ETV Bharat / entertainment

"ಆರು ವರ್ಷದ ಸಂಭ್ರಮ.. 'ರಾಜಕುಮಾರ' ಇಂದು, ಎಂದೆಂದೂ"

author img

By

Published : Mar 24, 2023, 4:59 PM IST

Updated : Mar 24, 2023, 5:23 PM IST

ಅಪ್ಪು ಅಭಿನಯದ 'ರಾಜಕುಮಾರ' ಸಿನಿಮಾ ಬಿಡುಗಡೆಯಾಗಿ ಇಂದಿಗೆ ಆರು ವರ್ಷ ಪೂರೈಸಿದೆ.

rajakumara
ರಾಜಕುಮಾರ

2017ರಲ್ಲಿ ಸಾಮಾಜಿಕ ಸಂದೇಶ ನೀಡುವ ಕಥೆಯೊಂದು ಬೆಳ್ಳಿ ತೆರೆಯಲ್ಲಿ ಮೂಡಿ ಬಂತು. ಪೋಷಕರನ್ನು ವೃದ್ಧಾಶ್ರಮಕ್ಕೆ ನೂಕುವ ಅದೆಷ್ಟೋ ವಿದ್ಯಾವಂತ ಮಕ್ಕಳಿಗೆ ಈ ಸಿನಿಮಾ ಪಾಠ ಹೇಳಿತು. ಮೊದಲಾರ್ಧದ ಫೈಟ್​, ಹಾಡುಗಳು, ಅದೇ ಗ್ಯಾಪ್​ನಲ್ಲಿ ಸ್ವಲ್ಪ ಕಾಮಿಡಿಯಿಂದ ಟೈಮ್​ ಪಾಸ್​ ಆದ್ರೆ, ಇಂಟರ್ವಲ್​ನಲ್ಲಿ ಸಿಗುವ ಟ್ವಿಸ್ಟ್​ ಹಾಗೂ ತದನಂತರದ ಕಥೆ ಪ್ರೇಕ್ಷಕರ ಕಣ್ಣಾಲಿಗಳನ್ನು ತೇವಗೊಳಿಸಿತು.

ಹೌದು. ಸ್ಯಾಂಡಲ್​ವುಡ್​ ಪವರ್​ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅಭಿನಯದ 'ರಾಜಕುಮಾರ' ಚಿತ್ರ ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣುವುದರ ಜೊತೆಗೆ ಕನ್ನಡಿಗರ ಮನಸ್ಸಿಗೆ ಹತ್ತಿರವಾಗಿದೆ. ಈ ಸಿನಿಮಾ ಬಿಡುಗಡೆಯಾಗಿ ಇಂದಿಗೆ ಆರು ವರ್ಷಗಳನ್ನು ಪೂರೈಸಿದೆ. ಚಿತ್ರ ಕಥೆ ಎಷ್ಟು ಫೇಮಸ್​ ಆಗಿದೆಯೋ, ಅದಕ್ಕಿಂತ ಹೆಚ್ಚಾಗಿ ಹಾಡುಗಳು ಸೂಪರ್​ ಹಿಟ್​ ಆಗಿವೆ. 'ಬೊಂಬೆ ಹೇಳುತೈತೆ..ಮತ್ತೆ ಹೇಳುತೈತೆ' ಹಾಡನ್ನು ಜನರು ಇಂದಿಗೂ ಗುನುಗುತ್ತಿರುತ್ತಾರೆ.

ರಾಜಕುಮಾರ ಕಥೆ ತುಂಬಾ ಸಿಂಪಲ್​, ಆದರೆ ಅದನ್ನು ಹೇಳುವ ರೀತಿ ಎಲ್ಲರ ಮನಮುಟ್ಟಿದೆ. ಸಂಭಾಷಣೆ ವಾಸ್ತವಕ್ಕೆ ತೀರಾ ಹತ್ತಿರವಾಗಿದ್ದರೂ, ಒಂದೊಂದು ವಾಕ್ಯವು ಅಷ್ಟು ಅರ್ಥವನ್ನು ಕೊಡುತ್ತದೆ. ಇಡೀ ಸಿನಿಮಾದಲ್ಲಿ ಅಪ್ಪು ತಮ್ಮ ಪಾತ್ರವನ್ನು ನಿರ್ವಹಿಸಿದ ರೀತಿ ನಿಜಕ್ಕೂ ಅದ್ಭುತ. ಸೆಂಟಿಮೆಟ್​ ದೃಶ್ಯ, ಡೈಲಾಗ್ಸ್​, ಡ್ಯಾನ್ಸ್​ ಎಲ್ಲದರಲ್ಲೂ ಅವರ ಅಭಿನಯ ಲೀಲಾಜಾಲವಾಗಿದೆ. ಇನ್ನು ರಾಜಕುಮಾರನ ನಾಯಕಿಯಾಗಿ ಅಭಿನಯಿಸಿದ ಬಹುಭಾಷಾ ನಟಿ ಪ್ರಿಯಾ ಆನಂದ್​ ಅವರಿಗಿದು ಮೊದಲ ಕನ್ನಡ ಸಿನಿಮಾ.

