ETV Bharat / international

'ಇಸ್ರೇಲಿಗರ ಬಗ್ಗೆ ನಿಷ್ಕಾಳಜಿ' ರೆಡ್ ಕ್ರಾಸ್ ವಿರುದ್ಧ ಕಾನೂನು ಮೊಕದ್ದಮೆ

author img

By ETV Bharat Karnataka Team

Published : Dec 22, 2023, 1:48 PM IST

ಇಸ್ರೇಲಿ ಒತ್ತೆಯಾಳುಗಳ ಬಗ್ಗೆ ರೆಡ್ ಕ್ರಾಸ್ ನಿಷ್ಕಾಳಜಿ ತೋರಿದೆ ಎಂದು ಆರೋಪಿಸಿ ಇಸ್ರೇಲ್​ನ ವಕೀಲರ ಗುಂಪು ರೆಡ್ ಕ್ರಾಸ್ ವಿರುದ್ಧ ಮೊಕದ್ದಮೆ ದಾಖಲಿಸಿದೆ.

Israel advocacy group files legal complaint against Red Cross
Israel advocacy group files legal complaint against Red Cross

ಟೆಲ್ ಅವೀವ್ (ಇಸ್ರೇಲ್​): ಗಾಜಾದಲ್ಲಿ ಹಮಾಸ್ ವಶದಲ್ಲಿರುವ ಇಸ್ರೇಲಿ ಒತ್ತೆಯಾಳುಗಳ ಬಗ್ಗೆ ರೆಡ್ ಕ್ರಾಸ್ ಸಂಘಟನೆ ನಿಷ್ಕ್ರಿಯವಾಗಿದೆ ಎಂದು ಆರೋಪಿಸಿ ಇಸ್ರೇಲಿ ವಕೀಲರ ಗುಂಪು ಶುರಾತ್ ಹಾದಿನ್ ಅಂತಾರಾಷ್ಟ್ರೀಯ ರೆಡ್ ಕ್ರಾಸ್ ಸಮಿತಿ (ಐಸಿಆರ್​ಸಿ) ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದೆ. ಇಸ್ರೇಲಿ ಸಂತ್ರಸ್ತರ ಪರವಾಗಿ ವಿಶ್ವಾದ್ಯಂತ ಕಾನೂನು ಹೋರಾಟ ನಡೆಸುತ್ತಿರುವ ವಕೀಲರ ಗುಂಪು 24 ಒತ್ತೆಯಾಳುಗಳ ಕುಟುಂಬಗಳ ಪರವಾಗಿ ಜೆರುಸಲೇಂನಲ್ಲಿ ದೂರು ದಾಖಲಿಸಿದೆ.

ಗಾಜಾದಲ್ಲಿ ಸೆರೆಯಾಳುಗಳಾಗಿ ಬಂಧನಕ್ಕೊಳಗಾದ ಇಸ್ರೇಲಿಗಳನ್ನು ಭೇಟಿ ಮಾಡುವ ತನ್ನ ಉದ್ದೇಶ ಮತ್ತು ನೈತಿಕ ಕರ್ತವ್ಯವನ್ನು ಪೂರೈಸಲು ಐಸಿಆರ್​ಸಿ ವಿಫಲವಾಗಿದೆ ಎಂದು ಗುಂಪು ಟೀಕಿಸಿದೆ. "ಒತ್ತೆಯಾಳುಗಳು ಯಹೂದಿಗಳು ಎಂಬ ಒಂದೇ ಕಾರಣಕ್ಕಾಗಿ ಮಾನವ ಜೀವಗಳ ಬಗ್ಗೆ ಇಂಥ ನಿರ್ಲಕ್ಷ್ಯ ಮತ್ತು ಅಗೌರವವನ್ನು ನಾವು ಒಪ್ಪಿಕೊಳ್ಳಲು ಸಾಧ್ಯವಿಲ್ಲ" ಎಂದು ಶುರಾತ್ ಹಾದಿನ್ ಸಂಸ್ಥಾಪಕ ಮತ್ತು ಅಧ್ಯಕ್ಷ ನಿಟ್ಸಾನಾ ದರ್ಶನ್-ಲೀಟ್ನರ್ ಹೇಳಿದರು. ಐಸಿಆರ್​ಸಿ ಪಕ್ಷಪಾತಿಯಾಗಿದ್ದು, ಇಸ್ರೇಲಿ ಪ್ರಜೆಗಳ ಬಗ್ಗೆ ನಿರಾಸಕ್ತಿ ಹೊಂದಿದೆ ಎಂದು ಅವರು ಹೇಳಿದರು.

