ETV Bharat / international

IPSN : ಸಾಂಕ್ರಾಮಿಕ ರೋಗ ಪತ್ತೆ, ತಡೆಗೆ WHO ಹೊಸ ಜಾಗತಿಕ ಜಾಲ

author img

By

Published : May 21, 2023, 1:10 PM IST

ವೈರಸ್ ಸೋಕಿನಿಂದ ಹರಡುವ ರೋಗಗಳನ್ನು ಸಕಾಲದಲ್ಲಿ ಪತ್ತೆ ಮಾಡಲು ಮತ್ತು ಅವುಗಳನ್ನು ನಿಯಂತ್ರಿಸಲು ಅನುಕೂಲವಾಗುವಂತೆ ವಿಶ್ವ ಆರೋಗ್ಯ ಸಂಸ್ಥೆಯು ಹೊಸ ಆರೋಗ್ಯ ನಿರ್ವಹಣಾ ಜಾಲವೊಂದನ್ನು ಪ್ರಕಟಿಸಿದೆ.

WHO's new global network to detect
WHO's new global network to detect

ಜಿನೀವಾ : ಯಾವುದೇ ನಿರ್ದಿಷ್ಟ ವೈರಸ್ ಸೋಂಕೊಂದು ಸಾಂಕ್ರಾಮಿಕವಾಗುವ ಮೊದಲೇ ಆ ರೋಗದ ಹರಡುವಿಕೆಯನ್ನು ಪತ್ತೆ ಹಚ್ಚಲು ಮತ್ತು ಪ್ರತಿಕ್ರಿಯಿಸಲು ಹಾಗೂ ವಾಡಿಕೆಯ ರೋಗ ಕಣ್ಗಾವಲು ಉತ್ತಮಗೊಳಿಸಲು ಸಹಾಯಕವಾಗುವಂತೆ ವಿಶ್ವ ಆರೋಗ್ಯ ಸಂಸ್ಥೆ (WHO)ಯು ಶನಿವಾರ ಹೊಸ ಜಾಗತಿಕ ನೆಟ್ವರ್ಕ್ ಒಂದನ್ನು ಘೋಷಿಸಿದೆ. ಅಂತಾರಾಷ್ಟ್ರೀಯ ರೋಗಕಾರಕ ಕಣ್ಗಾವಲು ನೆಟ್‌ವರ್ಕ್ (The International Pathogen Surveillance Network- IPSN) ದೇಶಗಳು ಮತ್ತು ಪ್ರದೇಶಗಳನ್ನು ಸಂಪರ್ಕಿಸಲು ವೇದಿಕೆಯನ್ನು ಒದಗಿಸುತ್ತದೆ. ಸಾರ್ವಜನಿಕ ಆರೋಗ್ಯ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಮಯದಲ್ಲಿ ಈ ಡೇಟಾ ಬಳಸಿಕೊಂಡು ಮಾದರಿಗಳನ್ನು ಸಂಗ್ರಹಿಸಲು ಮತ್ತು ವಿಶ್ಲೇಷಿಸಲು ಮತ್ತು ಆ ಮಾಹಿತಿಯನ್ನು ಹೆಚ್ಚು ವಿಶಾಲವಾಗಿ ಹಂಚಿಕೊಳ್ಳುವ ವ್ಯವಸ್ಥೆಗಳನ್ನು ಈ ನೆಟ್ವರ್ಕ್ ಸುಧಾರಿಸುತ್ತದೆ.

ರೋಗಕಾರಕ ಜೀನೋಮಿಕ್ಸ್ ಇದು ವೈರಸ್‌ಗಳು, ಬ್ಯಾಕ್ಟೀರಿಯಾಗಳು ಮತ್ತು ಇತರ ರೋಗಕಾರಕ ಜೀವಿಗಳು ಎಷ್ಟು ಮಾರಕವಾಗಿವೆ, ಎಷ್ಟು ಸಾಂಕ್ರಾಮಿಕವಾಗಿವೆ ಮತ್ತು ಅವು ಹೇಗೆ ಹರಡುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಲು ಆನುವಂಶಿಕ ಸಂಕೇತವನ್ನು ವಿಶ್ಲೇಷಿಸುತ್ತದೆ. ಈ ಮಾಹಿತಿಯನ್ನು ಬಳಸಿ ವಿಜ್ಞಾನಿಗಳು ಮತ್ತು ಸಾರ್ವಜನಿಕ ಆರೋಗ್ಯ ಅಧಿಕಾರಿಗಳು ವ್ಯಾಪಕವಾದ ರೋಗ ಕಣ್ಗಾವಲು ವ್ಯವಸ್ಥೆಯ ಭಾಗವಾಗಿ ಏಕಾಏಕಿ ಸೋಂಕು ತಡೆಗಟ್ಟಲು ಮತ್ತು ಪ್ರತಿಕ್ರಿಯಿಸಲು, ಅದೇ ಸಮಯದಲ್ಲಿ ಲಸಿಕೆಗಳನ್ನು ಅಭಿವೃದ್ಧಿಪಡಿಸಲು ರೋಗಗಳನ್ನು ಗುರುತಿಸಬಹುದು ಮತ್ತು ಟ್ರ್ಯಾಕ್ ಮಾಡಬಹುದು.

