'ಕರ್ನಾಟಕದ ಅಳಿಯ' ಸಿನಿಮಾ ಹಾಡು ಮೆಚ್ಚಿದ 'ಮುದ್ದಿನ ಅಳಿಯ'

'ಕರ್ನಾಟಕದ ಅಳಿಯ' ಸಿನಿಮಾ ಹಾಡು ಮೆಚ್ಚಿದ 'ಮುದ್ದಿನ ಅಳಿಯ'
Karnataka Aliya song: ಬಿಗ್ ಬಾಸ್ ಖ್ಯಾತಿಯ ಪ್ರಥಮ್ ನಿರ್ದೇಶಿಸಿ, ನಾಯಕನಾಗಿ ನಟಿಸಿರುವ 'ಕರ್ನಾಟಕದ ಅಳಿಯ' ಚಿತ್ರದ ಹಾಡು ಬಿಡುಗಡೆಯಾಗಿದೆ.
'ಮುದ್ದಿನ ಅಳಿಯ' ಕನ್ನಡ ಚಿತ್ರರಂಗದಲ್ಲಿ ನಟ ಶಶಿಕುಮಾರ್ ಅವರಿಗೆ ದೊಡ್ಡ ಮಟ್ಟದಲ್ಲಿ ಹೆಸರು ತಂದುಕೊಟ್ಟ ಸಿನಿಮಾ. ಈ ಸಿನಿಮಾಗೂ ಬಿಗ್ ಬಾಸ್ ಖ್ಯಾತಿಯ ಪ್ರಥಮ್ ನಿರ್ದೇಶಿಸಿ, ನಾಯಕನಾಗಿ ನಟಿಸಿರುವ 'ಕರ್ನಾಟಕದ ಅಳಿಯ' ಚಿತ್ರಕ್ಕೂ ಒಂದು ಸಂಬಂಧ ಇದೆ. ಪ್ರಥಮ್ ನಿರ್ದೇಶನ ಮಾಡಿರುವ ಕರ್ನಾಟಕದ ಅಳಿಯ ಚಿತ್ರದಲ್ಲಿ ಶಶಿಕುಮಾರ್ ವಿಶೇಷ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಬಹುತೇಕ ಶೂಟಿಂಗ್ ಮುಗಿಸಿರುವ ಕರ್ನಾಟಕದ ಅಳಿಯ ಚಿತ್ರದ ಹಾಡೊಂದು ಬಿಡುಗಡೆ ಆಗಿದ್ದು, ಶಶಿಕುಮಾರ್ ಫಿದಾ ಆಗಿದ್ದಾರೆ.
ಸಾಂಗ್ ರಿಲೀಸ್: ಮನಸಿಗೆ ಹಿಡಿಸಿದನು ಇವನು ಎಂಬ ಹಾಡನ್ನು ಅನಾವರಣಗೊಳಿಸಲಾಗಿದೆ. ಕೆ. ರಾಮನಾರಾಯಣ್ ಹಾಡಿಗೆ ಸಾಹಿತ್ಯ ಬರೆದಿದ್ದು, ಪ್ರದ್ಯೋತನ್ ಸಂಗೀತ ನೀಡಿದ್ದಾರೆ. ಅದಿತಿ ಸಾಗರ್ ಹಾಡಿದ್ದಾರೆ.
