ETV Bharat / international

LGBTQ rights: ಲಿಂಗ ಪರಿವರ್ತನೆಗೆ ನಿಷೇಧ; ರಷ್ಯಾದಲ್ಲಿ ಟ್ರಾನ್ಸ್​ಜೆಂಡರ್ ವಿರುದ್ಧ ಕಠಿಣ ಕಾನೂನು

author img

By

Published : Jul 14, 2023, 7:41 PM IST

ರಷ್ಯಾ ಹೊಸ LGBTQ ವಿರೋಧಿ ಕಾನೂನುಗಳನ್ನು ಜಾರಿಗೊಳಿಸಲು ಮುಂದಾಗಿದೆ. ಹೊಸ ಕಾಯ್ದೆಯ ಪ್ರಕಾರ ರಷ್ಯಾದಲ್ಲಿ ಇನ್ಮುಂದೆ ಯಾವುದೇ ಲಿಂಗ ಬದಲಾವಣೆ ಶಸ್ತ್ರ ಚಿಕಿತ್ಸೆ ಮಾಡುವಂತಿಲ್ಲ.

Russia votes for law to ban gender reassignment surgery
Russia votes for law to ban gender reassignment surgery

ಮಾಸ್ಕೋ (ರಷ್ಯಾ) : ಟ್ರಾನ್ಸ್​​ಜೆಂಡರ್​ ವ್ಯಕ್ತಿಗಳಿಗೆ ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆ ಸೇರಿದಂತೆ ಬಹುತೇಕ ಎಲ್ಲ ವೈದ್ಯಕೀಯ ಸಹಾಯವನ್ನು ನಿರ್ಬಂಧಿಸುವ ಹೊಸ ಕಾನೂನನ್ನು ರಷ್ಯಾದ ಸ್ಟೇಟ್ ಡುಮಾ ಅಥವಾ ಸಂಸತ್ತಿನ ಕೆಳಮನೆ ಅನುಮೋದಿಸಿದೆ. ಎಲ್​ಜಿಬಿಟಿಕ್ಯೂ ಅಥವಾ ಟ್ರಾನ್ಸ್​ಜೆಂಡರ್​ ವಿರೋಧಿ ಕಾಯ್ದೆಗಳ ಭಾಗವಾಗಿ ರಷ್ಯಾ ಈ ಹೊಸ ಕಾನೂನು ಜಾರಿಗೊಳಿಸಿದೆ.

ಶುಕ್ರವಾರ ಮೂರನೇ ಮತ್ತು ಅಂತಿಮ ಹಂತದ ಪರಿಗಣನೆಗೆ ಬಂದ ಈ ಮಸೂದೆಯ ಪ್ರಕಾರ, ಜನ್ಮಜಾತ ಶಾರೀರಿಕ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ ಹೊರತುಪಡಿಸಿದರೆ, ವೈದ್ಯರು ಇನ್ನಾವುದೇ ರೀತಿಯ ಲಿಂಗ ಬದಲಾವಣೆ ಚಿಕಿತ್ಸೆಗಳನ್ನು ಮಾಡುವಂತಿಲ್ಲ. ಇದು ಲಿಂಗ ಪರಿವರ್ತನೆಯ ವೈದ್ಯಕೀಯ ಪ್ರಮಾಣೀಕರಣಗಳ ಆಧಾರದ ಮೇಲೆ ನೋಂದಣಿ ಕಚೇರಿಗಳು ವ್ಯಕ್ತಿಗಳ ಔಪಚಾರಿಕ ದಾಖಲೆಗಳನ್ನು ಬದಲಾಯಿಸುವುದನ್ನು ನಿರ್ಬಂಧಿಸುತ್ತಿದೆ.

ಈ ಮಸೂದೆಯನ್ನು ಫೆಡರೇಶನ್ ಕೌನ್ಸಿಲ್ ಅಂಗೀಕರಿಸಿದ ನಂತರ ಮತ್ತು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸಹಿ ಮಾಡಿದ ನಂತರ ಇದು ಸಂಪೂರ್ಣ ಕಾಯ್ದೆಯಾಗಿ ಜಾರಿಯಾಗಲಿದೆ. ಮಸೂದೆಯ ಪ್ರಕಾರ, ಲಿಂಗ ಬದಲಾವಣೆ ಮಾಡಿಕೊಂಡಿರುವ ವ್ಯಕ್ತಿಗಳು ಮಕ್ಕಳನ್ನು ದತ್ತು ಪಡೆದು ಪೋಷಕರಾಗುವುದನ್ನು ನಿರ್ಬಂಧಿಸಲಾಗಿದೆ ಮತ್ತು ಮಸೂದೆಯ ಮೂರನೇ ತಿದ್ದುಪಡಿಗಳ ಪ್ರಕಾರ, ಒಬ್ಬರು ಅಥವಾ ಇಬ್ಬರೂ ಸಂಗಾತಿಗಳು ಲಿಂಗ ಬದಲಾವಣೆ ಮಾಡಿಸಿಕೊಂಡು ತಮ್ಮ ದಾಖಲಾತಿಗಳನ್ನು ಬದಲಾಯಿಸಿಕೊಂಡಿದ್ದರೆ ಅಂಥ ಮದುವೆಯನ್ನು ರದ್ದುಗೊಳಿಸಬಹುದು.

