ಪಠಾಣ್​ ಚಿತ್ರತಂಡಕ್ಕೆ ಶಾಕ್​​: ಆನ್​ಲೈನ್​ನಲ್ಲಿ ಶಾರುಖ್​​ ಸಿನಿಮಾ ಲೀಕ್​?!

author img

By

Published : Jan 25, 2023, 3:35 PM IST

Pathaan movie is not leaked
ಪಠಾಣ್ ಸಿನಿಮಾ ಲೀಕ್​ ()

ಪಠಾಣ್ ಸಿನಿಮಾ ಲೀಕ್​ ಆಗಿದೆ ಎಂದು ಊಹಿಸಲಾಗಿದೆ - ಪಠಾಣ್​ ಚಿತ್ರ ಲೀಕ್​ ಆಗಿಲ್ಲ ಎಂದು ಮೂಲಗಳು ತಿಳಿಸಿವೆ.

ಶಾರುಖ್​ ಖಾನ್​, ದೀಪಿಕಾ ಪಡುಕೋಣೆ, ಜಾನ್​ ಅಬ್ರಹಾಂ ನಟನೆಯ ಪಠಾಣ್​ ಸಿನಿಮಾ ಸುಮಾರು 100 ದೇಶಗಳಲ್ಲಿ ತೆರೆಕಂಡು ಉತ್ತಮ ಪ್ರದರ್ಶನ ಕಾಣುತ್ತಿದೆ. ಆ್ಯಕ್ಷನ್​ ಅವತಾರದಲ್ಲಿ ರೊಮ್ಯಾನ್ಸ್ ಕಿಂಗ್​ ಅಬ್ಬರಿಸಿದ್ದು, ಶಾರುಖ್​ ಅಭಿನಯ ಮೈನವಿರೇಳಿಸುವಂತಿದೆ. ದೀಪಿಕಾ ಪಡುಕೋಣೆ, ಜಾನ್​ ಅಬ್ರಹಾಂ ನಟನೆ ಕೂಡ ಅತ್ಯುತ್ತಮವಾಗಿ ಮೂಡಿ ಬಂದಿದೆ. ಈ ಸಿನಿಮಾ ಭಾರಿ ಮೆಚ್ಚುಗೆ ಜೊತೆಗೆ ವಿರೋಧವನ್ನೂ ಎದುರಿಸುತ್ತಿದೆ. ದೇಶದ ಹಲವೆಡೆ ಪ್ರತಿಭಟನೆ ಭುಗಿಲೆದ್ದಿದ್ದು ಚಿತ್ರತಂಡಕ್ಕೆ ತಲೆನೋವಾಗಿ ಪರಿಣಮಿಸಿದೆ. ಮತ್ತೊಂದೆಡೆ ಸಿನಿಮಾ ಕೆಲ ವೆಬ್​ಸೈಟ್​​ನಲ್ಲಿ ಲೀಕ್​ ಆಗಿದೆ ಎಂದು ಊಹಿಸಿ ಸೋಷಿಯಲ್​ ಮಿಡಿಯಾದಲ್ಲಿ ವದಂತಿ ವೈರಲ್​ ಆಗುತ್ತಿದೆ. ಆದರೆ ಕೆಲ ಮೂಲಗಳನ್ನು ನಂಬುವುದಾದರೆ ಪಠಾಣ್​ ಚಿತ್ರ ಲೀಕ್​ ಆಗಿಲ್ಲ.

ಪಠಾಣ್‌ಗೆ 12A ಸೆನ್ಸಾರ್ ರೇಟಿಂಗ್: ಬ್ರಿಟೀಷ್ ಬೋರ್ಡ್ ಆಫ್ ಫಿಲ್ಮ್ ಕ್ಲಾಸಿಫಿಕೇಶನ್‌ನ ಸ್ಪಷ್ಟೀಕರಣದ ಪ್ರಕಾರ, ಪಠಾಣ್‌ಗೆ 12A ಸೆನ್ಸಾರ್ ರೇಟಿಂಗ್ ಅನ್ನು ನೀಡಿವೆ. 12A ರೇಟಿಂಗ್ ವ್ಯವಸ್ಥೆಯ ಪ್ರಕಾರ, 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯಾರೊಬ್ಬರೂ ಕೂಡ ಆ ಚಲನಚಿತ್ರವನ್ನು ದೊಡ್ಡವರು ಜೊತೆಯಿಲ್ಲದಿದ್ದರೆ ಚಿತ್ರಮಂದಿರದಲ್ಲಿ ನೋಡುವಂತಿಲ್ಲ. 12 ವರ್ಷದೊಳಗಿನ ಮಗುವನ್ನು ಥಿಯೇಟರ್​ಗೆ ಕರೆದೊಯ್ಯಲು ಯೋಜಿಸುವ ವಯಸ್ಕರು ಆ ಮಗುವಿಗೆ ಚಲನಚಿತ್ರವು ಸೂಕ್ತವಾಗಿದೆಯೇ ಎಂಬುದನ್ನು ಪರಿಗಣಿಸಬೇಕು. ವರದಿಗಳ ಪ್ರಕಾರ, ರಕ್ತಸಿಕ್ತ ಗಾಯಗಳು, ಲೈಂಗಿಕ ದೃಶ್ಯಗಳ ಹಿನ್ನೆಲೆ ಮಂಡಳಿಯು ಪಠಾನ್‌ಗೆ 12A ರೇಟಿಂಗ್ ನೀಡಿತು. ಗುಂಡಿನ ದಾಳಿಗಳು, ಇರಿತಗಳು, ಕತ್ತು ಹಿಸುಕುವುದು, ಸ್ಫೋಟಗಳು, ಜೊತೆಗೆ ಹೊಡೆದಾಟಗಳನ್ನು ಚಿತ್ರ ಒಳಗೊಂಡಿದೆ.

