ETV Bharat / entertainment

ಹಸೆಮಣೆ ಏರಿದ 'ಸಿಂಹಪ್ರಿಯಾ'...ಫೋಟೋ ಹಂಚಿಕೊಂಡ ಡಾಲಿ

author img

By

Published : Jan 26, 2023, 3:19 PM IST

Updated : Jan 26, 2023, 3:28 PM IST

ಇಂದು ಸ್ಯಾಂಡಲ್​ವುಡ್​​ ಲವ್​ಬರ್ಡ್ಸ್​​ಗಳಾದ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಸಪ್ತಪದಿ ತುಳಿದಿದ್ದಾರೆ.

vasishta simha Haripriya Marriage
ವಸಿಷ್ಠ ಸಿಂಹ ಹರಿಪ್ರಿಯಾ ಮದುವೆ

ಕನ್ನಡದ ಚಿತ್ರರಂಗದ ಬಹುಬೇಡಿಕೆ ತಾರಾ ಜೋಡಿ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಇಂದು ಹಸೆಮಣೆ ಏರುವ ಮೂಲಕ ತಮ್ಮ ಪ್ರೀತಿಗೆ ಮದುವೆಯ ಮುದ್ರೆ ಒತ್ತಿದ್ದಾರೆ. ಇಂದು ಗುರು ಹಿರಿಯರ ಸಮ್ಮುಖದಲ್ಲಿ ಹಸೆಮಣೆ ಏರಿದ್ದು, ನಟ ರಾಕ್ಷಸ ಡಾಲಿ ಧನಂಜಯ್​ ತಮ್ಮ ಸೋಷಿಯಲ್​ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ಗೌಪ್ಯವಾಗಿ ಎಂಗೇಜ್​ಮೆಂಟ್​​ ಮಾಡಿಕೊಂಡು ಬಳಿಕ ತಾವು ಪ್ರೇಮಿಗಳೆಂದು ಎಂದು ಸಾಬೀತು ಪಡಿಸಿದ್ದ ಜೋಡಿ ಇಂದು ವೈವಾಹಿಕ ಬಂಧನಕ್ಕೆ ಒಳಗಾಗುವ ಮೂಲಕ ಅಭಿಮಾನಿಗಳ ಸಂತಸಕ್ಕೆ ಕಾರಣರಾಗಿದ್ದಾರೆ.

ಮದುವೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದ ಜೋಡಿ: ತಮ್ಮ ಮದುವೆ ಬಗ್ಗೆ ಕೆಲ ದಿನಗಳ ಹಿಂದೆ ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡಿದ್ದರು. 'ನಮ್ಮಿಬ್ಬರ ಪ್ರೀತಿಯ ಬಗ್ಗೆ ಕನ್ನಡ ಚಿತ್ರರಂಗದವರಿಗೆ ಅಷ್ಟಾಗಿ ತಿಳಿದಿಲ್ಲ. ನಾವು ಪ್ರೀತಿಸಿದ್ದು, ಈಗ ಮನೆಯವರ ಒಪ್ಪಿಗೆ ಮೇರೆಗೆ ಅರೆಂಜ್ ಮ್ಯಾರೇಜ್ ಆಗುತ್ತಿದೆ. ಮನೆಯವರು ಎಲ್ಲಾ ರೀತಿಯ ತಯಾರಿ ಆರಂಭಿಸಿದ್ದಾರೆ. ಇದೇ ಜನವರಿ 26ಕ್ಕೆ ಮದುವೆ ಆಗಲಿದ್ದೇವೆ. ನಾವು ಸರಳವಾಗಿ ಮದುವೆ ಆಗುತ್ತಿಲ್ಲ, ಬಹಳ ಅದ್ಧೂರಿಯಾಗಿ ಮದುವೆ ಆಗುತ್ತಿದ್ದೇವೆ' ಎಂದು ನಟ ವಸಿಷ್ಠ ಸಿಂಹ ಮಾಹಿತಿ ಹಂಚಿಕೊಂಡಿದ್ದರು.

ಶುಭ ಕೋರಿದ ಡಾಲಿ ಧನಂಜಯ್​: ನಟ ಡಾಲಿ ಧನಂಜಯ್​ ಈ ಜೋಡಿಯೊಂದಿಗಿನ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಮದುವೆಯ ಶುಭಾಶಯಗಳು ಪ್ರೀತಿಯ ಚಿಟ್ಟೆ ಮತ್ತು ಹರಿಪ್ರಿಯಾ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: 'ನಮ್ಮ ಮದುವೆಗೆ ಬನ್ನಿ..': ಮನಬಿಚ್ಚಿ ಮಾತನಾಡಿದ ವಸಿಷ್ಠ ಸಿಂಹ, ಹರಿಪ್ರಿಯಾ

