ETV Bharat / entertainment

ಜನವರಿ 26ರಂದು ಫ್ಯಾನ್ಸ್​ಗಾಗಿ ಏನೋ ಪ್ಲಾನ್​ ಮಾಡ್ತಾರಂತೆ ರಕ್ಷಿತ್​ ಶೆಟ್ಟಿ

author img

By ETV Bharat Karnataka Team

Published : Dec 21, 2023, 3:58 PM IST

ಜನವರಿ 26ರಂದು 'ಬ್ಯಾಚುಲರ್ ಪಾರ್ಟಿ' ಚಿತ್ರತಂಡದಿಂದ ಹೊಸ ಅಪ್​ಡೇಟ್​ ಹೊರಬೀಳಲಿದೆ. ಈ ಬಗ್ಗೆ ನಿರ್ಮಾಣ ಸಂಸ್ಥೆ ಪರಂವಃ ಸ್ಟುಡಿಯೋ ಮಾಹಿತಿ ನೀಡಿದೆ.

paramvah studio give new update about Bachelor party
ಜನವರಿ 26ಕ್ಕೆ ಫ್ರೀ ಮಾಡ್ಕೊಳ್ಳಿ; ಫ್ಯಾನ್ಸ್​ಗಾಗಿ ಏನೋ ಫ್ಲಾನ್​ ಮಾಡ್ತಾರಂತೆ ರಕ್ಷಿತ್​ ಶೆಟ್ಟಿ

7 ವರ್ಷಗಳ ಹಿಂದೆ ಕನ್ನಡದಲ್ಲಿ ಬ್ಲಾಕ್​ಬಸ್ಟರ್​ ಹಿಟ್​ ಪಡೆದು, ಇತರೆ ಭಾಷೆಗಳಿಗೂ ಡಬ್​ ಆಗಿ ಮೆಚ್ಚುಗೆ ಪಡೆದ ಸಿನಿಮಾ 'ಕಿರಿಕ್​ ಪಾರ್ಟಿ'. ಈ ಭರ್ಜರಿ ಯಶಸ್ಸಿನ ಬಳಿಕ ಇಡೀ ತಂಡ ಬೇರೆ ಬೇರೆ ಪ್ರಾಜೆಕ್ಟ್‌ಗಳಲ್ಲಿ ತೊಡಗಿಸಿಕೊಂಡಿದೆ. ರಿಷಬ್​ ಶೆಟ್ಟಿ ನಿರ್ದೇಶಿಸಿ, ರಕ್ಷಿತ್​ ಶೆಟ್ಟಿ ನಟಿಸಿ, ನಿರ್ಮಿಸಿರುವ ಆ ರೀತಿಯ ಯೂಥ್ ಕಾಮಿಡಿ ಸಿನಿಮಾ ಮತ್ತೊಂದು ಬರಲಿಲ್ಲವಲ್ಲ ಎಂಬ ಕೊರಗು ನೀಗಿಸಲು ಮತ್ತದೇ ಬರಹಗಾರರ ತಂಡ ಸಜ್ಜಾಗಿದೆ. ಅವರೀಗ 'ಬ್ಯಾಚುಲರ್ ಪಾರ್ಟಿ'ಗೆ ಅಣಿಯಾಗಿದ್ದಾರೆ ಎಂಬುದು ವಿಶೇಷ.

ಕೆಲವು ದಿನಗಳ ಹಿಂದೆ 'ಬ್ಯಾಚುಲರ್ ಪಾರ್ಟಿ'ಯ ಮೊದಲ ಝಲಕ್ ಅನ್ನು ಚಿತ್ರತಂಡ ಬಿಡುಗಡೆಗೊಳಿಸಿತ್ತು. ಇದೀಗ ಮತ್ತೊಂದು ಅಪ್​ಡೇಟ್​ ಹೊರಬಿದ್ದಿದೆ. 2024ರ ಜನವರಿ 26 ಗಣರಾಜ್ಯೋತ್ಸವ ದಿನದಂದು ಫ್ಯಾನ್ಸ್​ಗೆ ಪಾರ್ಟಿ​ ನೀಡಲು ತಂಡ ಮುಂದಾಗಿದೆ. ನಿರ್ಮಾಣ ಸಂಸ್ಥೆ ಪರಂವಃ ಸ್ಟುಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದು, 'ಜನವರಿ 26 ಲಾಂಗ್ ವೀಕೆಂಡ್! ನಿಮ್ದೇನ್ ಪ್ಲಾನ್? ನೀವು ಯಾವುದೇ ಪ್ಲಾನ್​ ಮಾಡಿಕೊಂಡಿಲ್ಲ ಅಂತಿದ್ರೆ, ನಿಮಗಾಗಿ ನಾವೇನಾದರೂ ಪ್ಲಾನ್​ ಮಾಡಬಹುದೇ' ಎಂದು ಅಭಿಮಾನಿಗಳಲ್ಲಿ ಪ್ರಶ್ನಿಸಿದೆ.

