ETV Bharat / entertainment

ರಜನಿಕಾಂತ್​ ಪುತ್ರಿ ಮನೆಯಲ್ಲಿ ಕಳ್ಳತನ: ಐಶ್ವರ್ಯಾ ವಿಚಾರಣೆಗೆ ಪೊಲೀಸರ​ ನಿರ್ಧಾರ?

author img

By

Published : Mar 25, 2023, 12:31 PM IST

ಐಶ್ವರ್ಯಾ ರಜನಿಕಾಂತ್ ಮನೆಯಲ್ಲಿ ಕಳ್ಳತನ ಪ್ರಕರಣದಡಿ ಸ್ವತಃ ನಿರ್ದೇಶಕಿ ಐಶ್ವರ್ಯಾ ಅವರನ್ನೇ ಪೊಲೀಸರು ವಿಚಾರಣೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Aishwarya Rajinikanth investigation
ಐಶ್ವರ್ಯಾ ರಜನಿಕಾಂತ್ ವಿಚಾರಣೆ

ಸೌತ್ ಸೂಪರ್​ಸ್ಟಾರ್​ ರಜನಿಕಾಂತ್​ ಪುತ್ರಿ ಹಾಗೂ ನಿರ್ದೇಶಕಿ ಐಶ್ವರ್ಯಾ ಅವರ ಮನೆಯಲ್ಲಿ ನಡೆದಿರುವ ಚಿನ್ನಾಭರಣ ಕಳ್ಳತನ ಪ್ರಕರಣದ ತನಿಖೆ ಮುಂದುವರಿದಿದೆ. ಕಳ್ಳತನ ಆರೋಪದಡಿ ಮನೆಯ ಕೆಲಸದಾಕೆ ಮತ್ತು ಕಾರು ಚಾಲಕನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.

ಈ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಚೆನ್ನೈ ಪೊಲೀಸರು ಶುಕ್ರವಾರದಂದು ಮತ್ತೊಬ್ಬ ವ್ಯಕ್ತಿಯ ವಿಚಾರಣೆ ನಡೆಸಿದ್ದಾರೆ. ತನಿಖೆಯನ್ನು ಮುಂದುವರಿಸಲು ಐಶ್ವರ್ಯಾ ರಜನಿಕಾಂತ್ ಅವರನ್ನೇ ವಿಚಾರಣೆಗೆ ಒಳಪಡಿಸಲು ಪೊಲೀಸರು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಳ್ಳತನ ಪ್ರಕರಣದಲ್ಲಿ ಐಶ್ವರ್ಯಾ ಅವರ ಮನೆ ಕೆಲಸದಾಕೆ ಈಶ್ವರಿ ಮತ್ತು ಕಾರು ಚಾಲಕ ವೆಂಕಟೇಶನನ್ನು ತೈನಂಪೇಟ್ ಪೊಲೀಸರು ಈಗಾಗಲೇ ಬಂಧಿಸಿದ್ದರು. ಬಂಧಿತ ಈಶ್ವರಿಯಿಂದ 100 ಪವನ್ ಚಿನ್ನಾಭರಣ, 30 ಗ್ರಾಂ ವಜ್ರಾಭರಣ ಮತ್ತು 4 ಕೆಜಿ ಬೆಳ್ಳಿ ವಸ್ತುಗಳು ಮತ್ತು ಮನೆ ಆಸ್ತಿ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಶುಕ್ರವಾರ ಪೊಲೀಸರು ವಿಚಾರಣೆ ನಡೆಸಿದ ಆರೋಪಿಯನ್ನು ಮೈಲಾಪುರದ ವಿನಾಲಕ್ ಶಂಕರ್ ನವಲಿ ಎಂದು ಗುರುತಿಸಲಾಗಿದೆ. ಈತ ಕಳವು ಮಾಡಿದ ಚಿನ್ನಾಭರಣಗಳನ್ನು ಖರೀದಿಸಿದ್ದಾನೆ ಎಂಬ ಆರೋಪವಿದೆ. ವಿನಾಲಕ್ ಶಂಕ ನವಲಿಯಿಂದ ಒಟ್ಟು 340 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ, ಬಂಧಿತ ಈಶ್ವರಿ ಅವರು ವೆಂಕಟೇಶನಿಗೆ 9 ಲಕ್ಷ ರೂ. ನೀಡಿರಬಹುದು ಎಂದು ಅನುಮಾನಿಸಲಾಗಿದೆ. ಈ ಮಾಹಿತಿ ಆಧರಿಸಿ ವೆಂಕಟೇಶನ ಬಳಿ ಹಣವೇನಾದರೂ ಇದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈಶ್ವರಿ ತನ್ನ ಪತಿಯ (Angamuthu) ಬ್ಯಾಂಕ್ ಖಾತೆ ಮೂಲಕ 350 ಗ್ರಾಂ ಚಿನ್ನಾಭರಣವನ್ನು ಅಡ ಇಟ್ಟಿರುವ ಶಂಕೆ ಇದ್ದು, ಅದನ್ನು ವಶಪಡಿಸಿಕೊಳ್ಳಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

