ETV Bharat / entertainment

ರಾಜಸ್ಥಾನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ತಾರಿಣಿ ಸಿನಿಮಾ ಆಯ್ಕೆ

author img

By ETV Bharat Karnataka Team

Published : Nov 15, 2023, 10:51 PM IST

ಗರ್ಭಿಣಿ ಕುರಿತಾದ ಕಥಾ ಸಾರಾಂಶವಿರುವ ತಾರಿಣಿ ಸಿನಿಮಾ ರಾಜಸ್ಥಾನ್ ಇಂಟರ್​ನ್ಯಾಷನಲ್ ಫಿಲ್ಮ್ ಫೆಸ್ಟಿವಲ್​ಗೆ ಆಯ್ಕೆಯಾಗಿದೆ.

ತಾರಿಣಿ ಸಿನಿಮಾ
ತಾರಿಣಿ ಸಿನಿಮಾ

ಹೆಣ್ಣು ಭ್ರೂಣ ಹತ್ಯೆ ಸಾಮಾಜಿಕ ಪಿಡುಗು. ಈ ಬಗ್ಗೆ ಸರ್ಕಾರಗಳು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿವೆ. ಸರ್ಕಾರದ ಜೊತೆಗೆ ಸಿನಿಮಾ ತಾರೆಯರು ಕೂಡ ಧ್ವನಿಗೂಡಿಸುತ್ತಿರುತ್ತಾರೆ. ಸ್ಯಾಂಡಲ್​ವುಡ್​ನಲ್ಲಿ ವಿಭಿನ್ನ ಕಥೆಗಳ ಸಿನಿಮಾಗಳನ್ನು ನಿರ್ದೇಶಿಸಿರುವ ನಿರ್ದೇಶಕ ಸಿದ್ದು ಪೂರ್ಣಚಂದ್ರ ಹೆಣ್ಣು ಭ್ರೂಣ ಹತ್ಯೆ ಬಗ್ಗೆ ತಾರಿಣಿ ಅಂತಾ ಸಿನಿಮಾ ಮಾಡ್ತಾ ಇದ್ದಾರೆ. ಕೆಲವು ತಿಂಗಳುಗಳ ಹಿಂದೆ ಈ ಚಿತ್ರದ ಫಸ್ಟ್ ಲುಕ್ ಅನಾವರಣ ಮಾಡಲಾಗಿತ್ತು.

ಮಮತಾ ರಾಹುತ್
ಮಮತಾ ರಾಹುತ್

ನಿರ್ದೇಶಕ ಸಿದ್ದು ಪೂರ್ಣಚಂದ್ರ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಚಿತ್ರ ತಾರಿಣಿ ಸಿನಿಮಾ ಇದೀಗ ಪ್ರತಿಷ್ಠಿತ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲೊಂದಾದ ರಾಜಸ್ಥಾನ್ ಇಂಟರ್​ನ್ಯಾಷನಲ್ ಫಿಲ್ಮ್ ಫೆಸ್ಟಿವಲ್​ಗೆ ಆಯ್ಕೆಯಾಗಿದೆ. ಜನವರಿ ತಿಂಗಳಲ್ಲಿ ರಾಜಸ್ಥಾನದ ಜೈಪುರ್​ನಲ್ಲಿ ತಾರಿಣಿ ಚಿತ್ರ ಪ್ರದರ್ಶನವಾಗುತ್ತಿದೆ. ದೇಶದ ವಿವಿಧ ಭಾಗಗಳಿಂದ ಬರುವ ಚಿತ್ರ ಪ್ರೇಮಿಗಳು ಈ ಚಿತ್ರವನ್ನು ಕಣ್ತುಂಬಿಕೊಳ್ಳುವರು ಎಂದು ಚಿತ್ರದ ನಿರ್ದೇಶಕ ಸಿದ್ದು ಪೂರ್ಣಚಂದ್ರ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಗರ್ಭಿಣಿ ಕುರಿತಾದ ಕಥಾ ಸಾರಾಂಶ ಹೊಂದಿರುವ ತಾರಿಣಿ ಚಿತ್ರದಲ್ಲಿ ನಿಜವಾಗಿಯೂ ಪ್ರಗ್ನೆಂಟ್ ಆಗಿಯೇ ಮಮತಾ ರಾಹುತ್ ಅವರು ಅಭಿನಯಿಸಿದ್ದಾರೆ. ಆಗಷ್ಟೇ ಹುಟ್ಟಿದ ಮಮತಾ ರಾಹುತ್ ಅವರ ಮಗುವಿನ ದೃಶ್ಯಗಳೂ ತಾರಿಣಿ ಚಿತ್ರದಲ್ಲಿರುವುದು ವಿಶೇಷ. ಈಗಾಗಲೇ ಅನೇಕ ಚಿತ್ರೋತ್ಸವಗಳಿಗೂ ಈ ಚಿತ್ರವನ್ನು ಕಳುಹಿಸಲಾಗಿದೆ. ಎಲ್ಲ ಕಡೆಯೂ ಪ್ರದರ್ಶನಗೊಂಡು ಅವಾರ್ಡ್ ಗೆಲ್ಲುವ ನಿರೀಕ್ಷೆಯಿದೆ ಎಂದು ನಿರ್ದೇಶಕರು ಆತ್ಮವಿಶ್ವಾಸ ತೋರಿದರು.

