ETV Bharat / international

ಹುಲಿಯಂತೆ ಮೆರೆದು ಇಲಿಯಂತಾದ ಟ್ರಂಪ್​ಗೆ ವಾಗ್ದಂಡನೆಯೋ.. ಉಚ್ಚಾಟನೆಯೋ.!?

author img

By

Published : Jan 16, 2021, 7:57 PM IST

ಅಮೆರಿಕ ಇತಿಹಾಸದಲ್ಲೇ ಟ್ರಂಪ್​ ಅಧಿಕಾರದ ಅವಧಿ ಅಜರಾಮರವಾಗಿದ್ದು, ಈ ಹಿಂದೆ ನಡೆಯದ ಕೆಲ ಘಟನೆಗಳು ಟ್ರಂಪ್​ ಅವಧಿಯಲ್ಲಿ ಜರುಗಿವೆ. ಅದರಲ್ಲೂ ಬಹು ಮುಖ್ಯವಾಗಿ ಟ್ರಂಪ್​​ ಬೆಂಬಲಿಗರು ಕ್ಯಾಪಿಟಲ್​ ಕಟ್ಟಡದ ಮೇಲೆ ನಡೆಸಿದ ದಾಳಿ ಎಂದಿಗೂ ಮರೆಯದ ಕರಾಳ ದಿನವಾಗಿದೆ. ಈ ಎಲ್ಲಾ ಘಟನೆಗಳಿಗೂ ಸಹ ಟ್ರಂಪ್​ ಹೊಣೆಯಾಗಿದ್ದು, ಇದೀಗ ವಾಗ್ದಂಡನೆ ಎಂಬ ಕತ್ತಿ ಟ್ರಂಪ್​​ ತಲೆ ಮೇಲೆ ಬಂದು ನಿಂತಿದೆ.

File photo
ಸಂಗ್ರಹ ಚಿತ್ರ

ವಾಷಿಂಗ್ಟನ್​​: ಅಮೆರಿಕ ಅಧ್ಯಕ್ಷ ಗಾದಿಗೆ ಎರಡನೇ ಬಾರಿ ಆಯ್ಕೆಯಾಗುವಲ್ಲಿ ವಿಫಲರಾಗಿರುವ ಡೊನಾಲ್ಡ್​​ ಟ್ರಂಪ್, ಅಧಿಕಾರದ ವ್ಯಾಮೋಹದಿಂದಾಗಿ ಬಹಳಷ್ಟು ಶ್ರಮ ವಹಿಸಿದರೂ ಸಹ ಎಲ್ಲವೂ ವಿಫಲಗೊಂಡಿವೆ. ಅದಲ್ಲದೆ ಟ್ರಂಪ್​​ ಬೆಂಬಲಿಗರು ಕ್ಯಾಪಿಟಲ್​ ಕಟ್ಟಡದ ಮೇಲೆ ನಡೆಸಿದ ದಾಳಿಯಿಂದಾಗಿ ಇಡೀ ಅಮೆರಿಕವೇ ಅಲ್ಲೋಲ ಕಲ್ಲೋಲಗೊಂಡಿದ್ದು, ಇದರ ಹೊಣೆಯನ್ನೂ ಸಹ ಟ್ರಂಪ್​ ಮೇಲೆಯೇ ಹೊರಿಸಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಅಮೆರಿಕದ ನೂತನ ಅಧ್ಯಕ್ಷರಾಗಿ ಜೋ ಬೈಡನ್​ ಅಧಿಕಾರ ಸ್ವೀಕರಿಸಲಿದ್ದು, ಈ ಮಧ್ಯೆ ಹೌಸ್​ ಆಫ್​ ರೆಪ್ರಸೆಂಟೇಟಿವ್ಸ್​​ (ಅಮೆರಿಕ ಸಂಸತ್ತಿನ ಕೆಳಮನೆ) ಟ್ರಂಪ್​ ವಿರುದ್ಧ ವಾಗ್ದಂಡನೆ ನಿರ್ಣಯವನ್ನು ಅಂಗೀಕರಿಸಲು ಮುಂದಾಗಿದೆ.

