ETV Bharat / international

WHOನ ಕೊರೊನಾ ಮೂಲ ತನಿಖೆಯಲ್ಲಿ ಭಾಗಿಯಾಗಲು ಚೀನಾ ನಕಾರ: ಜೆನ್ ಸಾಕಿ ವಾಗ್ದಾಳಿ

author img

By

Published : Jul 23, 2021, 7:28 AM IST

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ನಡೆಸಲು ಮುಂದಾದ ಹೊಸ ತನಿಖೆಯನ್ನು ತಿರಸ್ಕರಿಸಿದ್ದಕ್ಕಾಗಿ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಸಾಕಿ, ಚೀನಾದ ವಿರುದ್ಧ ವಾಗ್ದಾಳಿ ನಡೆಸಿದರು. ಚೀನಾದ ಈ ನಡೆ ಬೇಜವಾಬ್ದಾರಿಯುತ ಮತ್ತು ಸ್ಪಷ್ಟವಾಗಿ ಅಪಾಯಕಾರಿ ಎಂದು ಗೋಚರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

White House
ಪತ್ರಿಕಾ ಕಾರ್ಯದರ್ಶಿ ಜೆನ್ ಸಾಕಿ,

ವಾಷಿಂಗ್ಟನ್: ಕೊರೊನಾ ಮೂಲದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ನಡೆಸಲು ಮುಂದಾದ ಹೊಸ ತನಿಖೆ ತಿರಸ್ಕರಿಸಿದ್ದಕ್ಕಾಗಿ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಸಾಕಿ, ಚೀನಾದ ವಿರುದ್ಧ ವಾಗ್ದಾಳಿ ನಡೆಸಿದರು. ಶ್ವೇತಭವನದ ಬ್ರೀಫಿಂಗ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ಸಾಕಿ, ಚೀನಾದ ನಿರಾಕರಣೆಯಿಂದ ಬೈಡನ್ ಆಡಳಿತವು ತೀವ್ರ ನಿರಾಸೆಗೊಂಡಿದೆ ಎಂದು ಹೇಳಿದ್ದಾರೆ.

"ಚೀನಾದ ಈ ನಡೆಯು ಬೇಜವಾಬ್ದಾರಿಯುತ ಮತ್ತು ಸ್ಪಷ್ಟವಾಗಿ ಅಪಾಯಕಾರಿ ಎಂದು ಗೋಚರಿಸುತ್ತಿದೆ. ಜಗತ್ತಿನ ಇತರ ಸದಸ್ಯ ರಾಷ್ಟ್ರಗಳ ಜೊತೆಗೆ ಕೊರೊನಾ ಮೂಲ ಕಂಡುಹಿಡಿಯಲು ಡೇಟಾ ಮತ್ತು ಮಾದರಿಗಳಿಗೆ ಸಹಕರಿಸುವಂತೆ ಚೀನಾಕ್ಕೆ ಕರೆ ನೀಡುತ್ತಲೇ ಇದ್ದೇವೆ. ಇನ್ನು ಕೊರೊನಾ ಮೂಲ ಕಂಡು ಹಿಡಿದರೆ ಮುಂದಿನ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಸಹಾಯವಾಗುತ್ತದೆ" ಎಂದು ಪತ್ರಿಕಾ ಕಾರ್ಯದರ್ಶಿ ಪ್ರತಿಪಾದಿಸಿದ್ದಾರೆ.

ಈ ತಿಂಗಳ ಆರಂಭದಲ್ಲಿ ಡಬ್ಲ್ಯುಎಚ್‌ಒ ಚೀನಾದಲ್ಲಿ ಕೊರೊನಾ ಉಗಮದ ಬಗ್ಗೆ ಎರಡನೇ ಹಂತದ ಅಧ್ಯಯನಗಳನ್ನು ಪ್ರಸ್ತಾಪಿಸಿತು. ವುಹಾನ್ ನಗರದ ಪ್ರಯೋಗಾಲಯಗಳು ಮತ್ತು ಮಾರುಕಟ್ಟೆಗಳ ಲೆಕ್ಕಪರಿಶೋಧನೆ ಸೇರಿದಂತೆ, ಅಧಿಕಾರಿಗಳಿಂದ ಮಾಹಿತಿ ನೀಡುವಂತೆ ತಿಳಿಸಿತ್ತು. ಆದರೆ, "ಡಬ್ಲ್ಯುಎಚ್‌ಒ ಯೋಜನೆಯು ಸಾಮಾನ್ಯ ಜ್ಞಾನವನ್ನು ಕಡೆಗಣಿಸುತ್ತದೆ ಮತ್ತು ವಿಜ್ಞಾನವನ್ನು ಧಿಕ್ಕರಿಸುತ್ತದೆ" ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗದ (ಎನ್‌ಎಚ್‌ಸಿ) ಉಪ ಮಂತ್ರಿ ಕ್ಸಿಂಗ್​ ಯಿಕ್ಸಿನ್ ಹೇಳಿಕೆ ನೀಡಿ ಡಬ್ಲ್ಯುಎಚ್‌ಒನ ಮನವಿಯನ್ನು ತಿರಸ್ಕರಿಸಿತು.

ಅಷ್ಟೇ ಅಲ್ಲದೆ ಗೌಪ್ಯತೆ ಕಾಳಜಿಯಿಂದಾಗಿ ಕೆಲವು ಡೇಟಾ ಸಂಪೂರ್ಣವಾಗಿ ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದು ಚೀನಾ ಹೇಳಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಸಾಕಿ, ಸಾಂಕ್ರಾಮಿಕ ರೋಗದ ಬಗ್ಗೆ ತನಿಖೆ ನಡೆಸುವಲ್ಲಿ ದೇಶವು ತಮ್ಮ ಜವಾಬ್ದಾರಿಗಳಿಗೆ ಅನುಗುಣವಾಗಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ವಾಗ್ದಾಳಿ ನಡೆಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.