ETV Bharat / international

ಗಾಜಾ ಆಸ್ಪತ್ರೆ ಮೇಲೆ ಇಸ್ರೇಲ್​ ದಾಳಿ ಮಾಡಿಲ್ಲ, ಬೇರೆ ಉಗ್ರರ ಗುಂಪಿನಿಂದ ಕೃತ್ಯ: ಅಮೆರಿಕದ ಅಧ್ಯಕ್ಷ ಜೋ ಬೈಡನ್​

author img

By ETV Bharat Karnataka Team

Published : Oct 18, 2023, 3:51 PM IST

Updated : Oct 18, 2023, 4:27 PM IST

ಯುದ್ಧದ ನಡುವೆ ಇಸ್ರೇಲ್​ಗೆ ಭೇಟಿ ನೀಡಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್, ಗಾಜಾ ಆಸ್ಪತ್ರೆಯ ಮೇಲಿನ ದಾಳಿಯ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ.

ಗಾಜಾ ಆಸ್ಪತ್ರೆ ಮೇಲೆ ದಾಳಿ
ಗಾಜಾ ಆಸ್ಪತ್ರೆ ಮೇಲೆ ದಾಳಿ

ಅಮೆರಿಕದ ಅಧ್ಯಕ್ಷ ಜೋ ಬೈಡನ್​ ಮಾತು

ಜೆರುಸಲೇಂ: 500 ಕ್ಕೂ ಅಧಿಕ ಮಂದಿ ಸಾವಿಗೆ ಕಾರಣವಾದ ಗಾಜಾದ ಆಸ್ಪತ್ರೆಯ ಮೇಲಿನ ಬಾಂಬ್​ ದಾಳಿಯನ್ನು ಇಸ್ರೇಲ್​ ನಡೆಸಿಲ್ಲ. ಇದು ಬೇರೆ ಗುಂಪಿನ ಕೈವಾಡ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್​ ಹೇಳಿದ್ದಾರೆ. ಇಂದು (ಬುಧವಾರ) ಇಸ್ರೇಲ್‌ಗೆ ಆಗಮಿಸಿರುವ ಅಮೆರಿಕ ಅಧ್ಯಕ್ಷರು, ಇಸ್ರೇಲ್​ ಪ್ರಧಾನಿ ಬೆಂಜಮಿನ್​ ನೆತನ್ಯಾಹು ಜೊತೆಗೆ ಮಾತುಕತೆ ನಡೆಸಿದ ಬಳಿಕ ಮಹತ್ವದ ಹೇಳಿಕೆ ನೀಡಿದ್ದಾರೆ.

ಗಾಜಾ ಪಟ್ಟಿಯ ಆಸ್ಪತ್ರೆಯಲ್ಲಿ ಬಾಂಬ್​ ದಾಳಿಯಾಗಿ 500 ಕ್ಕೂ ಅಧಿಕ ಮಂದಿ ಸಾವಿಗೆ ಇಸ್ರೇಲ್‌ ಕಾರಣವಲ್ಲ ಎಂದು ತೋರುತ್ತಿದೆ. ನಾನು ನೋಡಿದ್ದನ್ನು ಆಧರಿಸಿ ಈ ಮಾತನ್ನು ಹೇಳುತ್ತಿದ್ದೇನೆ. ಈ ಭೀಕರ ಸ್ಫೋಟವನ್ನು ಇತರ ಮಾರುಕ ಗುಂಪುಗಳಿಂದ ಮಾಡಲ್ಪಟ್ಟಿದೆ ಎಂದು ಕಾಣುತ್ತದೆ ಎಂದು ಬೈಡನ್ ಹೇಳಿದ್ದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ.

ಮಾರಣಾಂತಿಕ ಸ್ಫೋಟಕ್ಕೆ ಕಾರಣವೇನು ಎಂಬುದನ್ನು ಬೈಡನ್​ ಖಚಿತಪಡಿಸಿಲ್ಲವಾದರೂ, ಸ್ಫೋಟದ ಹಿಂದೆ ಬಹಳಷ್ಟು ಜನರು ಇರುವ ಶಂಕೆ ಇದೆ. ಹೀಗಾಗಿ ಇಸ್ರೇಲ್ ಈ ದಾಳಿ ಮಾಡಿದ ಎಂದು ಹೇಳಲಾಗದು ಎಂದಿದ್ದಾರೆ.

