ETV Bharat / entertainment

'ರಂಗಸಮುದ್ರ' ಚಿತ್ರದ ಹಾಡಿಗೆ ದನಿಯಾದ ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎಮ್.ಎಮ್ ಕೀರವಾಣಿ

author img

By ETV Bharat Karnataka Team

Published : Dec 23, 2023, 2:43 PM IST

Updated : Dec 23, 2023, 3:12 PM IST

ಸಂಗೀತ ನಿರ್ದೇಶಕ ಎಮ್.ಎಮ್ ಕೀರವಾಣಿ ಅವರು 'ರಂಗಸಮುದ್ರ' ಚಿತ್ರದ ಹಾಡಿಗೆ ದನಿ ನೀಡಿದ್ದಾರೆ.

MM Keeravani sang a song for Rangasamudra movie
'ರಂಗಸಮುದ್ರ' ಚಿತ್ರದ ಹಾಡಿಗೆ ದನಿಯಾದ ಎಮ್.ಎಮ್ ಕೀರವಾಣಿ

'ರಂಗಸಮುದ್ರ' ಚಿತ್ರದ ಹಾಡಿಗೆ ದನಿಯಾದ ಎಮ್.ಎಮ್ ಕೀರವಾಣಿ

ಹೊಸ ವರ್ಷಾರಂಭದಲ್ಲಿ ತೆರೆಕಾಣಲು ಸಜ್ಜಾಗಿರೋ ರೆಟ್ರೋ ಸಿನಿಮಾ ''ರಂಗಸಮುದ್ರ''. ಪೋಸ್ಟರ್, ಹಾಡುಗಳಿಂದ ಪ್ರೇಕ್ಷಕರ ಮನಕದ್ದಿರುವ ಈ ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕರ ಸಾಥ್ ಸಿಕ್ಕಿದೆ. ಹೌದು, ಭಾರತೀಯ ಚಿತ್ರರಂಗದಲ್ಲಿ ಮುಂಚೂಣಿಯಲ್ಲಿರುವ ಮ್ಯೂಸಿಕ್ ಡೈರೆಕ್ಟರ್, ಪದ್ಮಶ್ರೀ, ರಾಷ್ಟ್ರ ಪ್ರಶಸ್ತಿ ಹಾಗೂ ವಿಶ್ವದ ಅತ್ಯಂತ ಪ್ರಮುಖ ಪ್ರಶಸ್ತಿಯಾದ ಆಸ್ಕರ್ ಪ್ರಶಸ್ತಿಗಳನ್ನು ಗೆದ್ದುಕೊಂಡಿರುವ ಎಮ್.ಎಮ್ ಕೀರವಾಣಿ ಅವರು 'ರಂಗಸಮುದ್ರ' ಚಿತ್ರದ ಹಾಡಿಗೆ ದನಿ ನೀಡಿದ್ದಾರೆ. ಬಾಹುಬಲಿ, ಆರ್​ಆರ್​ಆರ್ ಚಿತ್ರಗಳ ಸಂಗೀತ ಮಾಂತ್ರಿಕ ಕೀರವಾಣಿ ಅವರಿಂದ ಚಿತ್ರದ ಅದ್ಭುತ ಗೀತೆಯೊಂದನ್ನು ಹಾಡಿಸಿ, ಅದನ್ನು ಚಿತ್ರತಂಡ ಬಿಡುಗಡೆಗೆಗೊಳಿಸಿದೆ.

ಎಮ್.ಎಮ್ ಕೀರವಾಣಿಯವರು ದಶಕಗಳ‌ ನಂತರ "ರಂಗಸಮುದ್ರ" ಚಿತ್ರದ ಮೂಲಕ ಕನ್ನಡಕ್ಕೆ ಮರಳಿ ಗೀತೆಯೊಂದಕ್ಕೆ ದನಿಯಾಗಿರುವುದು ಚಿತ್ರತಂಡಕ್ಕೆ ಆತ್ಮವಿಶ್ವಾಸ ಹೆಚ್ಚಿಸಿದಂತಾಗಿದೆ. ಅರ್ಥಾತ್ ಬಾಹುಬಲಿ ಸಂಗೀತ ಮಾಂತ್ರಿಕನ ಬಲ ಸಿಕ್ಕಾಂತಾಗಿದೆ ಎನ್ನುವುದು ಗಾಂಧಿನಗರದಲ್ಲಿ ಕೇಳಿ ಬರುತ್ತಿರುವ ಮಾತು.