ಅಮೆರಿಕದ ನೂತನ ಅಧ್ಯಕ್ಷರಾಗಿ ಜೋ ಬೈಡನ್​​​ ಅಧಿಕಾರ ಸ್ವೀಕರಿಸಲಿದ್ದು, ಈ ಕಾರ್ಯಕ್ರಮದ ಉದ್ಘಾಟನೆಯ ನಂತರ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೇಲಿನ ದೋಷಾರೋಪಣೆ ವಿಚಾರಣೆ ಪ್ರಾರಂಭವಾಗುವ ಸಾಧ್ಯತೆಯಿದೆ. ಈ ವೇಳೆ ಅಮೆರಿಕದ ಕ್ಯಾಪಿಟಲ್ ಗಲಭೆಗೆ ಕಾರಣವಾಗಿರುವ ಅಧ್ಯಕ್ಷರನ್ನು ಶಿಕ್ಷೆಗೊಳಪಡಿಸಬೇಕು ಎಂದು ಟ್ರಂಪ್​​ ಪಕ್ಷದ ಸೆನೆಟ್​​ ಸದಸ್ಯ ಮಿಚ್​ಮೆಕ್‌ಕಾನ್ನೆಲ್ ಹೇಳಿರುವುದು ಟ್ರಂಪ್​​ಗೆ ಅತ್ಯಂತ ಹಿನ್ನಡೆಯುಂಟುಮಾಡಿದೆ. ಅದಲ್ಲದೆ, ಈ ಹೇಳಿಕೆ ನೀಡುವ ವೇಳೆ ಇದು ನನ್ನ ಆತ್ಮಸಾಕ್ಷಿಯಿಂದಾಗಿ ಹೇಳುತ್ತಿರುವ ಹೇಳಿಕೆ ಎಂದಿರುವುದು ರಿಪಬ್ಲಿಕನ್​​ ಪಕ್ಷದವರೇ ಟ್ರಂಪ್​ಗೆ ಬೆಂಬಲ ನೀಡುತ್ತಿಲ್ಲ ಎಂಬುದನ್ನು ಎತ್ತಿ ತೋರಿಸಿದಂತಾಗಿದೆ.

ಅಮೆರಿಕದ ಕ್ಯಾಪಿಟಲ್​ ಮೇಲೆ ನಡೆಸಲಾದ ದಾಳಿಗೆ ಟ್ರಂಪ್​ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿ ಹೌಸ್​ ಆಫ್​ ರೆಪ್ರೆಸೆಂಟೇಟಿವ್ಸ್​​ನಲ್ಲಿ ಟ್ರಂಪ್​ ವಿರುದ್ಧದ ವಾಗ್ದಂಡನೆ ನಿಲುವಳಿಗೆ ಸದನದಲ್ಲಿ ಒಪ್ಪಿಗೆ ಸಿಕ್ಕಿದೆ. ಇದಕ್ಕೆ ಡೊನಾಲ್ಡ್​​ ಟ್ರಂಪ್​ ಅವರ ರಿಪಬ್ಲಿಕನ್‌ ಪಕ್ಷದ 10 ಸದಸ್ಯರು ಕೂಡ ಸೆನೆಟ್​ನಲ್ಲಿ ಮಂಡಿಸುವ ನಿಲುವಳಿಗೆ ಬೆಂಬಲಿಸುವುದಾಗಿ ಹೇಳಿದ್ದಾರೆ.

ಕಳೆದ 4 ವರ್ಷದ ಅಧಿಕಾರವಧಿಯಲ್ಲಿ ವಿವಾದಾತ್ಮಕ ಹೇಳಿಕೆ, ವರ್ತನೆಯಿಂದಲೇ ಗಮನ ಸೆಳೆದಿದ್ದ ಡೊನಾಲ್ಡ್‌ ಟ್ರಂಪ್‌ ಇದೀಗ ತಮ್ಮ ವಿರುದ್ಧ ವಾಗ್ದಂಡನೆ ಮಂಡಿಸುವ ನಿರ್ಣಯ ಅಂಗೀಕಾರವಾಗಿದ್ದರೂ ಸಹ ಏನೂ ಮಾಡಲಾಗದೆ ಅಸಹಾಯಕರಾಗಿದ್ದಾರೆ.

ಹೌಸ್​ ಆಫ್​​ ರೆಪ್ರೆಸೆಂಟೇಟಿವ್ಸ್​​ ನೀಡಿದ ಮತದ ಆಧಾರದ ಮೇಲೆ ಸ್ಪೀಕರ್​​ ನ್ಯಾನ್ಸಿ ಪೆಲೋಸಿ ಕೂಡ ಸಹಿ ಹಾಕಿದ್ದಾರೆ. ಸಂಸತ್ತಿನ ಕೆಳಮನೆಯಲ್ಲಿ ಒಪ್ಪಿಗೆ ಸಿಕ್ಕಂತೆ ಸಂಸತ್ತಿನ ಮೇಲ್ಮನೆಯಲ್ಲಿಯೂ ಸಹ ಒಪ್ಪಿಗೆ ದೊರೆತರೆ ಡೊನಾಲ್ಡ್​ ಟ್ರಂಪ್​​ ಅಧ್ಯಕ್ಷ ಸ್ಥಾನದಿಂದ ವಜಾಗೊಳ್ಳುವುದು ಖಚಿತವಾಗಿದೆ.

