ETV Bharat / entertainment

ಬಿಡುಗಡೆಗೆ ಸಜ್ಜಾಗುತ್ತಿದೆ 'ಕರಟಕ ದಮನಕ': ಶಿವಣ್ಣ - ಪ್ರಭುದೇವ ಸಿನಿಮಾ ಮೇಲೆ ಬೆಟ್ಟದಷ್ಟು ನಿರೀಕ್ಷೆ

author img

By ETV Bharat Karnataka Team

Published : Aug 24, 2023, 2:36 PM IST

Karataka Damanaka movie: 'ಕರಟಕ ದಮನಕ' ಸಿನಿಮಾದ ಬಹುತೇಕ ಚಿತ್ರೀಕರಣ ಪೂರ್ಣಗೊಂಡಿದ್ದು, ಚಿತ್ರತಂಡ ಕೆಲ ಮಾಹಿತಿ ಹಂಚಿಕೊಂಡಿದೆ.

Shivanna Prabhudeva
ಪ್ರಭುದೇವ ಶಿವ ರಾಜ್​​​ಕುಮಾರ್

ಕರನಾಡ ಚಕ್ರವರ್ತಿ ಶಿವ ರಾಜ್​​​ಕುಮಾರ್ ಹಾಗೂ ಇಂಡಿಯನ್ ಮೈಕಲ್ ಜಾಕ್ಸನ್ ಖ್ಯಾತಿಯ ಪ್ರಭುದೇವ ಅಭಿನಯದ ಮುಂದಿನ ಬಹುನಿರೀಕ್ಷಿತ ಸಿನಿಮಾ ಕರಟಕ ದಮನಕ. ಶೀರ್ಷಿಕೆಯಿಂದಲೇ ಸೌತ್ ಸಿನಿಮಾ ರಂಗದಲ್ಲಿ ಗಮನ ಸೆಳೆಯುತ್ತಿರುವ ಈ ಚಿತ್ರವನ್ನು ವಿಕಟಕವಿ ಯೋಗರಾಜ್ ಭಟ್ ನಿರ್ದೇಶಿಸುತ್ತಿದ್ದಾರೆ. ಮಾಸ್ ಎಂಟರ್ಟೈನ್ಮೆಂಟ್ ಸಿನಿಮಾ ಕುರಿತು ಪ್ರೇಕ್ಷಕರಲ್ಲಿ ಕುತೂಹಲ ಮೂಡಿದೆ.

ಮಾಹಿತಿ ಹಂಚಿಕೊಂಡ 'ಕರಟಕ ದಮನಕ' ತಂಡ: ಬಹುತೇಕ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಜ್ಜಾಗಿರುತ್ತಿರುವ 'ಕರಟಕ ದಮನಕ‌' ಚಿತ್ರದ ಕುರಿತು ಶಿವ ರಾಜ್​ಕುಮಾರ್, ಪ್ರಭುದೇವ, ಯೋಗರಾಜ್ ಭಟ್, ನಟಿಯರಾದ‌ ಪ್ರಿಯಾ ಆನಂದ್, ನಿಶ್ವಿಕಾ‌ ನಾಯ್ಡು, ಹಿರಿಯ ನಟ‌ ಮುಖ್ಯಮಂತ್ರಿ ಚಂದ್ರು, ತನಿಕೆಲ್ಲ ಭರಣಿ, ಕ್ಯಾಮರಾಮ್ಯಾನ್ ಸಂತೋಷ್ ರೈ ಪಾತಾಜೆ ಸೇರಿದಂತೆ ಇಡೀ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

