರ ಸಂಖ್ಯೆ ಕೇವಲ 89 ಎಂದು ಹೇಳಿಕೊಂಡಿದೆ ಎಂದು ಅಮೆರಿಕದ ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.

ಉಕ್ರೇನಿಯನ್ ಮತ್ತು ರಷ್ಯಾದ ಪರ ಆಯಾಯ ರಕ್ಷಣಾ ಇಲಾಖೆಗಳು ನೀಡಿರುವ ಹೇಳಿಕೆಗಳ ಪ್ರಕಾರ, ಡೊನೆಟ್ಸ್ಕ್ ಪ್ರದೇಶದಲ್ಲಿನ ಮಕಿವ್ಕಾದಲ್ಲಿ ರಷ್ಯಾ ಸೈನಿಕ ಶಾಲೆಯನ್ನು ಆರಂಭಿಸಿದೆ ಎಂದು ಉಕ್ರೇನ್​ ಆರೋಪಿಸಿದೆ. ರಷ್ಯಾದ ಈ ಪ್ರಯತ್ನವನ್ನು ಹಿಮ್ಮೆಟ್ಟಿಸಲು ಉಕ್ರೇನ್​​​ ದಾಳಿ ನಡೆಸಿದೆ ಎಂದು ಅಲ್ಲಿನ ಸರ್ಕಾರ ತಿಳಿಸಿದೆ.

ಇನ್ನು ಉಕ್ರೇನ್​ ದಾಳಿಯನ್ನು ಖಚಿತ ಪಡಿಸಿರುವ ರಷ್ಯಾದ ರಕ್ಷಣಾ ಸಚಿವಾಲಯ ರೆಜಿಮೆಂಟ್‌ನ ಉಪ ಕಮಾಂಡರ್ ಸೇರಿದಂತೆ ಹಲವರು ಮೃತಪಟ್ಟಿದ್ದಾರೆ ಎಂದು ತಿಳಿಸಿದೆ. ರಷ್ಯಾದ ಸೈನಿಕರು ವಾಸಿಸುತ್ತಿದ್ದ ಕಟ್ಟಡದ ಮೇಲೆ ಉಕ್ರೇನ್ ಹಿಮಾರ್ಸ್ ರಾಕೆಟ್‌ಗಳನ್ನು ಬಳಸಿ ದಾಳಿ ಮಾಡಿದ್ದಾರೆ. ಹೀಗಾಗಿ ಮಕಿವ್ಕಾದಲ್ಲಿ 63 ಸೈನಿಕರು ಸಾವನ್ನಪ್ಪಿದ್ದಾರೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಸೋಮವಾರ ಒಪ್ಪಿಕೊಂಡಿದೆ.

