ETV Bharat / international

ರಿಪಬ್ಲಿಕನ್ ಅಧ್ಯಕ್ಷೀಯ ಅಭಿಯಾನ: ಟ್ರಂಪ್‌ಗೆ ಮಹತ್ವದ ಗೆಲುವು; ವೈಟ್‌ಹೌಸ್‌ ರೇಸ್‌ ತ್ಯಜಿಸಿದ ವಿವೇಕ್‌ ರಾಮಸ್ವಾಮಿ

author img

By PTI

Published : Jan 16, 2024, 10:44 AM IST

2024ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕನ್ ಪಕ್ಷದ ನಾಮನಿರ್ದೇಶನಕ್ಕಾಗಿ ನಡೆಯುತ್ತಿರುವ ಪೈಪೋಟಿಯಲ್ಲಿ ಡೊನಾಲ್ಡ್ ಟ್ರಂಪ್ ತಮ್ಮ ಮೊದಲ ಗೆಲುವು ದಾಖಲಿಸಿದರು. ಅಯೋವಾ ಕಾಕಸಸ್‌ನಲ್ಲಿ ತನ್ನ ಎದುರಾಳಿಗಳನ್ನು ಅವರು ಮಣಿಸಿದ್ದಾರೆ.

Donald Trump  Iowa Republican caucuses  ರಿಪಬ್ಲಿಕನ್ ಪಕ್ಷದ ನಾಮನಿರ್ದೇಶನ  ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್​(ಅಮೆರಿಕ): ರಿಪಬ್ಲಿಕನ್ ಪಕ್ಷದ ನಾಮನಿರ್ದೇಶನ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತನಗೆ ನಿರ್ಣಾಯಕವಾಗಿದ್ದ ಅಯೋವಾ ಕಾಕಸ್ ಚುನಾವಣೆಯಲ್ಲಿ ಮಹತ್ವದ ಗೆಲುವು ಪಡೆದರು. ಈ ಮೂಲಕ ತನಗೆ ಪಕ್ಷದ ಮೇಲಿನ ಹಿಡಿತ ತಪ್ಪಿಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ. ಫ್ಲೋರಿಡಾ ಗವರ್ನರ್ ರಾನ್ ಡಿಸಾಂಟಿಸ್ ಮತ್ತು ಯುಎನ್ ಮಾಜಿ ರಾಯಭಾರಿ ನಿಕ್ಕಿ ಹ್ಯಾಲೆ ಎರಡನೇ ಸ್ಥಾನ ಅಲಂಕರಿಸಿದ್ದಾರೆ. ಕಣದಲ್ಲಿದ್ದ ಮತ್ತೊಬ್ಬ ಭಾರತೀಯ-ಅಮೆರಿಕನ್ ಉದ್ಯಮಿ ವಿವೇಕ್ ರಾಮಸ್ವಾಮಿ ಅಧ್ಯಕ್ಷೀಯ ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ.

ಕಾಕಸ್‌ನಲ್ಲಿ ಇದೀಗ ಮೈ ಕೊರೆಯುವ ಚಳಿ ಇದೆ. ಭಾರಿ ಹಿಮಪಾತದಿಂದಾಗಿ ಜನರು ವಾಹನ ಚಲಾಯಿಸಲು ಕೂಡಾ ತೊಂದರೆ ಅನುಭವಿಸುತ್ತಿದ್ದಾರೆ. ಆದರೆ, ಗ್ರ್ಯಾಂಡ್ ಓಲ್ಡ್ (ಜಿಒಪಿ) ರಿಪಬ್ಲಿಕನ್ ಪಾರ್ಟಿ (ಜಿಒಪಿ) ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದು, ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಶಾಲೆ, ಚರ್ಚ್‌ ಮತ್ತು ಸಮುದಾಯ ಕೇಂದ್ರಗಳಲ್ಲಿ ನಡೆದ ಸಭೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು.

ಡೊನಾಲ್ಡ್ ಟ್ರಂಪ್ ಸತತ ಮೂರನೇ ಬಾರಿಗೆ ರಿಪಬ್ಲಿಕನ್ ಪಕ್ಷದ ನಾಮನಿರ್ದೇಶನಕ್ಕಾಗಿ ಉತ್ಸುಕರಾಗಿದ್ದಾರೆ. ಅದರ ಭಾಗವಾಗಿ ಕಾರ್ಯಕಾರಿಣಿಯಲ್ಲಿ ನಡೆದ ಸ್ಪರ್ಧೆಯಲ್ಲಿ ಸುಮಾರು ಶೇ.50ರಷ್ಟು ಮತಗಳನ್ನು ಪಡೆದಿರುವ ಅವರು ಮೊದಲ ವಿಜಯ ದಾಖಲಿಸಿದರು. ರಿಪಬ್ಲಿಕನ್ ಪಕ್ಷದ ನಾಮನಿರ್ದೇಶನಕ್ಕಾಗಿ ತಿಂಗಳ ಕಾಲ ನಡೆದ ಚುನಾವಣೆಯಲ್ಲಿ ಇದು ಮೊದಲ ಚುನಾವಣೆ ಎಂಬುದು ಗಮನಾರ್ಹ. ವಿಜೇತರು ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಅಭ್ಯರ್ಥಿಯನ್ನು ಎದುರಿಸಲಿದ್ದಾರೆ. ಆದಾಗ್ಯೂ, ರಿಪಬ್ಲಿಕನ್ ಪಕ್ಷದ ನಾಮನಿರ್ದೇಶನ ಪ್ರಕ್ರಿಯೆಯಲ್ಲಿ ಟ್ರಂಪ್‌ ಕೈ ಮೇಲಾಗುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಭವಿಷ್ಯ ನುಡಿದಿದ್ದಾರೆ.

