ETV Bharat / entertainment

ಏಷ್ಯಾದ ಹಳೆಯ ಆನೆ ಶಿಬಿರದಲ್ಲಿ ಆಸ್ಕರ್‌ ವಿಜೇತ 'ದ ಎಲಿಫೆಂಟ್ ವಿಸ್ಪರರ್ಸ್' ನಿರ್ಮಾಣ

author img

By

Published : Mar 14, 2023, 8:17 AM IST

ತಮಿಳುನಾಡಿನ ನೀಲಗಿರಿ ಪರ್ವತಗಳ ಮುದುಮಲೈ ಹುಲಿ ಸಂರಕ್ಷಿತ ಪ್ರದೇಶದ ಹಳೆಯದಾದ ತೆಪ್ಪಕಾಡು ಆನೆ ಶಿಬಿರದಲ್ಲಿ ಆಸ್ಕರ್​ ಪ್ರಶಸ್ತಿ ಪಡೆದ ದ ಎಲಿಫೆಂಟ್ ವಿಸ್ಪರರ್ಸ್ ಕಿರುಚಿತ್ರ ನಿರ್ಮಾಣವಾಗಿದೆ.

ದಿ ಎಲಿಫೆಂಟ್ ವಿಸ್ಪರರ್ಸ್
ದಿ ಎಲಿಫೆಂಟ್ ವಿಸ್ಪರರ್ಸ್

ಚೆನ್ನೈ(ತಮಿಳುನಾಡು): ಕಾರ್ತಿಕಿ ಗೊನ್ಸಾಲ್ವೆಸ್ ನಿರ್ದೇಶನದ "ದ ಎಲಿಫೆಂಟ್ ವಿಸ್ಪರರ್ಸ್" ಅತ್ಯುತ್ತಮ ಕಿರು ಸಾಕ್ಷ್ಯಚಿತ್ರವಾಗಿ ಹೊರಹೊಮ್ಮಿದ್ದು, ಪ್ರತಿಷ್ಟಿತ ಆಸ್ಕರ್‌ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಈ ವಿಭಾಗದಲ್ಲಿ ಆಸ್ಕರ್ ಪಡೆದ ಭಾರತದ ಮೊದಲ ಸಾಕ್ಷ್ಯಚಿತ್ರ ಇದು ಎಂಬ ಖ್ಯಾತಿಗೂ ಪಾತ್ರವಾಗಿದೆ. ಕಿರುಚಿತ್ರವನ್ನು ತಮಿಳುನಾಡಿನ ನೀಲಗಿರಿ ಪರ್ವತಗಳ ಮುದುಮಲೈ ಹುಲಿ ಸಂರಕ್ಷಿತ ಪ್ರದೇಶದ ಹಳೆಯದಾದ ತೆಪ್ಪಕಾಡು ಆನೆ ಶಿಬಿರದಲ್ಲಿ ಚಿತ್ರೀಕರಿಸಲಾಗಿದೆ. ಇದು ಬಂಡೀಪುರ ಅರಣ್ಯ ಪ್ರದೇಶದಕ್ಕೆ ಸೇರಿಕೊಂಡಿದೆ.

ಮುದುಮಲೈ ಹುಲಿ ಸಂರಕ್ಷಿತ ಪ್ರದೇಶದ ತೆಪ್ಪಕಾಡು ಆನೆ ಶಿಬಿರ ಏಷ್ಯಾದ ಅತ್ಯಂತ ಹಳೆಯ ಆನೆ ಶಿಬಿರವಾಗಿದೆ. 105 ವರ್ಷಗಳ ಹಿಂದೆ ಸ್ಥಾಪಿಸಲಾಗಿದೆ. ಮೊಯಾರ್ ನದಿಯ ದಡದಲ್ಲಿರುವ ಇದು ಸದ್ಯ 28 ಆನೆಗಳನ್ನು ಹೊಂದಿದೆ. ಇಲ್ಲಿರುವ ಮಾವುತರು ಆನೆಗಳಿಗೆ ತರಬೇತಿ ಮತ್ತು ಆರೈಕೆಯನ್ನು ಮಾಡುತ್ತಿದ್ದಾರೆ.