'ಪ್ರಥಮ್ ಕರ್ನಾಟಕದ ಅಳಿಯ ಆಗಿದ್ದಾರೆ': ಸಾಂಗ್ ಲಾಂಚ್ ಈವೆಂಟ್ನಲ್ಲಿ ಶಶಿಕುಮಾರ್ ಮಾತನಾಡಿ, ನಮ್ಮಲ್ಲಿ ಮುದ್ದಿನ ಅಳಿಯ, ಗಡಿಬಿಡಿ ಅಳಿಯ ಹೀಗೆ ಸಾಕಷ್ಟು ಜನ ಅಳಿಯಂದಿರಿದ್ದೀವಿ. ಈಗ ಪ್ರಥಮ್ ಕರ್ನಾಟಕದ ಅಳಿಯ ಆಗಿದ್ದಾರೆ. ಹಿರಿಯ ನಟ ದ್ವಾರಕೀಶ್ ಅವರು ಹಾಡು ಬಿಡುಗಡೆಗೆ ಆಗಮಿಸುತ್ತೇನೆ ಎಂದು ತಿಳಿಸಿದ್ದರು. ಆದ್ರೆ ಅನಾರೋಗ್ಯ ಕಾರಣದಿಂದಾಗಿ ಬಂದಿಲ್ಲ. ವಿಡಿಯೋ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಅವರು ಹೇಳಿರುವ ಪ್ರೀತಿಯ ಮಾತುಗಳಿಗೆ ನಾನು ಆಭಾರಿ. ಸದ್ಯದಲ್ಲೇ ಅವರನ್ನು ಭೇಟಿಯಾಗುತ್ತೇನೆ. ಅನಾವರಣಗೊಂಡಿರುವ ಈ ಹಾಡು ಇಂಪಾಗಿದೆ. ಚಿತ್ರ ಕೂಡ ಎಲ್ಲರ ಮನ ಗೆಲ್ಲಲಿ ಎಂದು ಶುಭ ಹಾರೈಸಿದರು.
ಬಳಿಕ ಮಾತನಾಡಿದ ನಾಯಕ ನಟ ಪ್ರಥಮ್, ವಿದೇಶದಲ್ಲಿ ಈ ಹಾಡಿನ ಚಿತ್ರೀಕರಣ ನಡೆದಿದೆ. ಅಣಜಿ ನಾಗರಾಜ್ ಛಾಯಾಗ್ರಹಣ ಹಾಡಿನ ಅಂದ ಹೆಚ್ಚಿಸಿದೆ. ಪ್ರದ್ಯೋತನ್ ಸಂಗೀತ ನಿರ್ದೇಶನದಲ್ಲಿ, ರಾಮನಾರಾಯಣ್ ಬರೆದಿರುವ ಹಾಡನ್ನು ಅರುಣ್ ಸಾಗರ್ ಪುತ್ರಿ ಅದಿತಿ ಸಾಗರ್ ಸುಶ್ರಾವ್ಯವಾಗಿ ಹಾಡಿದ್ದಾರೆ. ಇದೊಂದು ವಾಮಾಚಾರದ ಕುರಿತಾದ ಸಿನಿಮಾ. 30 ವರ್ಷಗಳ ಹಿಂದೆ 'ತುಳಸಿದಳ' ಎಂಬ ಸಿನಿಮಾ ಮೂಡಿ ಬಂದಿತ್ತು. ಆ ನಂತರ ದೀರ್ಘವಾಗಿ ವಾಮಾಚಾರದ ಕುರಿತು ಬರುತ್ತಿರುವ ಸಿನಿಮಾ ಇದೇ ಇರಬಹುದು ಎಂದು ತಿಳಿಸಿದರು.
ನಾನು ನಿರ್ದೇಶನ ಮಾಡುವುದರ ಜೊತೆ ನಾಯಕನಾಗಿಯೂ ನಟಿಸಿದ್ದೇನೆ. ರಾಘವೇಂದ್ರ ರಾಜ್‌ಕುಮಾರ್ ಅವರು ನನ್ನ ತಂದೆ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಅಕ್ಷಿತ ಬೋಪಯ್ಯ, ಜ್ಯೋತಿ, ಸ್ಪರ್ಶ ರೇಖಾ, ಓಂಪ್ರಕಾಶ್ ರಾವ್, ರಾಮಕೃಷ್ಣ, ಕೋಟೆ ಪ್ರಭಾಕರ್, ಶ್ರೀಧರ್, ವಿ.ಮನೋಹರ್, ರಮೇಶ್ ಭಟ್ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ. ಚಿತ್ರ ಬಹಳ ಚೆನ್ನಾಗಿ ಮೂಡಿ ಬಂದಿದೆ ಎಂದರು. ಈ ಸಂದರ್ಭದಲ್ಲಿ ನಾಯಕಿ ಜ್ಯೋತಿ, ನಟ ಕೋಟೆ ಪ್ರಭಾಕರ್, ಗೀತ ರಚನೆಕಾರ ರಾಮನಾರಾಯಣ್, ಛಾಯಾಗ್ರಾಹಕ ಅಣಜಿ ನಾಗರಾಜ್ ಮತ್ತು ಅರುಣ್ ಸಾಗರ್ ಉಪಸ್ಥಿತರಿದ್ದರು.
