ಜನಸಂಖ್ಯಾ ಕುಸಿತ ತಡೆಗೆ ಚೀನಾ ಕ್ರಮ: ಮೂರು ಮಕ್ಕಳ ಹೆರಲು ಅವಕಾಶ, ಆರ್ಥಿಕ ಉತ್ತೇಜನ ಘೋಷಣೆ

author img

By

Published : Dec 7, 2021, 8:38 PM IST

Updated : Dec 7, 2021, 8:45 PM IST

ಜನಸಂಖ್ಯಾ ಕುಸಿತ ತಡೆಗೆ ಚೀನಾ ಕ್ರಮ: ಮೂರು ಮಕ್ಕಳ ಹೆರಲು ಅವಕಾಶ, ಆರ್ಥಿಕ ಉತ್ತೇಜನ ಘೋಷಣೆ

ಚೀನಾದ ರಾಷ್ಟ್ರೀಯ ಸದನ, ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್ (NPC), ದೇಶದಲ್ಲಿ ಆಗುತ್ತಿರುವ ಜನಸಂಖ್ಯಾ ಕುಸಿತವನ್ನು ತಡೆಗಟ್ಟಲು, ಈಗಿರುವ ಒಂದು ಮಗುವಿನ ಕಾನೂನು ಸಡಿಲಗೊಳಿಸಲು ಔಪಚಾರಿಕವಾಗಿ ಮುಂದಾಗಿತ್ತು. ಇದರ ಮುಂದುವರಿದ ಭಾಗ ಎಂಬಂತೆ ಪ್ರಾಂತ್ಯಗಳು ಮೂರು ಮಕ್ಕಳನ್ನು ಹೆರಲು ಪ್ರೇರೇಪಿಸುತ್ತಿವೆ ಎಂದು ವರದಿಯಾಗಿದೆ.

ಬೀಜಿಂಗ್​: ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಎಂದರೆ ಅದು ಚೀನಾ. ಅಲ್ಲಿನ ಬಿಗಿಯಾದ ಕ್ರಮದಿಂದ ಈಗ ಜನನ ದರದಲ್ಲಿ ಭಾರಿ ಕುಸಿತ ಕಂಡು ಬಂದಿದೆ. ಚೀನಾ ಸರ್ಕಾರದ ಬಿಗಿಯಾದ ನಿಯಮಗಳಿಂದ ಕುಸಿತ ಕಂಡಿರುವ ಜನನ ಪ್ರಮಾಣವನ್ನು ಹೆಚ್ಚಿಸಲು ಈಗ ಅಲ್ಲಿನ ಸರ್ಕಾರ ಕ್ರಮ ಕೈಗೊಳ್ಳಲು ಮುಂದಾಗಿದೆ.

ಜನನ ಪ್ರಮಾಣದ ಕುಸಿತ ತಡೆಗಟ್ಟಲು, ದಂಪತಿಗಳಿಗೆ ಮೂರು ಮಕ್ಕಳನ್ನು ಹೊಂದಲು ಪ್ರೇರೇಪಿಸಲು ಚೀನಾದ ಹಲವು ಪ್ರಾಂತ್ಯಗಳು ಮಕ್ಕಳ ಸಹಾಯಧನ ಮತ್ತು ತೆರಿಗೆ ಕಡಿತ ಸೇರಿದಂತೆ ಹಲವಾರು ಬೆಂಬಲ ಕ್ರಮಗಳನ್ನು ಘೋಷಿಸಲು ಪ್ರಾರಂಭಿಸಿವೆ.

ಚೀನಾದ ರಾಷ್ಟ್ರೀಯ ಸದನ, ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್ (NPC), ದೇಶದಲ್ಲಿ ಆಗುತ್ತಿರುವ ಜನಸಂಖ್ಯಾ ಕುಸಿತವನ್ನು ತಡೆಗಟ್ಟಲು, ಈಗಿರುವ ಒಂದು ಮಗುವಿನ ಕಾನೂನು ಸಡಿಲಗೊಳಿಸಲು ಔಪಚಾರಿಕವಾಗಿ ಮುಂದಾಗಿತ್ತು. ಇದರ ಮುಂದುವರಿದ ಭಾಗ ಎಂಬಂತೆ ಪ್ರಾಂತ್ಯಗಳು ಮೂರು ಮಕ್ಕಳನ್ನು ಹೆರಲು ಪ್ರೇರೇಪಿಸುತ್ತಿವೆ ಎಂದು ವರದಿಯಾಗಿದೆ.