5 ವರ್ಷಗಳ ಪ್ರತಿಫಲ: ಚಿತ್ರದ ನಿರ್ದೇಶಕ ಕಾರ್ತಿಕಿ ಗೊನ್ಸಾಲ್ವಿಸ್ ಅವರು ಸಾಕ್ಷ್ಯಚಿತ್ರದ ಚಿತ್ರೀಕರಣಕ್ಕಾಗಿ ಮುದುಮಲೈ ಹುಲಿ ಸಂರಕ್ಷಿತ ಪ್ರದೇಶದಲ್ಲಿ 5 ವರ್ಷಗಳ ಕಾಲ ತಂಗಿದ್ದರು ಎಂಬುದು ವಿಶೇಷ. ಅವರ ಈ ಪರಿಶ್ರಮಕ್ಕೆ ಆಸ್ಕರ್​ ಪ್ರಶಸ್ತಿ ಒಲಿದು ಬಂದಿದೆ. 41 ನಿಮಿಷಗಳ ಕಿರುಚಿತ್ರ ಅನಾಥ ಆನೆ ರಘು ಮತ್ತು ಅದರ ಪಾಲಕರಾದ ಮಾವುತ ದಂಪತಿ ಬೊಮ್ಮನ್ ಮತ್ತು ಬೆಳ್ಳಿ ನಡುವಿನ ಅಮೂಲ್ಯವಾದ ಬಾಂಧವ್ಯವನ್ನು ಇದು ನಿರೂಪಿಸುತ್ತದೆ.

ಕಟ್ಟುನಾಯಕನ್ ಬುಡಕಟ್ಟು ಸಮುದಾಯಕ್ಕೆ ಸೇರಿರುವ ಮಾವುತರಾದ ಬೊಮ್ಮಿ ಮತ್ತು ಬೆಳ್ಳಿ ಅವರು ಇಲ್ಲಿಯೇ ಹುಟ್ಟಿ ಬೆಳೆದವರು. ಈ ಸಮುದಾಯದ ಜನರು ಇದೇ ಪ್ರದೇಶದಲ್ಲಿ ಹೆಚ್ಚಾಗಿ ವಾಸಿಸುತ್ತಾರೆ. ತೆಪ್ಪಕಾಡು ಆನೆ ಶಿಬಿರದ ಭಾಗವಾಗಿರುವ ಮುದುಮಲೈ ಹುಲಿ ಸಂರಕ್ಷಿತ ಪ್ರದೇಶವು ಕಟ್ಟುನಾಯಕನ್ ಬುಡಕಟ್ಟು ಸಮುದಾಯದ ಆಶ್ರಯ ತಾಣವಾಗಿದೆ.

ಆನೆಗಳ ಪಳಗಿಸುವ ಶಿಬಿರ: ಏಷ್ಯಾದ ಹಳೆಯ ಆನೆ ಶಿಬಿರವಾದ ತೆಪ್ಪಕಾಡು ಶಿಬಿರವು ಮದವೇರಿದ ಸಲಗಗಳನ್ನು ಹಿಡಿದು ತಂದು ಇಲ್ಲಿ ಪಳಗಿಸುತ್ತಾರೆ. ಮಾನವ ವಾಸಸ್ಥಳಗಳಿಗೆ ನುಗ್ಗಿ ಜನರೊಂದಿಗೆ ಸಂಘರ್ಷ ನಡೆಸುವ ಅದೆಷ್ಟೋ ಆನೆಗಳಿಗೆ ಇಲ್ಲಿ ಪುನರ್ವಸತಿ ಕಲ್ಪಿಸಲಾಗುತ್ತಿದೆ. ಈ ಶಿಬಿರದಲ್ಲಿ ಆನೆಗಳಿಗೆ ಸೂಕ್ತ ತರಬೇತಿಯನ್ನೂ ನೀಡಿ ಕುಮ್ಕಿ ಆನೆಗಳನ್ನಾಗಿ ಪರಿವರ್ತಿಸಲಾಗುತ್ತದೆ. ಇದಲ್ಲದೇ, ಶಿಬಿರದಲ್ಲಿರುವ ತರಬೇತಿ ಆನೆಗಳನ್ನು ಮಾನವ ಪ್ರದೇಶಗಳಿಗೆ ನುಗ್ಗಿ ಸಮಸ್ಯೆ ಸೃಷ್ಟಿಸುವ ಆನೆಗಳನ್ನು ಅಲ್ಲಿಂದ ಓಡಿಸಲು ಬಳಸಲಾಗುತ್ತದೆ.

ಶಿಬಿರದ ಮಾವುತರಾದ ಕಿರುಮಾರನ್ ಮತ್ತು ವಾಸಿಮ್ ಎಂಬುವರು ಆನೆಗಳನ್ನು ಪಳಗಿಸುವಲ್ಲಿ ಎತ್ತಿದ ಕೈ. ಅದೆಂತಹ ರಾಕ್ಷಸ ಸ್ವಭಾವದ ಆನೆಗಳನ್ನು ಅವರು ಸೆರೆ ಹಿಡಿದು ಪಳಗಿಸಿದ್ದಾರೆ. ಮೂರ್ತಿ ಮತ್ತು ಈಶ್ವರನ್ ಎಂಬ ಎರಡು ಆನೆಗಳು ಮಾನವರ ಮೇಲೆ ದಾಳಿ ಮಾಡಿ ಬಲಿ ಪಡೆದಿದ್ದವು. ಇವುಗಳನ್ನು ಹಿಡಿದು ತಂದು ಇಂದು ಅವುಗಳನ್ನು ಸಾಧು ಪ್ರಾಣಿಗಳನ್ನಾಗಿ ಮಾರ್ಪಡಿಸಿದ್ದಾರೆ. ಹೆಚ್ಚು ಸೌಮ್ಯವಾಗಿರುವ ಆನೆಗಳಿಗೆ ಉತ್ತಮ ತರಬೇತಿಯನ್ನೂ ನೀಡಲಾಗಿದೆ.

