ETV Bharat / international

ಭಾರತ-ಮಧ್ಯಪ್ರಾಚ್ಯ-ಯುರೋಪ್ ಕಾರಿಡಾರ್; 2023ರ G20ಯಲ್ಲಿ ಭಾರತದ ಮಹತ್ವದ ಯಶಸ್ಸು

author img

By ETV Bharat Karnataka Team

Published : Dec 24, 2023, 5:31 PM IST

2023ರ ಹಿನ್ನೋಟ: ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್‌ನಿಂದ ವಿಶ್ವ ಹಾಗೂ ಭಾರತಕ್ಕಾಗುವ ಅನುಕೂಲಗಳ ಬಗ್ಗೆ ಇಲ್ಲಿದೆ ಮಾಹಿತಿ.

India Middle East Europe Economic Corridor IMEC
India Middle East Europe Economic Corridor IMEC

ಇದೇ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಭಾರತವು ಜಿ20 ರಾಷ್ಟ್ರಗಳ ಗುಂಪು ಸಭೆಗಳು ಮತ್ತು ನಾಯಕರ ಶೃಂಗಸಭೆಯನ್ನು ಆಯೋಜಿಸಿದ್ದು 2023ನೇ ವರ್ಷವು ಭಾರತೀಯ ಇತಿಹಾಸದಲ್ಲಿ ನೆನಪಿನಲ್ಲಿ ಉಳಿಯುವಂಥ ಘಟನೆಯಾಗಿದೆ. ಶೃಂಗಸಭೆಯ ಅಂಗವಾಗಿ ಉತ್ತರದಲ್ಲಿ ಲಡಾಖ್ ಮತ್ತು ಕಾಶ್ಮೀರದಿಂದ ದಕ್ಷಿಣದಲ್ಲಿ ಕನ್ಯಾಕುಮಾರಿವರೆಗೆ ಮತ್ತು ಈಶಾನ್ಯದ ಶಿಲ್ಲಾಂಗ್ ಮತ್ತು ಗುವಾಹಟಿಯಿಂದ ಪಶ್ಚಿಮದಲ್ಲಿ ಗೋವಾ ಮತ್ತು ರಣ್ ಆಫ್ ಕಚ್‌ವರೆಗೆ ದೇಶದ ವಿವಿಧ ಭಾಗಗಳಲ್ಲಿ ವಿವಿಧ ಸಚಿವಾಲಯ ಮತ್ತು ಕಾರ್ಯದರ್ಶಿ ಮಟ್ಟದ ಗುಂಪು ಚರ್ಚೆಗಳು ನಡೆದವು.

ಮಾನವರ ಬದುಕಿಗೆ ಈ ವಿಶ್ವವನ್ನು ಇನ್ನಷ್ಟು ಉತ್ತಮಗೊಳಿಸುವ ನಿಟ್ಟಿನಲ್ಲಿ ಮತ್ತು ಜಗತ್ತು ಎದುರಿಸುತ್ತಿರುವ ಅನೇಕ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಅವುಗಳಲ್ಲಿ ಪ್ರಮುಖವಾದವುಗಳೆಂದರೆ:

i) ಜಾಗತಿಕ ಜೈವಿಕ ಇಂಧನ ಒಕ್ಕೂಟ (ಜಿಬಿಎ) – ಈ ಮೈತ್ರಿಕೂಟವು 9 ದೇಶಗಳನ್ನು ಸದಸ್ಯರನ್ನಾಗಿ ಹೊಂದಿದೆ. ಸುಸ್ಥಿರ ಜೈವಿಕ ಇಂಧನಗಳ ಅಭಿವೃದ್ಧಿ ಮತ್ತು ಅಳವಡಿಕೆಯನ್ನು ಉತ್ತೇಜಿಸಲು ಇದನ್ನು ಸ್ಥಾಪಿಸಲಾಗಿದೆ.

(ii) ಭಾರತ ಮಧ್ಯಪ್ರಾಚ್ಯ ಯುರೋಪ್ ಆರ್ಥಿಕ ಕಾರಿಡಾರ್ (ಐಎಂಇಸಿ).

ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ ಭಾರತದ ಭವಿಷ್ಯವನ್ನು ದೊಡ್ಡ ರೀತಿಯಲ್ಲಿ ಬದಲಾಯಿಸುವ ಸಾಧ್ಯತೆ ಇದ್ದು, ಆ ಬಗೆಗಿನ ಒಂದಿಷ್ಟು ಮಾಹಿತಿ ಇಲ್ಲಿದೆ.

ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ (ಐಎಂಇಸಿ) ಪ್ರಸ್ತಾವಿತ ಆರ್ಥಿಕ ಕಾರಿಡಾರ್ ಆಗಿದ್ದು, ಸೆಪ್ಟೆಂಬರ್​ನಲ್ಲಿ ನವದೆಹಲಿಯಲ್ಲಿ ನಡೆದ ಜಿ 20 ನಾಯಕರ ಶೃಂಗಸಭೆಯಲ್ಲಿ ಈ ಪರಿಕಲ್ಪನೆಯನ್ನು ರೂಪಿಸಲಾಯಿತು. ಭಾರತ, ಯುಎಇ, ಸೌದಿ ಅರೇಬಿಯಾ, ಫ್ರಾನ್ಸ್, ಜರ್ಮನಿ, ಇಟಲಿ, ಯುರೋಪಿಯನ್ ಯೂನಿಯನ್ ಮತ್ತು ಯುಎಸ್ಎ ದೇಶಗಳನ್ನು ಒಳಗೊಂಡಿರುವ ಈ ಕಾರಿಡಾರ್​ನ ಕಲ್ಪನೆಯನ್ನು ಯುಎಸ್ಎ ಅಧ್ಯಕ್ಷ ಜೋ ಬೈಡನ್ ಬೆಂಬಲಿಸಿದರು. ಈ ಕಾರಿಡಾರ್​ ಯೋಜನೆಯು ಚೀನಾ ಬೆಂಬಲಿತ ಬೆಲ್ಟ್ & ರೋಡ್ ಇನಿಶಿಯೇಟಿವ್ (ಬಿಆರ್​ಐ) ಗೆ ನೇರ ಪ್ರತಿಸ್ಪರ್ಧಿಯಾಗಿದೆ.

ಐಎಂಇಸಿ ಯೋಜನೆಯು ಎರಡು ಪ್ರತ್ಯೇಕ ಕಾರಿಡಾರ್‌ಗಳನ್ನು ಒಳಗೊಂಡಿದೆ. ಅವು:

(i) ಪೂರ್ವ ಕಾರಿಡಾರ್ - ಇದು ಭಾರತವನ್ನು ಮಧ್ಯಪ್ರಾಚ್ಯದ ದೇಶಗಳೊಂದಿಗೆ ಸಂಪರ್ಕಿಸುತ್ತದೆ.

(ii) ಉತ್ತರ ಕಾರಿಡಾರ್ - ಇದು ಮಧ್ಯಪ್ರಾಚ್ಯವನ್ನು ಇಸ್ರೇಲ್ ಮೂಲಕ ಯುರೋಪಿಗೆ ಸಂಪರ್ಕಿಸುತ್ತದೆ.

