ETV Bharat / international

ಗಾಝಾ ಮೇಲೆ ಇಸ್ರೇಲ್​ನಿಂದ 1 ಲಕ್ಷ ಬಾಂಬ್​ಗಳ ಸುರಿಮಳೆ; ಹಮಾಸ್ ಆರೋಪ

author img

By ETV Bharat Karnataka Team

Published : Dec 3, 2023, 7:45 PM IST

ಇಸ್ರೇಲ್ ಗಾಝಾ ಮೇಲೆ ಈವರೆಗೆ 1 ಲಕ್ಷ ಬಾಂಬ್​ಗಳನ್ನು ಸುರಿಸಿ ಭೀಕರವಾಗಿ ದಾಳಿ ಮಾಡಿದೆ ಎಂದು ಹಮಾಸ್ ನಿಯಂತ್ರಿತ ಸರಕಾರದ ಮಾಧ್ಯಮ ಕಚೇರಿ ಹೇಳಿದೆ.

Israel attacks Gaza with 100,000 bombs, rockets since Oct 7
Israel attacks Gaza with 100,000 bombs, rockets since Oct 7

ಗಾಝಾ : ಅಕ್ಟೋಬರ್ 7ರಂದು ಇಸ್ರೇಲ್ ಮತ್ತು ಹಮಾಸ್ ನಡುವೆ ಯುದ್ಧ ಆರಂಭವಾದಾಗಿನಿಂದ ಇಸ್ರೇಲ್ ಗಾಜಾ ಮೇಲೆ 1 ಲಕ್ಷ ಬಾಂಬ್​ ಮತ್ತು ರಾಕೆಟ್​ಗಳ ಮೂಲಕ ದಾಳಿ ನಡೆಸಿದೆ ಎಂದು ಗಾಝಾದಲ್ಲಿರುವ ಹಮಾಸ್ ನಿಯಂತ್ರಿತ ಸರಕಾರದ ಮಾಧ್ಯಮ ಕಚೇರಿ (ಜಿಎಂಒ) ಹೇಳಿದೆ. ನಾಗರಿಕರನ್ನು ಕೊಲ್ಲುವ ಕ್ರೂರ ಉದ್ದೇಶದಿಂದ 2,000 ಪೌಂಡ್ ತೂಕದ ಬಾಂಬ್​ಗಳನ್ನು ಗಾಝಾ ಮೇಲೆ ಹಾಕಲಾಗಿದೆ ಎಂದು ಜಿಎಂಒ ನಿರ್ದೇಶಕ ಇಸ್ಮಾಯೆಲ್ ಅಲ್-ತವಾಬ್ತೆಹ್ ಶನಿವಾರ ರಾತ್ರಿ ಹೇಳಿದ್ದಾರೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇಸ್ರೇಲ್ ದಾಳಿಯಿಂದಾಗಿ ಗಾಝಾದಲ್ಲಿ ಶನಿವಾರ ಮಧ್ಯಾಹ್ನದ ವೇಳೆಗೆ 15,207 ಜನ ಮೃತಪಟ್ಟಿದ್ದು, ಕಾಣೆಯಾದವರ ಸಂಖ್ಯೆ 7,500 ಕ್ಕೂ ಹೆಚ್ಚಾಗಿದೆ ಮತ್ತು ಗಾಯಗೊಂಡವರ ಸಂಖ್ಯೆ 40,650 ಕ್ಕೆ ತಲುಪಿದೆ ಎಂದು ಅಲ್-ತವಾಬ್ತೆಹ್ ತಿಳಿಸಿದರು.

