ETV Bharat / international

ವಿಶ್ವದ ಆರ್ಥಿಕತೆಯಲ್ಲಿ ಭಾರತ ಪ್ರಜ್ವಲಿಸುವ ತಾಣ: ವಿಶ್ವ ಆರ್ಥಿಕ ಪರಿಸ್ಥಿತಿಯ ಭವಿಷ್ಯದ ವರದಿ ಬಿಡುಗಡೆ

author img

By

Published : Jan 26, 2023, 4:16 PM IST

ವಿಶ್ವದ ಆರ್ಥಿಕತೆಯಲ್ಲಿ ಭಾರತವು 5ನೇ ಪ್ರಬಲ ರಾಷ್ಟ್ರವಾಗಿ ಹೊರಹೊಮ್ಮಿದೆ - ವಿಶ್ವಸಂಸ್ಥೆಯ ಉನ್ನತ ಆರ್ಥಿಕ ತಜ್ಞ ಹಮೀದ್ ರಶೀದ್

ಯುಎನ್ ಉನ್ನತ ಆರ್ಥಿಕ ತಜ್ಞ ಹಮೀದ್ ರಶೀದ್
ಯುಎನ್ ಉನ್ನತ ಆರ್ಥಿಕ ತಜ್ಞ ಹಮೀದ್ ರಶೀದ್

ವಿಶ್ವಸಂಸ್ಥೆ (ನ್ಯೂಯಾರ್ಕ್​) : ಪ್ರಸ್ತುತ ವಿಶ್ವದ ಆರ್ಥಿಕತೆಯಲ್ಲಿ ಭಾರತವು ಪ್ರಜ್ವಲಿಸುವ ತಾಣವಾಗಿದ್ದು, ಬಲವಾದ ಹೆಜ್ಜೆಯನ್ನು ಇಡುತ್ತಿದೆ. ಮುಂಬರುವ ವರ್ಷ ಶೇಕಡಾ 6.7ರಷ್ಟು ಅಭಿವೃದ್ಧಿ ಸಾಧಿಸಲಿದೆ ಎಂದು ಅಂದಾಜಿಸಲಾಗಿದೆ. ಇತರ ಜಿ-20 ಸದಸ್ಯ ರಾಷ್ಟ್ರಗಳಿಗೆ ಹೋಲಿಸಿದರೆ, ಭಾರತ ಅತಿವೇಗದ ಬೆಳವಣಿಗೆಯ ದರ ಹೊಂದಿದೆ ಎಂದು ವಿಶ್ವಸಂಸ್ಥೆಯ ಉನ್ನತ ಆರ್ಥಿಕ ತಜ್ಞ ಹಮೀದ್ ರಶೀದ್ ಅವರು ಹೇಳಿದ್ದಾರೆ.

2023ರ ವಿಶ್ವ ಆರ್ಥಿಕ ಪರಿಸ್ಥಿತಿ ಮತ್ತು ಭವಿಷ್ಯ ವರದಿಯನ್ನು ಬಿಡುಗಡೆ ಮಾಡುವ ಸಂದರ್ಭದಲ್ಲಿ ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ ಇಲಾಖೆಯ ಜಾಗತಿಕ ಆರ್ಥಿಕ ಮಾನಿಟರಿಂಗ್ ಶಾಖೆ, ಆರ್ಥಿಕ ವಿಶ್ಲೇಷಣೆ ಮತ್ತು ನೀತಿ ವಿಭಾಗದ ಮುಖ್ಯಸ್ಥ ಹಮೀದ್ ರಶೀದ್ ಮಾತನಾಡಿದರು. ಜಾಗತಿಕ ಆರ್ಥಿಕ ಮಂದಗತಿ ಹೂಡಿಕೆ, ಹೆಚ್ಚಿನ ಬಡ್ಡಿ ದರಗಳು ಹಾಗೂ ರಫ್ತುಗಳ ಮೇಲೆ ಕರಿನೆರಳು ಬಿದ್ದಿದೆ. 2023ರಲ್ಲಿ ಭಾರತದ ಜಿಡಿಪಿಯು ಶೇಕಡಾ 5.8ಕ್ಕೆ ತಲುಪಲಿದೆ ಎಂದು ಪ್ರಮುಖ ವರದಿ ಹೇಳಿದೆ.

ಭಾರತದ ಆರ್ಥಿಕ ಬೆಳವಣಿಗೆ : 'ಭಾರತದ ಆರ್ಥಿಕ ಬೆಳವಣಿಗೆಯು 2024ರಲ್ಲಿ ಶೇಕಡಾ 6.7ಕ್ಕೆ ಏರುವ ನಿರೀಕ್ಷೆಯಿದೆ. G-20 ಸದಸ್ಯ ರಾಷ್ಟ್ರಗಳಿಗೆ ಹೋಲಿಸಿದರೆ ಅತ್ಯಂತ ಹೆಚ್ಚಿನ ಬೆಳವಣಿಗೆಯಾಗಿದೆ' ಎಂದರು. ಗ್ರೂಪ್ ಆಫ್ ಟ್ವೆಂಟಿ (G-20) 19 ದೇಶಗಳನ್ನು ಒಳಗೊಂಡಿದೆ. (ಅರ್ಜೆಂಟೀನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಭಾರತ, ಇಂಡೋನೇಷ್ಯಾ, ಇಟಲಿ, ಜಪಾನ್, ರಿಪಬ್ಲಿಕ್ ಆಫ್ ಕೊರಿಯಾ, ಮೆಕ್ಸಿಕೋ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಟರ್ಕಿ, ಯುನೈಟೆಡ್ ಕಿಂಗ್ಡಮ್ ಮತ್ತು ಯುನೈಟೆಡ್ ಸ್ಟೇಟ್ಸ್ ಮತ್ತು ಯುರೋಪಿಯನ್ ಯೂನಿಯನ್).

