ETV Bharat / international

ಹಮಾಸ್​ ಪ್ರಧಾನ ಭದ್ರತಾ ಕಚೇರಿ ಧ್ವಂಸಗೊಳಿಸಿದ ಇಸ್ರೇಲ್

author img

By ETV Bharat Karnataka Team

Published : Dec 5, 2023, 7:37 PM IST

Israel raids Hamas general security headquarters: ಹಮಾಸ್​ನ ಪ್ರಧಾನ ಕಚೇರಿಯ ಮೇಲೆ ದಾಳಿ ನಡೆಸಿ ಅದನ್ನು ಧ್ವಂಸಗೊಳಿಸಿರುವುದಾಗಿ ಇಸ್ರೇಲ್‌ ಸೇನೆ (ಐಡಿಎಫ್) ಹೇಳಿದೆ.

IDF raids Hamas's general security headquarters in northern Gaza
IDF raids Hamas's general security headquarters in northern Gaza

ಟೆಲ್ ಅವೀವ್: ಉತ್ತರ ಗಾಝಾದ ಜಬಾಲಿಯಾ ಪ್ರದೇಶದಲ್ಲಿರುವ ಹಮಾಸ್ ಉಗ್ರಗಾಮಿ ಗುಂಪಿನ ಪ್ರಧಾನ ಭದ್ರತಾ ಕಚೇರಿಯ ಮೇಲೆ ತನ್ನ ಪಡೆಗಳು ದಾಳಿ ನಡೆಸಿರುವುದಾಗಿ ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಮಂಗಳವಾರ ಹೇಳಿಕೊಂಡಿದೆ. ಐಡಿಎಫ್​ನ 551ನೇ ಬ್ರಿಗೇಡ್ ಮತ್ತು ಇಸ್ರೇಲ್ ನೌಕಾಪಡೆಯ ಶಯೆಟಿಟ್ 13 ಕಮಾಂಡೋ ಘಟಕವು ಹಮಾಸ್ ಪ್ರಧಾನ ಕಚೇರಿಯ ಮೇಲೆ ಜಂಟಿ ದಾಳಿ ನಡೆಸಿದ್ದು, ಈ ಸಂದರ್ಭದಲ್ಲಿ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಿಲಿಟರಿ ಹೇಳಿಕೆಯಲ್ಲಿ ತಿಳಿಸಿದೆ.

ದಾಳಿಗಳಲ್ಲಿ ಹಮಾಸ್​ನ ರಾಕೆಟ್​ಗಳು ಸೇರಿದಂತೆ ಮತ್ತು ಮದ್ದುಗುಂಡುಗಳನ್ನು ನಾಶಪಡಿಸಲಾಗಿದೆ ಎಂದು ಐಡಿಎಫ್ ಹೇಳಿದೆ. ಸೇನೆಯ ಪ್ರಕಾರ, ಸೋಮವಾರ ಪ್ಯಾರಾಟ್ರೂಪರ್ಸ್ ಬ್ರಿಗೇಡ್​ನೊಂದಿಗೆ ಜಂಟಿ ಕಾರ್ಯಾಚರಣೆಯ ಸಮಯದಲ್ಲಿ ಪಡೆಗಳು ಹಮಾಸ್​ನ ಪ್ರಮುಖ ನುಖ್ಬಾ ಹೋರಾಟಗಾರರ ಗುಂಪಿನ ಮೇಲೆ ದಾಳಿ ನಡೆಸಿವೆ.

ನೌಕಾಪಡೆಯು ಗಾಜಾ ಕರಾವಳಿಯುದ್ದಕ್ಕೂ ಡಜನ್​ಗಟ್ಟಲೆ ದಾಳಿಗಳನ್ನು ನಡೆಸಿದ್ದು, ಪದಾತಿ ಪಡೆಗಳಿಗೆ ಸಹಾಯ ಮಾಡಿದೆ. ಗಾಝಾದಲ್ಲಿನ ಅತಿದೊಡ್ಡ ಜಬಾಲಿಯಾ ನಿರಾಶ್ರಿತರ ಶಿಬಿರದ ಸುತ್ತುವರಿಯುವಿಕೆಯನ್ನು ಪಡೆಗಳು ಪೂರ್ಣಗೊಳಿಸಿವೆ ಎಂದು ಐಡಿಎಫ್ ಮಾಹಿತಿ ನೀಡಿದೆ.

