ETV Bharat / entertainment

ಡಾ.ರಾಜ್ ಕುಮಾರ್ ಜೊತೆ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದ ಲೀಲಾವತಿ

author img

By ETV Bharat Karnataka Team

Published : Dec 8, 2023, 9:27 PM IST

ಡಾ.ಲೀಲಾವತಿ ಅವರು ಡಾ.ರಾಜ್​ಕುಮಾರ್ ಅವರೊಂದಿಗೆ ಅತಿ ಹೆಚ್ಚು ಚಿತ್ರಗಳನ್ನು ಮಾಡಿರುವ ಎರಡನೇ ನಟಿಯಾಗಿದ್ದಾರೆ.

ಡಾ ರಾಜ್ ಕುಮಾರ್
ಡಾ ರಾಜ್ ಕುಮಾರ್

ಕನ್ನಡ ಚಿತ್ರರಂಗದಲ್ಲಿ ಎಂದಿಗೂ ಮರೆಯಲಾರದ ಅದ್ಭುತ ನಟಿ ಲೀಲಾವತಿ. ಕನ್ನಡ ಚಿತ್ರರಂಗ ಮಾತ್ರವಲ್ಲದೇ ತೆಲುಗು, ತಮಿಳು ಹಾಗು ಮಲಯಾಳಂ ಭಾಷೆ ಸೇರಿದಂತೆ 600ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ ಕುಲವಧು ಇವರು. ಕನ್ನಡ ಸಿನಿಮಾರಂಗದಲ್ಲಿ ಐದು ದಶಕಗಳ ಕಾಲ ಬ್ಲಾಕ್ ಆ್ಯಂಡ್ ವೈಟ್ ಹಾಗು ಕಲರ್ ಸ್ಕೋಪ್ ಸಿನಿಮಾಗಳಲ್ಲಿ ಅಭಿನಯಿಸಿರುವ ಅಪ್ಪಟ ಕನ್ನಡದ ನಟಿಯೇ ಲೀಲಾವತಿ.

60 ಹಾಗೂ 70ರ ದಶಕದಲ್ಲಿ ಜಯಂತಿ, ಭಾರತಿ ವಿಷ್ಣುವರ್ಧನ್ ಹಾಗು ಲಕ್ಷ್ಮೀ ಅವರಂಥ ಯಶಸ್ಸು ಕಂಡ ನಟಿಯರ ಕಾಲದಲ್ಲಿ ತಮ್ಮ ಅಮೋಘ ನಟನೆಯಿಂದ ಯಶಸ್ಸಿನ ಉತ್ತುಂಗಕ್ಕೆ ಬೆಳೆದ ನಟಿ ಲೀಲಾವತಿ. ಕನ್ನಡ ಚಿತ್ರರಂಗದಲ್ಲಿ ಅಭಿನಯ ಶಾರದೆ ಜಯಂತಿ ಅವರು ಡಾ.ರಾಜ್ ಕುಮಾರ್ ಜೊತೆಗೆ 40ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು. ಇದಾದ ನಂತರ ರಾಜ್ ಅವರೊಂದಿಗೆ ಲೀಲಾವತಿ 39 ಸಿನಿಮಾಗಳಲ್ಲಿ ನಟಿಸಿ ಸೈ ಎನ್ನಿಸಿಕೊಂಡರು.

