ETV Bharat / international

'ವ್ಯಾಸಂಗದ ವೀಸಾ'ಗಾಗಿ ತೋರಿಸಬೇಕಾದ ಕನಿಷ್ಠ ಬ್ಯಾಂಕ್ ಬ್ಯಾಲೆನ್ಸ್​ ದ್ವಿಗುಣಗೊಳಿಸಿದ ಕೆನಡಾ

author img

By ETV Bharat Karnataka Team

Published : Dec 8, 2023, 1:34 PM IST

ಅಧ್ಯಯನ ವೀಸಾ ಪಡೆಯಲು ತೋರಿಸಬೇಕಾದ ಕನಿಷ್ಠ ಬ್ಯಾಂಕ್ ಬ್ಯಾಲೆನ್ಸ್​ ಮೊತ್ತವನ್ನು ಕೆನಡಾ ಸರ್ಕಾರ ದ್ವಿಗುಣಗೊಳಿಸಿದೆ.

Indian students to suffer as Canada doubles fund requirement for study visa
Indian students to suffer as Canada doubles fund requirement for study visa

ಟೊರೊಂಟೊ : ಅಧ್ಯಯನ ವೀಸಾ ಪಡೆಯಲು ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ತಮ್ಮ ಬ್ಯಾಂಕ್ ಖಾತೆಯಲ್ಲಿ ತೋರಿಸಬೇಕಾದ ಹಣದ ಮೊತ್ತವನ್ನು ಕೆನಡಾ ಸರ್ಕಾರ ದ್ವಿಗುಣಗಳಿಸಿದೆ. ಇದರಿಂದ ಪ್ರಮುಖವಾಗಿ ಭಾರತೀಯ ವಿದ್ಯಾರ್ಥಿಗಳಿಗೆ ಹೆಚ್ಚಿನ ಸಂಕಷ್ಟ ಎದುರಾಗಿದೆ ಎಂದು ವರದಿಗಳು ತಿಳಿಸಿವೆ.

ಕೆನಡಾಕ್ಕೆ ಅಧ್ಯಯನ ವೀಸಾ ಪಡೆಯ ಬಯಸುವ ವಿದ್ಯಾರ್ಥಿ ಆ ದೇಶಕ್ಕೆ ಹೋದ ನಂತರ ಆರಂಭಿಕ ಜೀವನ ವೆಚ್ಚ ಭರಿಸಲು ತನ್ನ ಖಾತೆಯಲ್ಲಿ ಕನಿಷ್ಠ $10,000 ಬ್ಯಾಲೆನ್ಸ್ ತೋರಿಸಬೇಕಿತ್ತು. ಆದರೆ 2024 ರಿಂದ ವಿದ್ಯಾರ್ಥಿಗಳು ತಮ್ಮ ಒಂದು ವರ್ಷದ ಬೋಧನಾ ಶುಲ್ಕವನ್ನು ಹೊರತುಪಡಿಸಿ ತಮ್ಮ ಖಾತೆಯಲ್ಲಿ ಕನಿಷ್ಠ $ 20,635 ಬ್ಯಾಲೆನ್ಸ್ ತೋರಿಸಬೇಕಿದೆ. ವಿದ್ಯಾರ್ಥಿಗಳು ತಮ್ಮೊಂದಿಗೆ ಕುಟುಂಬದ ಒಬ್ಬ ಸದಸ್ಯರನ್ನು ಕರೆತಂದರೆ ಅವರಿಗಾಗಿ ಹೆಚ್ಚುವರಿಯಾಗಿ $ 4,000 ತೋರಿಸಬೇಕಾಗುತ್ತದೆ.

ಗುರುವಾರ ಈ ಘೋಷಣೆ ಮಾಡಿದ ವಲಸೆ ಸಚಿವ ಮಾರ್ಕ್ ಮಿಲ್ಲರ್, "ಸೆಪ್ಟೆಂಬರ್ 2024 ಕ್ಕೆ ಮುಂಚಿತವಾಗಿ ಮಾನ್ಯತೆ ಪಡೆದ ಕಲಿಕಾ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಅಗತ್ಯ ಇರುವಷ್ಟು ಸೌಲಭ್ಯಗಳನ್ನು ಒದಗಿಸಲು ಸಾಧ್ಯವಾಗುವಂತೆ ಮಾಡಲು ನಾವು ಈ ಬಾರಿ ವೀಸಾಗಳನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತಿದ್ದೇವೆ" ಎಂದು ಹೇಳಿದರು.

