ETV Bharat / international

ಸಮಾಧಿಯಿಂದ ಪೂರ್ವಜರ ಅಸ್ಥಿ ಹೊರತೆಗೆದು ಬಟ್ಟೆ ತೊಡಿಸುವ ವಿಶೇಷ ಕುಟುಂಬಸ್ಥರು

author img

By

Published : Aug 19, 2022, 6:16 PM IST

Updated : Aug 19, 2022, 10:53 PM IST

ಸಮಾಧಿಗಳೆಂದರೆ ಅನೇಕರು ಭಯ ಪಡುತ್ತಾರೆ. ಆದರೆ, ಇಂಡೋನೇಷ್ಯಾದಲ್ಲಿ ಟೊರಾಜನ್ಸ್ ಜನಾಂಗವು ತಮ್ಮ ಪೂರ್ವಜರ ಅಸ್ಥಿಗಳನ್ನು ಮಣ್ಣಿನಡಿಯಿಂದ ಹೊರತೆಗೆದು ಅವುಗಳನ್ನು ಗೌರವಿಸುವ ಆಚರಣೆಯನ್ನು ಅನೇಕ ವರ್ಷಗಳಿಂದ ಅನುಸರಿಸಿಕೊಂಡು ಬಂದಿದ್ದಾರೆ.

Dressing the dead Indonesian villagers clean corpses in afterlife ritual
ಸಮಾಧಿಗಳಿಂದ ಪೂರ್ವಜರ ಅಸ್ಥಿಗಳನ್ನು ಹೊರತೆಗೆದು ಸ್ವಚ್ಛ ಮಾಡಿ ಬಟ್ಟೆ ತೊಡಿಸುವ ಕುಟುಂಬಸ್ಥರು

ಟಿಕಾಲಾ (ಇಂಡೋನೇಷ್ಯಾ): ಜಗತ್ತಿನಲ್ಲಿ ಹಲವು ರೀತಿಯ ಜನಾಂಗಗಳಿದ್ದು, ಅವುಗಳ ಆಚರಣೆಗಳು ಕೂಡ ಭಿನ್ನ-ವಿಭಿನ್ನವಾಗಿಯೇ ಇವೆ. ಅಂತೆಯೇ, ಇಂಡೋನೇಷ್ಯಾದ ದ್ವೀಪದಲ್ಲಿರುವ ಜನಾಂಗವೊಂದು ವಿಚಿತ್ರ ಪದ್ಧತಿ ಆಚರಿಸುತ್ತದೆ. ಇಲ್ಲಿ ಜನರು ಪೂರ್ವಜರ ಅಸ್ಥಿಪಂಜರಗಳನ್ನು ಸಮಾಧಿಯಿಂದ ಹೊರತೆಗೆದು ಅವುಗಳಿಗೆ ಬಟ್ಟೆ ಹಾಕಿಸುತ್ತಾರೆ. ಮತ್ತೆ ಕೆಲವರು ಅದೇ ಅಸ್ಥಿ ಪಂಜರಗಳೊಂದಿಗೆ ಫೋಟೋಗಳಿಗೂ ಪೋಸ್​ ಕೊಡುತ್ತಾರೆ.

ಇಂತಹ ವಿಚಿತ್ರ ಆಚರಣೆ ಇಲ್ಲಿನ ಸುಲವೆಸಿ ದ್ವೀಪದ ಎರಡು ಸಣ್ಣ ಪಟ್ಟಣಗಳಲ್ಲಿ ನಡೆಯುತ್ತದೆ. ಈ ಪದ್ಧತಿ ಆಚರಣೆಗೆ ಮಾನೆನೆ ಎಂದು ಕರೆಯಲಾಗುತ್ತದೆ. ಇದರ ಭಾಗವಾಗಿ ಇಲ್ಲಿನ ಸಮಾಧಿಗಳಿಂದ ನೂರಾರು ಶವಗಳನ್ನು ಹೊರತೆಗೆಯಲಾಗುತ್ತದೆ. ಅವರ ಆತ್ಮಗಳನ್ನು ಗೌರವಿಸಲು ಮತ್ತು ಕಾಣಿಕೆ ಅರ್ಪಿಸುವ ನಿಟ್ಟಿನಲ್ಲಿ ಅಸ್ಥಿಗಳಿಗೆ ಬಟ್ಟೆಗಳನ್ನು ತೊಡಿಸಲಾಗುತ್ತದೆ.

