ETV Bharat / international

ಏಪ್ರಿಲ್ 23; ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನ

author img

By

Published : Apr 22, 2020, 1:30 PM IST

1995 ರಲ್ಲಿ ಪ್ಯಾರಿಸ್​ನಲ್ಲಿ ನಡೆದ ಯುನೆಸ್ಕೊ ಸಾಮಾನ್ಯ ಸಭೆಯಲ್ಲಿ ಏ.23 ರಂದು ವಿಶ್ವ ಪುಸ್ತಕ ಮತ್ತು ಹಕ್ಕುಸ್ವಾಮ್ಯ ದಿನ ಆಚರಿಸಲು ನಿರ್ಧರಿಸಲಾಯಿತು. ಅಲ್ಲಿಗೆ ಈ ಬಾರಿ ನಾವು 25 ನೇ ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನ ಆಚರಿಸುತ್ತಿದ್ದೇವೆ.

WORLD BOOK AND COPY RIGHT DAY - 23 APRIL
WORLD BOOK AND COPY RIGHT DAY - 23 APRIL

ಏ.23 ರಂದು ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನವನ್ನಾಗಿ ಆಚರಿಸಲಾಗುತ್ತದೆ. ಓದುವಿಕೆಯ ಅಭಿರುಚಿ ಹೆಚ್ಚಿಸಲು, ಪ್ರಕಾಶನಕ್ಕೆ ಉತ್ತೇಜನ ನೀಡಲು ಹಾಗೂ ಕೃತಿಸ್ವಾಮ್ಯಗಳ ಸಂರಕ್ಷಣೆಗಾಗಿ ಈ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಜಗತ್ತಿನ ಖ್ಯಾತ ಲೇಖಕರಲ್ಲಿ ಕೆಲವರಾದ ವಿಲಿಯಂ ಶೇಕ್ಸಪೀಯರ್, ಮಿಗ್ವೆಲ್ ಸರ್ವಾಂಟೆಸ್ ಹಾಗೂ ಇಂಕಾ ಗಾರ್ಸಿಲಾಸೊ ಡೆ ಲಾ ವೆಗಾ ಇವರೆಲ್ಲ ತೀರಿಕೊಂಡ ದಿನವಾದ ಏ.23 ರಂದೇ ವಿಶ್ವ ಪುಸ್ತಕ ದಿನ ಆಚರಿಸುವುದು ಸೋಜಿಗದ ವಿಷಯ.

ಯುನೆಸ್ಕೊ ವತಿಯಿಂದ ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, 1995 ರ ಏ.23 ರಂದು ಇದನ್ನು ಆರಂಭಿಸಲಾಯಿತು. ಪುಸ್ತಕ ದಿನಾಚರಣೆ ಅಂಗವಾಗಿ ಪ್ರತಿವರ್ಷ ವಿಶ್ವದ ಒಂದು ನಗರವನ್ನು ವಿಶ್ವದ ಪುಸ್ತಕ ರಾಜಧಾನಿಯನ್ನಾಗಿ ಯುನೆಸ್ಕೊ ಘೋಷಿಸುತ್ತದೆ. ಈ ಬಾರಿ ಮಲೇಶಿಯಾ ರಾಜಧಾನಿ ಕೌಲಾಲಂಪುರ್ ವಿಶ್ವದ ಪುಸ್ತಕ ರಾಜಧಾನಿ ಪಟ್ಟದ ಗೌರವ ಪಡೆದುಕೊಂಡಿದೆ.

ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನದ ಉದ್ದೇಶಗಳು

ವಿಶ್ವ ಪುಸ್ತಕ ದಿನದಂದು ಪುಸ್ತಕ ಹಾಗೂ ಲೇಖಕ ಇಬ್ಬರಿಗೂ ಗೌರವ ಸಲ್ಲಿಸಲಾಗುತ್ತದೆ. ಜೊತೆಗೆ ಓದುಗರ ಸಂಖ್ಯೆಯನ್ನು ಹೆಚ್ಚಿಸುವ ಹಾಗೂ ಓದುವಿಕೆಯ ಮಾಧುರ್ಯವನ್ನು ತಿಳಿಸುವ ವಿವಿಧ ಚಟುವಟಿಕೆಗಳನ್ನು ಈ ದಿನದಂದು ಹಮ್ಮಿಕೊಳ್ಳಲಾಗುತ್ತದೆ. ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಕ್ಕೆ ಪುಸ್ತಕ ಹಾಗೂ ಲೇಖಕರ ಕೊಡುಗೆಯನ್ನು ಜಗತ್ತಿಗೆ ತಿಳಿಸಲು ಈ ದಿನಾಚರಣೆ ಸಹಕಾರಿಯಾಗಿದೆ. ಯುನೆಸ್ಕೊ ನೀಡುವ ಸಹಿಷ್ಣುತೆಯ ಸೇವೆಯಲ್ಲಿ ಮಕ್ಕಳ ಮತ್ತು ಯುವಜನರ ಸಾಹಿತ್ಯ ಪುರಸ್ಕಾರವನ್ನು ಈ ದಿನದಂದು ಪ್ರಕಟಿಸಲಾಗುತ್ತದೆ.