ಸುಸ್ಥಿರ ಅಭಿವೃದ್ಧಿ ಗುರಿಗಳು : ಭಾರತವು ಹೆಚ್ಚು ಬಡಜನರನ್ನು ಹೊಂದಿದೆ. ದೇಶದ ಬೆಳೆವಣಿಗೆಗೆ ಉತ್ತೇಜನ ನೀಡಬೇಕಿದೆ. ಭಾರತವು ಈ ಬೆಳವಣಿಗೆ ದರ ಉಳಿಸಿಕೊಳ್ಳಲು ಸಾಧ್ಯವಾದರೆ, ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ ಅದು ತುಂಬಾ ಒಳ್ಳೆಯದು. ಜಾಗತಿಕವಾಗಿ ಬಡತನವನ್ನು ಹೋಗಲಾಡಿಸುವುದು ದೇಶದ ಗುರಿಯಾಗಬೇಕು. ಇದರಿಂದ ರಾಷ್ಟ್ರದ ಅಬಿವೃದ್ಧಿ ಸಾಧ್ಯ ಎಂದರು. ಭಾರತದ ಆರ್ಥಿಕತೆಯ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಶೀದ್ ಅವರು, ಭಾರತದ ಪ್ರಸ್ತುತ ಆರ್ಥಿಕ ಶಕ್ತಿಗೆ ಮೂರು ಅಂಶಗಳನ್ನು ಕಾರಣ ಎಂದು ತಿಳಿಸಿದರು.

ಭಾರತದ ನಿರುದ್ಯೋಗ ದರ ಕುಸಿತ: 'ಕಳೆದ ನಾಲ್ಕು ವರ್ಷಗಳಲ್ಲಿ ಭಾರತದ ನಿರುದ್ಯೋಗ ದರವು ಶೇಕಡಾ 6.4ಕ್ಕೆ ಗಣನೀಯವಾಗಿ ಇಳಿದಿದೆ' ಎಂದ ಅವರು, ದೇಶೀಯ ಬೇಡಿಕೆಯು ಸಾಕಷ್ಟು ಪ್ರಬಲವಾಗಿದೆ ಎಂದರು. ಭಾರತದ ಹಣದುಬ್ಬರವು ಕೂಡಾ ಗಮನಾರ್ಹವಾಗಿ ಕಡಿಮೆಯಾಗಿದೆ. ಪ್ರಸಕ್ತ ವರ್ಷ ಸುಮಾರು ಶೇಕಡಾ 5.5 ಹಾಗೂ 2024ರಲ್ಲಿ ಶೇಕಡಾ 5 ಎಂದು ನಿರೀಕ್ಷಿಸಲಾಗಿದೆ ಎಂದು ರಶೀದ್ ಮಾಹಿತಿ ನೀಡಿದರು.

ಭಾರತಕ್ಕೆ ಲಾಭದಾಯಕವಾಗಿರುವ ಅಂಶವೆಂದರೆ ಅದರ ಆಮದು ಬಿಲ್‌ಗಳು ಕಡಿಮೆಯಾಗಿದೆ. ವಿಶೇಷವಾಗಿ ಇಂಧನ ಆಮದು ವೆಚ್ಚವು ಹಿಂದಿನ ವರ್ಷಗಳಿಗಿಂತ ಕಡಿಮೆಯಾಗಿದೆ. ಇದು 2022 ಮತ್ತು 2023 ರಲ್ಲಿ ಭಾರತದ ಬೆಳವಣಿಗೆಯ ನಿರೀಕ್ಷೆಗೆ ಸಹಾಯ ಮಾಡಿದೆ ಎಂದು ಅವರು ಹೇಳಿದರು.

ದಕ್ಷಿಣ ಏಷ್ಯಾ ಪ್ರದೇಶದ ಇತರ ಆರ್ಥಿಕತೆಗಳಿಗೆ ಭವಿಷ್ಯವು ಹೆಚ್ಚು ಸವಾಲಾಗಿದೆ. ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಶ್ರೀಲಂಕಾ 2022 ರಲ್ಲಿ ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ ಹಣಕಾಸಿನ ನೆರವು ಕೋರಿದವು. ಚೀನಾವು 2023 ರ ಕ್ಯಾಲೆಂಡರ್ ವರ್ಷದಲ್ಲಿ 4.8 ರಷ್ಟು ಮತ್ತು 2024 ರಲ್ಲಿ 4.5 ರಷ್ಟು ಬೆಳವಣಿಗೆಯಾಗಲಿದೆ ಎಂದು ಅಂದಾಜಿಸಲಾಗಿದೆ.

ಓದಿ : ಸ್ಪೂರ್ತಿದಾಯಕ ಕಥೆ: ನೀರಿಗಾಗಿ ಪ್ರಪಂಚದಾದ್ಯಂತ ಮ್ಯಾರಾಥಾನ್​; ಜಲ ಸಂರಕ್ಷಣೆಯೇ ಇವರ ಗುರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.