ETV Bharat / entertainment

ಮೂರು ಬಾರಿ 'ಕಾಂತಾರ' ನೋಡಿದೆ, ಸಿನಿಮಾ ಕ್ಲೈಮ್ಯಾಕ್ಸ್​ ಮೈ ಜುಮ್ಮೆನಿಸಿತು: ಕನ್ನಡ ಚಿತ್ರಗಳನ್ನು ಕೊಂಡಾಡಿದ ನಟ ವಿಕ್ರಮ್​

author img

By

Published : Apr 23, 2023, 7:26 AM IST

ಕನ್ನಡ ಚಿತ್ರಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವುದರ ಬಗ್ಗೆ ಪೊನ್ನಿಯಿನ್ ಸೆಲ್ವನ್ 2 ಚಿತ್ರತಂಡದವರು ಮೆಚ್ಚುಗೆ ವ್ಯಕ್ತಪಡಿಸಿದರು.

ponniyin-selvan-2
ಪೊನ್ನಿಯಿನ್ ಸೆಲ್ವನ್ 2

ಕಳೆದ ವರ್ಷ ಸೌತ್ ಸಿನಿಮಾ ಇಂಡಸ್ಟ್ರಿ ಅಲ್ಲದೇ ಭಾರತೀಯ ಚಿತ್ರರಂಗ ಮೆಚ್ಚಿಕೊಂಡು, ಸೂಪರ್ ಹಿಟ್ ಆದ ಚಿತ್ರ ಪೊನ್ನಿಯಿನ್ ಸೆಲ್ವನ್​. ನಟ ಚಿಯಾ ವಿಕ್ರಮ್​, ಜಯಂ ರವಿ, ಕಾರ್ತಿ, ಐಶ್ವರ್ಯಾ ರೈ ಬಚ್ಚನ್, ತ್ರಿಷಾ, ಶೋಭಿತ ಪ್ರಕಾಶ್ ರೈ, ಶರತ್ ಕುಮಾರ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಮಣಿರತ್ನಂ ನಿರ್ದೇಶನದ ಈ ಚಿತ್ರ ದೇಶದಾದ್ಯಂತ ಬಿಡುಗಡೆಯಾಗಿ ಬಾಕ್ಸ್​ ಆಫೀಸ್​ನಲ್ಲಿ 500 ಕೋಟಿ ರೂ. ಕಲೆಕ್ಷನ್​ ಮಾಡಿತ್ತು. ಅದರ ಮುಂದುವರಿದ ಭಾಗವಾಗಿ ಪೊನ್ನಿಯಿನ್ ಸೆಲ್ವನ್ 2 ಸಿನಿಮಾ ರೆಡಿಯಾಗಿ ಬಿಡುಗಡೆಗೆ ಸಜ್ಜಾಗಿದೆ.

ನಿರ್ದೇಶಕ ಮಣಿರತ್ನಂ ಅವರು ಪೊನ್ನಿಯಿನ್ ಸೆಲ್ವನ್​ 2 ಶೂಟಿಂಗ್ ಸೈಲೆಂಟ್​ ಆಗಿಯೇ​ ಮಾಡಿ ಮುಗಿಸಿದ್ದು, ಚಿತ್ರ ತೆರೆ ಮೇಲೆ ಅಬ್ಬರಿಸಲು ಕಾಯುತ್ತಿದೆ. ಈಗಾಗಲೇ ಟ್ರೇಲರ್​ ಮತ್ತು ಹಾಡುಗಳನ್ನು ಬಿಡುಗಡೆ ಮಾಡಿದ್ದು ನೋಡುಗರಿಗೆ ಕುತೂಹಲ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ನಟ ವಿಕ್ರಮ್​, ಜಯಂ ರವಿ, ಕಾರ್ತಿ, ತ್ರಿಷಾ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ದೆಹಲಿ, ಮುಂಬೈ, ಹೈದರಾಬಾದ್​ನಲ್ಲಿ ಭರ್ಜರಿ ಪ್ರಚಾರ ಕಾರ್ಯ ನಡೆಸಿರುವ ಚಿತ್ರತಂಡ ಇದೀಗ ಬೆಂಗಳೂರಿಗೆ ಆಗಮಿಸಿದೆ.