ತನ್ನ ಪಡೆಗಳ ಮೇಲೆ ದಾಳಿ ನಡೆಸಿದ ಪ್ರಮುಖ ಮಿಲಿಟರಿ ಪೋಸ್ಟ್​ಗಳ ಮೇಲೆ ನಿಯಂತ್ರಣ ಸಾಧಿಸಿರುವುದಾಗಿ ಐಡಿಎಫ್ ಹೇಳಿದೆ. ನಾಗರಿಕ ವಸತಿ ಪ್ರದೇಶಗಳಲ್ಲಿ ಶಸ್ತ್ರಾಸ್ತ್ರಗಳು ಮತ್ತು ಲಾಂಚರ್​ಗಳನ್ನು ಪತ್ತೆಹಚ್ಚಲಾಗಿದೆ ಮತ್ತು ಉತ್ತರ ಗಾಜಾ ಪಟ್ಟಿಯ ನಿವಾಸಗಳಲ್ಲಿ ರಾಕೆಟ್​ಗಳನ್ನು ಪತ್ತೆಹಚ್ಚಿ ನಾಶಪಡಿಸಲಾಗಿದೆ ಎಂದು ಅದು ಹೇಳಿದೆ.

ಜಬಾಲಿಯಾ ಪ್ರದೇಶವು 1948ರ ಅರಬ್-ಇಸ್ರೇಲಿ ಯುದ್ಧದ ಸ್ವಲ್ಪ ಸಮಯದ ನಂತರ ಸ್ಥಾಪಿಸಲಾದ ಜನನಿಬಿಡ ನಿರಾಶ್ರಿತರ ಶಿಬಿರವಾಗಿದೆ. ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ಹಮಾಸ್​ ದಾಳಿ ನಡೆಸಿದ ನಂತರ ಆರಂಭವಾದ ಯುದ್ಧದಲ್ಲಿ ಈವರೆಗೆ ಸುಮಾರು 15 ಸಾವಿರಕ್ಕೂ ಹೆಚ್ಚು ಪ್ಯಾಲೆಸ್ಟೈನಿಯರು ಮೃತಪಟ್ಟಿದ್ದಾರೆ.

ಕತಾರ್ ಆಕ್ರೋಶ: ಗಾಝಾ ಮೇಲೆ ಇಸ್ರೇಲ್ ಬಾಂಬ್ ದಾಳಿ ಮುಂದುವರಿಸಿರುವ ಮಧ್ಯೆ ಅಂತಾರಾಷ್ಟ್ರೀಯ ಸಮುದಾಯವು ಪ್ಯಾಲೆಸ್ಟೈನ್ ಜನರ ಹಿತ ಕಾಪಾಡುವಲ್ಲಿ ವಿಫಲವಾಗಿದೆ ಎಂದು ಕತಾರ್‌ನ ಎಮಿರ್ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ಆರೋಪಿಸಿದ್ದಾರೆ. ದೋಹಾದಲ್ಲಿ ಮಂಗಳವಾರ ನಡೆದ ಗಲ್ಫ್ ಸಹಕಾರ ಮಂಡಳಿ (ಜಿಸಿಸಿ) ಶೃಂಗಸಭೆಯಲ್ಲಿ ಮಾತನಾಡಿದ ಅವರು, ಇಸ್ರೇಲ್ ಗಾಝಾದಲ್ಲಿ "ನರಮೇಧ" ನಡೆಸುತ್ತಿದೆ ಎಂದು ಆರೋಪಿಸಿದರು.

ಇದನ್ನೂ ಓದಿ: ಸಿಖ್ ಉಗ್ರ ಪನ್ನುನ್ ಹತ್ಯೆಗೆ ಸಂಚು ಆರೋಪ; ಭಾರತಕ್ಕೆ ಆಗಮಿಸಿದ ಬೈಡನ್ ಭದ್ರತಾ ಸಲಹೆಗಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.