ETV Bharat / entertainment

ಬಿಗ್​ ಬಾಸ್​: ವಿನಯ್-ಸಂಗೀತಾ ಮಧ್ಯೆ ಸ್ನೇಹದ ಪನ್ನೀರಿನ ಸಿಂಚನ!

author img

By ETV Bharat Karnataka Team

Published : Dec 24, 2023, 4:03 PM IST

BBK10: ಬಿಗ್​ ಬಾಸ್​ ಈ ವಾರದ ವೀಕೆಂಡ್​ ಪ್ರೋಮೋ ಅನಾವರಣಗೊಂಡಿದೆ.

bigg boss kannada season 10 promo
ಬಿಗ್​ ಬಾಸ್​: ವಿನಯ್-ಸಂಗೀತಾ ಮಧ್ಯೆ ಸ್ನೇಹದ ಪನ್ನೀರಿನ ಸಿಂಚನ!

ಕನ್ನಡದ ಜನಪ್ರಿಯ ರಿಯಾಲಿಟಿ ಶೋ 'ಬಿಗ್​ ಬಾಸ್​ ಸೀಸನ್​ 10' ಕೊನೆಯ ಹಂತ ತಲುಪಿದೆ. ದಿನಕ್ಕೊಂದು ವಿಭಿನ್ನ ಟಾಸ್ಕ್​, ವೀಕೆಂಡ್​ ಎಪಿಸೋಡ್​ಗಳು ಪ್ರೇಕ್ಷಕರಿಗೆ ಮನರಂಜನೆಯ ಮಹಾಪೂರವನ್ನೇ ಉಣಬಡಿಸಿದೆ. ಸ್ನೇಹಿತರಾಗಿದ್ದ ಸ್ಪರ್ಧಿಗಳು ಶತ್ರುಗಳಾದ್ರೆ, ಯಾವಾಗಲೂ ಕಿತ್ತಾಡುತ್ತಿದ್ದವರು ದಿಢೀರ್ ಫ್ರೆಂಡ್ಸ್​ ಆಗಿಬಿಟ್ಟಿದ್ದಾರೆ. ಇದಕ್ಕೆ ಹೊಸ ಉದಾಹರಣೆಯೇ ಇಂದಿನ ಪ್ರೋಮೋ. 'ವಿನಯ್-ಸಂಗೀತಾ ಸ್ನೇಹದ ಪನ್ನೀರಿನ ಸಿಂಚನ!' ಎಂಬ ಶೀರ್ಷಿಕೆಯೊಂದಿಗೆ ಕಲರ್ಸ್​ ಕನ್ನಡ ವಾಹಿನಿ ಪ್ರೋಮೋ ಹಂಚಿಕೊಂಡಿದೆ.

ವಿನಯ್ ಗೌಡ​ ಮತ್ತು ಸಂಗೀತಾ ಶೃಂಗೇರಿ ಮನೆಯಲ್ಲಿ ಕಿತ್ತಾಡುತ್ತಲೇ ಇರುತ್ತಾರೆ. ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗೋದೇ ಇಲ್ಲ. ಆದರೆ, ನಿನ್ನೆಯವರೆಗೆ ಜಗಳವಾಡುತ್ತಿದ್ದ ಈ ಸ್ಪರ್ಧಿಗಳೀಗ ಬದಲಾಗಿದ್ದಾರೆ. ಈ ವಾರದ ವೀಕೆಂಡ್​ ಎಪಿಸೋಡ್​ಗಳು ಕಿಚ್ಚ ಸುದೀಪ್​ ಅನುಪಸ್ಥಿತಿಯಲ್ಲಿ ನಡೆಯುತ್ತಿದೆ. ಇಂದಿನ ಸಂಚಿಕೆಯನ್ನು ಬಿಗ್​ ಬಾಸ್​ 7ರ ವಿಜೇತ ಶೈನ್​ ಶೆಟ್ಟಿ ಮತ್ತು ಸ್ಪರ್ಧಿ ಶುಭಾ ಪೂಂಜಾ ನಡೆಸಿಕೊಡಲಿದ್ದಾರೆ.

ಇವರಿಬ್ಬರು ಸೇರಿ ಮನೆಯವರಿಗೆ ಟಾಸ್ಕ್​ ನೀಡಿದ್ದಾರೆ. ಮೊದಲಿಗೆ ಸಂಗೀತಾ ಮತ್ತು ವಿನಯ್​ ಅವರನ್ನು ಮುಂದೆ ನಿಲ್ಲಿಸಿ, ಒಬ್ಬರನೊಬ್ಬರು ಹೊಗಳಿ ಮಾತಾಡುವಂತೆ ಹೇಳಿದ್ದಾರೆ. ಅದರಂತೆ ವಿನಯ್​ ಅವರು 'ಈ ಮನೆಯಲ್ಲಿ ಸಂಗೀತಾಗೆ ಇರುವಷ್ಟು ತಾಳ್ಮೆ ಇನ್ಯಾರಿಗೂ ಇಲ್ಲ' ಎಂದಿದ್ದಾರೆ. ಇದಕ್ಕೆ ಸಂಗೀತಾ, 'ವಿನಯ್​ ನಟನೆಯನ್ನು ಯಾರೂ ಮೀರಿಸೋಕೆ ಸಾಧ್ಯವಿಲ್ಲ' ಎಂದರು. ಕೂಡಲೇ ವಿನಯ್​, 'ಅದನ್ನು ಮೀರಿಸಿದ್ದು ಸಂಗೀತಾ ಒಬ್ಬಳೇ' ಎಂದಿದ್ದಾರೆ. ಇದನ್ನು ಕೇಳಿ ಸಂಗೀತಾ ಸೇರಿ ಮನೆ ಮಂದಿಯೆಲ್ಲಾ ಬಿದ್ದೂ ಬಿದ್ದು ನಕ್ಕರು.