ಸ್ಯಾಂಡಲ್​ವುಡ್​ ತಾರಾ ದಂಪತಿ: ಪ್ರೀತಿಸಿ ವೈವಾಹಿಕ ಜೀವನ ಆರಂಭಿಸಿರುವ ಕೆಲ ತಾರಾ ಜೋಡಿಗಳು ನಮ್ಮ ಸ್ಯಾಂಡಲ್​ವುಡ್​ನಲ್ಲಿದೆ. ಈ ಸಾಲಿಗೆ ನಟ ವಸಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯಾ ದಂಪತಿ ಹೊಸ ಸೇರ್ಪಡೆ. ಕೆಲ ದಿನಗಳ ಹಿಂದೆ ಇವರಿಬ್ಬರೂ ಮದುವೆ ಆಗಲಿದ್ದಾರೆ ಎಂಬ ವಿಷಯ ಸಖತ್​ ಸುದ್ದಿ ಮಾಡಿತ್ತು. ಬಳಿಕ ಬೆರಳೆಣಿಕೆ ಸಂಖ್ಯೆಯ ಆಪ್ತರಿಷ್ಟರ ಸಮ್ಮುಖದಲ್ಲಿ ಗೌಪ್ಯವಾಗಿ ನಿಶ್ಚಿತಾರ್ಥ ಸಮಾರಂಭ ನಡೆದಿದೆ ಎಂಬ ಸುದ್ದಿ ಸಿಕ್ಕಾಪಟ್ಟೆ ವೈರಲ್​ ಆಯಿತು.

ದುಬೈ ಪ್ರವಾಸ ಮುಗಿಸಿಕೊಂಡು ಇಬ್ಬರೂ ಜೊತೆಯಾಗಿ ಕೈ ಕೈ ಹಿಡಿದು ಬಂದಿದ್ದೇ ಈ ಸುದ್ದಿ ಹಬ್ಬಲು ಕಾರಣ. ಅದಾದ ಕೆಲವೇ ದಿನಗಳಲ್ಲಿ ನಿಶ್ಚಿತಾರ್ಥದ ಫೋಟೋಗಳನ್ನು ತಮ್ಮ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡರು. ತಮ್ಮ ಪ್ರೀತಿ ಹೇಗೆ ಆರಂಭವಾಯಿತು ಎಂಬುದರ ಬಗ್ಗೆಯೂ ಸೋಷಿಯಲ್​ ಮೀಡಿಯಾದಲ್ಲಿ ತಿಳಿಸಿದ್ದರು. ಅಂತಿಮವಾಗಿ ಇಂದು ಇಬ್ಬರೂ ಮದುವೆ ಆಗಿದ್ದು, ಆತ್ಮೀಯರು, ಕುಟುಂಬಸ್ಥರು ಸೇರಿದಂತೆ ಅಭಿಮಾನಿಗಳಲ್ಲಿ ಸಂತಸ ಮನೆ ಮಾಡಿದೆ.

ಇದನ್ನೂ ಓದಿ: ಹರಿಪ್ರಿಯಾ-ವಸಿಷ್ಠ ಸಿಂಹ ನಿಶ್ಚಿತಾರ್ಥ; ಎಕ್ಸ್‌ಕ್ಲೂಸಿವ್ ಫೋಟೋಗಳನ್ನು ಹಂಚಿಕೊಂಡ ತಾರಾ ಜೋಡಿ

ಜನವರಿ 26ರಂದು ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಮದುವೆ ಹಾಗೂ ಜನವರಿ 28 ರಂದು ಬೆಂಗಳೂರಿನಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ ಎಂದು ಕೆಲ ದಿನಗಳ ಹಿಂದೆ ಮಾಹಿತಿ ಹಂಚಿಕೊಂಡಿತ್ತು ಈ ಜೋಡಿ. ಹರಿಪ್ರಿಯಾ ಅವರೊಂದಿಗೆ 2016ರಲ್ಲಿ ಮಾತು‌ಕತೆ ಆರಂಭವಾಗಿ ಬಳಿಕ ಸ್ನೇಹ ಆಯ್ತು. ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾ‌ ಮಾಡಿದ್ದ ಸಂದರ್ಭ ಹರಿಪ್ರಿಯಾ ಚಿತ್ರ ನೋಡಿ ನನಗೆ ವಿಶ್ ಮಾಡಿದ್ದರು. ಕನ್ನಡ ಹಾಗೂ ತೆಲುಗು ಸಿನಿಮಾಗಳಲ್ಲಿ ಅಭಿನಯಿಸಿ‌ ಸ್ಟಾರ್ ನಟಿಯಾಗಿ‌ ಗುರುತಿಸಿಕೊಂಡ ಅವರು ನನಗೆ ವಿಶ್​ ಮಾಡಿದ್ದು ಬಹಳ ಸಂತೋಷ ಕೊಡ್ತು, ಅಚ್ಚರಿಯೂ ಆಗಿತ್ತು. ಅಲ್ಲಿಂದ ಪರಿಚಯ ಶುರುವಾಯಿತು. ನಮ್ಮದು‌ ಮೂರು ವರ್ಷದ ಲವ್ ಸ್ಟೋರಿ ಎಂದು ವಸಿಷ್ಠ ಸಿಂಹ ತಿಳಿಸಿದ್ದರು.

Last Updated : Jan 26, 2023, 3:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.