ಹೈದರಾಬಾದ್​ನಿಂದ ಜರ್ಮನಿಯ ಫ್ರಾಂಕ್​ಫರ್ಟ್​ಗೆ ಲುಫ್ತಾನ್ಸ್​ ನೇರ ವಿಮಾನಯಾನ ಆರಂಭ

author img

By ETV Bharat Karnataka Desk

Published : Jan 17, 2024, 4:44 PM IST

Lufthansa launches direct flight from Hyderabad to Frankfurt

ಹೈದರಾಬಾದ್​ನಿಂದ ಫ್ರಾಂಕ್​ಫರ್ಟ್​ಗೆ ನೇರ ವಿಮಾನಯಾನ ಆರಂಭವಾಗಿದೆ.

ಹೈದರಾಬಾದ್ : ಜಿಎಂಆರ್ ಹೈದರಾಬಾದ್ ಇಂಟರ್​ ನ್ಯಾಷನಲ್ ಏರ್​ಪೋರ್ಟ್​ನಿಂದ ಜರ್ಮನಿಯ ಫ್ರಾಂಕ್​ಫರ್ಟ್​ಗೆ ನೇರ ವಿಮಾನಯಾನ ಸಂಚಾರ ಆರಂಭವಾಗಲಿದೆ. ಲುಫ್ತಾನ್ಸಾ ಏರ್​ಲೈನ್ಸ್​ ಸಹಭಾಗಿತ್ವದಲ್ಲಿ ಜಿಎಂಆರ್ ಹೈದರಾಬಾದ್ ಇಂಟರ್​ ನ್ಯಾಷನಲ್ ಏರ್​ಪೋರ್ಟ್​ ಲಿಮಿಟೆಡ್ ಜರ್ಮನಿಯ ಫ್ರಾಂಕ್​ಫರ್ಟ್​ಗೆ ನೇರ ವಿಮಾನಯಾನ ಪ್ರಾರಂಭಿಸುವುದಾಗಿ ಬುಧವಾರ ಪ್ರಕಟಿಸಿದೆ. ಇದು ಹೈದರಾಬಾದ್ ಅನ್ನು ವಿಶ್ವಕ್ಕೆ ಸಂಪರ್ಕಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ ಮತ್ತು ವ್ಯಾಪಾರ, ಪ್ರಯಾಣ ಮತ್ತು ವಾಣಿಜ್ಯದ ಜಾಗತಿಕ ಕೇಂದ್ರವಾಗಿ ಹೈದರಾಬಾದ್​ನ ಸ್ಥಾನವನ್ನು ಉನ್ನತ ಸ್ಥಾನಕ್ಕೇರಿಸಲಿದೆ ಎಂದು ಜಿಎಂಆರ್​ಎಚ್​ಐಎಎಲ್​ ಹೇಳಿದೆ.

ಸೋಮವಾರ, ಮಂಗಳವಾರ, ಬುಧವಾರ, ಗುರುವಾರ ಮತ್ತು ಶನಿವಾರ ಹೀಗೆ ವಾರಕ್ಕೆ ಐದು ಬಾರಿ ವಿಮಾನ ಸಂಚರಿಸಲಿದೆ. ವಿಮಾನ ಎಲ್ ಎಚ್ 753 ಹೈದರಾಬಾದ್ ನಿಂದ 01:55 ಗಂಟೆಗೆ ಹೊರಟು 07:05 ಗಂಟೆಗೆ ಫ್ರಾಂಕ್ ಫರ್ಟ್ ತಲುಪಲಿದೆ. ಹಿಂದಿರುಗುವ ವಿಮಾನ ಎಲ್ ಎಚ್ 752 ಫ್ರಾಂಕ್ ಫರ್ಟ್ ನಿಂದ 10:55 ಗಂಟೆಗೆ ಹೊರಟು 23:55 ಗಂಟೆಗೆ ಹೈದರಾಬಾದ್ ತಲುಪಲಿದೆ.