ಬಳಿಕ ವಿನಯ್​, 'ಸಂಗೀತಾ ನೆಗೆಟಿವ್​ ಪರ್ಸನ್​ ಅಲ್ಲ' ಎಂದು ಹೇಳಿದರು. ಇದಕ್ಕೆ ಸಂಗೀತಾ, 'ವಿನಯ್​ ತುಂಬಾ ಸ್ವೀಟ್​ ಪರ್ಸನ್​. ಅವರ ಜೊತೆ ಹೆಚ್ಚು ಟೈಮ್​ ಸ್ಪೆಂಡ್​ ಮಾಡ್ಬೇಕು' ಎಂದಿದ್ದಾರೆ. ಇದಕ್ಕೆ ವಿನಯ್​, 'ಇನ್ನೂ 23 ದಿನ ಇದೆ' ಎನ್ನುವಾಗ ಕಾರ್ತಿಕ್​ ಜೋಶ್​ನಲ್ಲಿ ಬೊಬ್ಬೆ ಹೊಡೆಯುತ್ತಾರೆ. ಆಗ ಶೈನ್​ ಶೆಟ್ಟಿ, 'ಈ ಸೀಸನ್​ ಮುಗಿಯುವುದರೊಳಗೆ ನಿಮಗಿಬ್ಬರಿಗೆ ಲವ್​ ಆದ್ರೆ ಅಂತ ನಂಗೆ ಟೆನ್ಶನ್​ ಆಗ್ತಿದೆ' ಎಂದು ಹಾಸ್ಯ ಮಾಡಿದರು. ಕೊನೆಯಲ್ಲಿ ವಿನಯ್​ ಮತ್ತು ಸಂಗೀತಾ ಪರಸ್ಪರ ಅಪ್ಪಿಕೊಂಡಿದ್ದಾರೆ.

ಶನಿವಾರದ ಸಂಚಿಕೆಗೆ ಬಿಗ್​ ಬಾಸ್​​ ವಿಜೇತೆ, ಹಿರಿಯ ನಟಿ ಶ್ರುತಿ ಆಗಮಿಸಿ ನ್ಯಾಯ ಪಂಚಾಯಿತಿ ನಡೆಸಿಕೊಟ್ಟಿದ್ದರು. ಹೊಸ ಸಂಚಿಕೆಯಲ್ಲಿ ಶೈನ್​ ಶೆಟ್ಟಿ ಮತ್ತು ಶುಭಾ ಪೂಂಜಾ ಮಿಂಚು ಹರಿಸಲಿದ್ದಾರೆ. 'ಮನೆಗೆ ಬಂದ್ರು ಶೈನ್ ಶೆಟ್ಟಿ ಮತ್ತು ಶುಭಾ; ಇಂದು ಡಬಲ್ ಎಲಿಮಿನೇಶನ್?' ಶೀರ್ಷಿಕೆಯಡಿ ಇಂದಿನ ಸಂಚಿಕೆಯ ಮತ್ತೊಂದು ಪ್ರೋಮೋ ಅನಾವರಣಗೊಂಡಿದ್ದು, ಪ್ರೇಕ್ಷಕರು ಸಾಕಷ್ಟು ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ.

ಈ ವಾರ ಮನೆಯಿಂದ ಹೊರಹೋಗೋರ್ಯಾರು? ಎಲಿಮಿನೇಷನ್​ನಿಂದ ಸೇಫ್​ ಆಗೋರ್ಯಾರು? ಸಂಗೀತಾ ಮತ್ತು ವಿನಯ್​ ನಡುವಿನ ಸ್ನೇಹ ಹೀಗೆಯೇ ಮುಂದುವರೆಯುತ್ತಾ? ಎಂಬ ಬಗ್ಗೆ ತಿಳಿದುಕೊಳ್ಳಲು ಬಿಗ್‌ ಬಾಸ್ ಕನ್ನಡದ 24 ಗಂಟೆಯ ನೇರಪ್ರಸಾರವನ್ನು ಜಿಯೋಸಿನಿಮಾದಲ್ಲಿ ಉಚಿತವಾಗಿ ನೋಡಬಹುದು. ನಿತ್ಯದ ಎಪಿಸೋಡ್‌ಗಳನ್ನು ಕಲರ್ಸ್ ಕನ್ನಡದಲ್ಲಿ ರಾತ್ರಿ 9.30ಕ್ಕೆ ವೀಕ್ಷಿಸಬಹುದಾಗಿದೆ.

ಇದನ್ನೂ ಓದಿ: ಬಿಗ್​ ಬಾಸ್​ಗೆ ಶೈನ್​ ಶೆಟ್ಟಿ, ಶುಭಾ ಪೂಂಜಾ ಎಂಟ್ರಿ: ಈ ವಾರ ಡಬಲ್​ ಎಲಿಮಿನೇಶನ್​!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.