ಸಮೀಕ್ಷೆಗಳು ಹೇಳುವುದೇನು?: ಎಪಿ ವೋಟ್‌ ಕ್ಯಾಸ್ಟ್ ವಿಶ್ಲೇಷಣೆಯ ಪ್ರಕಾರ, ಅಯೋವಾದ ನಗರಗಳು, ಸಣ್ಣ ಪಟ್ಟಣಗಳು ​​ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಟ್ರಂಪ್ ಮುಂಚೂಣಿಯಲ್ಲಿದ್ದಾರೆ. ಇವಾಂಜೆಲಿಕಲ್ ಕ್ರಿಶ್ಚಿಯನ್ನರು ಮತ್ತು ಇತರೆ ಮತದಾರರಲ್ಲಿ ಟ್ರಂಪ್‌ರ ಬೆಂಬಲ ಹೆಚ್ಚಾಗಿದೆ. 'ಮೇಕ್ ಅಮೆರಿಕ ಗ್ರೇಟ್ ಅಗೇನ್' ಎಂಬ ಘೋಷವಾಕ್ಯ ಟ್ರಂಪ್​ಗೆ ಸರಿ ಹೊಂದುತ್ತದೆ. ಹೀಗಿದ್ದರೂ ಉಪನಗರಗಳಲ್ಲಿ ಟ್ರಂಪ್ ಸ್ವಲ್ಪ ಹಿಂದುಳಿದಿದ್ದಾರೆ. ಆ ಪ್ರದೇಶಗಳಲ್ಲಿ ಹತ್ತರಲ್ಲಿ ನಾಲ್ವರು ಮಾತ್ರ ಅವರನ್ನು ಬೆಂಬಲಿಸುತ್ತಾರೆ. ಕಾಕಸಸ್‌ನಲ್ಲಿ ಭಾಗವಹಿಸಿದ 1,500 ಮತದಾರರನ್ನು ಸಮೀಕ್ಷೆ ಮಾಡಿದ ನಂತರ ಎಪಿ ವೋಟ್‌ ಕ್ಯಾಸ್ಟ್ ಈ ವರದಿ ಬಿಡುಗಡೆ ಮಾಡಿದೆ.

ಟ್ರಂಪ್‌ಗೆ ಕಾನೂನು ಸಂಕಷ್ಟ: ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಟ್ರಂಪ್ ಅವರನ್ನು ನಿಷೇಧಿಸಿರುವ ಕುರಿತು ಯುಎಸ್ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ. 2020ರ ಚುನಾವಣೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಮತ್ತು ಜನವರಿ 6, 2021ರಂದು ನಡೆದ ರಾಜಧಾನಿಯಲ್ಲಿನ ಘಟನಾವಳಿಗಳಲ್ಲಿ ಟ್ರಂಪ್ ವಿರುದ್ಧ ಹಲವಾರು ರಾಜ್ಯಗಳಲ್ಲಿ ತನಿಖೆ ನಡೆಯುತ್ತಿದೆ. ಆದರೆ, ಟ್ರಂಪ್ ಇವೆಲ್ಲವನ್ನೂ ರಾಜಕೀಯವಾಗಿ ಬಳಸಿಕೊಂಡು ಪ್ರಚಾರ ಮಾಡುತ್ತಿದ್ದಾರೆ. ಇವುಗಳಲ್ಲಿ ಯಾವುದೂ ಟ್ರಂಪ್ ಜನಪ್ರಿಯತೆಯನ್ನು ಕಡಿಮೆ ಮಾಡಿಲ್ಲ ಎನ್ನಲಾಗುತ್ತಿದೆ. ಬೆಂಬಲಿಗರೆಲ್ಲರೂ ಈ ಆರೋಪಗಳನ್ನು ರಾಜಕೀಯ ಪ್ರೇರಿತ ಎಂದೇ ಪರಿಗಣಿಸಿದ್ದಾರೆ.

ಇದನ್ನೂ ಓದಿ: ಮಾರ್ಚ್‌ 15ರೊಳಗೆ ಮಿಲಿಟರಿ ಹಿಂಪಡೆಯಿರಿ: ಭಾರತಕ್ಕೆ ಮಾಲ್ಡೀವ್ಸ್​ ಕೋರಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.