ETV Bharat / entertainment

'Y Plus' ಭದ್ರತೆಯೊಂದಿಗೆ ತಮ್ಮ ಮುಂಬೈ ನಿವಾಸದಿಂದ ಹೊರಬಂದ ಶಾರುಖ್​ ಖಾನ್​

author img

By ETV Bharat Karnataka Team

Published : Oct 10, 2023, 6:52 PM IST

Updated : Oct 10, 2023, 6:59 PM IST

Shah Rukh Khan: ಮಹಾರಾಷ್ಟ್ರ ಸರ್ಕಾರ ಬಾಲಿವುಡ್​ ನಟ ಶಾರುಖ್​ ಖಾನ್ ಅವರಿಗೆ ವೈ ಪ್ಲಸ್ ಶ್ರೇಣಿಯ ಭದ್ರತೆ ಒದಗಿಸಿದೆ.

Shah Rukh Khan
ಶಾರುಖ್​ ಖಾನ್​

ಬಾಲಿವುಡ್ ಕಿಂಗ್ ಖಾನ್ ಶಾರುಖ್ ಮತ್ತೊಮ್ಮೆ ತಮ್ಮ ಸ್ಟಾರ್​ಡಮ್​ ಸಾಬೀತುಪಡಿಸಿದ್ದಾರೆ. 2023ರಲ್ಲಿ ಎರಡು ಬ್ಲಾಕ್​ಬಸ್ಟರ್​​ ಸಿನಿಮಾಗಳನ್ನು ಕೊಟ್ಟ ಏಕೈಕ ನಟ ಇವರು. ನಾಲ್ಕು ವರ್ಷಗಳ ಬ್ರೇಕ್​ ಬಳಿಕ ಬಂದ ಬಾದ್​ ಶಾ ಅಭೂತಪೂರ್ವ ಯಶಸ್ಸಿನೊಂದಿಗೆ ಅಭಿಮಾನಿಗಳ ಸಂಖ್ಯೆ ಹೆಚ್ಚಿಸಿಕೊಂಡಿದ್ದಾರೆ. ಎರಡು ಚಿತ್ರಗಳ ಭರ್ಜರಿ ಯಶಸ್ಸು ಕೆಲವರಿಗೆ ಕಿರಿಕಿರಿಯಾದಂತೆ ಕಾಣುತ್ತಿದೆ. ಹೌದು, ಕೋಟ್ಯಂತರ ಅಭಿಮಾನಿಗಳ ಮೆಚ್ಚಿನ ನಟನಿಗೆ ಇತ್ತೀಚೆಗಷ್ಟೇ ಕೊಲೆ ಬೆದರಿಕೆ ಬಂದಿತ್ತು.

ಜೀವ ಬೆದರಿಕೆಯ ಬೆನ್ನಲ್ಲೇ, ಮಹಾರಾಷ್ಟ್ರ ಸರ್ಕಾರ ಹಿಂದಿ ಚಿತ್ರರಂಗದ ಬಹುಬೇಡಿಕೆಯ ನಟನ ಜೀವನದ ಬಗ್ಗೆ ಕಾಳಜಿ ವಹಿಸಿ ವೈ ಪ್ಲಸ್ ವರ್ಗದ ಭದ್ರತೆ ಒದಗಿಸಿದೆ. ಇತ್ತೀಚೆಗೆ ಭದ್ರತೆ ನೀಡಲಾಗಿದ್ದು, ಶಾರುಖ್ ಖಾನ್ ಮೊದಲ ಬಾರಿಗೆ ಇಂದು ವೈ ಪ್ಲಸ್ ವರ್ಗದ ಭದ್ರತೆಯೊಂದಿಗೆ ತಮ್ಮ ಮುಂಬೈ ನಿವಾಸದಿಂದ ಕೆಲಸಕ್ಕಾಗಿ ಹೊರಬಂದರು. ನಗರದ ಪ್ರಮುಖ ರಸ್ತೆಗಳಲ್ಲಿ ವೈ ಪ್ಲಸ್​ ಭದ್ರತೆಯೊಂದಿಗೆ ಶಾರುಖ್​ ಖಾನ್​ ತಮ್ಮ ಕಾರಿನಲ್ಲಿ ಪ್ರಯಾಣಿಸುತ್ತಿರುವುದು ಕಂಡುಬಂತು. ಕೆಲ ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿವೆ.

