ಪಠಾಣ್ ಬಿಡುಗಡೆಗೆ ಕ್ಷಣಗಣನೆ: ಕೆಜಿಎಫ್ ದಾಖಲೆ ಮುರಿಯಲಿದೆಯಾ ಶಾರುಖ್ ಸಿನಿಮಾ?!

ಪಠಾಣ್ ಬಿಡುಗಡೆಗೆ ಕ್ಷಣಗಣನೆ: ಕೆಜಿಎಫ್ ದಾಖಲೆ ಮುರಿಯಲಿದೆಯಾ ಶಾರುಖ್ ಸಿನಿಮಾ?!
ಪಠಾಣ್ ಮುಂಗಡ ಟಿಕೆಟ್ ಬುಕ್ಕಿಂಗ್ ವ್ಯವಹಾರ ಗಮನಿಸಿದರೆ ಮೊದಲ ದಿನಗಳಲ್ಲಿ ಬಾಕ್ಸ್ ಆಫೀಸ್‌ನಲ್ಲಿ 45 ರಿಂದ 50 ಕೋಟಿ ರೂಪಾಯಿ ಕಲೆಕ್ಷನ್ ಮಾಡಲಿದೆ ಎಂದು ಸಿನಿಮಾ ತಜ್ಞರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಾಲಿವುಡ್ನ ಬಹುನಿರೀಕ್ಷಿತ ಸಿನಿಮಾ ಪಠಾಣ್ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಬಾಯ್ಕಾಟ್ ಪ್ರವೃತ್ತಿಗೆ ನಲುಗಿ ಹೋಗಿದ್ದ ಬಾಲಿವುಡ್ ಚೇತರಿಕೆ ಮಾರ್ಗದಲ್ಲಿದ್ದು, ಪಠಾಣ್ ಸಿನಿಮಾ ಭರ್ಜರಿ ಯಶಸ್ಸಿನ ಲಸಿಕೆ ಕೊಡುವ ಲಕ್ಷಣಗಳು ಕಾಣುತ್ತಿದೆ. ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್, ಬಹು ಬೇಡಿಕೆ ನಟಿ ದೀಪಿಕಾ ಪಡುಕೋಣೆ, ಬಹುಬೇಡಿಕೆ ನಟ ಜಾನ್ ಅಬ್ರಹಾಂ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಸಿನಿಮಾ ನಾಳೆ (ಬುಧವಾರ, ಜನವರಿ 25) ಹಿಂದಿ, ತಮಿಳು, ತೆಲುಗು ಆವೃತ್ತಿಗಳಲ್ಲಿ ದೇಶಾದ್ಯಂತ ಬಿಡುಗಡೆ ಆಗಲಿದೆ. ಮುಂಗಡ ಟಿಕೆಟ್ ಬುಕ್ಕಿಂಗ್ ಜೋರಾಗಿ ನಡೆದಿದ್ದು, ಮೊದಲ ದಿನಗಳಲ್ಲಿ ಗಲ್ಲಾ ಪೆಟ್ಟಿಗೆಯಲ್ಲಿ ಕೋಟಿ ಕೋಟಿ ಬಾಚುವ ಸೂಚನೆ ಕೊಟ್ಟಿದೆ ಪಠಾಣ್ ಸಿನಿಮಾ.
ಪಠಾಣ್ ಮುಂಗಡ ಟಿಕೆಟ್ ಬುಕ್ಕಿಂಗ್ ದಾಖಲೆ: ಈ ಸಿನಿಮಾದ ಮುಂಗಡ ಟಿಕೆಟ್ ಬುಕ್ಕಿಂಗ್ಗೆ ಸಿನಿಪ್ರಿಯರು ತೋರಿದ ಉತ್ಸಾಹ ನೋಡಿದರೆ, ಪಠಾಣ್ ಆರಂಭದ ದಿನಗಳಲ್ಲಿ ಬಾಕ್ಸ್ ಆಫೀಸ್‌ನಲ್ಲಿ 45 ರಿಂದ 50 ಕೋಟಿ ರೂಪಾಯಿಗಳ ವ್ಯವಹಾರ ನಡೆಸುತ್ತದೆ ಎಂದು ಸಿನಿಮಾ ಉದ್ಯಮ ತಜ್ಞರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 2018ರ ಝೀರೋ ಸಿನಿಮಾ ನಂತರ ಶಾರುಖ್ ಖಾನ್ ಸಿನಿಮಾ ಲೋಕಕ್ಕೆ ಮರಳುತ್ತಿದ್ದು, ಅಭಿಮಾನಿಗಳು ಭಾರೀ ಕುತೂಹಲ ಇಟ್ಟುಕೊಂಡಿದ್ದಾರೆ. ಸಿನಿಮಾ ಗಣರಾಜ್ಯೋತ್ಸವದ ಒಂದು ದಿನ ಮೊದಲು ಅಂದರೆ ನಾಳೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ.