Karataka Damanaka movie
'ಕರಟಕ ದಮನಕ' ತಂಡ

ಶೇ.90ರಷ್ಟು ಚಿತ್ರೀಕರಣ ಪೂರ್ಣ: ಇಂದಿಗೆ ಈ ಚಿತ್ರ ಪ್ರಾರಂಭವಾಗಿ ಒಂದು ವರ್ಷಗಳಾಗಿದೆ ಎಂದು ಮಾತು ಆರಂಭಿಸಿದ ನಿರ್ದೇಶಕ ಯೋಗರಾಜ್ ಭಟ್, "ಕರಟಕ ದಮನಕ ಎಂದರೆ ಎರಡು ಕುತಂತ್ರಿ ನರಿಗಳ ಹೆಸರು. ಸಾಮಾನ್ಯವಾಗಿ ಇಬ್ಬರನ್ನು ಹೆಚ್ಚು ಸಲ ಒಟ್ಟಾಗಿ ನೋಡಿದಾಗ ಕರಟಕ ದಮನಕ ಎನ್ನುವುದು ಉಂಟು. ನಮ್ಮ ಚಿತ್ರದಲ್ಲಿ ಈ ಪಾತ್ರಗಳನ್ನು ಶಿವಣ್ಣ ಹಾಗೂ ಪ್ರಭುದೇವ ನಿರ್ವಹಿಸಿದ್ದಾರೆ. ಅವರಿಬ್ಬರ ಎನರ್ಜಿ ನೋಡಿದರೆ ನಿಜಕ್ಕೂ ಖುಷಿಯಾಗುತ್ತದೆ. ರಾಕ್ ಲೈನ್ ವೆಂಕಟೇಶ್ ಅವರು ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ವಿ. ಹರಿಕೃಷ್ಣ ಸಂಗೀತ ಸಂಯೋಜನೆಯ ಏಳು ಹಾಡುಗಳು ನಮ್ಮ ಚಿತ್ರದಲ್ಲಿವೆ. ನಾನು ಹಾಗೂ ರಾಕ್ ಲೈನ್ ವೆಂಕಟೇಶ್ ಸಹ ಚಿತ್ರದಲ್ಲಿ ನಟಿಸಿದ್ದೇವೆ. ಶೇ. 90ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ. ಸಾಂಗ್​ ಶೂಟಿಂಗ್​​ ಮಾತ್ರ ಬಾಕಿ ಇದೆ'' ಎಂದು ಮಾಹಿತಿ ನೀಡಿದರು.

Karataka Damanaka movie
ಬಿಡುಗಡೆಗೆ ಸಜ್ಜಾಗುತ್ತಿದೆ 'ಕರಟಕ ದಮನಕ'

ಯೋಗರಾಜ್ ಭಟ್ ಚಿತ್ರಗಳು ನನಗಿಷ್ಟ.. ನಂತರ ಮಾತು ಶುರು ಮಾಡಿದ ಹ್ಯಾಟ್ರಿಕ್​​ ಹೀರೋ ಶಿವ ರಾಜ್​ಕುಮಾರ್, ''ರಾಕ್ ಲೈನ್ ಪ್ರೊಡಕ್ಷನ್ಸ್ ನನ್ನ ಕುಟುಂಬವಿದ್ದಂತೆ. ಯೋಗರಾಜ್ ಭಟ್ ಅವರ ಚಿತ್ರಗಳು ನನಗೆ ಇಷ್ಟ. ಅವರ ಎಷ್ಟೋ ಸಿನಿಮಾಗಳನ್ನು ಚಿತ್ರಮಂದಿರಕ್ಕೆ ಹೋಗಿ ವೀಕ್ಷಿಸಿದ್ದೇನೆ. ಅವರ ನಿರ್ದೇಶನದಲ್ಲಿ ನಟಿಸುತ್ತಿರುವುದು ಬಹಳ ಸಂತೋಷಕರ ವಿಚಾರ. ಗೆಳೆಯ ಪ್ರಭುದೇವ ಹಾಗೂ ನಾನು ಈ ಚಿತ್ರದಲ್ಲಿ ಒಟ್ಟಿಗೆ ಅಭಿನಯಿಸುತ್ತಿದ್ದೇವೆ. ಈ ಸಿನಿಮಾದಲ್ಲಿ ನಾವಿಬ್ಬರು ಸ್ನೇಹಿತರಾಗಿಯೇ ನಟಿಸುತ್ತಿದ್ದೇವೆ. ಇದೊಂದು ‌ಹೊಸ ಜಾನರ್ ಕಥೆ'' ಎಂದು ತಿಳಿಸಿದರು.