ಇಸ್ರೇಲ್​ಗೆ ಅಮೆರಿಕ ಬೆಂಬಲ: ಗಾಜಾ ಆಸ್ಪತ್ರೆಯ ಸ್ಫೋಟವು ಇಸ್ರೇಲಿಗಳಿಂದ ನಡೆದಿಲ್ಲ ಎಂಬುದರ ಬಗ್ಗೆ ಅಮೆರಿಕದ ಅಧ್ಯಕ್ಷ ಹೆಚ್ಚಿನ ವಿವರ ನೀಡದಿದ್ದರೂ, ಇಸ್ರೇಲ್​ಗೆ ತಮ್ಮ ಬೆಂಬಲ ಇರಲಿದೆ ಎಂದು ಹೇಳಿದ್ದಾರೆ. ಅಮೆರಿಕ ಇಸ್ರೇಲಿಗಳೊಂದಿಗೆ ನಿಂತಿದೆ. ಗಾಜಾ ಆಸ್ಪತ್ರೆಯ ದಾಳಿಗೆ ಇಡೀ ಅಮೆರಿಕ ದುಖಿಃತವಾಗಿದೆ. ಇದನ್ನು ಯಾರೂ ಸಹಿಸಿಕೊಳ್ಳಲಾರರು. ಆದರೆ, ಹಮಾಸ್​ ದಾಳಿಯನ್ನೂ ನಾವು ಸಮರ್ಥಿಸಬಾರದು. ಅಕ್ಟೋಬರ್​ 7 ರಂದು ಹಮಾಸ್​ ನಡೆಸಿದ ಉಗ್ರ ಕೃತ್ಯ ಖಂಡನೀಯ ಎಂದು ಅವರು ಟೀಕಿಸಿದರು.

ಇಸ್ರೇಲ್​ಗೆ ಬೆಂಬಲ ನೀಡಿದ ಅಮೆರಿಕದ ಅಧ್ಯಕ್ಷರಿಗೆ ಪ್ರಧಾನಿ ಬೆಂಜಮಿನ್​ ನೆತನ್ಯಾಹು ಅವರು ಧನ್ಯವಾದ ಸಲ್ಲಿಸಿದರು. ಸಂಕಷ್ಟದಲ್ಲಿರುವ ಇಸ್ರೇಲ್​ಗೆ ಪರವಾಗಿ ನಿಂತಿದ್ದಕ್ಕೆ ನಮ್ಮ ಜನರ ಪರವಾಗಿ ಅಭಾರಿಯಾಗಿದ್ದೇನೆ. ಹಮಾಸ್ ಅನ್ನು ಸೋಲಿಸುವ ಸಂಕಲ್ಪದಲ್ಲಿ ದೇಶದ ಜನರು ಒಗ್ಗೂಡಿದ್ದಾರೆ. ಇದು ನಾಗರಿಕ ಮತ್ತು ಅನಾಗರಿಕತೆ ನಡುವಿನ ಯುದ್ಧ ಎಂದು ಅವರು ವ್ಯಾಖ್ಯಾನಿಸಿದರು.

ಆಸ್ಪತ್ರೆಯ ಮೇಲೆ ಇಸ್ರೇಲ್​ ನಡೆಸಿದ ದಾಳಿಯಿಂದಾಗಿಯೇ ನೂರಾರು ಜನರು ಸಾವಿಗೀಡಾಗಿದ್ದಾರೆ ಎಂದು ಹಮಾಸ್ ನಡೆಸುತ್ತಿರುವ ಗಾಜಾ ಆರೋಗ್ಯ ಸಚಿವಾಲಯವು ಆರೋಪಿಸಿದೆ. ಇದನ್ನು ಇಸ್ರೇಲಿ ಸೇನೆಯು ನಿರಾಕರಿಸಿದೆ. ಮತ್ತೊಂದು ಉಗ್ರಗಾಮಿ ಗುಂಪಾದ ಪ್ಯಾಲೆಸ್ಟೈನಿಯನ್ ಇಸ್ಲಾಮಿಕ್ ಜಿಹಾದ್‌ನಿಂದ ತಪ್ಪಾಗಿ ಹಾರಿದ ರಾಕೆಟ್ ಆಸ್ಪತ್ರೆಯ ಮೇಲೆ ಬಿದ್ದಿದೆ. ಹೀಗಾಗಿ ಭೀಕರ ಸಾವು ನೋವು ಉಂಟಾಗಿದೆ ಎಂದು ಇಸ್ರೇಲ್​ ಹೇಳಿದೆ. ಈ ಆರೋಪವನ್ನು ಪ್ಯಾಲೆಸ್ಟೈನಿಯನ್ ಇಸ್ಲಾಮಿಕ್ ಜಿಹಾದ್‌ ತಳ್ಳಿಹಾಕಿದೆ.

ಇದನ್ನೂ ಓದಿ: Israel- Hamas conflict: ಹಮಾಸ್ ದಾಳಿಯಲ್ಲಿ ಎಪಿ ಮಾಜಿ ವಿಡಿಯೋ ಜರ್ನಲಿಸ್ಟ್, ಕುಟುಂಬದ ಸದಸ್ಯರು ಸಾವು

Last Updated : Oct 18, 2023, 4:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.