ಡಾ ರಾಜ್​ಕುಮಾರ್ ಅವರೊಂದಿಗೆ ನಟಿ ಲೀಲಾವತಿ
ಡಾ.ರಾಜ್​ಕುಮಾರ್ ಅವರೊಂದಿಗೆ ನಟಿ ಲೀಲಾವತಿ

1959ರಲ್ಲಿ ಅಬ್ಬಾ ಆ ಹುಡುಗಿ ಹಾಗು ಧರ್ಮ ವಿಜಯ ಎಂಬ ಚಿತ್ರದಲ್ಲಿ ರಾಜ್ ಜೊತೆ ಇವರು ಅಭಿನಯಿಸುತ್ತಾರೆ. ಈ ಎರಡು ಚಿತ್ರಗಳು ಲೀಲಾವತಿಯವರನ್ನು ವಿಶೇಷವಾಗಿ ಗುರುತಿಸುವಂತೆ ಮಾಡುತ್ತವೆ. ಬಳಿಕ ಮತ್ತೆ ರಾಜ್ ಅವರ ರಣಧೀರ ಕಂಠೀರವ ಸಿನಿಮಾದಲ್ಲಿ ನಟಿಸುತ್ತಾರೆ. ಜಿ.ವಿ.ಅಯ್ಯರ್ ಬರೆದ ಕಥೆಯನ್ನು ಎನ್​.ಸಿ.ರಾಜನ್ ನಿರ್ದೇಶನದಲ್ಲಿ ಬಂದ ರಣಧೀರ ಕಂಠೀರವ ಸಿನಿಮಾ ಆ ಕಾಲದಲ್ಲಿ ಸೂಪರ್ ಹಿಟ್ ಆಗಿ ರಾಜ್​ಕುಮಾರ್ ಹಾಗೂ ಲೀಲಾವತಿ ಲಕ್ಕಿ ಜೋಡಿ ಅಂತಾ ಕರೆಯಿಸಿಕೊಳ್ಳುತ್ತಾರೆ.

ಅಲ್ಲಿಂದ ನಂತರ ರಾಣಿ ಹೊನ್ನಮ್ಮ, ಕೈವಾರ ಮಹಾತ್ಮೆ ಹಾಗು ಕಣ್ತೆರೆದು ನೋಡು ಸಿನಿಮಾಗಳು ರಾಜ್ ಕುಮಾರ್ ಹಾಗು ಲೀಲಾವತಿ ಕೆಮಿಸ್ಟ್ರಿಯನ್ನು ಕನ್ನಡ ಸಿನಿಮಾ ಪ್ರೇಕ್ಷಕರು ಮೆಚ್ಚಿಕೊಂಡು ಹಿಟ್ ಜೋಡಿ ಅಂತಾ ಕರೆಯಿಸಿಕೊಳ್ಳುತ್ತಾರೆ. ಕಣ್ತೆರೆದು ನೋಡು ಚಿತ್ರದಲ್ಲಿ ಅಣ್ಣಾವ್ರು ಕುರುಡನ ಪಾತ್ರದಲ್ಲಿ ನಟಿಸಿದರೆ, ಲೀಲಾವತಿ ಶ್ರೀಮಂತ ಹೆಣ್ಣು ಮಗಳ ಪಾತ್ರದಲ್ಲಿ ಅಭಿನಯಿಸುತ್ತಾರೆ. ಟಿ.ವಿ.ಸಿಂಗ್ ನಿರ್ದೇಶನದಲ್ಲಿ ಮೂಡಿ ಬಂದ ಈ ಸಿನಿಮಾ ಆ ಕಾಲದಲ್ಲಿ ಹಿಟ್ ಆಗಿತ್ತು.

ಪೌರಾಣಿಕ ಕಥೆ ಆಧರಿಸಿ ಬಂದ ರಾಣಿ ಹೊನ್ನಮ್ಮ ಚಿತ್ರದಲ್ಲಿ ಮತ್ತೆ ರಾಜ್ ಕುಮಾರ್, ಲೀಲಾವತಿ ಜೋಡಿ ಮೋಡಿ ಮಾಡುತ್ತೆ. 1960ರಲ್ಲಿ ತೆರೆಗೆ ಬಂದ ಈ ಚಿತ್ರವನ್ನು ಕೆ.ಆರ್.ಸೀತಾರಾಮ್ ಶಾಸ್ತ್ರಿ ನಿರ್ದೇಶನ ಮಾಡಿದ್ದರು. ರಾಜ್ ಕುಮಾರ್ ಹಾಗು ಲೀಲಾವತಿ ಜೋಡಿ ಕನ್ನಡಿಗರ ಮನಗೆಲ್ಲುವಲ್ಲಿ ಯಶಸ್ವಿಯಾಯಿತ್ತು. ನಿರ್ದೇಶಕ ಟಿ.ವಿ.ಸಿಂಗ್ ನಿರ್ದೇಶನದಲ್ಲಿ ಬಂದ ಕುಲವಧು ಸಾಂಸಾರಿಕ ಕಥೆ ಒಳಗೊಂಡಿತ್ತು.