ಜನವರಿ 20, 2021ರಂದು ಅಧ್ಯಕ್ಷ ಡೊನಾಲ್ಡ್​ ಟ್ರಂಪ್​​ರ ಅಧಿಕಾರಾವಧಿ ಪೂರ್ಣಗೊಳ್ಳಲಿದ್ದು, ಈ ಬಳಿಕ ಸೆನೆಟ್​ನಲ್ಲಿ ವಾಗ್ದಂಡನೆಗೆ ಜಯ ದೊರೆತರೆ ಡೊನಾಲ್ಡ್​ ಟ್ರಂಪ್​​ ಮುಂದಿನ ಚುನಾವಣೆಯಲ್ಲಿಯೂ ಸಹ ಸ್ಪರ್ಧಿಸಲು ಅವಕಾಶ ವಂಚಿತರಾದಂತಾಗುತ್ತದೆ.

ಈ ಎಲ್ಲದರ ನಡುವೆ ಟ್ರಂಪ್​ರನ್ನು ಅಧ್ಯಕ್ಷ ಸ್ಥಾನದಿಂದ ಅವಧಿ ಮುಗಿಯುವ ಮುನ್ನವೇ ಕೆಳಗಿಳಿಸಲು ಸಕಲ ಸಿದ್ಧತೆಗಳು, ಪ್ರಯತ್ನಗಳು ನಡೆಯುತ್ತಿವೆ. ಜನವರಿ 20ಕ್ಕೆ ಜೋ ಬೈಡನ್ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುತ್ತಾರೆ. ಅಷ್ಟರೊಳಗೆ ಟ್ರಂಪ್​ರನ್ನು ಕೆಳಗಿಳಿಸಲು ಸಾಧ್ಯವಿಲ್ಲ. ಏಕೆಂದರೆ, ವಾಗ್ದಂಡನೆಯನ್ನು ಸದನದಲ್ಲಿ ಚರ್ಚಿಸಿ ಟ್ರಂಪ್ ದೋಷಿ ಎಂದು ಮೂರನೇ ಎರಡು ಬಹುಮತದೊಂದಿಗೆ ನಿರ್ಣಯ ಮಾಡಬೇಕು. ಆದರೆ, ಜನವರಿ 20ರೊಳಗೆ ಸದನ ನಡೆಸಲು ಸಾಧ್ಯವಿಲ್ಲ. ಹೀಗಾಗಿ, ಅವಧಿಗೆ ಮುನ್ನ ಟ್ರಂಪ್ ಅವರನ್ನ ಕೆಳಗಿಳಿಸಲು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ ಎಂದು ಅಮೆರಿಕದ ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಅಮೆರಿಕದ ರಾಜಕೀಯ ಇತಿಹಾಸದಲ್ಲಿ ಅಧ್ಯಕ್ಷರಾಗಿ ತದನಂತರ ವಾಗ್ದಂಡನೆ ಮೂಲಕ ಅಧಿಕಾರ ಕಳೆದುಕೊಂಡಿರುವುದು ಇದೂವರೆಗೂ ಸಹ ನಡೆದಿಲ್ಲ. 1868ರಲ್ಲಿ ಆ್ಯಂಡ್ರ್ಯೂ ಜಾನ್ಸನ್‌ ಹಾಗೂ 1998ರಲ್ಲಿ ಬಿಲ್‌ ಕ್ಲಿಂಟನ್‌ ಅವರು ವಾಗ್ದಂಡನೆಗೆ ಗುರಿಯಾಗಿದ್ದರು. ಆದರೆ, ಈ ಇಬ್ಬರೂ ಸಹ ಅಧಿಕಾರ ಕಳೆದುಕೊಂಡು ಶಿಕ್ಷೆಗೆ ಗುರಿಯಾಗಿರಲಿಲ್ಲ.