"ಮಾನೆನೆ ಆಚರಣೆ ನಿಮಿತ್ತ ನಾವು ತಮ್ಮ ಹಿರಿಯರ ಸಮಾಧಿ ಕೋಣೆಗಳನ್ನು ತೆರೆಯುತ್ತೇವೆ. ನಂತರ ಇಡೀ ಸಮಾಧಿ ಕೋಣೆಗಳು ಮತ್ತು ಅದರ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸುವ ಮೂಲಕ ಮಾನೆನೆ ಆರಂಭವಾಗುತ್ತದೆ. ಬಳಿಕ ಪೂರ್ವಜನರ ಅಸ್ಥಿ ಪಂಜರಗಳನ್ನು ಸ್ವಚ್ಛ ಮಾಡಿ ಅವರ ಬಟ್ಟೆಗಳನ್ನು ಬದಲಾಯಿಸುತ್ತೇವೆ. ಇದಕ್ಕೂ ಮನ್ನ ಅಸ್ಥಿ ಪಂಜರಗಳನ್ನು ಸೂರ್ಯನ ಬಿಸಿಲಿನಲ್ಲಿ ಒಣಗಿಸುತ್ತೇವೆ" ಎನ್ನುತ್ತಾರೆ ಕುಟುಂಬದ ಸದಸ್ಯರಲ್ಲಿ ಒಬ್ಬರಾದ ಸುಲ್ಲೆ ಟೋಸೇ.

"ನಮ್ಮ ಪ್ರೀತಿಪಾತ್ರರ ದೇಹಗಳು ಸುರಕ್ಷಿತವಾಗಿರಲೆಂದು ಅವುಗಳನ್ನು ಶವಪೆಟ್ಟಿಗೆಯಲ್ಲಿ ಇರಿಸುತ್ತೇವೆ. ಇವುಗಳನ್ನು ಪರ್ವತದ ಮೇಲೆ ಸಮಾಧಿ ಕೋಣೆ ಮಾಡಿಸಿಡಲಾಗಿರುತ್ತದೆ. ಈ ಆಚರಣೆಯು ಅಗಲಿದವರಿಗೆ ತಮ್ಮ ಮಕ್ಕಳು ಮತ್ತು ಮೊಮ್ಮಕ್ಕಳಿಂದ ಸಲ್ಲಿಸುವ ಕೃತಜ್ಞತೆಯ ಸಂಕೇತ. ಇದರಿಂದ ಹಿರಿಯರ ಆತ್ಮಗಳು ಕೂಡ ಕುಟುಂಬಸ್ಥರ ಜೀವನ ಚೆನ್ನಾಗಿರಲಿ ಮತ್ತು ಸುರಕ್ಷಿತವಾಗಿರಲಿ, ಶಾಂತಿ ಮತ್ತು ಸಂತೋಷದಿಂದ ಇರಲಿ ಆಶೀರ್ವದಿಸುತ್ತವೆ" ಎಂದು ಗ್ರಾಮದ ಮುಖ್ಯಸ್ಥ ರಹಮಾನ್ ಬಾಡಸ್ ಹೇಳುತ್ತಾರೆ.

ವಿಭಿನ್ನ ಕಾಣಿಕೆಗಳು: ಸಮಾಧಿಯಿಂದ ಹೊರತೆಗೆದ ಅಸ್ಥಿಗಳಿಗೆ ಕುಟುಂಬಸ್ಥರು ತಮ್ಮದೇ ರೀತಿಯಲ್ಲಿ ವಿಭಿನ್ನವಾದ ಕಾಣಿಕೆಗಳನ್ನು ಅರ್ಪಿಸುತ್ತಾರೆ. ಒಂದು ಕುಟುಂಬವು ಹೊಸದಾಗಿ ಹೊರತೆಗೆದ ತಮ್ಮ ಹಿರಿಯರಿಗೆ ಸಿಗರೇಟ್​ ನೀಡಿದರೆ, ಇನ್ನೊಂದು ಕುಟುಂಬ ಕನ್ನಡಕವನ್ನು ತಮ್ಮ ಪೂರ್ವಜರ ಅಸ್ಥಿಗೆ ಹಾಕಿ ಗೌರವಿಸುತ್ತದೆ.