1995 ರಲ್ಲಿ ಪ್ಯಾರಿಸ್​ನಲ್ಲಿ ನಡೆದ ಯುನೆಸ್ಕೊ ಸಾಮಾನ್ಯ ಸಭೆಯಲ್ಲಿ ಏ.23 ರಂದು ವಿಶ್ವ ಪುಸ್ತಕ ಮತ್ತು ಹಕ್ಕುಸ್ವಾಮ್ಯ ದಿನ ಆಚರಿಸಲು ನಿರ್ಧರಿಸಲಾಯಿತು. ಅಲ್ಲಿಗೆ ಈ ಬಾರಿ ನಾವು 25 ನೇ ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನ ಆಚರಿಸುತ್ತಿದ್ದೇವೆ.

ಕೃತಿಸ್ವಾಮ್ಯ ಎಂದರೇನು?

ಲೇಖಕ ಅಥವಾ ಬರಹಗಾರರಿಗೆ ಅವರು ರಚಿಸಿದ ಬರಹ ಅಥವಾ ಇನ್ನಾವುದೇ ಮಾಹಿತಿಯ ಮೇಲೆ ಕಾನೂನಾತ್ಮಕ ಹಕ್ಕು ನೀಡುವುದೇ ಕೃತಿಸ್ವಾಮ್ಯವಾಗಿದೆ. ತನ್ನ ಕೃತಿಯನ್ನು ಪ್ರಕಟಿಸಲು ಅಥವಾ ನಕಲು ಮಾಡಲು ಮತ್ತೊಬ್ಬರಿಗೆ ಅಧಿಕಾರ ನೀಡಲು ಈ ಕಾಯ್ದೆ ಅವಕಾಶ ಮಾಡಿಕೊಡುತ್ತದೆ. ಅಂದರೆ ಮೂಲತಃ ಇದು ಬೌದ್ಧಿಕ ಆಸ್ತಿ ಹಕ್ಕಾಗಿದೆ.

ಪುಸ್ತಕ ಹಾಗೂ ಕೃತಿಸ್ವಾಮ್ಯಗಳ ರಕ್ಷಣೆಯಲ್ಲಿ ಮಹತ್ತರ ಕಾರ್ಯ ಮಾಡುತ್ತಿರುವ ಯುನೆಸ್ಕೊ ಕ್ರಿಯಾಶೀಲತೆ, ಸೃಜನಶೀಲತೆ ಮತ್ತು ವೈವಿಧ್ಯತೆಗಳಿಗೆ ಒತ್ತು ನೀಡುತ್ತಿದೆ. ಹಾಗೆಯೇ ಎಲ್ಲರಿಗೂ ಜ್ಞಾನದ ಸಮಾನ ಹಂಚಿಕೆಯಾಗುವಂತೆ ಶ್ರಮಿಸುತ್ತಿದೆ. ಸೃಜನಾತ್ಮಕ ನಗರಗಳ ಜಾಲ ನಿರ್ಮಾಣ, ಸಾಕ್ಷರತೆಯ ಉತ್ತೇಜನ, ಮೊಬೈಲ್ ಮೂಲಕ ಕಲಿಕೆ ಮತ್ತು ವೈಜ್ಞಾನಿಕ ಹಾಗೂ ಶೈಕ್ಷಣಿಕ ಜ್ಞಾನ ಸಂಪನ್ಮೂಲಗಳು ಮುಕ್ತವಾಗಿ ಲಭ್ಯವಾಗುವಂತೆ ಮಾಡುವಲ್ಲಿ ಯುನೆಸ್ಕೊ ಪ್ರಮುಖ ಪಾತ್ರ ವಹಿಸಿದೆ.

ಸಾಹಿತ್ಯ ಕ್ಷೇತ್ರದ ಪ್ರಮುಖ ಪಾಲುದಾರರಾಗಿರುವ ಲೇಖಕ, ಪ್ರಕಾಶಕ, ಶಿಕ್ಷಕ, ಲೈಬ್ರರಿಯನ್, ಖಾಸಗಿ ಹಾಗೂ ಸರ್ಕಾರಿ ಸಂಸ್ಥೆಗಳು, ಮಾನವ ಹಕ್ಕು ಸ್ವಯಂ ಸೇವಾ ಸಂಸ್ಥೆಗಳು, ಸಮೂಹ ಮಾಧ್ಯಮ ಹೀಗೆ ಸಮಾನ ಮನಸ್ಕ ಎಲ್ಲರನ್ನೂ ಒಂದೇ ಜಾಗತಿಕ ವೇದಿಕೆಯಡಿ ತರಲು ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನಾಚರಣೆ ಸಹಕಾರಿಯಾಗಿದೆ.

