ETV Bharat / entertainment

2024ರ ಲೋಕಸಭೆ ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧಿಸಲಿದ್ದಾರಾ ನಟಿ ಮಾಧುರಿ ದೀಕ್ಷಿತ್​?

author img

By ETV Bharat Karnataka Team

Published : Dec 23, 2023, 9:08 PM IST

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಾಲಿವುಡ್​ ನಟಿ ಮಾಧುರಿ ದೀಕ್ಷಿತ್​ ಮುಂಬೈ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

actress-madhuri-dixit-to-contest-lok-sabha-2024-election-from-bjp
2024ರ ಲೋಕಸಭೆ ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧಿಸಲಿದ್ದಾರಾ ನಟಿ ಮಾಧುರಿ ದೀಕ್ಷಿತ್​?

ಮುಂಬೈ (ಮಹಾರಾಷ್ಟ್ರ): ಬಾಲಿವುಡ್​ ಚಿತ್ರರಂಗದ ಖ್ಯಾತ ನಟಿ ಮಾಧುರಿ ದೀಕ್ಷಿತ್​ 2024ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ನಿರಂತರ ಚರ್ಚೆಗಳು ನಡೆಯುತ್ತಿವೆ. ಅವರು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಿದ್ಧತೆ ನಡೆಸುತ್ತಿದ್ದಾರೆ ಎಂಬ ವದಂತಿಗಳಿವೆ. ಈ ಮಧ್ಯೆ ಮಹಾರಾಷ್ಟ್ರದ ಮುಂಬೈ ಲೋಕಸಭಾ ಕ್ಷೇತ್ರದಲ್ಲಿ ಮಾಧುರಿ ದೀಕ್ಷಿತ್​ ಅವರ ಬ್ಯಾನರ್​ಗಳನ್ನು ಹಾಕಲಾಗಿದೆ. ಈ ಮೂಲಕ ನಟಿ ಬಿಜೆಪಿಯ ಹಾಲಿ ಸಂಸದೆ ಪೂನಂ ಮಹಾಜನ್​ ಅವರ ಸ್ಥಾನದಲ್ಲಿ ಚುನಾವಣೆಗೆ ಸ್ಪರ್ಧಿಸುವ ಸೂಚನೆಗಳಿವೆ.

ಮಾಧುರಿ ದೀಕ್ಷಿತ್​ ರಾಜಕೀಯಕ್ಕೆ ಬರುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಲೇ ಇದೆ. ಈ ವದಂತಿಗಳಿಗೆ ಪುಷ್ಠಿ ನೀಡುವಂತೆ ನಟಿ ಭಾರತೀಯ ಜನತಾ ಪಕ್ಷದ ಹಿರಿಯ ನಾಯಕರೊಂದಿಗೆ ಸಂಪರ್ಕದಲ್ಲಿದ್ದಾರೆ. ಕೆಲವು ದಿನಗಳ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರು ಮುಂಬೈನಲ್ಲಿರುವ ಮಾಧುರಿ ದೀಕ್ಷಿತ್​ ಮನೆಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಶಾ ಅವರು ನಟಿಗೆ ಮೋದಿ ಸರ್ಕಾರ ಮಾಡಿರುವ ಅಭಿವೃದ್ಧಿ ಕಾರ್ಯಗಳ ಕಿರುಪುಸ್ತಕವನ್ನು ಉಡುಗೊರೆಯಾಗಿ ನೀಡಿದ್ದರು. ಇದರ ನಂತರವೇ ಮಾಧುರಿ ದೀಕ್ಷಿತ್​ ಬಿಜೆಪಿ ಸೇರುವ ಮಾತುಕತೆಗೆ ಮತ್ತಷ್ಟು ಬಲ ಬಂದಿದೆ. ಹಾಗಾಗಿ ಅವರು ಚುನಾವಣಾ ಅಖಾಡಕ್ಕೆ ಇಳಿಯುವ ಸಾಧ್ಯತೆ ಇದೆ. ಇದುವರೆಗೂ ಮಾಧುರಿ ಈ ವಿಚಾರವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಉತ್ತರ - ಮಧ್ಯ ಮುಂಬೈ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಹಿರಿಯ ನಾಯಕ ದಿವಂಗತ ಪ್ರಮೋದ್​ ಮಹಾಜನ್​ ಅವರ ಪುತ್ರಿ ಪೂನಂ ಮಹಾಜನ್​ ಅವರ ಆಡಳಿತವಿದೆ. ಇವರು ಈ ಕ್ಷೇತ್ರದಿಂದ 2014 ಮತ್ತು 2019ರಲ್ಲಿ ಸತತ ಎರಡು ಬಾರಿ ಗೆದ್ದಿದ್ದಾರೆ. ಸದ್ಯ ಸಾಯಿ ಉತ್ಸವದ ನಿಮಿತ್ತ ಈ ಕ್ಷೇತ್ರದ ಎಲ್ಲಾ ಕಡೆ ನಟಿ ಮಾಧುರಿ ದೀಕ್ಷಿತ್​ ಅವರ ಬ್ಯಾನರ್​ಗಳನ್ನು ಹಾಕಲಾಗಿದೆ. ಇದರಲ್ಲಿ ಗಮನಾರ್ಹ ವಿಚಾರ ಎಂದರೆ, ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಮಾಧುರಿ ದೀಕ್ಷಿತ್​ ಅವರ ಬ್ಯಾನರ್​ ಅಥವಾ ಫ್ಲೆಕ್ಸ್​ಗಳನ್ನು ಸಾರ್ವಜನಿಕವಾಗಿ ಹಾಕಿರುವುದು.

