ETV Bharat / international

ಹಮಾಸ್‌ ಉಗ್ರರ ವಿರುದ್ಧದ ಸಮರಕ್ಕೆ 3 ಲಕ್ಷ ಇಸ್ರೇಲ್ ಸೈನಿಕರು ಸಜ್ಜು; ಗಾಜಾ ಮೇಲೆ ನಿರಂತರ ದಾಳಿ

author img

By ETV Bharat Karnataka Team

Published : Oct 10, 2023, 4:14 PM IST

ತಮ್ಮ ಮೇಲಿನ ಭೀಕರ ದಾಳಿಗೆ ಪ್ರತಿದಾಳಿ ನಡೆಸುತ್ತಿರುವ ಇಸ್ರೇಲ್,​ ಹಮಾಸ್ ಉಗ್ರರನ್ನು ಮಟ್ಟಹಾಕಲು​ 3 ಲಕ್ಷ ಸೈನಿಕರನ್ನು ಸಜ್ಜುಗೊಳಿಸಿದೆ.

Israel attack on Gaza City
Israel attack on Gaza City

ಜೆರುಸಲೆಂ: ದಿಢೀರ್ ಆಕ್ರಮಣ ಆರಂಭಿಸಿರುವ ಹಮಾಸ್ ಉಗ್ರರ​ ನೆಲೆಯಾಗಿರುವ ಗಾಜಾ ನಗರದ ಮೇಲೆ ಇಸ್ರೇಲ್ ನಿರಂತರ​ ಬಾಂಬ್ ದಾಳಿ ನಡೆಸುತ್ತಿದೆ. ಪ್ರಧಾನಮಂತ್ರಿ ನೆತನ್ಯಾಹು ಅವರು ಹಮಾಸ್​ ವಿರುದ್ಧ ಪ್ರತೀಕಾರದ ಶಪಥ ಕೈಗೊಂಡ ಬೆನ್ನಲ್ಲೇ ಆಕ್ರಮಣಕ್ಕೆ ಇಸ್ರೇಲ್ ಸಕಲ ರೀತಿಯಲ್ಲೂ ಸಜ್ಜಾಗಿ ನಿಂತಿದೆ.

ನಾಲ್ಕು ದಿನಗಳ ಹಿಂದೆ ಆರಂಭವಾಗಿರುವ ಭೀಕರ ಕಾಳಗದಿಂದಾಗಿ ಇದುವರೆಗೆ ಕನಿಷ್ಠ 1,600 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹಮಾಸ್​​ ಕೂಡ ಹೋರಾಟ ಹೆಚ್ಚಿಸಿದ್ದು, ಎಚ್ಚರಿಕೆ ನೀಡದೆ ತಮ್ಮ ನಾಗರಿಕರ ಮೇಲೆ ದಾಳಿ ನಡೆಸಿದರೆ, ಇಸ್ರೇಲಿಯನ್ನರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದೆ.

ಇಸ್ರೇಲ್​ ಭೂಪ್ರದೇಶದಲ್ಲಿ ಸುಮಾರು 1,500 ಹಮಾಸ್​​​ ಉಗ್ರರ ಮೃತದೇಹ ಪತ್ತೆಯಾಗಿದೆ ಎಂದು ಇಸ್ರೇಲ್​ ಮಿಲಿಟರಿ ಹೇಳಿದೆ. ಇನ್ನೊಂದೆಡೆ, ದಾಳಿಗೆ ಇಸ್ರೇಲ್​ ಮಿಲಿಟರಿ 3,00,000 ಸೈನಿಕರನ್ನು ಸಜ್ಜುಗೊಳಿಸಿದೆ. ಗಾಜಾ ನಗರದ ಸುತ್ತಮುತ್ತಲ ಹಲವು ನಗರಗಳಲ್ಲಿ ಸಾವಿರಾರು ಇಸ್ರೇಲಿಗರನ್ನು ಸ್ಥಳಾಂತರ ಮಾಡಲಾಗಿದೆ. ಗಾಜಾ ಗಡಿಯಲ್ಲಿ ಕರಾವಳಿ ಗಡಿ ಉಲ್ಲಂಘಿಸಿ ಅನೇಕ ಟ್ಯಾಂಕ್​ ಮತ್ತು ಡ್ರೋನ್​ಗಳನ್ನು ನಿಯೋಜಿಸಲಾಗಿದೆ. ಗಾಜಾ ಮೇಲಿನ ವೈಮಾನಿಕ ದಾಳಿ ನಡೆಯುವ ಹೊತ್ತಿಗಾಗಲೇ 10 ಸಾವಿರ ಮಂದಿ ಆ ಪ್ರದೇಶವನ್ನು ತೊರೆದಿದ್ದಾರೆ.

