ವಿಶ್ವಕಪ್ ಫೈನಲ್‌ನಲ್ಲಿ ಗೆಲುವು ನಮ್ಮದೇ ಎಂದ ಸೆಲೆಬ್ರಿಟಿಗಳು
Published: Nov 19, 2023, 12:31 PM


ವಿಶ್ವಕಪ್ ಫೈನಲ್‌ನಲ್ಲಿ ಗೆಲುವು ನಮ್ಮದೇ ಎಂದ ಸೆಲೆಬ್ರಿಟಿಗಳು
Published: Nov 19, 2023, 12:31 PM

ಭಾರತ-ಆಸ್ಟ್ರೇಲಿಯಾ ನಡುವಿನ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ದೇಶದ ಗೆಲುವಿಗೆ ಸೆಲೆಬ್ರಿಟಿಗಳು ಶುಭ ಹಾರೈಸಿದ್ದಾರೆ.
ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ಏಕದಿನ ವಿಶ್ವಕಪ್ ಕ್ರಿಕೆಟ್ 2023ರ ಫೈನಲ್ ಪಂದ್ಯ ಇನ್ನೇನು ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಹೈವೋಲ್ಟೇಜ್ ಪಂದ್ಯ ನಡೆಯಲಿದ್ದು, ಇಡೀ ವಿಶ್ವವೇ ಎದುರು ನೋಡುತ್ತಿದೆ. ನಮ್ಮ ದೇಶ ಗೆದ್ದು ಬರಲಿ ಎಂದು ಭಾರತದಾದ್ಯಂತ ಪ್ರಾರ್ಥನೆ, ಪೂಜೆ, ಹೋಮ ಹವನಾದಿಗಳು ನಡೆಯುತ್ತಿವೆ. ಚಿತ್ರರಂಗದ ಗಣ್ಯರು ಕ್ರಿಕೆಟ್ ತಂಡಕ್ಕೆ ಶುಭ ಹಾರೈಸಿದ್ದಾರೆ. ಈಗಾಗಲೇ ಹಲವರು ಕ್ರೀಡಾಂಗಣ ಕೂಡಾ ತಲುಪಿದ್ದಾರೆ.
ಬಾಲಿವುಡ್ ನಟಿ ಊರ್ವಶಿ ರೌಟೇಲಾ ಅವರು ವಿಶ್ವಕಪ್ ಫೈನಲ್ ಬಗೆಗಿನ ತಮ್ಮ ನಿರೀಕ್ಷೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಭಾರತದ ಗೆಲುವಿನ ಭರವಸೆಯನ್ನೂ ವ್ಯಕ್ತಪಡಿಸಿದ್ದಾರೆ. ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು, "ನಾನು ಅತ್ಯಂತ ಉತ್ಸುಕಳಾಗಿದ್ದೇನೆ. ಭಾರತ ಟ್ರೋಫಿ ಗೆಲ್ಲಲಿದೆ ಎಂಬ ವಿಶ್ವಾಸವಿದೆ" ಎಂದರು.
ಹಿರಿಯ ನಟ ಅನುಪಮ್ ಖೇರ್, ಟೀಮ್ ಇಂಡಿಯಾ ಅದ್ಭುತ ಪ್ರದರ್ಶನ ನೀಡಲಿದೆ ಎಂಬ ವಿಶ್ವಾಸದಲ್ಲಿದ್ದಾರೆ. ವಿಡಿಯೋ ಸಂದೇಶ ಹಂಚಿಕೊಂಡಿರುವ ಅವರು, ಶುಭ ಹಾರೈಕೆಗಳನ್ನು ತಿಳಿಸಿದ್ದಾರೆ. "ಇದು ಇಂಡಿಯಾ ವರ್ಸಸ್ ಆಸ್ಟ್ರೇಲಿಯಾ ದಿನ. ಇಡೀ ಜಗತ್ತು ಭಾರತದ ವಿಜಯಕ್ಕೆ ಸಾಕ್ಷಿಯಾಗಲಿದೆ. ನಿಸ್ಸಂದೇಹವಾಗಿ ನಾವು ವಿಜೇತರಾಗಿ ಹೊರಹೊಮ್ಮುತ್ತೇವೆ" ಎಂದಿದ್ದಾರೆ. ನಟ ಆಯುಷ್ಮಾನ್ ಖುರಾನಾ ಸಹ ಟೀಮ್ ಇಂಡಿಯಾ ಗೆಲುವಿಗೆ ಶುಭ ಹಾರೈಸಿದ್ದಾರೆ.
