ETV Bharat / entertainment

Daredevil Mustafa: 'ಡೇರ್ ಡೆವಿಲ್ ಮುಸ್ತಾಫಾ' ಸಿನಿಮಾಗೆ ತೆರಿಗೆ ವಿನಾಯಿತಿ ನೀಡಿದ ರಾಜ್ಯ ಸರ್ಕಾರ

author img

By

Published : Jun 15, 2023, 6:10 PM IST

Updated : Jun 15, 2023, 6:20 PM IST

ಇತ್ತೀಚೆಗಷ್ಟೇ ತೆರೆಕಂಡಿದ್ದ 'ಡೇರ್ ಡೆವಿಲ್ ಮುಸ್ತಾಫಾ' ಸಿನಿಮಾಗೆ ಕರ್ನಾಟಕ ಸರ್ಕಾರ ತೆರಿಗೆ ವಿನಾಯಿತಿ ನೀಡಿದೆ.

Daredevil Mustafa
ಡೇರ್ ಡೆವಿಲ್ ಮುಸ್ತಫಾ

ವಿಭಿನ್ನ ಕಂಟೆಂಟ್​ ಆಧಾರಿತ ಒಳ್ಳೆಯ ಸಿನಿಮಾಗಳನ್ನು ಪ್ರೇಕ್ಷಕಪ್ರಭುಗಳು ಕೈ ಬಿಡಲ್ಲ ಅನ್ನೋದಕ್ಕೆ ಇತ್ತೀಚೆಗೆ ಬಿಡುಗಡೆಯಾದ 'ಡೇರ್ ಡೆವಿಲ್ ಮುಸ್ತಾಫಾ' ಸಾಕ್ಷಿ. ಖ್ಯಾತ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಕಥೆಯಾಧಾರಿತ ಸಿನಿಮಾ ಭಾರಿ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಕೋಮು ಸಾಮರಸ್ಯ ಹಾಗೂ ಭಾವೈಕ್ಯತೆಯ ಸಂದೇಶ ಸಾರುವ ಸಿನಿಮಾಗೆ ತೆರಿಗೆ ವಿನಾಯಿತಿ ನೀಡಲು ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

ಇತ್ತೀಚೆಗೆ ಇಡೀ ಚಿತ್ರತಂಡ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ತಮ್ಮ ಸಿನಿಮಾಗೆ ತೆರಿಗೆ ವಿನಾಯಿತಿ ನೀಡುವಂತೆ ವಿನಂತಿಸಿಕೊಂಡಿದ್ದರು. ಜೊತೆಗೆ, "ತೇಜಸ್ವಿ ಓದುಗರು, ಅಭಿಮಾನಿಗಳು, ತೇಜಸ್ವಿಯವರ ಕುಟುಂಬ ವರ್ಗ, ಈ ಸಿನಿಮಾವನ್ನು ನೋಡಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ರಾಜ್ಯ ಸರ್ವಜನಾಂಗದ ಶಾಂತಿಯ ತೋಟವಾಗಲು ಇಂತಹ ಸಿನಿಮಾಗಳು ಜನರಿಗೆ ಹೆಚ್ಚು ಹೆಚ್ಚು ತಲುಪಬೇಕು ಎಂದು ಅಭಿಪ್ರಾಯಪಟ್ಟಿದ್ದು, ತಾವು ಕೂಡ ಸಾಧ್ಯವಾದಲ್ಲಿ ಬಿಡುವು ಮಾಡಿಕೊಂಡು ಈ ಸಿನಿಮಾ ನೋಡಬೇಕು" ಎಂದು ವಿನಂತಿಸಿದ್ದರು.