ಇತ್ತೀಚಿನ ತಿಂಗಳುಗಳಲ್ಲಿ ಪುಟಿನ್ LGBTQ ವಿರೋಧಿ ಕಾನೂನುಗಳನ್ನು ಬಲಪಡಿಸುತ್ತಿದ್ದಾರೆ ಹಾಗೂ ಆ ಮೂಲಕ ಮುಕ್ತ ಅಭಿವ್ಯಕ್ತಿ ಮತ್ತು ಮಾನವ ಹಕ್ಕುಗಳ ಮೇಲೆ ಹಿಡಿತ ಸಾಧಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ರಷ್ಯಾದಲ್ಲಿನ ಇತ್ತೀಚಿನ ಈ ಕಾನೂನು ಬೆಳವಣಿಗೆಗಳು LGBTQ ಸಮುದಾಯದ ಮೇಲೆ ಹೆಚ್ಚಿನ ನಿರ್ಬಂಧಗಳನ್ನು ವಿಧಿಸುತ್ತವೆ ಮತ್ತು ಟ್ರಾನ್ಸ್​​ಜೆಂಡರ್ ವ್ಯಕ್ತಿಗಳ ಹಕ್ಕುಗಳನ್ನು ಮೊಟಕುಗೊಳಿಸುತ್ತವೆ.

ಭಿನ್ನಲಿಂಗೀಯವಲ್ಲದ ಸಂಬಂಧಗಳು ಮತ್ತು ಗುರುತುಗಳ ಸುತ್ತ ಸಾರ್ವಜನಿಕರ ಅಭಿಪ್ರಾಯ ಮತ್ತು ನಿರೂಪಣೆಗಳ ಮೇಲೆ ನಿಯಂತ್ರಣವನ್ನು ಹೇರುವ ಸಲುವಾಗಿ ರಷ್ಯಾ ತನ್ನ ಅಸ್ತಿತ್ವದಲ್ಲಿರುವ ಸಲಿಂಗಕಾಮಿ ಪ್ರಚಾರ ಕಾನೂನನ್ನು ಡಿಸೆಂಬರ್ 2022 ರಲ್ಲಿ ಬಲಪಡಿಸಿತು. ಪುಟಿನ್ ಸಹಿ ಮಾಡಿದ ತಿದ್ದುಪಡಿಗಳ ಪ್ರಕಾರ, ಸಾಂಪ್ರದಾಯಿಕವಲ್ಲದ ಲೈಂಗಿಕ ಸಂಬಂಧಗಳು ಅಥವಾ ಆದ್ಯತೆಗಳನ್ನು ಉತ್ತೇಜಿಸುವ ಯಾರಿಗಾದರೂ ಭಾರಿ ಪ್ರಮಾಣದ ದಂಡ ವಿಧಿಸಬಹುದಾಗಿದೆ.

ಹೊಸ ಕಾನೂನಿನ ಬಗ್ಗೆ ಮಾತನಾಡಿದ ರಷ್ಯಾದ ಮೊದಲ ಟ್ರಾನ್ಸ್ ಜೆಂಡರ್ ರಾಜಕಾರಣಿ ಯುಲಿಯಾ ಅಲಿಯೋಶಿನಾ, ಪ್ರಸ್ತಾವಿತ ಟ್ರಾನ್ಸ್ ಜೆಂಡರ್​ ಮಸೂದೆಯ ಪ್ರತಿಕೂಲ ಪರಿಣಾಮಗಳ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಒಮ್ಮೆ ಮಸೂದೆ ಕಾನೂನಾದರೆ ಅದರ ಪರಿಣಾಮಗಳು ಗಂಭಿರವಾಗಿರಲಿವೆ. ಇದರಿಂದ ಟ್ರಾನ್ಸ್ ಜೆಂಡರ್ ವ್ಯಕ್ತಿಗಳು ವೈದ್ಯಕೀಯ ಚಿಕಿತ್ಸೆ ಪಡೆಯುವ ಹಕ್ಕು ಕಳೆದುಕೊಳ್ಳಲಿದ್ದಾರೆ. ಇದು ಅಸಂವಿಧಾನಿಕ ಕ್ರಮವಾಗಿದೆ ಎಂದು ಅಲಿಯೋಶಿನಾ ತಿಳಿಸಿದರು. ಈ ಮಸೂದೆ ಕೇವಲ ತಾರತಮ್ಯವಲ್ಲ, ಇದು ಟ್ರಾನ್ಸ್ ಜೆಂಡರ್ ಜನರ ನರಮೇಧವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಟ್ವೀಟ್​ ಮಾಡಿ ಹಣ ಗಳಿಸಿ: Revenue Sharing ಯೋಜನೆ ಆರಂಭಿಸಿದ Twitter!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.