ETV Bharat / international

ನಿಲ್ಲದ ಇಸ್ರೇಲ್​ ದಾಳಿ.. ಗಾಜಾಪಟ್ಟಿಯಲ್ಲಿ 8 ಸಾವಿರಕ್ಕೂ ಹೆಚ್ಚು ಸಾವು: ನಿರಾಶ್ರಿತರಿಗೆ ನೆರವಿನ ಹಸ್ತ

author img

By PTI

Published : Oct 30, 2023, 6:58 AM IST

ಮಾನವೀಯ ದೃಷ್ಟಿಯಿಂದ ಇಸ್ರೇಲ್​ ಭಾನುವಾರ ನೀರು, ಆಹಾರ ಮತ್ತು ಔಷಧವನ್ನು ಸಾಗಿಸುವ 33 ಟ್ರಕ್‌ಗಳು ಗಾಜಾಪಟ್ಟಿ ಪ್ರವೇಶಿಸಲು ಅವಕಾಶ ಕೊಟ್ಟಿದೆ.

ನಿಲ್ಲದ ಇಸ್ರೇಲ್​ ದಾಳಿ.. ಗಾಜಾಪಟ್ಟಿಯಲ್ಲಿ 8 ಸಾವಿರಕ್ಕೂ ಹೆಚ್ಚು ಸಾವು: ನಿರಾಶ್ರಿತರಿಗೆ ನೆರವಿನ ಹಸ್ತ
ನಿಲ್ಲದ ಇಸ್ರೇಲ್​ ದಾಳಿ.. ಗಾಜಾಪಟ್ಟಿಯಲ್ಲಿ 8 ಸಾವಿರಕ್ಕೂ ಹೆಚ್ಚು ಸಾವು: ನಿರಾಶ್ರಿತರಿಗೆ ನೆರವಿನ ಹಸ್ತ

ದೇರ್ ಅಲ್-ಬಲಾಹ್: ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧ ನಿಲ್ಲುವ ಲಕ್ಷಣಗಳು ಕಾಣಿಸುತ್ತಿಲ್ಲ. ಈ ಯುದ್ಧದಲ್ಲಿ ಇದುವರೆಗೂ ಪ್ಯಾಲಿಸ್ಟೈನ್​ನಲ್ಲಿ ಸುಮಾರು 8ಸಾವಿರಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಈ ನಡುವೆ ಯುದ್ಧದಿಂದ ಮನೆ ಕಳೆದುಕೊಂಡು ಬೀದಿ ಪಾಲಾದವರ ನೆರವಿಗೆ ಅಂತಾರಾಷ್ಟ್ರೀಯ ಸಮುದಾಯ ಬಂದಿದೆ. ಈಗಾಗಲೇ ಮೂರು ಡಜನ್ ಟ್ರಕ್‌ಗಳು ಗಾಜಾ ಪ್ರವೇಶಿಸಿವೆ. ಹೀಗೆ ಹರಿದು ಬರುತ್ತಿರುವ ಸಹಾಯ ಯಾವುದಕ್ಕೂ ಸಾಲುತ್ತಿಲ್ಲ.

ಇನ್ನೊಂದೆಡೆ ಇಸ್ರೇಲ್​ ಗಾಜಾಪಟ್ಟಿ ಮೇಲೆ ಬಾಂಬ್​ ದಾಳಿಯನ್ನು ಮುಂದುವರೆಸಿದ್ದು, ಹಮಾಸ್ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುತ್ತಿದೆ. ಹಮಾಸ್​​​ನ ಮೆಟ್ರೋ ಸುರಂಗಗಳನ್ನು ಟಾರ್ಗೆಟ್ ಮಾಡಿರುವ ಇಸ್ರೇಲ್ ಪಡೆಗಳು ವಾಯು ದಾಳಿಯ ಜತೆ ಎಚ್ಚರಿಕೆಯ ಭೂ ದಾಳಿ ನಡೆಸುತ್ತಿದೆ. ಪರಿಣಾಮ 8ಸಾವಿರಕ್ಕೂ ಹೆಚ್ಚು ಪ್ಯಾಲಿಸ್ಟೈನಿಯನ್ನರು ಪ್ರಾಣ ಕಳೆದುಕೊಂಡಿದ್ದಾರೆ. ಗಾಜಾ ಆರೋಗ್ಯ ಸಚಿವಾಲಯ ಭಾನುವಾರ ಈ ಅಂಕಿ- ಅಂಶವನ್ನು ನೀಡಿದೆ. ಇನ್ನು ಹಮಾಸ್​ ದಾಳಿಯಲ್ಲಿ 1400 ಇಸ್ರೇಲಿಗಳು ಮೃತಪಟ್ಟಿದ್ದಾರೆ. ಒಟ್ಟಾರೆ ಈ ಯುದ್ಧದಲ್ಲಿ ಇದುವರೆಗೂ ಅಂದಾಜು 10 ಸಾವಿರ ಪ್ರಾಣಗಳು ಬಲಿಯಾಗಿವೆ. ಈ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆಗಳಿವೆ.