ಅಪ್ಪು ಅಪ್ಪನ ಪಾತ್ರದಲ್ಲಿ ಕಾಣಿಸಿಕೊಂಡ ಶರತ್​ ಕುಮಾರ್​ ನಟನೆ ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ. ಸಣ್ಣ ಪಾತ್ರದಲ್ಲಿ ಅನಂತ್​ ನಾಗ್​ ಕಾಣಿಸಿಕೊಂಡರೂ ಅವರ ಮುಖ ಹಾಗೆಯೇ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ. ಕೊಟ್ಟ ಪಾತ್ರಗಳನ್ನು ಅಚ್ಯುತ್​ ಕುಮಾರ್​, ದತ್ತಣ್ಣ, ಅವಿನಾಶ್​, ಪ್ರಕಾಶ್​ ರೈ, ವಿಜಯಲಕ್ಷ್ಮಿ ಸಿಂಗ್​, ಭಾರ್ಗವಿ ನಾರಾಯಣ್​ ಅಚ್ಚುಕಟ್ಟಾಗಿ ನಿಭಾಯಿಸಿದ್ದರು. ಮೊದಲಾರ್ಧ ಭಾಗದಲ್ಲಿ ರಂಗಾಯಣ ರಘು ಅವರ ಕಾಮಿಡಿ ಕಿಕ್​ ಕೊಟ್ಟರೆ, ಸೆಕೆಂಡ್​ ಹಾಫ್​ನಲ್ಲಿ ಚಿಕ್ಕಣ್ಣ, ಸಾಧುಕೋಕಿಲ ಕಾಮಿಡಿ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಿತ್ತು.

ಇದನ್ನೂ ಓದಿ: ನರೇಶ್​, ಪವಿತ್ರ ಅಭಿನಯದ 'ಮತ್ತೆ ಮದುವೆ' ಚಿತ್ರದ ಫಸ್ಟ್​ಲುಕ್​ ರಿಲೀಸ್

ಈ ಚಿತ್ರ ರಿಲೀಸ್​ ಆದಾಗ ಬಾಕ್ಸ್​ ಆಫೀಸ್​ನಲ್ಲಿ ದೊಡ್ಡ ಕಮಾಲು ಮಾಡಿತ್ತು. ಪಕ್ಕಾ ಫ್ಯಾಮಿಲಿ ಎಂಟರ್​ಟೇನರ್​ ಆಗಿದ್ದ ಈ ಸಿನಿಮಾ 6 ವಾರಗಳಲ್ಲಿ ಮಲ್ಟಿಫ್ಲೆಕ್ಸ್​ನಲ್ಲಿ 6000 ಶೋ ಕಂಡಿತ್ತು. ಇದೀಗ ರಾಜಕುಮಾರ ಸಿನಿಮಾಗೆ ಆರು ವರ್ಷ ತುಂಬಿದ್ದು, ಈ ಕುರಿತು ನಿರ್ದೇಶಕ ಸಂತೋಷ್​ ಆನಂದ್​ ರಾಮ್​, ನಿರ್ಮಾಪಕ ವಿಜಯ್​ ಕಿರಗಂದೂರು ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಹಾಕಿಕೊಂಡು ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ.

"ಆರು ವರ್ಷದ ಸಂಭ್ರಮ. ರಾಜಕುಮಾರ ಇಂದು, ಎಂದೆಂದೂ" ಎಂದು ಹೊಂಬಾಳೆ ಫಿಲ್ಮ್ಸ್​ ಟ್ವೀಟ್​ ಮಾಡಿದೆ. ನಿರ್ದೇಶಕ ಸಂತೋಷ್​ ಆನಂದ್​ ರಾಮ್ "ನನಗೆ, ಹೊಂಬಾಳೆ ಫಿಲಂಸ್​​ಗೆ ಹಾಗೂ ಚಿತ್ರ ತಂಡಕ್ಕೆ ದೊಡ್ಡ ತಿರುವನ್ನು ಕೊಟ್ಟ ಈ ಚಿತ್ರಕ್ಕೆ, ಕನ್ನಡ ಜನತೆಗೆ, ಅಭಿಮಾನಿ ದೇವರುಗಳಿಗೆ, ನನ್ನ 'ಅಪ್ಪು ಅಣ್ಣನಿಗೆ' ನನ್ನ ಕೋಟಿ ಪ್ರಣಾಮಗಳು.." ಎಂದು ಟ್ವೀಟ್​ನಲ್ಲಿ ಬರೆದಿದ್ದಾರೆ.

ಇದನ್ನೂ ಓದಿ: 'ಎಲ್ಲಾ ಗೇಲಿಗೂ ಹೊಡಿ ಗೋಲಿ, ನೀನು ನೀನಾಗಿರು': ಪೆಪ್ಸಿ ಜಾಹೀರಾತಿನಲ್ಲಿ ರಾಕಿಂಗ್​ ಸ್ಟಾರ್​ ಯಶ್

Last Updated : Mar 24, 2023, 5:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.