ಜನವರಿ 20ರಂದು (ಶುಕ್ರವಾರ) ಮುಂಗಡ ಟಿಕೆಟ್ ಬುಕ್ಕಿಂಗ್ ಪ್ರಕ್ರಿಯೆ ಆರಂಭವಾಯಿತು. ಚಿತ್ರವು ಭಾರತದಾದ್ಯಂತ 5,000 ಪರದೆಗಳಲ್ಲಿ ಬಿಡುಗಡೆಯಾಗಲಿದೆ. ಇದು ಶಾರುಖ್ ಖಾನ್ ಅವರ ಮೊದಲ ಆ್ಯಕ್ಷನ್ ಚಿತ್ರವಾಗಿದ್ದು, ಬೆಳಗ್ಗೆ 6 ಗಂಟೆಗೆ ಪ್ರದರ್ಶನವಾಗಲಿದೆ. ಪಠಾಣ್ ಸಿನಿಮಾ ಬಾಲಿವುಡ್ ಅನ್ನು ಪುನರುಜ್ಜೀವನಗೊಳಿಸುತ್ತದೆ ಮತ್ತು ಸಿನಿಮಾ ಉದ್ಯಮಕ್ಕೆ ಅದ್ಭುತವಾದ 2023ರ ಆರಂಭ ಕೊಡಲಿದೆ ಎಂದು ಸಿನಿಮಾ ವ್ಯಾಪಾರ ತಜ್ಞ ತರಣ್ ಆದರ್ಶ್ ತಿಳಿಸಿದ್ದಾರೆ. ಬಾಲಿವುಡ್ ಕೋವಿಡ್ ಸಮಯದಲ್ಲಿ ಮತ್ತು 2022ರಲ್ಲಿ ಹಿನ್ನೆಡೆ ಅನುಭವಿಸಿದ್ದು, 2023ರಲ್ಲಿ ಗೆಲ್ಲುವ ನಿರೀಕ್ಷೆ ಹೊಂದಿದೆ.
ಮಲ್ಟಿಪ್ಲೆಕ್ಸ್ ಥಿಯೇಟರ್ನಲ್ಲೂ ಹೆಚ್ಚಿನ ಟಿಕೆಟ್ ಮಾರಾಟ: ಪಿವಿಆರ್ ಲಿಮಿಟೆಡ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಸಂಜೀವ್ ಕುಮಾರ್ ಬಿಜ್ಲಿ ಮಾಹಿತಿ ನೀಡಿದ್ದು, ಭಾರತದಾದ್ಯಂತ ತಮ್ಮ 903 ಬ್ರ್ಯಾಂಚ್(ಪಿವಿಆರ್)ಗಳಲ್ಲಿ ಹೆಚ್ಚಿನ ಸಂಖ್ಯೆಯ ಟಿಕೆಟ್ಗಳು ಮಾರಾಟ ಆಗಿವೆ ಎಂದು ಹೇಳಿದ್ದಾರೆ. ಪಠಾಣ್ ಸಿನಿಮಾ ಪಿವಿಆರ್ ಚಿತ್ರಮಂದಿರಗಳಲ್ಲಿ ಬೆಳಗ್ಗೆ 6 ಗಂಟೆಗೆ ಪ್ರದರ್ಶನಗೊಳ್ಳಿರುವ ಶಾರುಖ್ ಅವರ ಮೊದಲ ಚಲನಚಿತ್ರವಾಗಿದ ಎಂದು ಬಿಜ್ಲಿ ತಮ್ಮ ತಿಳಿಸಿದ್ದಾರೆ.
1 ಮಿಲಿಯನ್‌ಗಿಂತಲೂ ಹೆಚ್ಚು ಟಿಕೆಟ್ ಬುಕ್: ಪ್ರಮುಖ ಟಿಕೆಟಿಂಗ್ ಪ್ಲಾಟ್‌ಫಾರ್ಮ್ ಬುಕ್ ಮೈ ಶೋ (ಬಿಎಂಎಸ್) ಮಾಹಿತಿ ಪ್ರಕಾರ, ಒಂದು ಮಿಲಿಯನ್‌ಗಿಂತಲೂ ಹೆಚ್ಚು ಟಿಕೆಟ್‌ಗಳನ್ನು ಬುಕ್ ಮಾಡಲಾಗಿದೆ. ಬಿಎಂಎಸ್ನಲ್ಲಿ ಈವರೆಗೆ 3,500ಕ್ಕೂ ಹೆಚ್ಚು ಸ್ಕ್ರೀನ್‌ಗಳು (ಸಿನಿಮಾ ಥಿಯೇಟರ್ ಪರದೆ) ಲಭ್ಯವಿದ್ದು, ಪಠಾಣ್ ಸಿನಿಮಾಗಾಗಿ ಮುಂಗಡ ಟಿಕೆಟ್ ಮಾರಾಟವು ಹಂತ ಹಂತವಾಗಿ ತೆರೆದುಕೊಳ್ಳುತ್ತಿದೆ. ಅಲ್ಲದೇ ಮುಂಜಾನೆಯ ಶೋಗಳನ್ನು ತೆರೆಯಲು ಬೇಡಿಕೆ ಹೆಚ್ಚಳವಾಗಿದೆ.