ಚಿತ್ರರಂಗದಲ್ಲಿ ಬೋಲ್ಡ್ ನಟನೆಯಿಂದಲೇ ತನ್ನದೇ ಬೇಡಿಕೆ ಹೊಂದಿರುವ ಮಮತಾ ರಾವತ್ ನಿಜವಾಗಿ ಏಳು ತಿಂಗಳ ಗರ್ಭಿಣಿ ಆಗಿದ್ದಾಗ ಈ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಅವರೇ ಹೇಳಿದಂತೆ ಕೆಲವು ದಿನಗಳ ಚಿತ್ರೀಕರಣ ನಂತರ ನನಗೆ ಅವಧಿಗೂ ಕೆಲವು ದಿನಗಳ ಮುಂಚೆ ಹೆರಿಗೆ ಆಯಿತು. ಆನಂತರ ಕೂಡ ನಾನು ಚಿತ್ರೀಕರಣದಲ್ಲಿ ಭಾಗಿಯಾದೆ. ನನ್ನ ಮಗು ಕೂಡ ಈ ಚಿತ್ರದಲ್ಲಿ ಅಭಿನಯಿಸಿದೆ ಎಂದರು.

ತಾರಿಣಿ ಪಾತ್ರದಲ್ಲಿ ಮಮತಾ ರಾಹುತ್ ನಟಿಸಿದ್ದು, ನಾಯಕನಾಗಿ ರೋಹಿತ್ ಅಭಿನಯಿಸಿದ್ದಾರೆ. ಭವಾನಿ ಪ್ರಕಾಶ್, ಸುಧಾ ಪ್ರಸನ್ನ, ಡಾ ಸುರೇಶ್ ಚಿತ್ರಾಪು, ಪ್ರಮಿಳಾ ಸುಬ್ರಹ್ಮಣ್ಯಂ, ವಿಜಯಲಕ್ಷ್ಮಿ, ದೀಪಿಕಾಗೌಡ, ಸನ್ನಿ, ತೇಜಸ್ವಿನಿ, ಕವಿತ ಕಂಬಾರ್, ಬೇಬಿ ನಿಶಿತಾ, ಬೇಬಿ ರಿಧಿ, ಪ್ರಿನ್ಸ್ ಜಿತಿನ್ ಕೋಟ್ಯಾನ್, ಮಟಿಲ್ಡಾ ಡಿಸೋಜಾ, ಅರ್ಚನಾ ಗಾಯಕ್ವಾಡ್, ಶೀಬಾ ಮೂರ್ತಿ, ಶ್ವೇತಾ, ಚೈತ್ರ, ಮಂಜು ನಂಜನಗೂಡು, ರಘು ಸಮರ್ಥ್ ಮುಂತಾದವರು ಚಿತ್ರದ ತಾರಾ ಬಳಗದಲ್ಲಿದ್ದಾರೆ.

ಶ್ರೀ ಗಜನಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಮೂಡಿಬಂದಿರುವ ಈ ಚಿತ್ರಕ್ಕೆ ಡಾ ಸುರೇಶ್ ಕೋಟ್ಯಾನ್ ಚಿತ್ರಾಪು ಅವರು ಬಂಡವಾಳ ಹೂಡಿದ್ದಾರೆ. ಜೊತೆಗೆ ಒಂದು ಮುಖ್ಯಪಾತ್ರದಲ್ಲೂ ಅಭಿನಯಿಸಿದ್ದಾರೆ.

ಇದನ್ನೂ ಓದಿ : ಮೂರು ದಿನದಲ್ಲಿ 150 ಕೋಟಿ ರೂ. ಕಲೆಕ್ಷನ್: 'ಟೈಗರ್​ 3'ಗೆ ಪ್ರೇಕ್ಷಕರ ಬಹುಪರಾಕ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.