ಮತ್ತೊಂದೆಡೆ, ಐಶ್ವರ್ಯಾ ರಜನಿಕಾಂತ್ ಅವರ ಮನೆಯಿಂದ ಪತ್ನಿ ಈಶ್ವರಿ ಕಳ್ಳತನ ಮಾಡಿದ ಬಗ್ಗೆ ನನಗೆ ತಿಳಿದಿಲ್ಲ ಎಂದು ಪತಿ ಅಂಗಮುತ್ತು ಹೇಳಿದ್ದಾರೆ. ಆದರೂ ಅವರು ಇತ್ತೀಚೆಗೆ ಶೋಲಿಂಗನಲ್ಲೂರು ಪ್ರದೇಶದಲ್ಲಿ ಮನೆ ಖರೀದಿಸಿದ್ದಾರೆ. ಐಶ್ವರ್ಯಾ ರಜನಿಕಾಂತ್ ಅವರು ಶೋಲಿಂಗನಲ್ಲೂರಿನ ಮನೆಯನ್ನು ನನ್ನ ಹೆಸರಿನಲ್ಲಿ (proxy) ಖರೀದಿಸಿದ್ದಾರೆ ಎಂದು ವಿಚಾರಣೆ ವೇಳೆ ಈಶ್ವರಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ರಾಜನೀತಿ ಬಗ್ಗೆ ಕೇಳಿ, ಪರಿಣಿತಿ ಬಗ್ಗೆ ಅಲ್ಲ: ಡೇಟಿಂಗ್ ವದಂತಿ ಬಗ್ಗೆ ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಪ್ರತಿಕ್ರಿಯೆ

ಕದ್ದ ಚಿನ್ನಾಭರಣಗಳ ಖರೀದಿ ರಶೀದಿ ಸೇರಿದಂತೆ ದಾಖಲೆಗಳ ಬಗ್ಗೆ ಪೊಲೀಸರು ಇದೀಗ ಐಶ್ವರ್ಯಾ ಅವರನ್ನು ವಿಚಾರಣೆ ನಡೆಸಲಿದ್ದಾರೆ. ಪೊಲೀಸರ ಪ್ರಕಾರ, ಅವರ ದೂರಿನಲ್ಲಿ ನಮೂದಿಸಿದ್ದಕ್ಕಿಂತ ಹೆಚ್ಚಿನ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಪೊಲೀಸರು ಐಶ್ವರ್ಯಾ ಅವರ ಮನೆಗೆ ಹೋಗಿ ಅಥವಾ ಅವರನ್ನು ಕರೆಸಿಕೊಂಡು ತನಿಖೆ ನಡೆಸಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ರಜನಿಕಾಂತ್ ಮಗಳ ಮನೆಯಲ್ಲಿ ಚಿನ್ನ, ವಜ್ರ ಕದ್ದು ಮನೆ ಖರೀದಿಸಿದ ಕೆಲಸದಾಕೆ!

ಐಶ್ವರ್ಯಾ ಅವರು ಪೊಲೀಸರಿಗೆ ದೂರು ನೀಡಿದಾಗ ಸೌಂದರ್ಯ(ಸಹೋದರಿ) ಅವರ ಮದುವೆಯ ಆಲ್ಬಂ ಅನ್ನು ಸಾಕ್ಷಿಯಾಗಿ ಸಲ್ಲಿಸಿದ್ದರು. ಕಳ್ಳತನವಾಗಿರುವ ಚಿನ್ನಾಭರಣಗಳನ್ನು ಪೊಲೀಸರು ಸಾಕ್ಷ್ಯಗಳೊಂದಿಗೆ ಹೋಲಿಕೆ ಮಾಡಿ ಪರಿಶೀಲಿಸುತ್ತಿದ್ದಾರೆ. ದಾಖಲೆಗಳ ಕುರಿತು ಐಶ್ವರ್ಯಾ ಅವರನ್ನು ವಿಚಾರಣೆ ನಡೆಸಿದ ಬಳಿಕ ಪೊಲೀಸರು ಕದ್ದ ಆಭರಣಗಳನ್ನು ನ್ಯಾಯಾಲಯಕ್ಕೆ ಹಸ್ತಾಂತರಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.