ಪ್ರಸ್ತುತ ಕೆನಡಾದಲ್ಲಿ ಅಧ್ಯಯನ ಮಾಡುತ್ತಿರುವ ಸುಮಾರು 8,00,000 ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ಪೈಕಿ 3,20,000 ಭಾರತೀಯರೇ ಇದ್ದಾರೆ. ಇದರಲ್ಲಿ ಪಂಜಾಬ್ ವಿದ್ಯಾರ್ಥಿಗಳ ಪ್ರಮಾಣ ಸರಿಸುಮಾರು ಶೇಕಡಾ 70 ರಷ್ಟಿದೆ.

ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಭಾರಿ ಒಳಹರಿವು ವಸತಿ ಬಿಕ್ಕಟ್ಟಿಗೆ ಕಾರಣವಾಗಿರುವ ವಿಷಯವನ್ನು ಉಲ್ಲೇಖಿಸಿದ ಸಚಿವರು, "ವಸತಿ ಬಿಕ್ಕಟ್ಟಿಗೆ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳನ್ನು ದೂಷಿಸುವುದು ತಪ್ಪು. ಆದರೆ ಅವರಿಗೆ ವಸತಿ ಸೌಲಭ್ಯದ ಏರ್ಪಾಟು ಮಾಡದೇ ಅವರನ್ನು ಕೆನಡಾಕ್ಕೆ ಬರಲು ಆಹ್ವಾನಿಸುವುದು ಸಹ ತಪ್ಪಾಗುತ್ತದೆ. ಹೀಗಾಗಿ ಎಷ್ಟು ವಿದ್ಯಾರ್ಥಿಗಳಿಗೆ ವಸತಿ ಹಾಗೂ ಇತರ ಸೌಲಭ್ಯಗಳನ್ನು ಏರ್ಪಾಟು ಮಾಡಲು ಸಾಧ್ಯವೋ ಅಷ್ಟು ಸಂಖ್ಯೆಯ ವಿದ್ಯಾರ್ಥಿಗಳನ್ನು ಮಾತ್ರ ಕಲಿಕಾ ಸಂಸ್ಥೆಗಳು ಕರೆಸಿಕೊಳ್ಳಲಿ ಎಂಬುದು ನಮ್ಮ ನಿರೀಕ್ಷೆಯಾಗಿದೆ" ಎಂದು ಹೇಳಿದರು.

ಅಂತಾರಾಷ್ಟ್ರೀಯ ವಿದ್ಯಾರ್ಥಿಗಳನ್ನು ಆಕರ್ಷಿಸಲು ಕೆನಡಾದಾದ್ಯಂತ ತಲೆಯೆತ್ತಿರುವ ನಕಲಿ ಕಾಲೇಜುಗಳನ್ನು ಮುಚ್ಚುವುದಾಗಿ ಸಚಿವರು ಭರವಸೆ ನೀಡಿದರು. ಅಧ್ಯಯನ ವೀಸಾಗಳನ್ನು ಕಡಿಮೆ ಮಾಡುವುದಾಗಿ ಹೇಳಿದ ಅವರು, "ಪ್ರಾಂತ್ಯಗಳು ಮತ್ತು ಪ್ರದೇಶಗಳು ಇದನ್ನು ಮಾಡಲು ಸಾಧ್ಯವಾಗದಿದ್ದರೆ, ನಾವೇ ಅದನ್ನು ಮಾಡಲಿದ್ದೇವೆ" ಎಂದರು. ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ವಾರಕ್ಕೆ 20 ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡುವ ಮಿತಿಯನ್ನು ಏಪ್ರಿಲ್ 30, 2024 ರವರೆಗೆ ವಿಸ್ತರಿಸಲಾಗಿದೆ ಎಂದು ಸಚಿವ ಮಾರ್ಕ್ ಮಿಲ್ಲರ್ ತಿಳಿಸಿದರು.

ಇದನ್ನೂ ಓದಿ : ಗಾಂಜಾದಿಂದ ಔಷಧ ತಯಾರಿಕೆಗೆ ಅನುಮತಿ ನೀಡಿದ ಜಪಾನ್ ಸರ್ಕಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.