ETV Bharat / international

ಪಾಕಿಸ್ತಾನದಲ್ಲಿ 'ಮಾರ್ಷಲ್ ಲಾ' ಮರುಕಳಿಸುವ ಸಾಧ್ಯತೆ: ಮಾಜಿ ಪ್ರಧಾನಿ ಅಬ್ಬಾಸಿ ಎಚ್ಚರಿಕೆ

author img

By

Published : Apr 23, 2023, 6:52 PM IST

ಪಾಕಿಸ್ತಾನದಲ್ಲಿ ಮತ್ತೊಮ್ಮೆ ಮಿಲಿಟರಿ ದಂಗೆ ನಡೆದು, ದೇಶದ ಆಡಳಿತವನ್ನು ಸೇನಾಪಡೆ ವಹಿಸಿಕೊಳ್ಳುವ ಸಾಧ್ಯತೆಯಿದೆ ಎಂದು ದೇಶದ ಮಾಜಿ ಪ್ರಧಾನಿ ಶಾಹಿದ್ ಖಾಕನ್ ಅಬ್ಬಾಸಿ ಎಚ್ಚರಿಕೆ ನೀಡಿದ್ದಾರೆ.

Pakistan crisis deep enough for military takeover, warns former PM
Pakistan crisis deep enough for military takeover, warns former PM

ಇಸ್ಲಾಮಾಬಾದ್ : ದೇಶದ ಪ್ರಸ್ತುತ ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟಿನ ಸ್ಥಿತಿಗಳು ದೇಶದಲ್ಲಿ ಮತ್ತೊಮ್ಮೆ ಮಿಲಿಟರಿ ಆಡಳಿತವನ್ನು ತರುವ ಎಲ್ಲಾ ಸಾಧ್ಯತೆಗಳಿವೆ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ಶಾಹಿದ್ ಖಾಕನ್ ಅಬ್ಬಾಸಿ ಎಚ್ಚರಿಸಿದ್ದಾರೆ. ಇದಕ್ಕೂ ಕಡಿಮೆ ತೀವ್ರದ ಬಿಕ್ಕಟ್ಟುಗಳ ಸಂದರ್ಭದಲ್ಲಿ ಕೂಡ ಈ ಹಿಂದೆ ಸೇನೆ ಮಧ್ಯ ಪ್ರವೇಶಿಸಿದ್ದನ್ನು ನೆನಪಿಸಿರುವ ಅವರು, ಹೀಗಾಗದಂತೆ ತಡೆಗಟ್ಟಲು ರಾಜಕೀಯ ಪಕ್ಷಗಳು ಚರ್ಚೆಗಳನ್ನು ಪ್ರಾರಂಭಿಸುವುದು ಅಗತ್ಯ ಎಂದು ಹೇಳಿದ್ದಾರೆ. ರಾಜಕೀಯ ಆಡಳಿತ ವ್ಯವಸ್ಥೆಯು ವಿಫಲವಾದರೆ ಅಥವಾ ಸಂಸ್ಥೆಗಳು ಮತ್ತು ರಾಜಕೀಯ ನಾಯಕತ್ವದ ನಡುವೆ ಸಂಘರ್ಷ ಉಂಟಾದಾಗ ಮಾರ್ಷಲ್ ಲಾ ಬರುವ ಸಾಧ್ಯತೆ ಯಾವಾಗಲೂ ಇದ್ದೇ ಇರುತ್ತದೆ ಎಂದು ಪಿಎಂಎಲ್​-ಎನ್​ ನಾಯಕ ಅಬ್ಬಾಸಿ ಸ್ಪಷ್ಟಪಡಿಸಿದ್ದಾರೆ.