"ಐಸಿಆರ್​ಸಿ ನಿಧಾನವಾಗಿ ಕೆಲಸ ಮಾಡುತ್ತಿದೆ ಮತ್ತು ಒತ್ತೆಯಾಳುಗಳ ಭೇಟಿಗಳಿಗೆ ಅನುಕೂಲವಾಗುವಂತೆ ಅಥವಾ ಅಗತ್ಯ ಔಷಧಗಳನ್ನು ಪೂರೈಸಲು ದೃಢವಾಗಿ ಕಾರ್ಯನಿರ್ವಹಿಸಲಿಲ್ಲ" ಎಂದು ಅವರು ಹೇಳಿದರು.

ಏತನ್ಮಧ್ಯೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರೆಡ್ ಕ್ರಾಸ್, ತನ್ನ ಸಂಘಟನೆ ತಟಸ್ಥವಾಗಿದೆ ಮತ್ತು ವಾಸ್ತವಿಕವಾಗಿ ನೆಲದ ಪರಿಸ್ಥಿತಿಯು ಸಂಸ್ಥೆ ಕಾರ್ಯನಿರ್ವಹಿಸಲು ತೀರಾ ಕಷ್ಟಕರವಾಗಿದೆ ಎಂದು ಹೇಳಿದೆ. ಐಸಿಆರ್​ಸಿ ಅಧ್ಯಕ್ಷೆ ಮಿರ್ಜಾನಾ ಸ್ಪೋಲ್ಜಾರಿಕ್ ಎಗ್ಗರ್ ಇಸ್ರೇಲ್​ಗೆ ಭೇಟಿ ನೀಡಿದ ಸಂದರ್ಭದಲ್ಲಿ, ಒತ್ತೆಯಾಳುಗಳು ಮತ್ತು ಕಾಣೆಯಾದ ಕುಟುಂಬಗಳ ವೇದಿಕೆಯು ಹಮಾಸ್ ಸೆರೆಯಲ್ಲಿರುವ ಇಸ್ರೇಲಿ ಒತ್ತೆಯಾಳುಗಳನ್ನು ವೈಯಕ್ತಿಕವಾಗಿ ಭೇಟಿ ಮಾಡುವಂತೆ ಆಕೆಗೆ ಒತ್ತಾಯಿಸಿತ್ತು.

ನವೆಂಬರ್ 24 ರಿಂದ ಡಿಸೆಂಬರ್ 1 ರವರೆಗೆ ಹಮಾಸ್ ಮತ್ತು ಇಸ್ರೇಲ್ ನಡುವಿನ ತಾತ್ಕಾಲಿಕ ಒಂದು ವಾರದ ಕದನ ವಿರಾಮದ ಸಮಯದಲ್ಲಿ, ಹಮಾಸ್ 105 ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದೆ ಮತ್ತು ಕನಿಷ್ಠ 129 ಒತ್ತೆಯಾಳುಗಳು ಇನ್ನೂ ಅದರ ಸೆರೆಯಲ್ಲಿದ್ದಾರೆ. ಉಳಿದ 129 ಒತ್ತೆಯಾಳುಗಳ ಪೈಕಿ ಕನಿಷ್ಠ 20 ಒತ್ತೆಯಾಳುಗಳು ಸಾವನ್ನಪ್ಪಿದ್ದಾರೆ ಎಂದು ಇಸ್ರೇಲಿಗಳು ಭಾವಿಸಿದ್ದಾರೆ. ಅಕ್ಟೋಬರ್ 7 ರಿಂದ ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಇಸ್ರೇಲಿ ಪಡೆಗಳು 4,655 ಕ್ಕೂ ಹೆಚ್ಚು ಜನರನ್ನು ಬಂಧಿಸಿವೆ ಎಂದು ಪ್ಯಾಲೆಸ್ಟೈನ್ ಕೈದಿಗಳ ಕ್ಲಬ್ ತಿಳಿಸಿದೆ.

ಇದನ್ನೂ ಓದಿ : ಹಮಾಸ್​ ದಾಳಿ, ಇಸ್ರೇಲ್​ ಯುದ್ಧ-ಸಾವಿರಾರು ಸಾವು; ಕರಾಳ ಘಟನೆಗಳಿಗೆ ಸಾಕ್ಷಿಯಾದ 2023ರ ವರ್ಷ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.