ಅವಶೇಷಗಳಡಿಯಲ್ಲಿ ಹೆಚ್ಚಿನ ಮೃತ ದೇಹಗಳು ಪತ್ತೆಯಾದ ನಂತರ, ರಷ್ಯಾದ ರಕ್ಷಣಾ ಸಚಿವಾಲಯವು ಸಾವಿನ ಸಂಖ್ಯೆಯನ್ನು ನವೀಕರಿಸಿದ್ದು, ಸಾವಿನ ಸಂಖ್ಯೆ 89ಕ್ಕೆ ಏರಿಕೆ ಆಗಿದೆ ಎಂದು ಹೇಳಿದೆ. ಆದರೆ ಅದು 400 ಅಲ್ಲ ಎಂದು ಸ್ಪಷ್ಟಪಡಿಸಿದೆ. ಡೊನೆಟ್ಸ್ಕ್ ಪೀಪಲ್ಸ್ ರಿಪಬ್ಲಿಕ್​ನ ಮಕಿವ್ಕಾ ವಸಾಹತು ಪ್ರದೇಶದಲ್ಲಿ ರಷ್ಯಾದ ಸಶಸ್ತ್ರ ಪಡೆಗಳ ಒಂದು ಘಟಕವನ್ನು ತಾತ್ಕಾಲಿಕವಾಗಿ ಸ್ಥಾಪಿಸಿತ್ತು. ಈ ಸ್ಥಳದ ಮೇಲೆ ಉಕ್ರೇನ್​ ಪಡೆಗಳು ಅಮೆರಿಕ ನಿರ್ಮಿತ ಹಿಮಾರ್ಸ್ ಮಲ್ಟಿಪಲ್ ಲಾಂಚ್ ರಾಕೆಟ್ ಸಿಸ್ಟಂನಿಂದ ಆರು ರಾಕೆಟ್​ಗಳನ್ನು ಉಡಾಯಿಸಿದ್ದು, ಆ ಪರಿಣಾಮವಾಗಿ ಅಲ್ಲಿದ್ದ ರಷ್ಯಾ ಸೈನಿಕರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಉಕ್ರೇನ್​ ದಾಳಿಯನ್ನು ತಡೆದಿದ್ದೇವೆ, ಆದರೂ ಈ ದಾಳಿಯಲ್ಲಿ 63 ರಷ್ಯಾದ ಸೈನಿಕರು ಮೃತಪಟ್ಟಿದ್ದಾರೆ ಎಂದು ರಷ್ಯಾ ಈ ಮೊದಲು ಹೇಳಿಕೊಂಡಿತ್ತು. ಈಗ ಸಾವಿನ ಸಂಖ್ಯೆ ಮತ್ತಷ್ಟು ಏರಿಕೆ ಕಂಡಿದೆ ಎಂದು ಸ್ಪಷ್ಟನೆ ನೀಡಿದೆ. ಉಕ್ರೇನ್ ಸಶಸ್ತ್ರ ಪಡೆಗಳು ಡೊನೆಟ್ಸ್ಕ್‌ನ ಮಕಿವ್ಕಾ ಪ್ರದೇಶದಲ್ಲಿ ರಷ್ಯಾದ ಮಿಲಿಟರಿ ನೆಲೆ ಉಡಾಯಿಸಿದ್ದು, ಈ ದಾಳಿಯಲ್ಲಿ 400 ರಷ್ಯಾದ ಸೈನಿಕರು ಸಾವನ್ನಪ್ಪಿದ್ದಾರೆ ಮತ್ತು 300 ಸೈನಿಕರು ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಈ ಹಿಂದೆ ಹೇಳಿಕೊಂಡಿತ್ತು.

ಕಳೆದ 8-10 ತಿಂಗಳಿಂದ ಉಕ್ರೇನ್​​ನ ಮೇಲೆ ರಷ್ಯಾ ದಾಳಿ ನಡೆಸಿದೆ. ಇನ್ನು ಉಕ್ರೇನ್​​ನ ಹಲವು ಪ್ರದೇಶಗಳನ್ನು ರಷ್ಯಾ ಪಡೆ ವಶಕ್ಕೆ ಪಡೆದಿದೆ. ಆದರೆ ಇದುವರೆಗೂ ರಷ್ಯಾಗೆ ಉಕ್ರೇನ್​ ರಾಜಧಾನಿ ಕೀವ್​ ವಶಕ್ಕೆ ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಉಕ್ರೇನ್​​ನ ನೆಲದೊಳಗೆ ನುಗ್ಗಿರುವ ರಷ್ಯಾ ಪಡೆಗಳಿಗೆ ಉಕ್ರೇನ್​ ಸೈನಿಕರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಇನ್ನು ಉಕ್ರೇನ್​​ಗೆ ಯುರೋಪಿಯನ್​ ಯೂನಿಯನ್​ ಹಾಗೂ ಅಮೆರಿಕ ಮತ್ತು ನ್ಯಾಟೋ ಪಡೆಗಳು ಬೆಂಬಲ ನೀಡಿದ್ದು, ರಷ್ಯಾಗೆ ಪ್ರಬಲ ಪ್ರತಿರೋಧ ಒಡ್ಡುತ್ತಿದೆ.

ಈಗಾಗಲೇ ಐರೋಪ್ಯ ಒಕ್ಕೂಟ ರಷ್ಯಾದ ಮೇಲೆ ಆರ್ಥಿಕ ದಿಗ್ಬಂದನವನ್ನೂ ಹಾಕಿದೆ. ಆದರೂ ರಷ್ಯಾ ಅಧ್ಯಕ್ಷ ಇವ್ಯಾವುದಕ್ಕೂ ಬಗ್ಗದೆ ಯುದ್ಧವನ್ನು ಮುಂದುವರೆಸಿದ್ದಾರೆ.

ಇದನ್ನು ಓದಿ:ಅಮೆರಿಕ ನಿರ್ಮಿತ ಉಕ್ರೇನ್​ ರಾಕೆಟ್​ ದಾಳಿಗೆ 63 ರಷ್ಯಾ ಸೈನಿಕರು ಹತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.