ಮಕ್ಕಳ ಹೆಚ್ಚಳಕ್ಕೆ ಹೊಸ ಕಾನೂನು ಜಾರಿ

ಅಷ್ಟೇ ಅಲ್ಲ ಚೀನಾ ರಾಷ್ಟ್ರೀಯ ಶಾಸಕಾಂಗ ಪರಿಷ್ಕೃತ ಜನಸಂಖ್ಯೆ ಮತ್ತು ಕುಟುಂಬ ಯೋಜನಾ ಕಾನೂನು ಅಂಗೀಕರಿಸಿದೆ. ಈ ಹೊಸ ಕಾನೂನು ಪ್ರಕಾರ, ಚೀನೀ ದಂಪತಿಗಳು ಮೂರು ಮಕ್ಕಳನ್ನು ಹೊಂದಲು ಅವಕಾಶ ಕಲ್ಪಿಸಲಾಗಿದೆ. ಹೆಚ್ಚುತ್ತಿರುವ ಜನನ ಪ್ರಮಾಣದ ಇಳಿಕೆ ತಡೆಗಟ್ಟಲು ಮೂರು ಮಕ್ಕಳನ್ನು ಹೆರಲು ದಂಪತಿಗಳಿಗೆ ಅವಕಾಶ ಕಲ್ಪಿಸಲಾಗಿದೆ.

ಚೀನಾದ 20ಕ್ಕೂ ಹೆಚ್ಚು ಪ್ರಾಂತ್ಯಗಳು ತಮ್ಮ ಸ್ಥಳೀಯ ಕಾನೂನುಗಳ ಅನ್ವಯ ಹೆರಿಗೆ ನಿಯಮಗಳಲ್ಲಿ ಕೆಲ ಮಾರ್ಪಾಡುಗಳನ್ನು ಘೋಷಿಸಿವೆ. ಚೀನಾ ತನ್ನ ಜನಸಂಖ್ಯೆ ಮತ್ತು ಕುಟುಂಬ ಕಲ್ಯಾಣ ಯೋಜನೆಯ ಕಾನೂನಿಗೆ ಆಗಸ್ಟ್‌ನಲ್ಲಿ ತಿದ್ದುಪಡಿ ಮಾಡಿ ಅನುಮೋದನೆ ನೀಡಿದೆ.

ಯಾವ ಯಾವ ಪ್ರಾಂತ್ಯದಲ್ಲಿ ಈ ಕ್ರಮ

ಬೀಜಿಂಗ್, ಸಿಚುವಾನ್ ಮತ್ತು ಜಿಯಾಂಗ್‌ಕ್ಸಿ ಸೇರಿದಂತೆ ಇತರ ಪ್ರಾಂತ್ಯಗಳಲ್ಲಿ ಸ್ಥಳೀಯರು ದಂಪತಿಗೆ ಮಕ್ಕಳನ್ನು ಹೆರಲು ಹೆಚ್ಚಿನ ರಜೆ ನೀಡುವ ಕ್ರಮಗಳನ್ನು ಜಾರಿಗೆ ತಂದಿವೆ. ಉದಾಹರಣೆಗೆ ಪೋಷಕರ ರಜೆ, ಹೆರಿಗೆ ರಜೆ ಮತ್ತು ಮದುವೆ ರಜೆಗಳನ್ನು ವಿಸ್ತರಿಸಿ ಆದೇಶ ಹೊರಡಿಸಿವೆ. ಅಷ್ಟೇ ಅಲ್ಲ ಪುರುಷರಿಗೆ ಪಿತೃತ್ವ ರಜೆ ಘೋಷಣೆಯನ್ನೂ ಮಾಡಿವೆ.

ಇದೇ ವೇಳೆ ಹೆಚ್ಚಿನ ಮಕ್ಕಳನ್ನು ಹೊಂದಲು ಹಣದ ಅಡಚಣೆ ಆಗದಂತೆ ಸರ್ಕಾರ ಅದರ ಜವಾಬ್ದಾರಿ ತೆಗೆದುಕೊಳ್ಳಲು ಸಹ ಮುಂದಾಗಿವೆ. ಜನಸಂಖ್ಯೆ ಮತ್ತು ಕುಟುಂಬ ಕಲ್ಯಾಣ ಯೋಜನೆ ಕಾನೂನಿಗೆ ತಿದ್ದುಪಡಿ ಮಾಡಿದ ನಂತರ ದಂಪತಿಗಳು ಮೂರು ಮಕ್ಕಳನ್ನು ಹೊಂದಲು ಅನುವು ಮಾಡಿಕೊಡುತ್ತಿದೆ. ಅಷ್ಟೇ ಅಲ್ಲ ಹೆಚ್ಚಿನ ಮಕ್ಕಳನ್ನು ಹೆತ್ತು ಕಾನೂನು ಉಲ್ಲಂಘನೆ ಮಾಡಿರುವ ದಂಪತಿಗಳ ವಿರುದ್ಧದ ಕೇಸ್​ಗಳನ್ನು ಆಯಾ ಪ್ರಾಂತ ಸರ್ಕಾರಗಳು ರದ್ದು ಮಾಡಿವೆ.