ಪ್ರಜೆಗಳು ಮತ್ತು ಸರ್ಕಾರದ ನಡುವಿನ ಘರ್ಷಣೆಯು ತುಂಬಾ ವಿಕೋಪಕ್ಕೆ ಹೋದರೆ ಅರಾಜಕತೆ ಉಂಟಾಗುವ ಎಚ್ಚರಿಕೆ ನೀಡಿದ ಅಬ್ಬಾಸಿ, ಅಂಥ ಪರಿಸ್ಥಿತಿಯಲ್ಲಿ ಸೈನ್ಯವು ಅಧಿಕಾರವನ್ನು ವಹಿಸಿಕೊಳ್ಳಬಹುದು ಎಂದು ಹೇಳಿದರು. ಇದು ಅನೇಕ ದೇಶಗಳಲ್ಲಿ ನಡೆದಿದ್ದು, ರಾಜಕೀಯ ಮತ್ತು ಸಾಂವಿಧಾನಿಕ ವ್ಯವಸ್ಥೆಯು ವಿಫಲವಾದಾಗ, ಸಂವಿಧಾನೇತರ ಘಟನೆಗಳು ನಡೆಯುತ್ತವೆ ಎಂದರು. ಆದಾಗ್ಯೂ, ಮಿಲಿಟರಿಯು ಮಾರ್ಷಲ್ ಲಾ ಜಾರಿಗೊಳಿಸುವ ಆಯ್ಕೆಯನ್ನು ಪರಿಗಣಿಸುತ್ತಿಲ್ಲ ಎಂದು ಅವರು ಆಶಿಸಿದರು. ಸೇನೆಯು ಅದನ್ನು ಪರಿಗಣಿಸುತ್ತಿದೆ ಎಂದು ನಾನು ಭಾವಿಸುವುದಿಲ್ಲ, ಆದರೆ ಅವರಿಗೆ ಯಾವುದೇ ಆಯ್ಕೆಯಿಲ್ಲವಾದಾಗ ಮಾರ್ಷಲ್ ಲಾ ಬರಬಹುದು ಎಂದರು. ಒಂದು ವೇಳೆ ಸೇನಾಪಡೆಯು ಅಧಿಕಾರವನ್ನು ಪಡೆದುಕೊಂಡಿದ್ದೇ ಆದಲ್ಲಿ ಅದರಿಂದ ದೇಶಕ್ಕೆ ಒಳಿತಿಗಿಂತ ಹಾನಿಯೇ ಹೆಚ್ಚಾಗಲಿದೆ ಎಂದು ಅಬ್ಬಾಸಿ ಎಚ್ಚರಿಕೆ ನೀಡಿದರು.

ಭಾರತೀಯ ಟಿವಿ ಚಾನೆಲ್ ಪ್ರಸಾರ ಮಾಡದಂತೆ ನಿರ್ಬಂಧ: ಭಾರತೀಯ ಚಾನೆಲ್‌ಗಳನ್ನು ಪ್ರಸಾರ ಮಾಡುವುದನ್ನು ನಿಲ್ಲಿಸುವಂತೆ ಪಾಕಿಸ್ತಾನದ ಎಲೆಕ್ಟ್ರಾನಿಕ್ ಮಾಧ್ಯಮ ನಿಯಂತ್ರಣ ಪ್ರಾಧಿಕಾರ (ಪಿಇಎಂಆರ್‌ಎ) ಶುಕ್ರವಾರ ದೇಶದಾದ್ಯಂತ ಸ್ಥಳೀಯ ಕೇಬಲ್ ಟಿವಿ ಆಪರೇಟರ್‌ಗಳಿಗೆ ಆದೇಶಿಸಿದೆ. ತನ್ನ ಆದೇಶಗಳನ್ನು ಉಲ್ಲಂಘಿಸುವುದು ಕಂಡುಬಂದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದೂ ಅದು ಎಚ್ಚರಿಸಿದೆ. ಹೇಳಿಕೆಯೊಂದರಲ್ಲಿ, ಈ ಹಿಂದೆ ಹಲವಾರು ಆಪರೇಟರ್‌ಗಳು ತಾನು ಮತ್ತು ಸುಪ್ರೀಂ ಕೋರ್ಟ್ ನಿಗದಿಪಡಿಸಿದ ನಿಯಮಗಳನ್ನು ಉಲ್ಲಂಘಿಸಿರುವುದು ಕಂಡುಬಂದಿದೆ ಎಂದು ಪಿಇಎಂಆರ್‌ಎ ಉಲ್ಲೇಖಿಸಿದೆ. ಶುಕ್ರವಾರ, ಭಾರತೀಯ ಚಾನೆಲ್‌ಗಳನ್ನು ಪ್ರಸಾರ ಮಾಡುವ ಕೇಬಲ್ ಆಪರೇಟರ್‌ಗಳ ಮೇಲೆ ಕ್ರಮ ಕೈಗೊಳ್ಳುವಂತೆ ಪಿಇಎಂಆರ್‌ಎ ತನ್ನ ಪ್ರಾದೇಶಿಕ ಕಚೇರಿಗಳಿಗೆ ಆದೇಶಿಸಿದೆ.