11 ಗಾರ್ಡ್ಸ್: ನಟನೊಂದಿಗೆ ದಿನಪೂರ್ತಿ ಭದ್ರತಾ ಸಿಬ್ಬಂದಿ ಇರಲಿದ್ದಾರೆ. ಶಾರುಖ್​​ ಅವರ ಆರು ವೈಯಕ್ತಿಕ ಭದ್ರತಾ ಸಿಬ್ಬಂದಿ ಜೊತೆಗೆ ಐವರು ಶಸ್ತ್ರಸಜ್ಜಿತ ಗಾರ್ಡ್​ಗಳು ಸೇವೆ ಸಲ್ಲಿಸಲಿದ್ದಾರೆ. ಈ ಹಿಂದೆ ನಟನಿಗೆ ಇಬ್ಬರು ಪೊಲೀಸ್​ ಅಧಿಕಾರಿಗಳನ್ನು ಮಾತ್ರ ನಿಯೋಜಿಸಲಾಗಿತ್ತು. ಇದೀಗ ಒಟ್ಟು 11 ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ. ಪೊಲೀಸ್​ ಅಧಿಕಾರಿಗಳು ನಟನ ಮನೆ ಮುಂದೆಯೇ ಇರುತ್ತಾರೆ.

ಇದನ್ನೂ ಓದಿ: KYC​ ವಂಚಕರಿದ್ದಾರೆ ಹುಷಾರ್! ₹1.50 ಲಕ್ಷ ಕಳೆದುಕೊಂಡ ಬಾಲಿವುಡ್ ನಟ ಅಫ್ತಾಬ್ ಶಿವ್​ದಾಸನಿ

ಮಾಹಿತಿ ಪ್ರಕಾರ, ಈ ವರ್ಷ ನಟನ ಎರಡು ಸಿನಿಮಾಗಳು ಸೂಪರ್ ಹಿಟ್​ ಸಾಲಿಗೆ ಸೇರಿವೆ. ಪಠಾಣ್​ ಮತ್ತು ಜವಾನ್​​ ಎರಡೂ ಕೂಡ 1,000 ಕೋಟಿ ರೂ. ಕ್ಲಬ್​ ಸೇರುವಲ್ಲಿ ಯಶಸ್ವಿಯಾಗಿವೆ. ಜವಾನ್​ ಕಳೆದ ತಿಂಗಳಷ್ಟೇ ತೆರೆಕಂಡು ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಿದೆ. ಇನ್ನೂ ಹಲವು ಥಿಯೇಟರ್​ಗಳಲ್ಲಿ ಜವಾನ್​​ ಪ್ರದರ್ಶನ ಮುಂದುವರಿಸಿದೆ.

ಎಸ್​ಆರ್​ಕೆ ಸಿನಿಮಾಗಳು ಹಲವು ದಾಖಲೆಗಳನ್ನು ಸೃಷ್ಟಿಸಿದ ಬೆನ್ನಲ್ಲೇ, ನಟನಿಗೆ ಅಪರಿಚಿತ ವ್ಯಕ್ತಿಗಳಿಂದ ಕೊಲೆ ಬೆದರಿಕೆಗಳು ಬಂದಿವೆ. ಈ ಹಿನ್ನೆಲೆಯಲ್ಲಿ Y+ ಭದ್ರತೆ ಸಿಕ್ಕಿದೆ. ಆರು ವೈಯಕ್ತಿಕ ಭದ್ರತಾ ಸಿಬ್ಬಂದಿ ಮೂರು ಪಾಳಿಯಲ್ಲಿ ಕೆಲಸ ಮಾಡಲಿದ್ದಾರೆ. ನಟನ ನಿವಾಸದಲ್ಲಿ ಐದು ಶಸ್ತ್ರಸಜ್ಜಿತ ಗಾರ್ಡ್​​ಗಳು ಇರಲಿದ್ದಾರೆ.

ಇದನ್ನೂ ಓದಿ: ರಾಮಾಯಣ: ಶ್ರೀರಾಮನ ಪಾತ್ರಕ್ಕಾಗಿ ಮದ್ಯ, ಮಾಂಸ ತ್ಯಜಿಸಲು ಸಜ್ಜಾದ ರಣ್​​ಬೀರ್​ ಕಪೂರ್​!

ಶಾರುಖ್​ ಖಾನ್​ ಮಾತ್ರವಲ್ಲದೇ, ಅಮಿತಾಭ್​ ಬಚ್ಚನ್​, ಅನುಪಮ್​ ಖೇರ್, ಅಮೀರ್​ ಖಾನ್​ ಅವರಂತಹ ನಟರೂ ಕೂಡ ವೈ ಪ್ಲಸ್​ ಭದ್ರತೆ ಹೊಂದಿದ್ದಾರೆ. ಶಾರುಖ್​ ಖಾನ್​ ಅವರಿಗೆ ಬೆದರಿಕೆ ಕರೆಗಳು ಹೆಚ್ಚುತ್ತಿದ್ದು, ಮುಂದಿನ ದಿನಗಳಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಎಚ್ಚರ ವಹಿಸುವ ಸಲುವಾಗಿ ಭದ್ರತೆ ಹೆಚ್ಚಿಸಲಾಗಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿಗಳು ಮಾಹಿತಿ ಕೊಟ್ಟಿದ್ದಾರೆ.

Last Updated : Oct 10, 2023, 6:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.