ಸಂಗೀತ ಸಂಯೋಜಕ ಪ್ರೀತಮ್ ಚಕ್ರವರ್ತಿ ಭಾರತೀಯ ಕ್ರಿಕೆಟ್ ತಂಡಕ್ಕೆ ಶುಭ ಹಾರೈಸಿದ್ದಾರೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಂದ್ಯ ವೀಕ್ಷಿಸಲಿರುವ ಸೆಲೆಬ್ರಿಟಿಗಳ ಪೈಕಿ ಪ್ರೀತಮ್ ಚಕ್ರವರ್ತಿ ಕೂಡ ಓರ್ವರು. "ಭಾರತ ಮತ್ತು ಆಸ್ಟ್ರೇಲಿಯಾವನ್ನು ಒಳಗೊಂಡ ಯಾವುದೇ ಪಂದ್ಯ ಹೆಚ್ಚಿನ ನಿರೀಕ್ಷೆ ಹೊಂದಿರುತ್ತದೆ. ವಿಶೇಷವಾಗಿ ಎರಡೂ ತಂಡಗಳು ವಿಶ್ವಕಪ್ ಫೈನಲ್‌ನಲ್ಲಿ ಮುಖಾಮುಖಿಯಾದಾಗ ಉತ್ಸಾಹ, ನಿರೀಕ್ಷೆ, ಕುತೂಹಲ ಗರಿಗೆದರುತ್ತವೆ. ನಾನು ಎರಡೂ ತಂಡಗಳಿಗೆ ಶುಭ ಹಾರೈಸುತ್ತೇನೆ. ಆದರೆ ಭಾರತದ ಗೆಲುವಿಗೆ ಸಾಕ್ಷಿಯಾಗಲು ಇಚ್ಛಿಸುತ್ತೇನೆ. ಕ್ರೀಡಾಂಗಣದಲ್ಲಿ ಪ್ರದರ್ಶನ ನೀಡಲು ಸಜ್ಜಾಗಿದ್ದೇನೆ. ಪಂದ್ಯದ ಮೊದಲಾರ್ಧದ ಆ್ಯಕ್ಷನ್ ಮಿಸ್ ಮಾಡಿಕೊಳ್ಳಬಹುದು. ಚೆನ್ನಾಗಿ ಆಡಿ, ನಮ್ಮ ಧ್ವಜವನ್ನು ಮತ್ತಷ್ಟು ಎತ್ತರಕ್ಕೇರಿಸಿ" ಎಂದು ಹೇಳಿದ್ದಾರೆ.
ಇದಕ್ಕೂ ಮೊದಲು, ನಟ ಮತ್ತು ಸಮಾಜಸೇವಕ ಸೋನು ಸೂದ್ ಅವರು ಟೀಮ್ ಇಂಡಿಯಾಕ್ಕೆ ಅಡ್ವಾನ್ಸ್ ಆಗಿ ಅಭಿನಂದನೆ ತಿಳಿಸಿದ್ದಾರೆ. ಅಸಾಧಾರಣ ಆಟಗಾರರನ್ನು ಭಾರತ ಹೊಂದಿರುವುದರಿಂದ ದೇಶದ ಗೆಲುವು ಖಚಿತ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅದೇ ರೀತಿ, ರವೀನಾ ಟಂಡನ್, ವಿವೇಕ್ ಒಬೆರಾಯ್, ಪಂಕಜ್ ತ್ರಿಪಾಠಿ ಸೇರಿದಂತೆ ಇತರ ಗಣ್ಯರು ತಂಡಕ್ಕೆ ಶುಭ ಹಾರೈಸಿದರು.