"ಏಷ್ಯಾ, ಅರೇಬಿಯನ್ ಪರ್ಯಾಯ ದ್ವೀಪ ಮತ್ತು ಯುರೋಪ್ ನಡುವೆ ವರ್ಧಿತ ಸಂಪರ್ಕ ಮತ್ತು ಆರ್ಥಿಕ ಏಕೀಕರಣದ ಮೂಲಕ ಐಎಂಇಸಿ ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸುವ ನಿರೀಕ್ಷೆಯಿದೆ" ಎಂದು ಕಾರಿಡಾರ್​ನ ಒಡಂಬಡಿಕೆಯಲ್ಲಿ ಹೇಳಲಾಗಿದೆ. ರಸ್ತೆ, ರೈಲು ಮತ್ತು ಹಡಗು ಸಾರಿಗೆ ವಿಧಾನಗಳನ್ನು ಒಳಗೊಂಡ ಯುರೋಪ್ ಮತ್ತು ಏಷ್ಯಾ ನಡುವಿನ ಸಾರಿಗೆ ಮತ್ತು ಸಂವಹನ ಸಂಪರ್ಕವನ್ನು ಹೆಚ್ಚಿಸಲು ಈ ಯೋಜಿತ ಕಾರಿಡಾರ್ ಅನ್ನು ಪ್ರಾರಂಭಿಸಲಾಗಿದೆ. ಈ ಮಾರ್ಗವು ವಿದ್ಯುತ್ ಮತ್ತು ಡಿಜಿಟಲ್ ಸಂಪರ್ಕವನ್ನು ಸಕ್ರಿಯಗೊಳಿಸುತ್ತದೆ, ಜೊತೆಗೆ ಶುದ್ಧ ಶಕ್ತಿಯ ಮೂಲವಾದ ಹೈಡ್ರೋಜನ್ ಪೈಪ್​ಲೈನ್ ವ್ಯವಸ್ಥೆಗಳನ್ನು ಸಹ ಒಳಗೊಂಡಿದೆ. ಈ ಕಾರಿಡಾರ್ ಚೀನಾದ ಬಿಆರ್​ಐ ಸಾಲದ ಬಲೆಗೆ ನೇರ ಪರ್ಯಾಯವಾಗಿದೆ. ಐಎಂಇಸಿ ಇನ್ನೂ ಯೋಜನಾ ಹಂತದಲ್ಲಿದ್ದರೂ ಸಾಕಷ್ಟು ಸಂಚಲನ ಮತ್ತು ಉತ್ಸಾಹವನ್ನು ಸೃಷ್ಟಿಸಿದೆ.

ಭೌಗೋಳಿಕ ರಾಜಕೀಯ ದೃಷ್ಟಿಕೋನದಿಂದಲೂ ಐಎಂಇಸಿ ಮುಖ್ಯವಾಗಿದೆ. ಇದು ವಿಶ್ವಾಸಾರ್ಹ ಮತ್ತು ಸುರಕ್ಷಿತ ಪೂರೈಕೆ ಜಾಲವನ್ನು ಮತ್ತು ವ್ಯಾಪಾರಕ್ಕೆ ಉತ್ತಮ ವ್ಯವಸ್ಥೆಯನ್ನು ಸೃಷ್ಟಿಸುತ್ತದೆ.

ಈ ಕಾರಿಡಾರ್ ನ ಮತ್ತೊಂದು ವೈಶಿಷ್ಟ್ಯವೆಂದರೆ ಈ ಮಾರ್ಗವನ್ನು ಆಫ್ರಿಕಾ ಖಂಡಕ್ಕೆ ಸಂಪರ್ಕಿಸುವುದು. ಈ ಮೂಲಕ ವಿಶ್ವದ ಬಡರಾಷ್ಟ್ರಗಳನ್ನು ಕಾರಿಡಾರ್​ಗೆ ಸಂಪರ್ಕಿಸಬಹುದು. ಈ ಕಾರಿಡಾರ್ ನಲ್ಲಿರುವ ದೇಶಗಳು ವಿಶ್ವದ ಪ್ರಮುಖ ಮಾರುಕಟ್ಟೆಗಳ ನಡುವಿನ ಸುಧಾರಿತ ಸಂಪರ್ಕಗಳ ಮೂಲಕ ಪ್ರಯೋಜನ ಪಡೆಯುತ್ತವೆ. ಇದು ಹಲವಾರು ಹೊಸ ವ್ಯಾಪಾರ ಅವಕಾಶಗಳನ್ನು ಒದಗಿಸುತ್ತದೆ. ಆದರೆ ಐಎಂಇಸಿ ಪ್ರಾರಂಭವಾಗುವ ಮೊದಲು, ಇಸ್ರೇಲ್-ಹಮಾಸ್ ಯುದ್ಧವು ಈ ಉದ್ದೇಶಿತ ಕಾರಿಡಾರ್ ಅನ್ನು ಅಪಾಯಕ್ಕೆ ಸಿಲುಕಿಸಿದೆ. ಇಸ್ರೇಲ್​ನ ಹೈಫಾ ಬಂದರು ಯುರೋಪ್ ಅನ್ನು ಸಂಪರ್ಕಿಸುವ ಈ ಕಾರಿಡಾರ್​ನ ಪ್ರಮುಖ ಕೊಂಡಿಯಾಗಿರುವುದೇ ಇದಕ್ಕೆ ಕಾರಣವಾಗಿದೆ.