ಶಿವಣ್ಣನ ಬಗ್ಗೆ ಗುಣಗಾನ: ಬಳಿಕ‌ ನಟ ಪ್ರಭುದೇವ ಮಾತನಾಡಿ, ''ಶಿವ ರಾಜ್​​ಕುಮಾರ್ ಅವರ ಎನರ್ಜಿ ನೋಡಿದರೆ ಖುಷಿಯಾಗುತ್ತದೆ. ಅವರ ಜೊತೆ ನಟಿಸುತ್ತಿರುವುದು ನನಗೆ ಹೆಚ್ಚಿನ ಸಂತಸ ತಂದಿದೆ. ಯೋಗರಾಜ್ ಭಟ್ ಅವರ ನಿರ್ದೇಶನ ಹಾಗೂ ಎಲ್ಲಾ ಕಲಾವಿದರ ಅಭಿನಯ ಚೆನ್ನಾಗಿದೆ'' ಎಂದು ತಿಳಿಸಿದರು.

ಇದನ್ನೂ ಓದಿ: ವೈವಾಹಿಕ ಜೀವನಕ್ಕೆ ಕಾಲಿಟ್ಟ ಹರ್ಷಿಕಾ - ಭುವನ್ : ಸಮಾರಂಭಕ್ಕೆ ಮಾಜಿ ಸಿಎಂ BSY ಸೇರಿ ಗಣ್ಯರು ಸಾಕ್ಷಿ

''ನಮ್ಮ ಸಂಸ್ಥೆಯಿಂದ ಶಿವ ರಾಜ್​​ಕುಮಾರ್ ಅವರ ಸಿನಿಮಾ ಬಂದು ಬಹಳ ವರ್ಷಗಳಾಗಿತ್ತು. ಪ್ರಭುದೇವ ಅವರ ಚಿತ್ರ ನಿರ್ಮಾಣ ಮಾಡುವುದು ನನ್ನ ಕನಸಾಗಿತ್ತು. ಈ ಇಬ್ಬರು ನಟರು ಈ ಸಿನಿಮಾದಲ್ಲಿ ಅಭಿನಯಿಸುತ್ತಿರುವುದು ನಿಜಕ್ಕೂ ಖುಷಿಯ ವಿಚಾರ. ಯೋಗರಾಜ್ ಭಟ್ ಒಳ್ಳೆಯ ಕಥೆ ಮಾಡಿಕೊಂಡಿದ್ದಾರೆ. ಹರಿಕೃಷ್ಣ ಸುಮಧುರ ಹಾಡುಗಳನ್ನು ನೀಡುತ್ತಿದ್ದಾರೆ'' - ನಿರ್ಮಾಪಕ ರಾಕ್ ಲೈನ್ ವೆಂಕಟೇಶ್.

ಇದನ್ನೂ ಓದಿ: ರಾಜಮೌಳಿ - ಮಹೇಶ್​ ಬಾಬು ಕಾಂಬೋದ ಮುಂದಿನ ಸಿನಿಮಾದಲ್ಲಿ ಹಾಲಿವುಡ್​ ಸ್ಟಾರ್ಸ್!

ಚಿತ್ರಕ್ಕೆ ವಿ ಹರಿಕೃಷ್ಣ ಸಂಗೀತವಿದ್ದು, ಸಂತೋಷ್ ರೈ ಪಾತಾಜೆ ಅವರ ಕ್ಯಾಮರಾ ವರ್ಕ್ ಇದೆ. ರಾಕ್‌ಲೈನ್ ವೆಂಕಟೇಶ್ ಬ್ಯಾನರ್​ನಲ್ಲಿ ಕರಟಕ ದಮನಕ ನಿರ್ಮಾಣ ಆಗುತ್ತಿದ್ದು, ಇದೇ ಸಾಲಿನ ಕೊನೆಯಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.