ಈ ವೇಳೆ ಸುದ್ದಿಗೋಷ್ಟಿಯಲ್ಲಿ ಈ ಸಿನಿಮಾವನ್ನು ಪ್ರೇಕ್ಷಕರು ಯಾಕೆ ನೋಡಲೇಬೇಕು? ಎಂಬ ಪ್ರಶ್ನೆಗೆ ಚಿತ್ರತಂಡದವರು ಉತ್ತರಿಸಿದ್ದಾರೆ. ಮೊದಲಿಗೆ ಮಾತನಾಡಿದ ನಟ ಚಿಯಾ ವಿಕ್ರಮ್, "ಇದೊಂದು ನೈಜ ಐತಿಹಾಸಿಕ ಕಥೆ. ಇಂದಿನ ಜನಾಂಗಕ್ಕೆ ಇತಿಹಾಸವನ್ನು ತಿಳಿದುಕೊಳ್ಳಲು ಈ ಸಿನಿಮಾ ಸಹಾಯವಾಗುತ್ತೆ. ಈ ಚಿತ್ರದ ರಿಯಲ್​ ಹೀರೋ ಮಣಿರತ್ನ ಸರ್​. ಜೊತೆಗೆ ಶರತ್ ಕುಮಾರ್,‌ ಪ್ರಕಾಶ್ ರೈ, ಕಾರ್ತಿ, ಜಯಂ ರವಿ,‌ ತ್ರಿಷಾ ಹಾಗೂ ಐಶ್ವರ್ಯ ರೈ ಸೇರಿದಂತೆ ಎಲ್ಲರೂ ಕೂಡ ಸಿನಿಮಾದ‌ ಹೀರೋಗಳೇ" ಎಂದರು.

ಈ ಮಧ್ಯೆ ಕನ್ನಡ ಸಿನಿಮಾಗಳ ಅದ್ಧೂರಿ‌ ಮೇಕಿಂಗ್ ಹಾಗೂ ಕಥೆಗಳ ಬಗ್ಗೆ ಮಾತನಾಡಿದ‌ ವಿಕ್ರಮ್,‌ ನಟಿ‌ ತ್ರಿಷಾ, ಕಾರ್ತಿ ಹಾಗೂ ಜಯಂ ರವಿ ಕನ್ನಡ ಚಿತ್ರಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವುದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನಟಿ ತ್ರಿಷಾ ಅವರು, "ಈಗ ಕನ್ನಡದಲ್ಲಿ ರಾಷ್ಟ್ರ‌‌ ಮಟ್ಟದಲ್ಲಿ ಗಮನ ಸೆಳೆಯುವ ಚಿತ್ರಗಳು ನಿರ್ಮಾಣ ಆಗುತ್ತಿವೆ. ಪುನೀತ್ ರಾಜ್‍ಕುಮಾರ್ ಜೊತೆ ನಾನು‌ ಪವರ್‌ ಅಂತಾ ಸಿನಿಮಾ ಮಾಡಿದ್ದು ಖುಷಿ ಇದೆ.‌ ಇನ್ನು ಪುನೀತ್ ಸರ್ ಅಗಲಿಕೆಯಿಂದ ತುಂಬಾ ನೊಂದುಕೊಂಡಿದ್ದೆ" ಎಂದು ಹೇಳಿದರು.

ಇನ್ನು ನಟ‌ ವಿಕ್ರಮ್ ಕನ್ನಡ ಸಿನಿಮಾಗಳ ಕಥೆ ಹಾಗೂ ಮೇಕಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. "ಸಿನಿಮಾಗಳಿಗೆ ಲ್ಯಾಂಗ್ವೇಜ್ ಬ್ಯಾರಿಯರ್ ಇಲ್ಲ. ಈ‌ ಮಾತನ್ನು ನಿಜ ಮಾಡಿದ್ದು ಕೆಜಿಎಫ್ ಸಿನಿಮಾ.‌ ಈ‌ ಸಿನಿಮಾದ ಬಳಿಕ ರಿಷಬ್ ಶೆಟ್ಟಿ ಅಭಿನಯದ ಕಾಂತಾರ, ನಾವೆಲ್ಲರೂ ಒಂದೇ ಎಂಬ ಭಾವನೆ‌ಯನ್ನು ಮೂಡಿಸಿತ್ತು. ನಾ‌‌ನು ನನ್ನ ಫ್ಯಾಮಿಲಿ ‌ಜೊತೆ ಈ‌ ಸಿನಿಮಾವನ್ನು ಮೂರು ಬಾರಿ ನೋಡಿದ್ದೇನೆ. ಅದರಲ್ಲಿ ಚಿತ್ರದ ಕ್ಲೈಮ್ಯಾಕ್ಸ್ ಅಂತು ಮೈಜುಮ್ಮೆನಿಸುತ್ತದೆ. ಕಾಂತಾರ ಸಿನಿಮಾವನ್ನು ಪ್ರತಿಯೊಂದು ಸ್ಟೇಟ್ಸ್ ‌ಕೂಡ‌ ಸೆಲೆಬ್ರೆಟ್ ಮಾಡಿದೆ" ಎಂದು ಹೆಮ್ಮೆಯಿಂದ ಹೇಳಿದರು.

