ಢಾಕಾ: ಬಾಂಗ್ಲಾದೇಶದ ಕಂಟೈನರ್ ಡಿಪೋದಲ್ಲಿ ಸಂಭವಿಸಿದ ಭೀಕರ ಬೆಂಕಿ ಅವಘಡದಲ್ಲಿ 40 ಜನರು ಸಜೀವ ದಹನವಾಗಿದ್ದು, 450 ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಬಾಂಗ್ಲಾದೇಶದ ಚಿತ್ತಗಾಂಗ್‌ನ ಸೀತಾಕುಂಡ ಉಪಝಿಲಾದ ಖಾಸಗಿ ಕಂಟೈನರ್ ಡಿಪೋದಲ್ಲಿ ಶನಿವಾರ ರಾತ್ರಿ ಕಂಟೇನರ್ ಸ್ಫೋಟಗೊಂಡು ಇಡೀ ಡಿಪೋವನ್ನು ಆವರಿಸಿಕೊಂಡಿದೆ.
ಪ್ರಾಥಮಿಕ ತನಿಖೆಯ ಪ್ರಕಾರ, ಶನಿವಾರ ರಾತ್ರಿ 9 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತ್ತು. ಅಗ್ನಿ ಅವಘಡಕ್ಕೆ ರಾಸಾಯನಿಕ ಸೋರಿಕೆಯೇ ಕಾರಣವಾರಗಿರಬಹುದು ಎಂದು ಶಂಕಿಸಲಾಗಿದೆ. ಕಂಟೈನರ್ಗಳಲ್ಲಿ ಹೈಡ್ರೋಜನ್ ಪೆರಾಕ್ಸೈಡ್ ಸೇರಿದಂತೆ ಇತರೆ ರಾಸಾಯನಿಕಗಳಿದ್ದವು. ಒಂದು ಕಂಟೈನರ್ನಲ್ಲಿ ರಾಸಾಯನಿಕ ಸೋರಿಕೆಯಾಗಿ ಬೆಂಕಿ ಕಾಣಿಸಿಕೊಂಡಿದೆ. ಬಳಿಕ ಅಲ್ಲಿ ಸ್ಫೋಟ ಸಂಭವಿಸಿ ಉಳಿದ ಕಂಟೈನರ್ಗಳು ಸ್ಫೋಟಗೊಂಡಿವೆ.
ದುರ್ಘಟನೆಯಲ್ಲಿ 40 ಮೃತದೇಹಗಳನ್ನು ಇಲ್ಲಿನ ಆಸ್ಪತ್ರೆಗೆ ರವಾನಿಸಲಾಗಿದೆ. 350 ಮಂದಿಗೆ ತುರ್ತು ಚಿಕಿತ್ಸಾ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 19 ಅಗ್ನಿಶಾಮಕ ದಳ ವಾಹನಗಳಿಂದ ಬೆಂಕಿಯನ್ನು ನಂದಿಸಲಾಗುತ್ತಿದೆ. 6 ಆ್ಯಂಬುಲೆನ್ಸ್ಗಳು ಗಾಯಾಳುಗಳ ರಕ್ಷಣೆಗೆ ಇಳಿದಿವೆ. ಭಾರಿ ಸ್ಫೋಟದಿಂದ ಕಂಟೈನರ್ ಅಕ್ಕಪಕ್ಕದ ಮನೆಗಳಿಗೂ ಹಾನಿಯುಂಟಾಗಿದೆ. ಮನೆಗಳು ಅದುರಿದ್ದು, ಗಾಜುಗಳು ಒಡೆದಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಅವರ ಪೈಕಿ 20 ಜನರ ಸ್ಥಿತಿ ಗಂಭೀರವಾಗಿದ್ದು, ಶೇ.60-90ರಷ್ಟು ಸುಟ್ಟ ಗಾಯಗಳಿಂದ ಬಳಲುತ್ತಿದ್ದಾರೆ. ಮೃತರ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಪಿಎಂ ಹಸೀನಾ ಸಾಂತ್ವನ: ಘಟನೆಗೆ ಸಂಬಂಧಿಸಿದಂತೆ ಪ್ರಧಾನಿ ಶೇಖ್ ಹಸೀನಾ ಅವರು ಮೃತ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ರಕ್ಷಣಾ ಕಾರ್ಯಾಚರಣೆ ಚುರುಕುಗೊಳಿಸಲು ಸೂಚಿಸಿದ್ದಾರೆ. ಅಧಿಕಾರಿಗಳು ಉನ್ನತ ಮಟ್ಟದ ತನಿಖಾ ಸಮಿತಿಯನ್ನು ರಚಿಸಿ 3 ದಿನಗಳಲ್ಲಿ ವರದಿ ಸಲ್ಲಿಸುವಂತೆ ಆದೇಶಿಸಿದ್ದಾರೆ.
ಪರಿಹಾರ ಘೋಷಣೆ: ಕಂಟೈನರ್ ಸ್ಫೋಟ ಅಪಘಾತದಲ್ಲಿ ಮೃತಪಟ್ಟ ಕುಟುಂಬಸ್ಥರಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಲಾಗಿದೆ. ಗಾಯಾಳುಗಳಿಗೆ 1 ಲಕ್ಷ ನೆರವು ಘೋಷಿಸಲಾಗಿದೆ.
ಇದನ್ನೂ ಓದಿ: ಕತ್ತು ಸೀಳಿ 9 ವರ್ಷದ ಬಾಲಕಿ ಕೊಲೆ: ರೇಪ್ ಬಳಿಕ ಹತ್ಯೆ ಶಂಕೆ