ಈ ಮನೆನೆ ಆಚರಣೆಯಲ್ಲಿ ತೊಡಗಿರುವ ಟೊರಾಜನ್ಸ್ ಒಂದು ಜನಾಂಗೀಯ ಗುಂಪಾಗಿದ್ದು, ಸುಲವೆಸಿ ದ್ವೀಪದಲ್ಲಿ ಸುಮಾರು ಒಂದು ಮಿಲಿಯನ್ ಜನರಿದ್ದಾರೆ. ಈ ಆಚರಣೆಯು ಸಾಮಾನ್ಯವಾಗಿ ಕೆಲವು ವರ್ಷಗಳಿಗೊಮ್ಮೆ ಜುಲೈ ಅಥವಾ ಆಗಸ್ಟ್‌ನಲ್ಲಿ ನಡೆಯುತ್ತದೆ. ಈ ಸಮಯದಲ್ಲಿ ತಮ್ಮ ಹೆತ್ತವರು, ಪೂರ್ವಜರಿಗೆ ಗೌರವವನ್ನು ಅರ್ಪಿಸುತ್ತಾರೆ. ಈ ಪದ್ಧತಿಯನ್ನು ಆಚರಿಸದ ಕೆಲ ಕುಟುಂಬಗಳು ಸಂಕಷ್ಟವನ್ನೂ ಎದುರಿಸಿವೆ ಅಂತೆ.

ಹೀಗಾಗಿ ಅನೇಕ ಕುಟುಂಬಗಳು ಈ ಆಚರಣೆಗಾಗಿಯೇ ಮೃತದೇಹಗಳನ್ನು ಸಂರಕ್ಷಿಸಲಾಗುತ್ತದೆ. ಈ ಹಿಂದೆ ಹುಳಿ ವಿನೆಗರ್ ಮತ್ತು ಚಹಾ ಎಲೆಗಳಂತಹ ನೈಸರ್ಗಿಕ ಪರಿಹಾರಗಳನ್ನು ಬಳಸಿಕೊಂಡು ಮಮ್ಮೀಕರಣ ಮಾಡಲಾಗುತ್ತದೆ. ಇನ್ನು, ಕೆಲವು ಮೃತದೇಹಗಳು ಮಮ್ಮೀಕರಣ (ಸಂರಕ್ಷಿಸುವ ಕಾರ್ಯಾಗಾರ)ದಿಂದ ಹಾಗೆ ಉಳಿದಿದ್ದರೆ, ಮತ್ತೆ ಕೆಲ ಅಸ್ಥಿಪಂಜರಗಳು ಕೆಟ್ಟು ಹೋಗುತ್ತವೆ. ಇತ್ತೀಚಿಗೆ ಅನೇಕ ಕುಟುಂಬಗಳು ಮೃತದೇಹಗಳನ್ನು ಸಂರಕ್ಷಿಸಲು ಫಾರ್ಮಾಲ್ಡಿಹೈಡ್ ದ್ರಾವಣದ ಚುಚ್ಚುಮದ್ದು ಕೊಡುತ್ತಾರೆ.

ಇದನ್ನೂ ಓದಿ: ವನ್ಯಜೀವಿ ಕಳ್ಳಸಾಗಣೆಗೆ ಪ್ರಯತ್ನ... ಏರ್​ಪೋರ್ಟ್​ನಲ್ಲಿ ಭಾರತೀಯ ವ್ಯಕ್ತಿಯ ಬಂಧನ, ಮುದ್ದಾದ ಪ್ರಾಣಿಗಳು ವಶ

Last Updated : Aug 19, 2022, 10:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.