ಮುಂಬೈನ ಒಟ್ಟು 6 ಲೋಕಸಭಾ ಕ್ಷೇತ್ರಗಳ ಪೈಕಿ ಉತ್ತರ - ಮುಂಬೈ ಮತ್ತು ಉತ್ತರ-ಮಧ್ಯ ಮುಂಬೈ ಎರಡು ಕ್ಷೇತ್ರಗಳು ಬಿಜೆಪಿಗೆ ಅತ್ಯಂತ ಸುರಕ್ಷಿತ ಕ್ಷೇತ್ರಗಳು. ಇವುಗಳಲ್ಲಿ ಉತ್ತರ ಮಧ್ಯ ಮುಂಬೈ ಕ್ಷೇತ್ರವು ಪೂನಂ ಮಹಾಜನ್ ಅವರ ಕ್ಷೇತ್ರವಾಗಿದೆ. ಈ ಕ್ಷೇತ್ರದಲ್ಲಿ ಒಟ್ಟು ಆರು ಶಾಸಕರಿದ್ದಾರೆ. ಈ ಇಡೀ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಶಿಂಧೆ ಗುಂಪು ಹೆಚ್ಚಿನ ಪ್ರಮಾಣದಲ್ಲಿ ಪ್ರಾಬಲ್ಯ ಹೊಂದಿದೆ. ಪೂನಂ ಮಹಾಜನ್ ಅವರು ಈ ಕ್ಷೇತ್ರದಿಂದ ಸತತ ಎರಡು ಬಾರಿ ಗೆದ್ದಿದ್ದಾರೆ. ಹಾಗಾಗಿ ಸದ್ಯ ಈ ಕ್ಷೇತ್ರ ಬಿಜೆಪಿಗೆ ಅನುಕೂಲಕರ ಎಂದು ಪರಿಗಣಿಸಲಾಗಿದೆ.

ಮುಂಬೈನಲ್ಲಿ ನಟಿ ಮಾಧುರಿ ದೀಕ್ಷಿತ್ ಲೋಕಸಭೆ ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕಳೆದ ಹಲವು ತಿಂಗಳುಗಳಿಂದ ನಡೆಯುತ್ತಿವೆ. ಆದರೆ, ಇದನ್ನು ನಟಿ ಮಾತ್ರವಲ್ಲದೇ ಬಿಜೆಪಿ ಪಕ್ಷ ಕೂಡ ಇನ್ನೂ ಅಧಿಕೃತವಾಗಿ ಖಚಿತಪಡಿಸಿಲ್ಲ. ಈ ಕುರಿತು ಮಾತನಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಚಂದ್ರಶೇಖರ ಬಾವನಕುಳೆ, ಈ ಬಗ್ಗೆ ಇನ್ನೂ ಯಾವುದೇ ಪ್ರಸ್ತಾಪ ಅಥವಾ ಚರ್ಚೆ ನಡೆದಿಲ್ಲ. ಈ ವಿಚಾರವಾಗಿ ಪಕ್ಷದ ನಾಯಕರ ನಿರ್ಧಾರ ಅಂತಿಮ ಎಂದು ಹೇಳಿದ್ದಾರೆ.

ಸಾಯಿಬಾಬಾ ಉತ್ಸವದ ಸಲುವಾಗಿ ನಟಿ ಮಾಧುರಿ ದೀಕ್ಷಿತ್ ಅವರ ಸ್ವಾಗತದ ಬ್ಯಾನರ್ ಹಾಕಲಾಗಿದ್ದು, ಅದಕ್ಕೂ ಬಿಜೆಪಿ ಚುನಾವಣೆಗೂ ಯಾವುದೇ ಸಂಬಂಧವಿಲ್ಲ. ಹೆಸರಾಂತ ವ್ಯಕ್ತಿಗಳು, ಉದ್ಯಮಿಗಳು, ಚಿತ್ರರಂಗದ ಜನರಿಗೆ ಮೋದಿ ಸರ್ಕಾರ ಮಾಡಿರುವ ಕೆಲಸಗಳನ್ನು ತಲುಪಿಸುವ ಕಾರ್ಯ ಕೆಲ ತಿಂಗಳಿನಿಂದ ನಡೆಯುತ್ತಿದೆ. ಅದರಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನಟಿ ಮಾಧುರಿ ದೀಕ್ಷಿತ್ ಮನೆಗೆ ಭೇಟಿ ನೀಡಿದ್ದಾರೆ. ಆದರೆ, ಮಾಧುರಿ ದೀಕ್ಷಿತ್ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೋ ಇಲ್ಲವೋ? ಈ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಲೋಕಸಭೆ ಚುನಾವಣೆಗೆ ಬಿಜೆಪಿಯಿಂದ ನಟಿ ಕಂಗನಾ ಸ್ಪರ್ಧಿಸುವುದು ಖಚಿತ: ತಂದೆಯಿಂದ ಮಹತ್ವದ ಮಾಹಿತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.