ಪಠಾಣ್​ ಸಿನಿಮಾಗೆ ತೀವ್ರ ವಿರೋಧ: ಪಠಾಣ್​ ಸಿನಿಮಾ ಭಾರತ ಸೇರಿದಂತೆ ವಿಶ್ವದ 100 ದೇಶಗಳಲ್ಲಿ ಬಿಡುಗಡೆಯಾಗಿದೆ. ವಿವಾದಗಳಿಂದಲೇ ಸದ್ದು ಮಾಡಿರುವ ಈ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸೋಷಿಯಲ್​ ಮೀಡಿಯಾದಲ್ಲಿ ಪರ ವಿರೋಧ ಚರ್ಚೆ ನಡೆಯುತ್ತಿದೆ. ಬಹುತೇಕ ಥಿಯೇಟರ್​ ಮುಂಭಾಗ ಪ್ರತಿಭಟನೆ ಕೂಡ ನಡೆದಿದೆ. ಡಿಸೆಂಬರ್​ 2ನೇ ವಾರದಲ್ಲಿ ಭುಗಿಲೆದ್ದಿರುವ ಬೇಶರಂ ರಂಗ್​ ವಿವಾದದ ಕಿಡಿ ಇಂದು ಸ್ಪೋಟಗೊಂಡಿದೆ.

ಕಲಬುರಗಿಯಲ್ಲಿ ಪ್ರತಿಭಟನೆ: ಚಿತ್ರಮಂದಿರಗಳಲ್ಲಿ ಪಠಾಣ್ ಪ್ರದರ್ಶನಕ್ಕೆ ಹಲವೆಡೆ ವಿರೋಧ ವ್ಯಕ್ತವಾಗಿದ್ದು,​ ಕಲಬುರಗಿಯಲ್ಲೂ ಚಿತ್ರ ಪ್ರದರ್ಶನ ವಿರೋಧಿಸಿ ಪ್ರತಿಭಟನೆ ನಡೆದಿದೆ. ಕಲಬುರಗಿಯ ಶೆಟ್ಟಿ ಹಾಗೂ ಐನಾಕ್ಸ್ ಸಿನಿಮಾ ಮಂದಿರಗಳಲ್ಲಿ ಚಿತ್ರಪ್ರದರ್ಶನ ಮಾಡಲಾಗುತ್ತಿದೆ. ಪ್ರತಿಭಟನೆ‌ ಬಿಸಿ ಹಿನ್ನೆಲೆ ಪೊಲೀಸರು ಚಿತ್ರಮಂದಿರಗಳಿಗೆ ಬಿಗಿ ಭದ್ರತೆ ಕಲ್ಪಿಸಿದ್ದಾರೆ. ಆದರೂ ಶೆಟ್ಟಿ ಚಿತ್ರಮಂದಿರದ ಎದುರು ಕೆಲ ಹೊತ್ತು ಉದ್ವಿಗ್ನ ಪರಿಸ್ಥಿತಿ ನಿರ್ಮಾಣ ಆಗಿತ್ತು. ಥಿಯೇಟರ್​ ಮೇಲೆ ಹಿಂದೂ ಜಾಗೃತಿ ಸೇನೆಯ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿ ಅಸಮಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ: ಆ್ಯಕ್ಷನ್​ ಅವತಾರದಲ್ಲಿ ಕಿಂಗ್​ ಖಾನ್.. ಅಭಿಮಾನಿಗಳು ಏನಂದ್ರು ಗೊತ್ತಾ?

ಬೆಳಗಾವಿಯಲ್ಲಿಯೂ ಪಠಾಣ್​ ವಿರುದ್ಧ ಕಿಡಿ: ಬೆಳಗಾವಿಯಲ್ಲಿಯೂ ಪಠಾಣ್​ ಪ್ರದರ್ಶನಕ್ಕೆ ವಿರೋಧ ವ್ಯಕ್ತವಾಗಿದೆ. ಸ್ವರೂಪ ಮತ್ತು ನರ್ತಕಿ ಚಿತ್ರಮಂದಿರದ ಮೇಲೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಇಂದು ಬೆಳಗ್ಗೆ ದಾಳಿ ಮಾಡಿ ಸಿನಿಮಾದ ಬ್ಯಾನರ್​​ಗಳನ್ನು ಹರಿದು ಹಾಕಿದರು. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ. ಕೆಲ ಹಿಂದೂಪರ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ. 30 ಹಿಂದೂಪರ ಕಾರ್ಯಕರ್ತರ ವಿರುದ್ಧ ಖಡೇಬಜಾರ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ: ಕಲಬುರಗಿಯಲ್ಲಿ ಪಠಾಣ್​ ಸಿನಿಮಾಗೆ ವಿರೋಧ, ಥಿಯೇಟರ್​ ಮೇಲೆ ಕಲ್ಲು ತೂರಾಟ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.