ಇತ್ತೀಚಿನ ವರ್ಷಗಳಲ್ಲಿ, ಭಾರತದಿಂದ ಉತ್ತರ ಅಮೆರಿಕಕ್ಕೆ ಶೇಕಡಾ 40 ರಷ್ಟು ಪ್ರಯಾಣಿಕರು ಯುರೋಪಿಯನ್ ವಿಮಾನ ನಿಲ್ದಾಣಗಳನ್ನು ಸಾರಿಗೆ ಕೇಂದ್ರಗಳಾಗಿ ಆಯ್ಕೆ ಮಾಡಿದ್ದಾರೆ ಎಂದು ಜಿಎಂಆರ್​ಎಚ್​ಐಎಎಲ್​ ಹೇಳಿದೆ. ಲುಫ್ತಾನ್ಸಾದ ವಿಮಾನಗಳ ಅನುಕೂಲಕರ ಸಮಯವು ಜನರ ಪ್ರಯಾಣಕ್ಕೆ ಸಂಪೂರ್ಣವಾಗಿ ಹೊಂದಿಕೆಯಾಗುತ್ತದೆ. ಅಲ್ಲದೇ ಮುಂದಿನ ಪ್ರಯಾಣ ಬೆಳೆಸುವವರಿಗೆ ಸೂಕ್ತ ಸಂಪರ್ಕಗಳನ್ನು ನೀಡುತ್ತದೆ.

"ಈ ಸಂಪರ್ಕವು ಫ್ರಾಂಕ್​ಫರ್ಟ್​ ಸಾರಿಗೆ ಕೇಂದ್ರವಾಗಿ ಅಥವಾ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರಯಾಣಿಕರಿಗೆ ಅನುಕೂಲಕರವಾಗಿದೆ ಮತ್ತು ಫ್ರಾಂಕ್​ಫರ್ಟ್​ ಮೂಲಕ ಯುರೋಪ್, ಅಮೆರಿಕ, ಕೆನಡಾ ಮತ್ತು ದಕ್ಷಿಣ ಅಮೆರಿಕದ ಅನೇಕ ಸ್ಥಳಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಹೈದರಾಬಾದ್ ನಗರದಿಂದ ನಮ್ಮ ಪ್ರಯಾಣಿಕರನ್ನು ಜಾಗತಿಕ ಸ್ಥಳಗಳಿಗೆ ಸಂಪರ್ಕಿಸುವುದು ನಮ್ಮ ಆದ್ಯತೆಯಾಗಿದೆ. ಇದು ಆ ದಿಕ್ಕಿನಲ್ಲಿ ಒಂದು ಹೆಜ್ಜೆಯಾಗಿದೆ ಮತ್ತು ಹೈದರಾಬಾದ್ ವಿಮಾನ ನಿಲ್ದಾಣದ ವಿಷಯದಲ್ಲಿ ಇದೊಂದು ಪ್ರಮುಖ ಮೈಲಿಗಲ್ಲಾಗಿದೆ" ಎಂದು ಜಿಎಂಆರ್​ಎಚ್​ಐಎಎಲ್​ ಸಿಇಒ ಪ್ರದೀಪ್ ಪಣಿಕ್ಕರ್ ಹೇಳಿದರು.

"ಕಳೆದ ಮೂರು ತಿಂಗಳಲ್ಲಿ ನಾವು ಭಾರತದಿಂದ ಯುರೋಪಿಗೆ ಎರಡು ಹೊಸ ಮಾರ್ಗಗಳನ್ನು ಪ್ರಾರಂಭಿಸಿದ್ದೇವೆ. ಈ ಮೂಲಕ ಲುಫ್ತಾನ್ಸಾ ಗ್ರೂಪ್​ ಭಾರತದ ಬಗ್ಗೆ ವಿಶೇಷ ಗಮನಹರಿಸಿದೆ" ಎಂದು ಅವರು ತಿಳಿಸಿದರು. 2023 ರ ಜನವರಿ ಮತ್ತು ಅಕ್ಟೋಬರ್ ನಡುವೆ ಸುಮಾರು ನಾಲ್ಕು ಲಕ್ಷ ಪ್ರಯಾಣಿಕರು ಹೈದರಾಬಾದ್​ನಿಂದ ಯುರೋಪಿಗೆ ಪ್ರಯಾಣಿಸಿದ್ದಾರೆ. ಇದು ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇಕಡಾ 39 ರಷ್ಟು ಹೆಚ್ಚಾಗಿದೆ.

ಇದನ್ನೂ ಓದಿ : ಕಾಕಂಬಿಗೆ ಶೇ 50ರಷ್ಟು ರಫ್ತು ಸುಂಕ; ಜ.18 ರಿಂದ ಜಾರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.