ಡಾ ರಾಜ್​ಕುಮಾರ್
ಡಾ.ರಾಜ್​ಕುಮಾರ್ ಮತ್ತು ಡಾ.ಲೀಲಾವತಿ

ಅಣ್ಣಾವ್ರು ಹಾಗು ಲೀಲಾವತಿಯವರು ಒಂದರ ಹಿಂದೊಂದು ಹಿಟ್ ಸಿನಿಮಾಗಳನ್ನು ಕೊಡ್ತಾ ಇರುವ ಸಮಯದಲ್ಲೇ ಮತ್ತೊಂದು ಸೂಪರ್ ಹಿಟ್ ಆದ ಸಿನಿಮಾ ವೀರ ಕೇಸರಿ. ಚಿತ್ರದ ಮೆಲ್ಲುಸಿರೇ ಸವಿಗಾನ ಹಾಡು ಇವತ್ತಿಗೂ ಎವರ್ ಗ್ರೀನ್ ಆಗಿದೆ.

ರಾಜ್ ಕುಮಾರ್ ಹಾಗು ಲೀಲಾವತಿ ಜೋಡಿಯ ಮತ್ತೊಂದು ಭಕ್ತಿ ಪ್ರಧಾನ ಚಿತ್ರ ಭಕ್ತ ಕುಂಬಾರ. ಹುಣಸೂರ್ ಕೃಷ್ಣಮೂರ್ತಿ ನಿರ್ದೇಶನದಲ್ಲಿ ಮೂಡಿಬಂದ ಚಿತ್ರದಲ್ಲಿ ರಾಜ್ ಕುಮಾರ್ ಪಾಂಡುರಂಗ ವಿಠಲ ದೇವರ ಮಹಾನ್ ಭಕ್ತನಾಗಿ ಅಭಿನಯಿಸಿರುವ ಪರಿ ಇವತ್ತಿಗೂ ರೋಮಾಂಚನ ಉಂಟುಮಾಡುತ್ತದೆ. ಲೀಲಾವತಿಯವರು ಅಣ್ಣಾವ್ರ ಮಡದಿಯ ಪಾತ್ರದಲ್ಲಿ ಮಿಂಚಿದ್ದರು. ಚಿತ್ರದ ಕ್ಲೈಮಾಕ್ಸ್‌ನಲ್ಲಿ ವಿಠಲ ದೇವರನ್ನು ನೆನೆದು ರಾಜ್ ಕುಮಾರ್ ಜೇಡಿ ಮಣ್ಣಿನಲ್ಲಿ ಮಗುವನ್ನು ತುಳಿಯುವ ದೃಶ್ಯ ನೋಡುಗರಲ್ಲಿ ಕಣ್ಣೀರು ತರಿಸಿತ್ತು.

ಭಕ್ತ ಕುಂಬಾರ
ಭಕ್ತ ಕುಂಬಾರ

ಹೀಗೆ ಸಂತ ತುಕರಾಂ, ಕುಲವಧು, ವೀರಕೇಸರಿ, ಮನಮೆಚ್ಚಿದ ಮಡದಿ, ಕೈವಾರ ಮಹಾತ್ಮೆ, ಗಾಳಿ ಗೋಪುರ, ಸಿಪಾಯಿ ರಾಮು, ಕನ್ಯಾರತ್ನ ಸೇರಿದಂತೆ 39 ಚಿತ್ರಗಳಲ್ಲಿ ಡಾ.ರಾಜ್​ಗೆ ಲೀಲಾವತಿ ನಾಯಕಿಯಾಗಿ ನಟಿಸಿದ್ದರು.

ಇದನ್ನೂ ಓದಿ: 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ, ನೂರಾರು ಪ್ರಶಸ್ತಿ; ಕಲಾಸೇವೆ ಮುಗಿಸಿ ಮರೆಯಾದ ಲೀಲಾವತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.