ಬೊಂಬಾಟ್ ಆಗಿದೆ ಅಭಿಷೇಕ್ ಅಂಬರೀಷ್ ಅಭಿನಯದ ಕಾಳಿ ಚಿತ್ರದ ಮೇಕಿಂಗ್

author img

By

Published : Nov 29, 2022, 10:59 PM IST

making-of-kali-cinema-video
ಬೊಂಬಾಟ್ ಆಗಿದೆ ಅಭಿಷೇಕ್ ಅಂಬರೀಷ್ ಅಭಿನಯದ ಕಾಳಿ ಚಿತ್ರದ ಮೇಕಿಂಗ್ ()

ಯಂಗ್​ ರೆಬೆಲ್​ ಸ್ಟಾರ್​ ಅಭಿಷೇಕ್ ಅಂಬರೀಷ್​​ ಅಭಿನಯದ, ಎಸ್ ಕೃಷ್ಣ ನಿರ್ದೇಶನದ ಕಾಳಿ ಸಿನಿಮಾ ಸದ್ದಿಲ್ಲದೇ ಸೆಟ್ಟೇರಿದೆ. ಸದ್ಯ ಚಿತ್ರದ ಮುಹೂರ್ತ ನಡೆದಿದ್ದು,2023ರ ಜನವರಿಯಿಂದ ಕಾಳಿ ಚಿತ್ರದ ಚಿತ್ರೀಕರಣ ಶುರುವಾಗಲಿದೆ.

ಅಭಿಷೇಕ್​ ಅಂಬರೀಶ್​ ಅಭಿನಯದ ಹಾಗು ಪೈಲ್ವಾನ್ ಚಿತ್ರ ನಿರ್ದೇಶಕ ಎಸ್ ಕೃಷ್ಣ ನಿರ್ದೇಶನದ ಕಾಳಿ ಸಿನಿಮಾ ಸೈಲೆಂಟ್ ಆಗಿ ಸೆಟ್ಟೇರಿದೆ. ಬೆಂಗಳೂರಿನ ಶ್ರೀ ಬಂಡಿ ಮಂಕಾಳಮ್ಮ ದೇವಸ್ಥಾನದಲ್ಲಿ ಈ ಚಿತ್ರದ ಮೂಹೂರ್ತ ಇತ್ತೀಚೆಗೆ ನೆರವೇರಿದೆ. 1990ರ ದಶಕದ ಕಾವೇರಿ ಗಲಭೆಯ ಹಿನ್ನೆಲೆಯಲ್ಲಿ ನಡೆಯುವ ಕಥೆಯೇ ಕಾಳಿ ಸಿನೆಮಾ. ಈ ಚಿತ್ರದ ಕಲರ್ ಫುಲ್ ಮೇಕಿಂಗನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

ಕನ್ನಡ ಚಿತ್ರರಂಗದಲ್ಲಿ 25ಕ್ಕೂ ಹೆಚ್ಚು ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿ ಸಕ್ಸಸ್ ಫುಲ್ ಛಾಯಾಗ್ರಾಹಕರಾದ ಬಳಿಕ ಗಜಕೇಸರಿ ಚಿತ್ರದ ಮೂಲಕ ಯಶಸ್ವಿ ನಿರ್ದೇಶಕರಾದವರು ಎಸ್​​. ಕೃಷ್ಣ. ಕಿಚ್ಚ ಸುದೀಪ್ ಪೈಲ್ವಾನ್ ಸಿನಿಮಾ ಬಳಿಕ ನಿರ್ದೇಶಕ ಎಸ್ ಕೃಷ್ಣ ಈಗ ರೆಬಲ್ ಸ್ಟಾರ್ ಅಂಬರೀಷ್ ಮಗ ಅಭಿಷೇಕ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಕಾಳಿ ಕೃಷ್ಣ ಅವರ ನಾಲ್ಕನೇ ನಿರ್ದೇಶನದ ಸಿನೆಮಾ.

'ಕಾಳಿ' ಚಿತ್ರದಲ್ಲಿ ಅಂಬರೀಶ್ ಮತ್ತು ಸುಮಲತಾ ಅವರ ಪುತ್ರ ಅಭಿಷೇಕ್ ಅಂಬರೀಶ್ ನಾಯಕನಾಗಿ ನಟಿಸುತ್ತಿದ್ದು, ಇದು ಅವರ ಅಭಿನಯದ ಮೂರನೆ ಚಿತ್ರವಾಗಿದೆ. 'ಕಾಂತಾರ' ಖ್ಯಾತಿಯ ಸಪ್ತಮಿ ಗೌಡ ಕಾಳಿ ಚಿತ್ರದ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಹಿಂದೆ ಕೃಷ್ಣ ನಿರ್ದೇಶನದ 'ಹೆಬ್ಬುಲಿ' ಮತ್ತು 'ಪೈಲ್ವಾನ್' ಚಿತ್ರಗಳಿಗೆ ಛಾಯಾಗ್ರಾಹಕರಾಗಿದ್ದ ಕರುಣಾಕರ್​, ಇಲ್ಲೂ ಛಾಯಾಗ್ರಾಹಕರಾಗಿ ಕೆಲಸ ಮಾಡುತ್ತಿದ್ದಾರೆ.

ಇನ್ನು, 'ಗೋಧಿ ಬಣ್ಣ ಸಾಧಾರಣ ಮೈಕಟ್ಟು', 'ಟಗರು' 'ಸಲಗ' ಮುಂತಾದ ಚಿತ್ರಗಳಿಗೆ ಸಂಗೀತ ಸಂಯೋಜಿಸಿರುವ ಚರಣ್ ರಾಜ್ ಈ ಚಿತ್ರದ ಸಂಗೀತ ನಿರ್ದೇಶಕರು. ದೀಪು ಎಸ್ ಕುಮಾರ್ ಸಂಕಲನ ಮತ್ತು 'ಕೆಜಿಎಫ್' ಖ್ಯಾತಿಯ ಚಂದ್ರಮೌಳಿ ಈ ಚಿತ್ರಕ್ಕೆ ಸಂಭಾಷಣೆ ಬರೆಯಲಿದ್ದಾರೆ. RRR ಮೋಷನ್ ಪಿಕ್ಚರ್ಸ್ ಸಂಸ್ಥೆಯಡಿ ನಿರ್ದೇಶಕ ಕೃಷ್ಣ ಅವರ ಪತ್ನಿ ಸ್ವಪ್ನಾ ಕೃಷ್ಣ ಸಿನೆಮಾ ನಿರ್ಮಾಣ ಮಾಡುತ್ತಿದ್ದಾರೆ.

ಇದು ಈ ಸಂಸ್ಥೆಯ ಮೂರನೆ ಚಿತ್ರವಾಗಿದೆ. ಸದ್ಯಕ್ಕೆ ಕಾಳಿ ಚಿತ್ರಕ್ಕೆ ಮುಹೂರ್ತ ಆಗಿದ್ದು 2023ರ ಜನವರಿಯಿಂದ ಕಾಳಿ ಚಿತ್ರದ ಚಿತ್ರೀಕರಣ ಶುರುವಾಗಲಿದೆ.

ಇದನ್ನೂ ಓದಿ :ಚಂದ್ರಮುಖಿ 2 ಮುಖ್ಯಪಾತ್ರದಲ್ಲಿ ಕಂಗನಾ ಮಿಂಚು: ದಕ್ಷಿಣದತ್ತ ಬಾಲಿವುಡ್ ಬೆಡಗಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.