ರಂಗಸಮುದ್ರ ಚಿತ್ರದ ನಿರ್ದೇಶಕ ರಾಜ್ ಕುಮಾರ್ ಅಸ್ಕಿ , ಸಾಹಿತಿ ವಾಗೀಶ್ ಚನ್ನಗಿರಿ ಹಾಗೂ ಸಂಗೀತ ನಿರ್ದೇಶಕ ದೇಸಿ ಮೋಹನ್ ಅವರು ಈ ಒಂದು ಗೀತೆಗೆ ಎಮ್ ಎಮ್ ಕೀರವಾಣಿಯವರೇ ದನಿಯಾಗಬೇಕು ಎಂದು ಚಿತ್ರದ ನಿರ್ಮಾಪಕ ಹೊಯ್ಸಳ ಕೊಣನೂರು ಅವರ ಬಳಿ ಹೇಳಿಕೊಂಡಿದ್ದರು. ಚಿತ್ರತಂಡದ ಆಸೆಯಂತೆ ನಿರ್ಮಾಪಕರು ಕೀರವಾಣಿ ಅವರನ್ನು ಸಂಪರ್ಕಿಸಿದಾಗ, ಸಂಗೀತ ನಿರ್ದೇಶಕರು ಚಿತ್ರತಂಡವನ್ನು ಪ್ರೀತಿಯಿಂದ ಹೈದಾರಬಾದ್​​ಗೆ ಆಹ್ವಾನಿಸಿದ್ದರು.

ಕೀರವಾಣಿ ಅವರು ಸಾಂಗ್ ಅನ್ನು ಒಮ್ಮೆ ಕೇಳಿದ ನಂತರ, ನಾನು ಸೀನಿಯರ್ ಎಂಬುದನ್ನು ಬದಿಗಿಟ್ಟು, ಚಿತ್ರದ ಕಥೆ ಹೇಳಿ ಎಂದು ನಗುತ್ತಲೇ ಡೈರೆಕ್ಟರ್​ಗೆ ಹೇಳಿದ್ದಾರೆ. ಕೀರವಾಣಿಯವರು ಕಥೆ ಕೇಳಿದ 5 ನಿಮಿಷಕ್ಕೆ ಹಾಡನ್ನು ಹಾಡಲು ಒಪ್ಪಿದರು ಎನ್ನುತ್ತಾರೆ ನಿರ್ದೇಶಕ ರಾಜ್​​ ಕುಮಾರ್ ಅಸ್ಕಿ. ಇನ್ನೂ ಹಾಡಲು ಸಿದ್ಧರಾಗುವಾಗ ಗೀತೆಯನ್ನು ಕನ್ನಡದಲ್ಲೇ ಬರೆದುಕೊಂಡು, ಬಹಳ‌ ಸುಮಧುರವಾಗಿ ಹಾಡಿ ಕನ್ನಡ ಭಾಷೆ ಮೇಲಿರುವ ಅಭಿಮಾನವನ್ನು ಸಾಬೀತುಪಡಿಸಿರುವುದು ಹೆಮ್ಮೆಯ ಸಂಗತಿ.

ಸರಿಸುಮಾರು ಅರ್ಧ ದಿನ ಚಿತ್ರತಂಡದೊಂದಿಗೆ ಗುಣಮಟ್ಟದ ಸಮಯ ಕಳೆದಿದ್ದಾರೆ. ಕನ್ನಡದ ನಂಟು, ಬೆಂಗಳೂರಿನಲ್ಲಿ ಒಂದು ಚಿಕ್ಕ ರೂಮಿನಲ್ಲಿ ವಾಸ ಮಾಡುತ್ತಿದ್ದದ್ದು, ಚಾಮುಂಡೇಶ್ವರಿ ಸ್ಟುಡಿಯೋ ಇಂದ ತನ್ನ ಸಿನಿಪಯಣ ಶುರುವಾಗಿದ್ದು, ತಮ್ಮ ಆಪ್ತ ಸ್ನೇಹಿತ ದೊಡ್ಡಣ್ಣ ಸೇರಿದಂತೆ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಚಿತ್ರದ ಶೂಟಿಂಗ್ ಬಗ್ಗೆ ಮಾತನಾಡುವ ವೇಳೆ ಅಪ್ಪು ಅವರು ನಟಿಸಬೇಕಿದ್ದ ಸಿನಿಮಾ 'ರಂಗಸಮುದ್ರ' ಎಂದು ತಿಳಿದಾಗ ಭಾವುಕರಾದ ಗಾಯಕರು, ಅಪ್ಪು ಒಬ್ಬ ಅಜಾತಶತ್ರು, ಸದ್ಯ ನಕ್ಷತ್ರವಾಗಿ ಮಿನುಗುತ್ತಿದ್ದಾರೆ. ಒಬ್ಬರು ಸತ್ತರೆ ಶತ್ರುಗೂ ಕಣ್ಣೀರು ಬರಬೇಕು, ಅದರಂತೆ ಈ ಸಾಂಗ್ ನೋಡಿದ ಮೇಲೆ ಎಂತಹ ಕಲ್ಲು ಮನಸ್ಸು ಕೂಡ ಕರಗುತ್ತೆ ಎಂದಿದ್ದಾರೆ.