ಈದ್ ಸಂಭ್ರಮಾಚರಣೆಗೆ ಹಣದುಬ್ಬರ ಅಡ್ಡಿ: ಪಾಕಿಸ್ತಾನದ ಸಂವೇದನಾಶೀಲ ಬೆಲೆ ಸೂಚಕ (SPI) ಆಧಾರದ ಮೇಲೆ ವರ್ಷದಿಂದ ವರ್ಷಕ್ಕೆ ಶೇಕಡಾ 47.23 ರಷ್ಟು ಹಣದುಬ್ಬರ ಹೆಚ್ಚಳವಾಗಿದೆ. ಏಪ್ರಿಲ್ 19, 2023 ಕ್ಕೆ ಕೊನೆಗೊಳ್ಳುವ ವಾರದ ವೇಳೆಗೆ ಈ ಮಟ್ಟದ ಹಣದುಬ್ಬರ ದಾಖಲಾಗಿದೆ. ಹೆಚ್ಚಿನ ಹಣದುಬ್ಬರದ ಕಾರಣದಿಂದ ಬಡ ಹಾಗೂ ಮಧ್ಯಮ ವರ್ಗದ ಪಾಕಿಸ್ತಾನಿಯರಿಗೆ ಅಗತ್ಯ ವಸ್ತುಗಳನ್ನು ಸಹ ಕೊಳ್ಳಲು ಆಗುತ್ತಿಲ್ಲ. ಈದ್ ಆಚರಣೆಯ ಸಮಯದಲ್ಲಿ ಇಂಥ ಆರ್ಥಿಕ ಬಿಕ್ಕಟ್ಟು ಎದುರಾಗಿರುವುದು ಪಾಕಿಸ್ತಾನವು ಕಂಗಾಲಾಗುವಂತೆ ಮಾಡಿದೆ. ಗೋಧಿ ಹಿಟ್ಟಿನ ಬೆಲೆ ಶೇ 144, ಹೈಸ್ಪೀಡ್ ಡೀಸೆಲ್ ಶೇ 103, ಚಹಾ ಶೇ 104, ಆಲೂಗಡ್ಡೆ ಶೇ 99, ಬಾಳೆಹಣ್ಣು ಶೇ 98, ಮೊಟ್ಟೆ ಶೇ 99 ಮತ್ತು ಗ್ಯಾಸ್ ಬೆಲೆ ಶೇ 108 ರಷ್ಟು ಏರಿಕೆಯಾಗಿದೆ ಎಂದು ಪಾಕಿಸ್ತಾನ ಸ್ಟ್ಯಾಟಿಸ್ಟಿಕ್ಸ್ ಬ್ಯೂರೋದ ಡೇಟಾ ಹೇಳಿದೆ.

ಇದನ್ನೂ ಓದಿ : ಭಾರತದ ಟಿವಿ ಚಾನೆಲ್​ಗಳಿಗೆ ಪಾಕಿಸ್ತಾನದಲ್ಲಿ ನಿರ್ಬಂಧ: ಕಠಿಣ ಕ್ರಮಕ್ಕೆ ಮುಂದಾದ ಪೆಮ್ರಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.