ಇದಲ್ಲದೆ, ಟರ್ಕಿಯ ಅಧ್ಯಕ್ಷ ರಿಸೆಪ್ ಎರ್ಡೊಗನ್ ಅವರು ಈ ಆರ್ಥಿಕ ಕಾರಿಡಾರ್ ಟರ್ಕಿಯನ್ನು ಒಳಗೊಳ್ಳದಿದ್ದಕ್ಕಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರು ಇರಾಕ್ ಒಳಗೊಂಡ ಐಎಂಇಸಿಗೆ ಪರ್ಯಾಯ ಮಾರ್ಗದ ಯೋಜನೆಗಳನ್ನು ಘೋಷಿಸಿದ್ದಾರೆ. ಈ ಅಡೆತಡೆಗಳ ಹೊರತಾಗಿಯೂ, ಈ ಐಎಂಇಸಿ ಕಾರಿಡಾರ್ ಬಹಳ ಉಜ್ವಲ ಭವಿಷ್ಯವನ್ನು ಹೊಂದಿದೆ ಮತ್ತು ಏಷ್ಯಾ ಮತ್ತು ಯುರೋಪ್ ನಡುವಿನ ಸಾಮಾನ್ಯ ವ್ಯಾಪಾರ ಕೊಂಡಿಯಾಗಲಿದೆ. ಇತ್ತೀಚೆಗೆ ಇಟಲಿ ಚೀನಾ ಬೆಂಬಲಿತ ಬಿಆರ್​ಐ ನಿಂದ ಹಿಂದೆ ಸರಿದಿರುವುದು ಐಎಂಇಸಿಗೆ ದೊಡ್ಡ ಗೆಲುವಾಗಿದೆ.

ಭಾರತದ ದೃಷ್ಟಿಕೋನದಿಂದ ನೋಡುವುದಾದರೆ- ಈ ಕಾರಿಡಾರ್ ಪೂರ್ಣಗೊಂಡರೆ, ಇದು ಭಾರತಕ್ಕೆ ದೊಡ್ಡ ಮೂಲಸೌಕರ್ಯ ಉತ್ತೇಜನ ನೀಡಲಿದೆ. ಇದು ಸಂಪರ್ಕ, ಆರ್ಥಿಕ ಅಭಿವೃದ್ಧಿ, ಉದ್ಯೋಗ ಸೃಷ್ಟಿ ಮತ್ತು ಸಾಮಾನ್ಯವಾಗಿ ಎಲ್ಲಾ ಪಾಲುದಾರರಿಗೆ ಮತ್ತು ನಿರ್ದಿಷ್ಟವಾಗಿ ಭಾರತಕ್ಕೆ ಸಮೃದ್ಧಿಯನ್ನು ತರಲಿದೆ.

ಅಂತಿಮವಾಗಿ, ಈ ಐಎಂಇಸಿ ಸಂಬಂಧಪಟ್ಟ ಎಲ್ಲಾ ರಾಷ್ಟ್ರಗಳಿಗೆ ಒಳ್ಳೆಯದನ್ನೇ ಮಾಡಲಿರುವುದರಿಂದ ಎಲ್ಲ ರಾಷ್ಟ್ರಗಳು ಆದಷ್ಟು ಬೇಗ ತೀರ್ಮಾನಕ್ಕೆ ಬರಬಹುದು ಎಂದು ಆಶಿಸಲಾಗಿದೆ.

ಇದನ್ನೂ ಓದಿ: ಅರೆಸೈನಿಕ ಪಡೆಗಳು ಹಿಂದೆ ಸರಿಯುವವರೆಗೂ ಕದನವಿರಾಮವಿಲ್ಲ: ಸುಡಾನ್ ಸೇನಾ ಮುಖ್ಯಸ್ಥ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.