ಈ ಹೊಸ ನೆಟ್‌ವರ್ಕ್‌ನ ಗುರಿಯು ಪ್ರತಿ ದೇಶಕ್ಕೂ ಅದರ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಭಾಗವಾಗಿ ರೋಗಕಾರಕ ಜೀನೋಮಿಕ್ ಅನುಕ್ರಮ ಮತ್ತು ವಿಶ್ಲೇಷಣೆಗೆ ಪ್ರವೇಶವನ್ನು ನೀಡುವುದಾಗಿದೆ. ಜೊತೆಗೆ ಇದು ಆರೋಗ್ಯ ಭದ್ರತೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಲಿದೆ. ಎಲ್ಲರೂ ಎದುರಿಸುತ್ತಿರುವ ಆರೋಗ್ಯ ಸಮಸ್ಯೆಗಳ ವಿರುದ್ಧ ಒಟ್ಟಾಗಿ ಹೋರಾಡಿದಾಗ ಮಾತ್ರ ಆ ಹೋರಾಟ ಬಲವಾಗಿರುತ್ತದೆ ಎಂಬುದು ನಮಗೆ ಕೋವಿಡ್ 19 ಸಾಂಕ್ರಾಮಿಕ ಸಮಯದಲ್ಲಿ ಸ್ಪಷ್ಟವಾಗಿ ಗೊತ್ತಾಗಿದೆ ಎಂದು ಡಬ್ಲ್ಯೂಎಚ್​ಓ ಡೈರೆಕ್ಟರ್ ಜನರಲ್ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸಾಂಕ್ರಾಮಿಕ ರೋಗಗಳನ್ನು ಎದುರಿಸುವ ಸಮಯದಲ್ಲಿ ರೋಗಕಾರಕ ಜೀನೋಮಿಕ್ಸ್ ನಿರ್ವಹಿಸುವ ನಿರ್ಣಾಯಕ ಪಾತ್ರವನ್ನು ಕೋವಿಡ್ ಸಾಂಕ್ರಾಮಿಕವು ಎತ್ತಿ ತೋರಿಸಿದೆ. SARS-CoV-2 ಜೀನೋಮ್‌ನ ಕ್ಷಿಪ್ರ ಅನುಕ್ರಮವಿಲ್ಲದೆ ಲಸಿಕೆಗಳು ಅಷ್ಟು ಪರಿಣಾಮಕಾರಿಯಾಗಿರುತ್ತಿರಲಿಲ್ಲ ಅಥವಾ ಅಷ್ಟು ಬೇಗ ಲಭ್ಯವಾಗುತ್ತಿರಲಿಲ್ಲ. ವೈರಸ್‌ನ ಹೊಸ, ಹೆಚ್ಚು ಹರಡುವ ರೂಪಾಂತರಗಳನ್ನು ತ್ವರಿತವಾಗಿ ಗುರುತಿಸಲಾಗುತ್ತಿರಲಿಲ್ಲ. ಜೀನೋಮಿಕ್ಸ್ ಇದು ಪರಿಣಾಮಕಾರಿ ಸಾಂಕ್ರಾಮಿಕ ರೋಗ ನಿರೋಧಕ ಸನ್ನದ್ಧತೆ ಮತ್ತು ಪ್ರತಿಕ್ರಿಯೆಯ ವಿಚಾರದಲ್ಲಿ ಅತ್ಯಂತ ಪ್ರಮುಖ ಸ್ಥಾನದಲ್ಲಿದೆ.

ಹಾಗೆಯೇ ಆಹಾರದಿಂದ ಹರಡುವ ರೋಗಗಳು, ಇನ್​ಫ್ಲುಯೆಂಜಾ, ಕ್ಷಯ, ಎಚ್​ಐವಿ ಮುಂತಾದ ಸಾಂಕ್ರಾಮಿಕ ರೋಗ ತಡೆಗೂ ಇದು ಮುಖ್ಯವಾಗಿದೆ. ಉದಾಹರಣೆಗೆ ಎಚ್​ಐವಿ ಔಷಧಿ ಪ್ರತಿರೋಧದ ಹರಡುವಿಕೆಯನ್ನು ಮೇಲ್ವಿಚಾರಣೆ ಮಾಡುವಲ್ಲಿ ಇದರ ಬಳಕೆಯು, ಅಸಂಖ್ಯಾತ ಜೀವಗಳನ್ನು ಉಳಿಸಿದ ಆಂಟಿರೆಟ್ರೋವೈರಲ್ ಔಷಧ ತಯಾರಿಸಲು ಕಾರಣವಾಗಿದೆ. ಕೋವಿಡ್ ಸಾಂಕ್ರಾಮಿಕದ ಪರಿಣಾಮವಾಗಿ ದೇಶಗಳಲ್ಲಿ ಜೀನೋಮಿಕ್ಸ್ ಸಾಮರ್ಥ್ಯದಲ್ಲಿ ಇತ್ತೀಚಿನ ಉನ್ನತೀಕರಣದ ಹೊರತಾಗಿಯೂ, ಇನ್ನೂ ಅನೇಕ ದೇಶಗಳು ಮಾದರಿಗಳನ್ನು ಸಂಗ್ರಹಿಸಲು ಮತ್ತು ವಿಶ್ಲೇಷಿಸಲು ಅಥವಾ ಸಾರ್ವಜನಿಕ ಆರೋಗ್ಯ ನಿರ್ಧಾರಗಳನ್ನು ತೆಗೆದುಕೊಳ್ಳಲು ಆ ಡೇಟಾವನ್ನು ಬಳಸಲು ಪರಿಣಾಮಕಾರಿ ವ್ಯವಸ್ಥೆಗಳನ್ನು ಹೊಂದಿಲ್ಲ.

ಇದನ್ನೂ ಓದಿ : ಎಲ್​ ನಿನೊ ಪ್ರಬಲ: ಬಿಸಿಗಾಳಿ, ಬರಗಾಲ - ತತ್ತರಿಸಲಿದೆ ವಿಶ್ವದ ಆರ್ಥಿಕತೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.