ವಿಶ್ವ ವಾಣಿಜ್ಯ ಕಟ್ಟಡದ ಮೇಲಿನ ಭಯಾನಕ ದಾಳಿಯ ರೂವಾರಿಗಳಿಗೆ ಮರಣದಂಡನೆ ಶಿಕ್ಷೆ ಇಲ್ಲ?

author img

By

Published : Mar 16, 2022, 5:26 PM IST

Pakistani 9/11 mastermind could be spared death penalty as US prosecutors negotiate plea deal: Report

ಅಮೆರಿಕದ ವರ್ಲ್ಡ್‌ ಟ್ರೇಡ್‌ ಸೆಂಟರ್ ಅವಳಿ ಗೋಪುರದ ಮೇಲೆ ಸೆಪ್ಟೆಂಬರ್ 11, 2001ರಂದು ಭೀಕರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಸ್ಟರ್ ಮೈಂಡ್ ಮತ್ತು ಇತರ ಉಗ್ರರು ಮರಣದಂಡನೆಯಿಂದ ಪಾರಾಗುವ ಸಾಧ್ಯತೆ ಇದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ನ್ಯೂಯಾರ್ಕ್(ಅಮೆರಿಕ): ವಿಶ್ವ ವಾಣಿಜ್ಯ ಕಟ್ಟಡದ ಮೇಲೆ ನಡೆದ ಕಂಡರಿಯದ ದಾಳಿಯ ರೂವಾರಿ ಪಾಕಿಸ್ತಾನಿ ಭಯೋತ್ಪಾದಕ ಖಾಲಿದ್ ಶೇಖ್ ಮೊಹಮ್ಮದ್ ಪರ ವಕೀಲರು ಮತ್ತು ಅಮೆರಿಕದ ಫೆಡರಲ್ ಪ್ರಾಸಿಕ್ಯೂಟರ್‌ಗಳ ನಡುವೆ ಮಾತುಕತೆ ನಡೆಯುತ್ತಿದ್ದು, ಖಾಲಿದ್ ಶೇಖ್ ಮೊಹಮ್ಮದ್ ಮತ್ತು ಇತರ ನಾಲ್ವರು ಉಗ್ರರಿಗೆ ಮರಣದಂಡನೆಯ ಬದಲು ಜೀವಾವಧಿ ಶಿಕ್ಷೆ ವಿಧಿಸುವ ಸಾಧ್ಯತೆ ದಟ್ಟವಾಗಿದೆ.

ಖಾಲಿದ್ ಶೇಖ್ ಮೊಹಮ್ಮದ್ ಮತ್ತು ಇತರ ನಾಲ್ವರು ಉಗ್ರರನ್ನು ಪ್ರಸ್ತುತ ಗ್ವಾಂಟ್ನಾಮೋ ಬೇ ಎಂಬಲ್ಲಿ ಬಂಧನದಲ್ಲಿ ಇರಿಸಲಾಗಿದೆ. 'ಈ ಉಗ್ರರ ಪರ ವಕೀಲರು ಮತ್ತು ಅಮೆರಿಕದ ಫೆಡರಲ್ ಪ್ರಾಸಿಕ್ಯೂಟರ್​ಗಳ ನಡುವಿನ ಮಾತುಕತೆ ನಿಜವಾಗಿಯೂ ಅತೃಪ್ತಿ ಉಂಟು ಮಾಡುತ್ತಿದೆ. ಉಗ್ರರ ದಾಳಿಯಿಂದ ಸಂತ್ರಸ್ತರಾದವರನ್ನು ಇತ್ತೀಚಿನ ಬೆಳವಣಿಗೆಗಳು ಕೆರಳಿಸುತ್ತವೆ' ಎಂದು ನ್ಯೂಯಾರ್ಕ್ ಟೈಮ್ಸ್​ ವರದಿ ಮಾಡಿದೆ.

ಫೆಡರಲ್ ಪ್ರಾಸಿಕ್ಯೂಟರ್​ಗಳು ಮತ್ತು ಉಗ್ರರ ಪರ ವಾದಿಸುವ ವಕೀಲರ ನಡುವೆ ಮಾತುಕತೆಯನ್ನು ಮನವಿ ಚೌಕಾಶಿ (Plea Bargaining) ಅಥವಾ ಮನವಿ ಕರಾರು (Plea Agreement) ಅಥವಾ ಮನವಿ ಒಪ್ಪಂದ (Plea Deal) ಎಂದು ಕರೆಯಲಾಗುತ್ತದೆ.

ಏನಿದು ಮನವಿ ಒಪ್ಪಂದ?: ಇದು ಅಪರಾಧ ಕಾನೂನು ಪ್ರಕ್ರಿಯೆಗಳಲ್ಲಿನ ಒಂದು ಒಪ್ಪಂದವಾಗಿದ್ದು, ಅಪರಾಧಿಗೆ ಪಶ್ಚಾತ್ತಾಪವಾಗಿದೆ ಎಂದು ಅನ್ನಿಸಿದಾಗ ಆತನಿಗೆ ಶಿಕ್ಷೆಯಲ್ಲಿ ರಿಯಾಯಿತಿ ವಿಧಿಸಲಾಗುತ್ತದೆ. ಅಂದರೆ ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡಬಹುದಷ್ಟೇ. ಉದಾಹರಣೆಗೆ, ಇಲ್ಲಿ ಮರಣದಂಡನೆಯಿಂದ ಜೀವಾವಧಿ ಶಿಕ್ಷೆಗೆ ಪರಿವರ್ತನೆ ಮಾಡಬಹುದು. ತಪ್ಪೊಪ್ಪಿಕೊಂಡಿರುವ ಅಪರಾಧಿಗೆ ಈ ರೀತಿಯ ಆಯ್ಕೆಗಳಿರುತ್ತವೆ. ಈಗ ಇದೇ ರೀತಿಯ ಒಪ್ಪಂದದ ಮಾತುಕತೆ ಉಗ್ರರ ಪರವಾಗಿ ವಾದಿಸುವ ವಕೀಲರು ಮತ್ತು ಫೆಡರಲ್​ ಪ್ರಾಸಿಕ್ಯೂಟರ್​ಗಳ ನಡುವೆ ನಡೆಯುತ್ತಿದೆ.

ಇದನ್ನು ಓದಿ: ಉಕ್ರೇನ್‌ ಮೇಲೆ ಯುದ್ಧ ಮಾಡ್ತಿರೋ ರಷ್ಯಾದಿಂದ ತೈಲ, ಅನಿಲ ಖರೀದಿಸದಂತೆ ಜಗತ್ತಿಗೆ ಬ್ರಿಟನ್‌ ಪ್ರಧಾನಿ ಕರೆ

ಕಹಿ ನೆನಪು: ಅಲ್‌ಖೈದಾ ಭಯೋತ್ಪಾದಕ ಸಂಘಟನೆ ಅಮೆರಿಕದ ವರ್ಲ್ಡ್‌ ಟ್ರೇಡ್‌ ಸೆಂಟರ್​ನ ಅವಳಿ ಗೋಪುರದ ಮೇಲೆ ಸೆಪ್ಟೆಂಬರ್ 11, 2001ರಂದು ವಿಮಾನದ ಮೂಲಕ ಭೀಕರ ದಾಳಿ ನಡೆಸಿತ್ತು. ಈ ದಾಳಿಯಲ್ಲಿ 2,996ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.