ಚಿತ್ರವನ್ನು ನಿರ್ಮಾಣ ಮಾಡಿದ ಹೊಯ್ಸಳರವರ ಹೆಗಲ ಮೇಲೆ ಕೈ ಹಾಕಿ ಆಭಯ ನೀಡುವುದರ ಜೊತೆಗೆ, ಕಥೆ ರಚಿಸಿದ ಡೈರೆಕ್ಟರ್ ರಾಜ್ ಕುಮಾರ್ ಅಸ್ಕಿ ಮತ್ತು ಅತ್ಯುತ್ತಮ ಸಾಹಿತ್ಯ ನೀಡಿರುವ ವಾಗೀಶ್ ಚನ್ನಗಿರಿ ಅವರ ಬೆನ್ನು ತಟ್ಟಿ ರಾಜಮೌಳಿ ಅವರೊಂದಿಗೆ ನಿಮ್ಮ ಸಿನಿಮಾ ನೋಡುತ್ತೇನೆ ಎಂದು ತಿಳಿಸಿ, ಅತಿಥಿಗಳಿಗೆ ಅವರೇ ಎಲ್ಲಾ ರೀತಿಯಲ್ಲೂ ಸತ್ಕರಿಸಿ ಬೀಳ್ಕೊಟ್ಟರು ಎನ್ನುತ್ತಾರೆ ಚಿತ್ರತಂಡದವರು.

ಇದನ್ನೂ ಓದಿ: ದರ್ಶನ್ ಅಭಿನಯದ 'ಕಾಟೇರ' ಸಿನಿಮಾಗೆ ನಿರ್ದೇಶಕ ಗುರು ದೇಶಪಾಂಡೆ ಸಾಥ್

ರಂಗಸಮುದ್ರ ರಾಘವೇಂದ್ರ ರಾಜ್ ಕುಮಾರ್, ರಂಗಾಯಣ ರಘು, ಸಂಪತ್ ರಾಜ್, ದಿವಂಗತ ಮೋಹನ್ ಜುನೇಜಾ, ಮೂಗು ಸುರೇಶ್, ಗುರುರಾಜ್ ಹೊಸಕೋಟೆ, ಉಗ್ರಂ ಮಂಜು, ಕಾರ್ತಿಕ್ ರಾವ್, ದಿವ್ಯ ಗೌಡ, ಮಹೇಂದ್ರ, ಸ್ಕಂದ ಅವರಂತಹ ತಾರಾ ಬಳಗವನ್ನು ಹೊಂದಿದೆ.

ಇದನ್ನೂ ಓದಿ: ಬಿಗ್‌ ಬಾಸ್‌: ದನಿ ಏರಿಸಿದ ವಿನಯ್​ಗೆ ನಟಿ ಶ್ರುತಿ ವಾರ್ನಿಂಗ್​!

ಚಿತ್ರದಲ್ಲಿ‌ರುವ 4 ಗೀತೆಗಳಿಗೆ ಖ್ಯಾತ ಗಾಯಕರಾದ ಕೈಲಾಶ್ ಖೇರ್, ವಿಜಯ್ ಪ್ರಕಾಶ್, ಸಂಜಿತ್ ಹೆಗ್ಡೆ, ದೇಸಿ ಮೋಹನ್ ಅವರು ದನಿಯಾಗಿದ್ದಾರೆ. ಎರಡು ಬೀಟ್​ಗಳಿಗೆ ನವೀನ್ ಸಜ್ಜು ಅವರು ದನಿಯಾಗಿದ್ದಾರೆ. ರೆಟ್ರೋ ಕಥಾಹಂದರದ ಈ ಸಿನಿಮಾ, ಪ್ರೇಕ್ಷಕರ ಮನಸ್ಸನ್ನು ಗೆಲ್ಲಲು ಎಲ್ಲಾ ರೀತಿಯ ಸಿದ್ಧತೆಯೊಂದಿಗೆ ಜನವರಿ 12ರಂದು ರಾಜ್ಯದಾದ್ಯಂತ ಚಿತ್ರಮಂದಿರ ಪ್ರವೇಶಿಸಲಿದೆ.

Last Updated : Dec 23, 2023, 3:12 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.