ಮಾನವೀಯ ನೆರವಿನ ಪ್ರವೇಶವನ್ನು ತಡೆಯುವ ಇಸ್ರೇಲ್​ನ ನೀತಿಗಳನ್ನು ಖಂಡಿಸಿದ ಅವರು, ಮಾರಣಾಂತಿಕ ಸಂಘರ್ಷದಿಂದ ಮುಗ್ಧ ನಾಗರಿಕರನ್ನು ರಕ್ಷಿಸುವ ಸಲುವಾಗಿ ಪ್ರತಿದಿನ ಗಾಝಾಗೆ 1 ಮಿಲಿಯನ್ ಲೀಟರ್ ಇಂಧನ ಪೂರೈಸಲು ಮತ್ತು ಇತರ ಪರಿಹಾರ ಸಾಮಗ್ರಿಗಳನ್ನು ಸಾಗಿಸಲು ಒಂದು ಸಾವಿರ ಟ್ರಕ್​ಗಳ ಪ್ರವೇಶಕ್ಕೆ ಅವಕಾಶ ನೀಡಬೇಕೆಂದು ಒತ್ತಾಯಿಸಿದರು. ಇದಲ್ಲದೆ, ಅವಶೇಷಗಳ ಅಡಿಯಲ್ಲಿ ಹೂತುಹೋಗಿರುವ ನೂರಾರು ಶವಗಳನ್ನು ಹೊರತೆಗೆಯಲು ಪರಿಹಾರ, ತುರ್ತು ಪ್ರತಿಕ್ರಿಯೆ ತಂಡಗಳು ಮತ್ತು ನಾಗರಿಕರ ರಕ್ಷಣೆಗಾಗಿ ನೂರಾರು ಉಪಕರಣ ಮತ್ತು ಯಂತ್ರೋಪಕರಣಗಳನ್ನು ಗಾಝಾದೊಳಗೆ ಬರಲು ಅವಕಾಶ ನೀಡುವಂತೆ ಅವರು ಆಗ್ರಹಿಸಿದರು.

ಇಸ್ರೇಲ್ ಮತ್ತು ಹಮಾಸ್ ನಡುವಿನ ತಾತ್ಕಾಲಿಕ ಕದನ ವಿರಾಮ ಕೊನೆಗೊಂಡ ನಂತರ ಡಿಸೆಂಬರ್ 1 ರಂದು ಗಾಝಾದಲ್ಲಿ ಹೋರಾಟ ಪುನರಾರಂಭವಾಗಿದೆ. ಮೊದಲ ದಿನ 400ಕ್ಕೂ ಹೆಚ್ಚು ಹಮಾಸ್ ನೆಲೆಗಳ ಮೇಲೆ ದಾಳಿ ನಡೆಸಿರುವುದಾಗಿ ಇಸ್ರೇಲ್ ಸೇನೆ ತಿಳಿಸಿದೆ. ಡಿಸೆಂಬರ್ 1 ಮತ್ತು 3 ರ ನಡುವೆ, ಕನಿಷ್ಠ 193 ಪ್ಯಾಲೆಸ್ಟೈನಿಯರು ಸಾವನ್ನಪ್ಪಿದ್ದಾರೆ ಮತ್ತು 652 ಜನರು ಗಾಯಗೊಂಡಿದ್ದಾರೆ ಎಂದು ಗಾಝಾದ ಹಮಾಸ್ ನಿಯಂತ್ರಿತ ಆರೋಗ್ಯ ಸಚಿವಾಲಯ ತಿಳಿಸಿದೆ.

ಕದನವಿರಾಮದ ಭಾಗವಾಗಿ ನವೆಂಬರ್ 24 ರಿಂದ 30 ರವರೆಗೆ 80 ಇಸ್ರೇಲಿಗಳು, 24 ವಿದೇಶಿ ಪ್ರಜೆಗಳು ಮತ್ತು 240 ಪ್ಯಾಲೆಸ್ಟೈನ್ ಕೈದಿಗಳು ಸೇರಿದಂತೆ ಒಟ್ಟು 104 ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗಿದೆ. ಇಸ್ರೇಲಿ ಮೂಲಗಳ ಪ್ರಕಾರ, ಇಸ್ರೇಲಿಗಳು ಮತ್ತು ವಿದೇಶಿ ಪ್ರಜೆಗಳು ಸೇರಿದಂತೆ ಗಾಝಾದಲ್ಲಿ ಸುಮಾರು 133 ಜನರು ಇನ್ನೂ ಬಂಧಿಗಳಾಗಿದ್ದಾರೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ : ಭಾರತಕ್ಕೆ APEC ಸದಸ್ಯತ್ವ: ಅವಕಾಶ ಮತ್ತು ಸವಾಲುಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.