ಜೊತೆಗೆ, ಇನ್ನಷ್ಟು ಜನರು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು ಈ ಸಿನಿಮಾ ನೋಡಲು ಅನುಕೂಲವಾಗುವಂತೆ ತೆರಿಗೆ ವಿನಾಯಿತಿ ನೀಡಬೇಕೆಂದು ಮನವಿ ಮಾಡಿದ್ದರು. ಅದರಂತೆ, 'ಡೇರ್ ಡೆವಿಲ್ ಮುಸ್ತಾಫಾ'ಗೆ ರಾಜ್ಯ ಸರ್ಕಾರವು ತೆರಿಗೆ ವಿನಾಯಿತಿ ನೀಡಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್​ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ.

  • ತಮ್ಮ ಬರಹ ಮತ್ತು ಬದುಕಿನ ಮೂಲಕ ಒಂದಿಡೀ ತಲೆಮಾರಿನ ಜನರನ್ನು ಪ್ರಭಾವಿಸಿದ ಹಾಗೂ ಪ್ರಭಾವಿಸುತ್ತಲೇ ಇರುವ ಕನ್ನಡದ ಜನಪ್ರಿಯ ಸಾಹಿತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ಕತೆಯಾಧಾರಿತ "ಡೇರ್ ಡೆವಿಲ್ ಮುಸ್ತಫಾ" ಸಿನಿಮಾಗೆ ತೆರಿಗೆ ವಿನಾಯಿತಿ ನೀಡಿ ಆದೇಶಿಸಿದ್ದೇನೆ.

    ಇಂದಿನ ಕಾಲಘಟಕ್ಕೆ ಬೇಕಿರುವುದು ಸೌಹಾರ್ದತೆ, ಪ್ರೀತಿ, ವಿಶ್ವಾಸಗಳ ಬುನಾದಿಯ…

    — Siddaramaiah (@siddaramaiah) June 15, 2023 " class="align-text-top noRightClick twitterSection" data=" ">

ಸಿಎಂ ಟ್ವೀಟ್​: "ತಮ್ಮ ಬರಹ ಮತ್ತು ಬದುಕಿನ ಮೂಲಕ ಒಂದಿಡೀ ತಲೆಮಾರಿನ ಜನರನ್ನು ಪ್ರಭಾವಿಸಿದ ಹಾಗೂ ಪ್ರಭಾವಿಸುತ್ತಲೇ ಇರುವ ಕನ್ನಡದ ಜನಪ್ರಿಯ ಸಾಹಿತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ಕತೆಯಾಧಾರಿತ 'ಡೇರ್ ಡೆವಿಲ್ ಮುಸ್ತಾಫಾ' ಸಿನಿಮಾಗೆ ತೆರಿಗೆ ವಿನಾಯಿತಿ ನೀಡಿ ಆದೇಶಿಸಿದ್ದೇನೆ. ಇಂದಿನ ಕಾಲಘಟಕ್ಕೆ ಬೇಕಿರುವುದು ಸೌಹಾರ್ದತೆ, ಪ್ರೀತಿ, ವಿಶ್ವಾಸಗಳ ಬುನಾದಿಯ ಮೇಲೆ ಸಮಾಜ ಕಟ್ಟುವ ಮನಸ್ಸುಗಳು. ಇಂಥದ್ದೊಂದು ಕಾರ್ಯಕ್ಕೆ ಕೈ ಹಾಕಿದ ಚಿತ್ರತಂಡಕ್ಕೆ ಅಭಿನಂದನೆಗಳು. ದ್ವೇಷ ಅಳಿಸಿ, ಪ್ರೀತಿ ಹಂಚುವ ಜನರಿಗೆ ನಮ್ಮ, ನಿಮ್ಮೆಲ್ಲರ ಬೆಂಬಲ ಇರಲಿ" ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್​ ಮಾಡಿದ್ದಾರೆ.