ಕೆಜಿಎಫ್ ದಾಖಲೆ ಮುರಿಯಲಿದೆಯಾ ಪಠಾಣ್?! ಪ್ರಮುಖ ಮಲ್ಟಿಪ್ಲೆಕ್ಸ್ ಸರಣಿ INOX ಪಠಾಣ್ ಈ ಹಿಂದಿನ ಹಲವು ದಾಖಲೆಗಳನ್ನು ಮುರಿಯಲಿದೆ ಎಂಬ ನಂಬಿಕೆ ಹೊಂದಿದೆ. ಭಾರತದಾದ್ಯಂತ INOX ಅವರ 722 ಸ್ಕ್ರೀನ್‌ಗಳಿದ್ದು, ಚಿತ್ರದ ಟಿಕೆಟ್ಗಳು ಉತ್ತಮ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಈ ಚಿತ್ರವು ಕೆಜಿಎಫ್ 2ನ ಮುಂಗಡ ಟಿಕೆಟ್ ಬುಕ್ಕಿಂಗ್ ದಾಖಲೆಯನ್ನು ಮುರಿಯಲಿದೆ ಮತ್ತು 45 ರಿಂದ 50 ಕೋಟಿ ರೂಪಾಯಿಗಳ ವ್ಯಾಪಾರವನ್ನು ಮಾಡಲಿದೆ ಎಂದು ಮಲ್ಟಿಪ್ಲೆಕ್ಸ್ ಚೈನ್ INOXನ ಮುಖ್ಯ ಪ್ರೋಗ್ರಾಮಿಂಗ್ ಅಧಿಕಾರಿ ರಾಜೇಂದ್ರ ಸಿಂಗ್ ಜ್ಯಾಲ ಅವರು ಹೇಳಿದ್ದಾರೆ. ಕೆಜಿಎಫ್ 2 ಚಿತ್ರ ಮುಂಗಡ ಟಿಕೆಟ್ ಬುಕ್ಕಿಂಗ್ 20 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿತ್ತು.
ಸಿಂಗಲ್ ಸ್ಕ್ರೀನ್ಗಳಲ್ಲೂ ಬಂಪರ್ ಮುಂಗಡ ಬುಕ್ಕಿಂಗ್: ಮಲ್ಟಿಪ್ಲೆಕ್ಸ್ ಮಾತ್ರವಲ್ಲ ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳಲ್ಲಿಯೂ ಬಂಪರ್ ಮುಂಗಡ ಬುಕ್ಕಿಂಗ್ ಆಗಿದೆ. ಮುಂಬೈನ ಜನಪ್ರಿಯ ಸಿಂಗಲ್ ಸ್ಕ್ರೀನ್ ಥಿಯೇಟರ್ ಗೈಟಿ, ಗ್ಯಾಲಕ್ಸಿ ಮತ್ತು ಮರಾಠ ಮಂದಿರ್ಗಳಲ್ಲಿ ಶೇಕಡ 70 ರಿಂದ 80 ರಷ್ಟು ಟಿಕೆಟ್ ಬುಕ್ ಅಗಿದೆ. ಮೊದಲ ಬಾರಿಗೆ ಇಡೀ ಥಿಯೇಟರ್ ಟಿಕೆಟ್‌ಗಳನ್ನು ಎಸ್‌ಆರ್‌ಕೆ ಅಭಿಮಾನಿಗಳ ಕ್ಲಬ್ ಖರೀದಿಸಿದ್ದು, ಬೆಳಗ್ಗೆ 9ಕ್ಕೆ ಮಾರ್ನಿಂಗ್ ಶೋ ಆಯೋಜಿಸಲಾಗಿದೆ.
ಇದನ್ನೂ ಓದಿ: ಪಠಾಣ್ ಚಿತ್ರಕ್ಕೆ ಯಾವುದೇ ಅಡಚಣೆ ಆಗುವುದಿಲ್ಲ : ಸಿಎಂ ಶರ್ಮಾ ಅಭಯ
ಪಠಾಣ್‌ಗೆ ದಕ್ಷಿಣದಿಂದ ಬೆಂಬಲ: ದೇಶದ ದಕ್ಷಿಣ ಭಾಗಗಳಲ್ಲಿ ಮುಂಗಡ ಬುಕ್ಕಿಂಗ್‌ನಲ್ಲಿ ಪ್ರಗತಿ ಸಾಧಿಸಿರುವ ಬಾಲಿವುಡ್ ಚಲನಚಿತ್ರಗಳ ಪೈಕಿ ಪಠಾಣ್ ಕೂಡ ಒಂದಾಗಿದೆ. ಇದುವರೆಗಿನ ಒಟ್ಟಾರೆ ಮುಂಗಡ ಟಿಕೆಟ್ ಮಾರಾಟದಲ್ಲಿ ಸುಮಾರು 30 ಪ್ರತಿಶತದಷ್ಟು ಕೊಡುಗೆ ಹೈದರಾಬಾದ್, ಚೆನ್ನೈ ಮತ್ತು ಬೆಂಗಳೂರಿನಿಂದ ಸಿಕ್ಕಿದೆ.