ಇದಕ್ಕೆ ಕಮೆಂಟ್​ ಬಾಕ್ಸ್​ನಲ್ಲಿ ಉತ್ತರ ನೀಡಿರುವ ಫ್ಯಾನ್ಸ್​, ಬ್ಯಾಚುಲರ್​ ಪಾರ್ಟಿ ಅಂದೇ ರಿಲೀಸ್​ ಮಾಡ್ತೀರಾ? ಅಥವಾ ಕಿರಿಕ್​ ಪಾರ್ಟಿ ಸಿನಿಮಾವನ್ನು ಮತ್ತೊಮ್ಮೆ ಬಿಡುಗಡೆ ಮಾಡ್ತೀರಾ ಎಂದೆಲ್ಲಾ ಪ್ರಶ್ನಿಸಿದ್ದಾರೆ. ಇನ್ನು ಕೆಲವರು, ಬ್ಯಾಚುಲರ್​ ಪಾರ್ಟಿ ಟೀಸರ್​ ಅಥವಾ ಟ್ರೇಲರ್​ ಬಿಡುಗಡೆಯಾಗಬಹುದು ಎಂದು ತಮ್ಮ ಸಂದೇಹವನ್ನು ಹೊರಹಾಕಿದ್ದಾರೆ. ನೆಟ್ಟಿಗರೊಬ್ಬರು, ನೀವು ಪಾರ್ಟಿ ಕೊಡೋದಾದ್ರೆ ಎಲ್ಲಿಗೆ ಬೇಕಾದ್ರೂ ಬರ್ತೀವಿ ಎಂದು ತಮಾಷೆಯಾಗಿ ಉತ್ತರಿಸಿದ್ದಾರೆ.

ಚಿತ್ರತಂಡ: 'ಕಿರಿಕ್ ಪಾರ್ಟಿ' ಬರಹಗಾರ ಅಭಿಜಿತ್ ಮಹೇಶ್ ಅವರು ಈಗಾಗಲೇ ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ ಸೇರಿದಂತೆ ಅನೇಕರ ಸಿನಿಮಾಗಳಲ್ಲಿ ಬರಹಗಾರರಾಗಿ ಗುರುತಿಸಿಕೊಂಡಿದ್ದಾರೆ. ಇದೀಗ ನಿರ್ದೇಶಕರಾಗಿ ಬಡ್ತಿ ಪಡೆದಿದ್ದು, ಬ್ಯಾಚುಲರ್ ಪಾರ್ಟಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಕಚಗುಳಿ ಇಡುವ ಸಂಭಾಷಣೆಗೆ ಖ್ಯಾತರಾಗಿರುವ ಅಭಿಜಿತ್, ತಮ್ಮ ಮೊದಲ ಸಿನಿಮಾಗೆ ಸಂಭಾಷಣೆ ಮತ್ತು ಕಥೆ-ಚಿತ್ರಕಥೆಯನ್ನು ತಾವೇ ಬರೆದಿದ್ದಾರೆ. ರಕ್ಷಿತ್​ ಶೆಟ್ಟಿ ಅವರು ಪರಂವಃ ಸ್ಟುಡಿಯೋ ಮೂಲಕ ನಿರ್ಮಾಣ ಮಾಡುತ್ತಿದ್ದಾರೆ. ಇವರಿಗೆ ಅಮಿತ್​ ಗುಪ್ತಾ ಸಾಥ್​ ನೀಡಿದ್ದಾರೆ.

ಅರವಿಂದ್​ ಎಸ್​.ಕಶ್ಯಪ್​ ಛಾಯಾಗ್ರಹಣ, ಅರ್ಜುನ್​ ರಾಮು ಸಂಗೀತ, ಉಲ್ಲಾಸ್​ ಹೈದೂರ್​ ಕಲಾ ವಿನ್ಯಾಸ, ಅಭಿಷೇಕ್​.ಎಂ ಸಂಕಲನ, ಅರುಂಧತಿ ಅಂಜನಪ್ಪ ವಸ್ತ್ರ ವಿನ್ಯಾಸ, ಅರ್ಜುನ್​ ರಾಜ್​ ಸಾಹಸ ನಿರ್ದೇಶನ, ವೀರೇಶ್​ ಶಿವಮೂರ್ತಿ, ಚಂದ್ರಜಿತ್​ ಬೆಳ್ಳಿಯಪ್ಪ, ನಾಗಾರ್ಜುನ್​ ಶರ್ಮಾ ಸಾಹಿತ್ಯ, ಭೂಷಣ್​, ದೀಕ್ಷಿತ್​ ಕುಮಾರ್​ ನೃತ್ಯ ಸಂಯೋಜನೆ ಚಿತ್ರಕ್ಕಿದೆ. ದೂದ್​​ ಪೇಡಾ ಖ್ಯಾತಿಯ ದಿಗಂತ್, ಲೂಸ್ ಮಾದ ಯೋಗಿ ಹಾಗೂ ಅಚ್ಯುತ್ ಕುಮಾರ್ ಪ್ರಮುಖ ಪಾತ್ರಗಳಲ್ಲಿ ಇದ್ದಾರೆ.

ಇದನ್ನೂ ಓದಿ: 'ಕಿರಿಕ್​ ಪಾರ್ಟಿ' ಶೈಲಿಯಲ್ಲೇ ಮತ್ತೊಂದು ಸಿನಿಮಾ: ಹೊಸ ಅಪ್​ಡೇಟ್​ ನೀಡಿದರು ರಕ್ಷಿತ್​ ಶೆಟ್ಟಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.