ಇದು ಹಮಾಸ್​ ವಿರುದ್ಧದ ದಾಳಿ: ನಾವು ಕೇವಲ ಹಮಾಸ್​ ಮೇಲೆ ದಾಳಿ ನಡೆಸುತ್ತಿದ್ದೇವೆ ಎಂದು ಇಸ್ರೇಲ್​ ಪ್ರಧಾನ ಮಂತ್ರಿ ಬೆಂಜಮಿನ್​ ನೆತನ್ಯಾಹು ತಿಳಿಸಿದ್ದಾರೆ. ನಮ್ಮ ಶತ್ರುಗಳ ವಿರುದ್ಧ ನಾವು ಮುಂದಿನ ದಿನಗಳಲ್ಲಿ ಮಾಡುವ ದಾಳಿಗಳು ತಲೆಮಾರುಗಳ ಕಾಲ ಪ್ರತಿಧ್ವನಿಸಲಿದೆ ಎಂದಿದ್ದಾರೆ. ಹಮಾಸ್‌ನ ಸಚಿವಾಲಯ ಮತ್ತು ಆಡಳಿತ ಕಟ್ಟಡಗಳಿಗೆ ನೆಲೆಯಾಗಿರುವ ಗಾಜಾದ ರಿಮಲ್ ನಗರದ ಸುತ್ತಮುತ್ತ ಹಮಾಸ್ ತಾಣಗಳನ್ನು ಗುರಿಗಳನ್ನು ರಾತ್ರಿಯಿಡೀ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್​​ ಮಿಲಿಟರಿ ಮಾಹಿತಿ ನೀಡಿದೆ.

ಒತ್ತೆಯಾಳುಗಳ ಮೇಲಿನ ದಾಳಿ ಕ್ಷಮಿಸಲಾರದ ತಪ್ಪು: ಇಸ್ರೇಲ್​ ವೈಮಾನಿಕ ದಾಳಿಗೆ ಪ್ರತಿಕ್ರಿಯಿಸಿರುವ ಹಮಾಸ್​ ಶಸ್ತ್ರಾಸ್ತ್ರ ದಳದ ವಕ್ತಾರ ಅಬು ಒಬೈಡ, ಯಾವುದೇ ಮುನ್ನೆಚ್ಚರಿಕೆ ನೀಡದೇ ಗಾಜಾದ ಮೇಲೆ ಇಸ್ರೇಲ್​ ದಾಳಿ ನಡೆಸಿದರೆ, ಇಸ್ರೇಲ್​ನಲ್ಲಿ ಬಂಧಿತರಾಗಿರುವ ನಾಗರಿಕರನ್ನು ಕೊಲ್ಲುವುದಾಗಿ ಹೇಳಿದೆ. ಈ ಬೆದರಿಕೆಯ ಬೆನ್ನಲ್ಲೇ ಮಾತನಾಡಿರುವ ಇಸ್ರೇಲ್​ ವಿದೇಶಾಂಗ ಸಚಿವ ಎಲಿ ಕೊಹೆಲ್​, ಒತ್ತೆಯಾಳುಗಳನ್ನು ಕೊಂದರೆ ಈ ಯುದ್ಧ ಅಪರಾಧವನ್ನು ಎಂದಿಗೂ ಕ್ಷಮಿಸಲು ಸಾಧ್ಯವಾಗದು ಎಂದು ಎಚ್ಚರಿಕೆ ನೀಡಿದ್ದಾರೆ.

ಇಸ್ರೇಲ್​ನಲ್ಲಿ 900ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ ಎಂದು ಇಸ್ರೇಲ್​ ಮಿಲಿಟರಿ ಹೇಳಿದೆ. ಗಾಜಾ ಮತ್ತು ವೆಸ್ಟ್​ ಬ್ಯಾಂಕ್​​ನಲ್ಲಿ 704 ಜನರನ್ನು ಕೊಲ್ಲಲಾಗಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ಇದರಲ್ಲಿ ನೂರಾರು ಹಮಾಸ್​​ಗಳೂ ಇದ್ದಾರೆ. ಎರಡು ಕಡೆಯ ಸಾವಿರಾರು ಮಂದಿ ಗಾಯಗೊಂಡಿದ್ದಾರೆ. ಕಳೆದ ಹಲವು ವರ್ಷಗಳಿಂದ ಇಸ್ರೇಲ್​ ಮತ್ತು ಹಮಾಸ್​ ನಡುವೆ ಪದೇ ಪದೇ ಸಂಘರ್ಷಗಳಾಗುತ್ತಿದೆ.

ಇದನ್ನೂ ಓದಿ: ಗಾಜಾದಲ್ಲಿ ಇಸ್ರೇಲ್ ರಾಕೆಟ್ ಸುರಿಮಳೆ: ಜೀವ ಉಳಿಸಿಕೊಳ್ಳಲು ಸುರಕ್ಷಿತ ಸ್ಥಳಕ್ಕೆ ಜನರ ವಲಸೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.