2016 2 ಮಕ್ಕಳ ಹೆರಲು ಅನುಮತಿ ನೀಡಿದ್ದ ಚೀನಾ

ಮೊದಲಿದ್ದ ಒಂದು ಮಗು ಕಾನೂನಿಗೆ ತಿದ್ದುಪಡಿ ತಂದಿದ್ದ ಚೀನಾ ಸರ್ಕಾರ, 2016 ರಲ್ಲಿ ಎಲ್ಲ ದಂಪತಿಗಳಿಗೆ ಇಬ್ಬರು ಮಕ್ಕಳನ್ನು ಹೊಂದಲು ಅನುಮತಿ ನೀಡಿತ್ತು. ಹಳೆಯ ಕಾನೂನನ್ನು ರದ್ದು ಸಹ ಮಾಡಿತ್ತು.

ಇತ್ತೀಚಿನ ಜನಗಣತಿಯ ಪ್ರಕಾರ, ಚೀನಾದ ಜನಸಂಖ್ಯೆ 1.412 ಶತಕೋಟಿಯಷ್ಟು ನಿಧಾನಗತಿಯಲ್ಲಿ ಬೆಳೆಯುತ್ತಿದೆ ಎಂಬ ಮಾಹಿತಿ ಹೊರ ಹಾಕಿತ್ತು. ಇದು ಜನಸಂಖ್ಯಾ ಕುಸಿತ ಹಾಗೂ ವೃದ್ಧರ ಹೆಚ್ಚಳಕ್ಕೆ ಅವಕಾಶ ನೀಡಿ, ಮಕ್ಕಳ ಸಂಖ್ಯೆಯಲ್ಲಿ ಗಣನೀಯ ಕುಸಿತ ಕಂಡು ಬರುವಂತೆ ಮಾಡಿತ್ತು. ಹೀಗಾಗಿ ಚೀನಾ ಸರ್ಕಾರ ಮಕ್ಕಳ ಸಂಖ್ಯೆ ಹೆಚ್ಚಳಕ್ಕೆ ನಿರ್ಧರಿಸಿದೆ.

60 ವರ್ಷಕ್ಕಿಂತ ಮೇಲ್ಪಟ್ಟ ಜನಸಂಖ್ಯೆಯು ಕಳೆದ ವರ್ಷ 18.7 ಪ್ರತಿಶತದಷ್ಟು ಅಂದರೆ 26.4 ಕೋಟಿಗೆ ಏರಿದ್ದರಿಂದ ಚೀನಾ ಸರ್ಕಾರವನ್ನ ಕಂಗೆಡಿಸಿತ್ತು. ಅಷ್ಟೇ ಅಲ್ಲ ದೇಶದಲ್ಲಿ ಮದುವೆಗಳ ಪ್ರಮಾಣದಲ್ಲೂ ಭಾರಿ ಕುಸಿತ ಕಂಡು ಬಂದಿತ್ತು. ಚೀನಾದಲ್ಲಿ ಮದುವೆ ನೋಂದಣಿಗಳ ಸಂಖ್ಯೆ ಸತತ ಏಳು ವರ್ಷಗಳಿಂದ ಕುಸಿತ ಕಂಡಿದೆ. ಕಳೆದ ವರ್ಷ 17 ವರ್ಷಗಳ ಕನಿಷ್ಠ ಮಟ್ಟಕ್ಕೆ ತಲುಪಿದೆ ಎಂದು ಇತ್ತೀಚೆಗೆ ಬಿಡುಗಡೆಯಾದ ಚೀನಾ ಸ್ಟ್ಯಾಟಿಸ್ಟಿಕಲ್ ಇಯರ್‌ ಬುಕ್ 2021 ರ ಅಂಕಿ - ಅಂಶಗಳು ಹೇಳಿದ್ದವು.

Last Updated :Dec 7, 2021, 8:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.