ಈ ಹಿಂದೆ ಆ್ಯಂಡ್ರ್ಯೂ ಜಾನ್ಸನ್ ವಿರುದ್ಧ ವಾಗ್ದಂಡನೆ ನಡೆದಿತ್ತು. ಆದರೆ, ಸೆನೆಟ್ ವಿಚಾರಣೆ ವೇಳೆ ಒಂದು ಮತದ ಅಂತರದಿಂದ ಗೆದ್ದಿದ್ದರು. ಇದಾದ ಬಳಿಕ ಜಾನ್ಸನ್ ಮತ್ತೊಂದು ಅವಧಿಗೆ ಆಯ್ಕೆಯಾಗಲಿಲ್ಲ. ಅಧ್ಯಕ್ಷ ಬಿಲ್ ಕ್ಲಿಂಟನ್ ಅವರು ತಮ್ಮ ಎರಡನೇ ಅಧ್ಯಕ್ಷ ಅವಧಿಯಲ್ಲಿ ವಾಗ್ದಂಡನೆ ಎದುರಿಸಿದ್ದರು.

ಇನ್ನು ಡೊನಾಲ್ಡ್​ ಟ್ರಂಪ್​​ ಈ ವಾಗ್ದಂಡನೆ ಎದುರಿಸಿರುವ ಮೂರನೇ ಅಧ್ಯಕ್ಷರಾಗಿದ್ದಾರೆ. ಅದಲ್ಲದೆ, ಟ್ರಂಪ್​ ತಮ್ಮ ಮೊದಲ ಅಧಿಕಾರ ಅವಧಿಯಲ್ಲಿಯೇ ಎರಡು ಬಾರಿ ವಾಗ್ದಂಡನೆಗೆ ಗುರಿಯಾದ ಮೊದಲ ಅಧ್ಯಕ್ಷರಾಗಿದ್ದಾರೆ.

ಡಿಸೆಂಬರ್​ 2019ರಲ್ಲಿಯೂ ಸಹ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿರುದ್ಧ ದೋಷಾರೋಪಣೆ ಮಾಡಲು ಎಂದು ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಪ್ರಕಟಿಸಿದ್ದರು. ಇದಕ್ಕೆ ಹೌಸ್​ ಆಫ್​​ ​ರೆಪ್ರೆಸೆಂಟೇಟಿವ್ಸ್​​ ಒಪ್ಪಿಗೆ ಪಡೆದು, ಈ ನಿರ್ಣಯವನ್ನ ಸೆನೆಟ್​​ ಅಂಗೀಕಾರಕ್ಕೆ ಕಳುಹಿಸಲಾಗಿತ್ತು. ಆದರೆ ಸೆನೆಟ್​​ನಲ್ಲಿ ಟ್ರಂಪ್​ಗೆ ಬಹುಮತವಿದ್ದಿದ್ದರಿಂದ ದೋಷಾರೋಪಣೆ ಅಂಗೀಕಾರಗೊಂಡಿರಲಿಲ್ಲ.

ಅಧ್ಯಕ್ಷ ಟ್ರಂಪ್ ವಿರುದ್ಧ ಜನವರಿ 20ರೊಳಗೆ ಪದಚ್ಯುತಿ ನಿರ್ಣಯ ಅಂಗೀಕರಿಸಲು ಸಾಧ್ಯವಿಲ್ಲದಿರುವುದರಿಂದ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಟ್ರಂಪ್ ವಿರುದ್ಧದ ಆರೋಪಗಳ ಸಂಬಂಧ ವಾಗ್ದಂಡನೆ ವಿಧಿಸುವ ಸಾಧ್ಯತೆ ಇದೆ. ಹೊಸ ಸರ್ಕಾರ ಬರುವ ವೇಳೆಗೆ ಟ್ರಂಪ್ ಯಾವುದೇ ಅಧಿಕಾರ ಸ್ಥಾನದಲ್ಲಿ ಇಲ್ಲದೇ ಇರುವುದರಿಂದ ಈಗ ಮಂಡಿಸಿರುವ ದೋಷಾರೋಪ ನಿಲುವಳಿ ಕಾನೂನು ರೀತ್ಯ ತನ್ನ ಮಹತ್ವ ಕಳೆದುಕೊಳ್ಳುವ ಹಿನ್ನೆಲೆಯಲ್ಲಿ ಇದಕ್ಕೆ ಯಾವುದೇ ಮಾನ್ಯತೆ ಇರುವುದಿಲ್ಲ ಎಂಬುದು ಕಾನೂನು ತಜ್ಞರ ಅಂಬೋಣ. ಈ ಹಿನ್ನೆಲೆಯಲ್ಲಿ ವಾಗ್ದಂಡನೆ ಮಂಡಿಸುವ ಸಾಧ್ಯತೆಗಳೇ ಹೆಚ್ಚಿವೆ ಎನ್ನಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.