ಇದಕ್ಕೆ ಅನೇಕರು ಕಾಮೆಂಟ್​ ಮಾಡಿ ಪ್ರತಿಕ್ರಿಯಿಸಿದ್ದಾರೆ. "ಸರ್ವ ಜನಾಂಗದ ಶಾಂತಿಯ ತೋಟದಂತಹ ಸಿನಿಮಾಕ್ಕೆ ನಿಮ್ಮ ಬೆಂಬಲ ಶ್ಲಾಘನೀಯ" ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ. ಮತ್ತೊಬ್ಬರು, "ನಿಜಕ್ಕೂ ಇದು ಶ್ಲಾಘನೀಯ" ಎಂದಿದ್ದಾರೆ. "ಧನ್ಯವಾದಗಳು. ನಮ್ಮ ಕವಿ ಪೂರ್ಣಚಂದ್ರ ತೇಜಸ್ವಿಯವರ ಕಥೆಯ ಬೆಂಬಲಿಸದಕ್ಕೆ" ಎಂದು ತೇಜಸ್ವಿಯವರ ಅಭಿಮಾನಿಯೊಬ್ಬರು ಕಾಮೆಂಟ್​ ಮಾಡಿದ್ದಾರೆ.

ಸಿನಿಮಾ 19ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಚಿತ್ರಕ್ಕೆ ಶಶಾಂಕ್ ಸೋಗಾಲ್ ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ಸಿನಿಮಾವನ್ನು ತೇಜಸ್ವಿ ಅಭಿಮಾನಿಗಳೇ ನಿರ್ಮಿಸಿದ್ದಾರೆ. ಡಾಲಿ ಧನಂಜಯ್ ತಮ್ಮದೇ ಡಾಲಿ ಪಿಕ್ಚರ್ಸ್‌ನಡಿ ಅರ್ಪಿಸಿದ್ದು, ಕೆ.ಆರ್.ಜಿ ಸ್ಟುಡಿಯೊಸ್ ರಾಜ್ಯದೆಲ್ಲೆಡೆ ಚಿತ್ರವನ್ನು ವಿತರಿಸಿದೆ.

ರಾಹುಲ್‌ ರಾಯ್‌ ಛಾಯಾಗ್ರಹಣ, ಶಶಾಂಕ್ ಸೋಗಾಲ್, ಸಂಪತ್ ಸಿರಿಮನೆ, ಡಾಲಿ ಧನಂಜಯ್ ಸಾಹಿತ್ಯದ ಹಾಡುಗಳಿಗೆ ನವನೀತ್‌ ಶ್ಯಾಮ್‌ ಸಂಗೀತವಿದೆ. ಶಿಶಿರ್‌ ಬೈಕಾಡಿ, ಆದಿತ್ಯ ಅಶ್ರೀ, ಅಭಯ್‌, ಸುಪ್ರೀತ್‌ ಭಾರದ್ವಾಜ್‌, ಆಶಿತ್, ಶ್ರೀವತ್ಸ, ಪ್ರೇರಣಾ, ಎಂ.ಎಸ್‌. ಉಮೇಶ್‌, ಮಂಡ್ಯ ರಮೇಶ್‌, ಮೈಸೂರ್‌ ಆನಂದ್‌, ಸುಂದರ್‌ ವೀಣಾ, ನಾಗಭೂಷಣ್‌, ಪೂರ್ಣಚಂದ್ರ ಮೈಸೂರು ಸೇರಿ ಅನೇಕ ಕಲಾವಿದರು ಸಿನಿಮಾದ ಭಾಗವಾಗಿದ್ದಾರೆ. ಸಿನಿಮಾಮರ ಬ್ಯಾನರ್‌ನಲ್ಲಿ ಡೇರ್ ಡೆವಿಲ್ ಮುಸ್ತಾಫಾ ನಿರ್ಮಾಣವಾಗಿದೆ.

ಇದನ್ನೂ ಓದಿ: 'ಮಾರಕಾಸ್ತ್ರ' ಚಿತ್ರಕ್ಕಾಗಿ ಮತ್ತೆ ಖಾಕಿ ತೊಟ್ಟ ಆ್ಯಕ್ಷನ್ ಕ್ವೀನ್ ಮಾಲಾಶ್ರೀ

Last Updated : Jun 15, 2023, 6:20 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.