ಕೋವಿಡ್-19 ಸಮಯದಲ್ಲಿ ಡಿಜಿಟಲ್ ಲೈಬ್ರರಿಗಳ ಪಾತ್ರ

ಕೋವಿಡ್​-19 ವಿರುದ್ಧ ಇಡೀ ಜಗತ್ತು ಹೋರಾಡುತ್ತಿರುವ ಸಮಯದಲ್ಲಿ, ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಶಾಲೆ-ಕಾಲೇಜುಗಳು ಸ್ಥಗಿತಗೊಂಡಿವೆ. ಇದರಿಂದ ವಿಶ್ವದ ಶೇ.90 ರಷ್ಟು ಮಕ್ಕಳ ಕಲಿಕೆ ಸ್ತಬ್ಧವಾಗಿದೆ. ಇದು ಮಾತ್ರವಲ್ಲದೆ ಇನ್ನಿತರ ವಲಯಗಳ ಲಕ್ಷಾಂತರ ಜನ ಕಲಿಕೆಯಿಂದ ವಂಚಿತರಾಗುತ್ತಿದ್ದಾರೆ. ಹೀಗಾಗಿ ಜಗತ್ತು ದೂರ ಶಿಕ್ಷಣದತ್ತ ವಾಲುತ್ತಿದೆ. ಶಿಕ್ಷಣ ಸಂಸ್ಥೆಗಳು ಆನ್ಲೈನ್​ ಮೂಲಕ ವಿದ್ಯಾರ್ಥಿಗಳಿಗೆ ಪಾಠ ತಲುಪಿಸುವ ಏರ್ಪಾಟು ಮಾಡುತ್ತಿವೆ. ಇ-ಬುಕ್​ ಹಾಗೂ ಇ-ಲರ್ನಿಂಗ್​ನತ್ತ ವಿದ್ಯಾರ್ಥಿಗಳು ಗಮನಹರಿಸುತ್ತಿದ್ದಾರೆ. ಸಂಶೋಧಕರು ಸಹ ತಮ್ಮ ಜರ್ನಲ್​ಗಳನ್ನು ಆನ್ಲೈನ್​ ಮೂಲಕ ಪ್ರಕಟಿಸುತ್ತಿದ್ದಾರೆ. ಈ ತುರ್ತು ಸಮಯದಲ್ಲಿ ರಾಷ್ಟ್ರಗಳು ದೂರಶಿಕ್ಷಣ ನೀಡುವಂತೆ ಮಾಡಲು ಯುನೆಸ್ಕೊ ವಿಶ್ವ ಶಿಕ್ಷಣ ಒಕ್ಕೂಟವನ್ನು ಆರಂಭಿಸಿದೆ.

ಡಿಜಿಟಲ್​ ಲೈಬ್ರರಿಗಳು ಹಾಗೂ ಪ್ರಕಾಶಕರು ಸಹ ಆದಷ್ಟೂ ಹೆಚ್ಚು ಮಾಹಿತಿಯನ್ನು ಉಚಿತವಾಗಿ ಲಭ್ಯವಾಗುವಂತೆ ಮಾಡುತ್ತಿದ್ದಾರೆ. ವಿಶ್ವಾಸಾರ್ಹ ಆನ್ಲೈನ್​ ಮಾಹಿತಿಗೆ ಇನ್ನಿಲ್ಲದ ಬೇಡಿಕೆ ಬಂದಿದ್ದು, ಉತ್ತಮ ಗುಣಮಟ್ಟದ ಇ-ಬುಕ್ಸ್​, ಜರ್ನಲ್​ಗಳು ಹಾಗೂ ಶೈಕ್ಷಣಿಕ ಪಠ್ಯದ ಪ್ರಕಟಣೆಗೆ ನಾಂದಿ ಹಾಡಿದೆ.

ನ್ಯಾಷನಲ್ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ (NDLI)

ಐಐಟಿ ಖರಗ್​ಪುರ್​ನಲ್ಲಿ ಪ್ರಧಾನ ಕಚೇರಿ ಹೊಂದಿರುವ ನ್ಯಾಷನಲ್ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ದೇಶದ ಅತಿ ದೊಡ್ಡ ಆನ್ಲೈನ್​ ಕಲಿಕಾ ಪ್ಲಾಟ್​ಫಾರ್ಮ್ ಆಗಿದೆ. 48 ಮಿಲಿಯನ್​ ಇ-ಬುಕ್​ಗಳು ಹಾಗೂ ವಿವಿಧ ಕ್ಷೇತ್ರದ ಜ್ಞಾನ ಭಂಡಾರವನ್ನು ಹೊಂದಿರುವ ಈ ಪೋರ್ಟಲ್​ಗೆ ನಿತ್ಯ ಸುಮಾರು 3 ಮಿಲಿಯನ್​ ಓದುಗರು ಭೇಟಿ ನೀಡುತ್ತಾರೆ.