ಬಳಿಕ ಕಾರ್ತಿ ಮಾತನಾಡಿ, ಕನ್ನಡ ಸಿನಿಮಾ‌ಗಳ ಕ್ವಾಲಿಟಿ ಹಾಗೂ ಅದ್ದೂರಿ ಮೇಕಿಂಗ್ ಬಗ್ಗೆ ಮೆಚ್ಚಿಕೊಂಡರು.‌ "ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾದ‌ ಮೇಕಿಂಗ್ ‌ನೋಡಿದ್ರೆ ಸಖತ್ ಥ್ರಿಲ್‌ ಅನಿಸುತ್ತೆ. ಕೆಲ‌‌‌ ದಿನಗಳ ಹಿಂದೆ ನಾನು ನಟ‌ ರಿಷಬ್ ಶೆಟ್ಟಿಯನ್ನು ಭೇಟಿ‌ ಮಾಡಿದೆ. ಆಗ ಅವರು‌, ಸರ್ ನಾನು ಕಾಂತಾರ 2 ಸಿನಿಮಾದ ಕಥೆ ಮಾಡುವುದರಲ್ಲಿ ಬ್ಯುಸಿಯಾಗಿದ್ದೇನೆ‌ ಎಂದರು. ಆಗ ನನಗೆ ನಿಜಕ್ಕೂ ತುಂಬಾನೇ ಖುಷಿಯಾಯ್ತು" ಎಂದು ತಿಳಿಸಿದರು.

"ಕೆಜಿಎಫ್‌ ಸಿನಿಮಾ ನಮ್ಮಲ್ಲಿದ್ದ ಲ್ಯಾಂಗ್ವೇಜ್ ಬ್ಯಾರಿಯರ್ ಅನ್ನು ಒಡೆದು‌ ಹಾಕಿತ್ತು. ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಸಿನಿಮಾ ಎಲ್ಲಾ ಭಾಷೆ ಹಾಗೂ ಜನಾಂಗದ ಸಂಸ್ಕೃತಿಯನ್ನು ಎತ್ತಿ ಹಿಡಿದಿದೆ. ಕನ್ನಡದಲ್ಲಿ ‌ಒಳ್ಳೆ ಪಾತ್ರಗಳು ‌ಸಿಕ್ಕರೆ ಖಂಡಿತ ‌ಅಭಿನಯಿಸೋಣ" ಎಂದು ನಟ ಜಯಂ ರವಿ ಕನ್ನಡ ಸಿನಿಮಾದಲ್ಲಿ ನಟಿಸಲು ಆಸಕ್ತಿ ಇದೆ ಎಂಬುದನ್ನು ಪರೋಕ್ಷವಾಗಿ ಹೇಳಿದರು.

ಪೊನ್ನಿಯಿನ್ ಸೆಲ್ವನ್ 2 ಸಿನಿಮಾ ಇಲ್ಲಿಯವರೆಗಿನ ಅತ್ಯಂತ ದುಬಾರಿ ತಮಿಳು ಚಿತ್ರಗಳಲ್ಲಿ ಒಂದಾಗಿದೆ. ಲೈಕಾ ಪ್ರೊಡಕ್ಷನ್ಸ್ ಮತ್ತು ಮದ್ರಾಸ್ ಟಾಕೀಸ್‌ನಿಂದ ಹಣ ಹೂಡಲಾಗಿದೆ. ಮೊದಲ ಭಾಗ ಕೆಲೆಕ್ಷನ್​ ವಿಚಾರದಲ್ಲಿ ಸದ್ದು ಮಾಡಿದ್ದು, ಸೀಕ್ವೆಲ್​ ಮೇಲೂ ಭಾರಿ ನಿರೀಕ್ಷೆ ಇದೆ. ​​ಎ.ಆರ್.ರೆಹಮಾನ್ ಮತ್ತೊಮ್ಮೆ ಪೊನ್ನಿಯನ್ ಸೆಲ್ವನ್ 2 ಗಾಗಿ ಹಾಡುಗಳು ಮತ್ತು ಹಿನ್ನೆಲೆ ಸಂಗೀತವನ್ನು ಸಂಯೋಜಿಸಿದ್ದಾರೆ. ಮಣಿರತ್ನಂ ಮತ್ತು ಎಲಂಗೋ ಕುಮಾರವೇಲ್ ಚಿತ್ರಕಥೆಯನ್ನು ಬರೆದಿದ್ದಾರೆ. ಎ.ಶ್ರೀಕರ್ ಪ್ರಸಾದ್ ಸಂಕಲನದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಇದೇ ಏಪ್ರಿಲ್​ 28ರಂದು ಪೊನ್ನಿಯಿನ್ ಸೆಲ್ವನ್ 2 ಚಿತ್ರ ವಿಶ್ವದಾದ್ಯಂತ ಬಿಡುಗಡೆ ಆಗಲಿದೆ.

ಇದನ್ನೂ ಓದಿ: ಪೊನ್ನಿಯಿನ್ ಸೆಲ್ವನ್ 2: ಪ್ರಚಾರಕ್ಕೆ ಬೆಂಗಳೂರಿಗೆ ಆಗಮಿಸಿದ ವಿಕ್ರಮ್ ಮತ್ತು ಚಿತ್ರತಂಡ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.