ತುರ್ತು ಕದನ ವಿರಾಮ ಘೋಷಣೆ ಮಾಡುವಂತೆ ವಿಶ್ವಸಂಸ್ಥೆ ನಿರ್ಣಯ ಅಂಗೀಕರಿಸಿದ್ದರೂ ಇದಕ್ಕೆ ಬಗ್ಗದ ಇಸ್ರೇಲ್​ ಹಮಾಸ್ ವಿರುದ್ಧ ಯುದ್ಧವನ್ನು ಮುಂದುವರೆಸಿದೆ. ಇಸ್ರೇಲ್​ ಗಾಜಾಪಟ್ಟಿಗೆ ಇರುವ ಎಲ್ಲ ಸಂಪರ್ಕಗಳನ್ನು ತೆಗೆದು ಹಾಕುವ ದಾಳಿಯನ್ನು ಮುಂದುವರೆಸಿದೆ, ಈ ನಡುವೆ ಗಾಜಾಪಟ್ಟಿಯಲ್ಲಿ ಕಡಿತಗೊಂಡಿದ್ದ ಇಂಟರ್​ನೆಟ್​​​​ ಸೇವೆಗಳನ್ನು ಪುನಃ ಸ್ಥಾಪಿಸಲಾಗಿದೆ. ಮತ್ತೊಂದು ಕಡೆ ಮಾನವೀಯ ದೃಷ್ಟಿಯಿಂದ ಇಸ್ರೇಲ್​ ಭಾನುವಾರ ನೀರು, ಆಹಾರ ಮತ್ತು ಔಷಧವನ್ನು ಸಾಗಿಸುವ 33 ಟ್ರಕ್‌ಗಳು ಗಾಜಾಪಟ್ಟಿ ಪ್ರವೇಶಿಸಲು ಅವಕಾಶ ಕೊಟ್ಟಿದೆ, ಈ ಪರಿಣಾಮ ಈಜಿಪ್ಟ್‌ನಿಂದ ಸಹಾಯಧನದ ಟ್ರಕ್​ಗಳು ಗಾಜಾಪಟ್ಟಿ ಗಡಿ ದಾಟಿವೆ ಎಂದು ರಫಾ ಕ್ರಾಸಿಂಗ್‌ನಲ್ಲಿ ವಕ್ತಾರ ವೇಲ್ ಅಬೊ ಒಮರ್ ಅಸೋಸಿಯೇಟೆಡ್ ಪ್ರೆಸ್‌ಗೆ ತಿಳಿಸಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್‌ನ ಮುಖ್ಯ ಪ್ರಾಸಿಕ್ಯೂಟರ್ ಗಾಜಾ ನಾಗರಿಕರ ನೋವಿಗೆ ಕಳವಳ ವ್ಯಕ್ತಪಡಿಸಿದ್ದಾರೆ. ಇದು ಅತ್ಯಂತ ದುರಂತದ ದಿನಗಳು ಎಂದು ಕರೀಮ್ ಖಾನ್ ಹೇಳಿದ್ದಾರೆ. ಅಂತಾರಾಷ್ಟ್ರೀಯ ಕಾನೂನನ್ನು ಗೌರವಿಸುವಂತೆ ಖಾನ್ ಇಸ್ರೇಲ್‌ಗೆ ಕರೆ ನೀಡಿದ್ದಾರೆ. ಇದೇ ವೇಳೆ ಹಮಾಸ್​ ಅಕ್ಟೋಬರ್ 7 ರಂದು ಮಾಡಿದ ದಾಳಿ ಅಂತಾ ರಾಷ್ಟ್ರೀಯ ಮಾನವೀಯ ಕಾನೂನಿನ ಗಂಭೀರ ಉಲ್ಲಂಘನೆ ಎಂದು ಅವರು ಹೇಳಿದ್ದಾರೆ.

ಹೆಚ್ಚಿನ ಗಾಜಾ ನಿವಾಸಿಗಳು ಯುದ್ಧದಿಂದಾಗಿ ಗಾಜಾದಾ ದಕ್ಷಿಣ ಭಾಗಕ್ಕೆ ಪಲಾಯನ ಮಾಡಿದ್ದಾರೆ ಎಂದು ಇಸ್ರೇಲ್​ ಹೇಳಿದೆ. ಆದರೆ ಸಾವಿರ ಜನರು ಇನ್ನೂ ಉತ್ತರದಲ್ಲಿ ಉಳಿದಿದ್ದಾರೆ. ಇಸ್ರೇಲ್​ ದಾಳಿಯಿಂದಾಗಿ ಗಾಜಾದಲ್ಲಿ 14 ಲಕ್ಷಕ್ಕೂ ಹೆಚ್ಚಿನ ಜನರು ತಮ್ಮ ಮನೆಗಳನ್ನು ತೊರೆದಿದ್ದಾರೆ.

ಇದನ್ನು ಓದಿ: 8 ಸಾವಿರ ಅಫ್ಘನ್ ನಿರಾಶ್ರಿತರನ್ನು ಬಲವಂತವಾಗಿ ಹೊರಹಾಕಿದ ಪಾಕಿಸ್ತಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.