ಮೂರ್ತಿ ಆನೆ 22 ಜನರನ್ನು ಬಲಿ ಪಡೆದಿತ್ತು. ಬಳಿಕ ಸೆರೆಹಿಡಿದು ತೆಪ್ಪಕಾಡು ಕ್ಯಾಂಪ್‌ನಲ್ಲಿ ಪುನರ್ವಸತಿ ನೀಡಿದ ಬಳಿಕ ಅದು ತೀರಾ ಸೌಮ್ಯವಾಗಿದೆ. ಈಗ ಅದೆಷ್ಟು ಸರಳವಾಗಿದೆ ಎಂದರೆ, ಮಾವುತ ಕಿರುಮಾರನ್ ಅವರ ಮೊಮ್ಮಕ್ಕಳು ಅದರ ಜೊತೆಗೆ ಆಟವಾಡುತ್ತಾರೆ. ಇನ್ನೊಂದು ಆನೆಯಾದ ಈಶ್ವರನ್‌ ನಿಧಾನ ಸ್ವಭಾವಕ್ಕೆ ಬಂದಿದ್ದರೂ, ಅದು ಆಗಾಗ ಕಿತಾಪತಿ ಮಾಡುತ್ತಿರುತ್ತದೆ. ಆನೆಯ ಮಾವುತ ವಾಸಿಮ್ ಮೂರು ಬಾರಿ ಗಾಯಗೊಂಡಿದ್ದನ್ನು ನೆನಪಿಸಿಕೊಂಡರು.

'ದ ಎಲಿಫೆಂಟ್ ವಿಸ್ಪರರ್ಸ್' ಕಥೆ ಏನು?: ಸಾಕ್ಷ್ಯಚಿತ್ರದ ಕಥಾವಸ್ತು ತಮಿಳುನಾಡಿನ ಮುದುಮಲೈ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಒಂದು ಅನಾಥ ಆನೆಯನ್ನು ದತ್ತು ತೆಗೆದುಕೊಳ್ಳುವ ಕುಟುಂಬದ ಸುತ್ತ ಸುತ್ತುತ್ತದೆ. ಆನೆ ಮರಿಯ ಆರೈಕೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ದಂಪತಿಯ ಕಥೆ ಇದರಲ್ಲಿದೆ. ಆನೆಗಳು ಮತ್ತು ಅವುಗಳ ಪಾಲಕರ ನಡುವಿನ ಅವಿನಾಭಾವ ಸಂಬಂಧವನ್ನು ಮನಸ್ಸಿಗೆ ನಾಟುವಂತೆ ಚಿತ್ರಿಸಲಾಗಿದೆ. ಭಾವನೆಯ ಜೊತೆಗೆ ಪ್ರಾಣಿಗಳು ಮತ್ತು ಮಾನವನ ನಡುವಿನ ಪ್ರೀತಿಯ ಸೆಳೆತ ಕಣ್ಣಿಗೆ ಕಟ್ಟುವಂತೆ ಡಾಕ್ಯುಮೆಂಟರಿಯಲ್ಲಿ ಮೂಡಿಬಂದಿದೆ. ಇದೀಗ 41 ನಿಮಿಷಗಳ ದ ಎಲಿಫೆಂಟ್ ವಿಸ್ಪರರ್ಸ್ ಆಸ್ಕರ್ ಪ್ರಶಸ್ತಿ ಪಡೆದುಕೊಳ್ಳುವ ಮೂಲಕ ಭಾರತಕ್ಕೆ ಕೀರ್ತಿ ತಂದಿದೆ.

ಇದನ್ನೂ ಓದಿ: 'ದ ಎಲಿಫೆಂಟ್‌ ವಿಸ್ಪರರ್ಸ್‌' ಅತ್ಯುತ್ತಮ ಕಿರು ಸಾಕ್ಷ್ಯಚಿತ್ರ: ಒಲಿದು ಬಂತು ಆಸ್ಕರ್‌ ಪ್ರಶಸ್ತಿ!.. ಬೆಳ್ಳಿ ಹೇಳಿದ್ದೇನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.