ಯುನೆಸ್ಕೊ ಸೃಜನಾತ್ಮಕ ನಗರಗಳ ಜಾಲ (United Nation's Creative Cities Network)

ಸುಸ್ಥಿರ ನಗರ ಅಭಿವೃದ್ಧಿಗಾಗಿ ಸೃಜನಾತ್ಮಕ ಪಾತ್ರ ವಹಿಸುತ್ತಿರುವ ಜಾಗತಿಕ ನಗರಗಳ ಮಧ್ಯೆ ಸಹಕಾರ ಏರ್ಪಡಿಸುವ ದೃಷ್ಟಿಯಿಂದ 2004 ರಲ್ಲಿ ಯುನೆಸ್ಕೊ ಸೃಜನಾತ್ಮಕ ನಗರಗಳ ಜಾಲ ಆರಂಭಿಸಲಾಯಿತು. ಸೃಜನಾತ್ಮಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಪ್ರಮುಖವಾಗಿ ಗಮನದಲ್ಲಿಟ್ಟುಕೊಂಡು ಸುಸ್ಥಿರ ಅಭಿವೃದ್ಧಿಗೆ ಶ್ರಮಿಸುತ್ತಿರುವ ವಿಶ್ವದ 246 ನಗರಗಳು ಈ ಜಾಲದಲ್ಲಿವೆ.

ವಿಶ್ವದ ಪುಸ್ತಕ ರಾಜಧಾನಿ-2020

2018ರ ಸೆಪ್ಟೆಂಬರ್ 19 ರಂದು ಯುನೆಸ್ಕೊ ಡೈರೆಕ್ಟರ್ ಜನರಲ್ ಆಡ್ರೆ ಅಝೋಲೆ ಮಲೇಶಿಯಾ ರಾಜಧಾನಿ ಕೌಲಾಲಂಪುರವನ್ನು 2020ರ ವಿಶ್ವ ಪುಸ್ತಕ ರಾಜಧಾನಿಯಾಗಿ ಘೋಷಿಸಿದರು.

ಹಿಂದೆಂದಿಗಿಂತಲೂ ಹೆಚ್ಚು ಇಂದು ಓದುವಿಕೆಯ ಮಹತ್ವ

ಲಾಕ್​​ಡೌನ್​ನಿಂದಾಗಿ ವಿಶ್ವದ ಬಹುತೇಕ ಜನಸಂಖ್ಯೆ ಮನೆಯಲ್ಲಿರುವಾಗ ಏಕತಾನತೆಯ ನಿವಾರಣೆಗೆ ಪುಸ್ತಕಗಳ ಮಹತ್ವವನ್ನು ಸಾರಿ ಹೇಳುವುದು ಎಂದಿಗಿಂತಲೂ ಹೆಚ್ಚು ಅಗತ್ಯವಾಗಿದೆ. ಪುಸ್ತಕ ಓದುವುದರ ಮೂಲಕ ವಿಶ್ವ ಜ್ಞಾನ ಪಡೆಯುವುದು ಹಾಗೂ ಕ್ರಿಯಾಶೀಲತೆಯನ್ನು ಬೆಳೆಸುವುದು ಎಲ್ಲರ ಆದ್ಯತೆಯಾಗಬೇಕಿದೆ. ಏಪ್ರಿಲ್​ ತಿಂಗಳಲ್ಲಿ ಸ್ವತಃ ಓದುವಿಕೆ, ಕುಟುಂಬ ಸದಸ್ಯರೊಂದಿಗೆ ಓದುವಿಕೆಗಳೆಡೆಗೆ ಗಮನಹರಿಸಿ ವಿಶೇಷವಾಗಿ ಮಕ್ಕಳಲ್ಲಿ ಪುಸ್ತಕ ಪ್ರೀತಿ ಬೆಳೆಸಬೇಕಿದೆ. ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನದ ಬಗ್ಗೆ ಮತ್ತಷ್ಟು ತಿಳಿಯಲು ಹಾಗೂ ವಿವಿಧ ವಿಷಯಗಳ ಕುರಿತು ಓದಲು https://en.unesco.org/commemorations/worldbookday ವೆಬ್ಸೈಟ್​ಗೆ ಭೇಟಿ ನೀಡಬಹುದು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.